ಅನುವಾದ ಸಂಗಾತಿ
‘ಹೆಸರಿಲ್ಲದ ಬೆಳದಿಂಗಳು’
ನರೇಷ್ಕುಮಾರ್ ಸೂಫೀ
ಅವರ ತೆಲುಗು ಕಥೆಯ
ಕನ್ನಡಾನುವಾದ
ಚಂದಕಚರ್ಲ ರಮೇಶಬಾಬು
ಊಟಿ ರೈಲ್ವೇ ಸ್ಟೇಷನ್…. ಬೋರ್ಡನ್ನು ನೋಡುತ್ತ ಹಾಗೇ ನಿಂತುಬಿಟ್ಟಿದ್ದೆ. ನಂದೂ ಇನ್ನೂ ಫೋನ್ ನಲ್ಲಿ ಮಾತಾಡ್ತಾನೇ ಇದ್ದ.
“ಹಾ…! ಹೊರಡ್ತಾ ಇದ್ದೀನಿ. ಹತ್ತು ನಿಮಿಷಗಳಲ್ಲಿ ನಮ್ಮ ರೈಲು. ವಂಶೀ ಬಂದಿದ್ದಾನೆ. ಯಾಕೋ ತುಂಬಾ ಆತಂಕ ಕಾಣತ್ತೆ ಮುಖದಲ್ಲಿ… ಆ! ಅದೇ ಅವನ ಲವ್ ಮ್ಯಾಟರ್. ಬಂದ ಮೇಲೆ ಹೇಳ್ತೀನಿ….! ಆ… ಆ.. ಎಲ್ಲ ತರ್ತಿದ್ದೀನಿ… ಆ ಫೈಲುಗಳನ್ನೆಲ್ಲ ನೋಡಿದ್ಯಾ? ನಾನು ಬಂದ ಮೇಲೆ ಮತ್ತೊಮ್ಮೆ ಅವನ ಹತ್ತಿರ ಮಾತಾಡೋಣ. ಸರಿ. ಸರಿ. ಬೈ….” ಫೋನ್ ಕಟ್ ಮಾಡಿ.
“ ಉಷ ಕಣೋ! ಕೇಳಿದ್ದೇ ಕೇಳಿ ಬೋರ್ ಹೊಡಿಸ್ತಿದ್ದಾಳೆ. ಅದೇ ಊರಿನವಳು ಅಂತ ಕೆಲಸ ಹೇಳಿದ್ದು ತಪ್ಪಾಗಿದೆ. ಸಾರೀ ಮಾಮಾ! ಹೋಗ್ದೇ ಇರೋಕೆ ಆಗಲ್ಲ. ಈ ಪರಿಸ್ಥಿತಿಯಲ್ಲಿ ನಿನ್ನ ಬಿಟ್ಟು ಹೋಗ್ಬೇಕಲ್ಲ. ಆದರೆ ನಿರ್ವಾ ಇಲ್ಲ. ಕೊಯಂಬತ್ತೂರ್ ಬ್ರಾಂಚ್ ಬಗ್ಗೆ ಹೇಳಿದ್ನಲ್ಲಾ… ಕಂಪೆನಿ ಉಳಿಬೇಕಾದ್ರೆ ತಪ್ಪಿದ್ದಲ್ಲ. ಎರಡು ದಿನದಲ್ಲಿ ಬಂದ್ಮಿಡ್ತೀನಿ.” ಕಾರ್ ನಿಂದ ಲಗೇಜ್ ಇಳಿಸ್ತಾ ನಂದೂ ಹೇಳ್ತಿದ್ದ. ಬೀಟೆಕ್ ನಲ್ಲಿ ನನ್ನ ಸಹಪಾಠಿ. ಹಾಸ್ಟೆಲ್ ನಲ್ಲಿ ನನ್ನ ಸಹವಾಸಿ. ಈಗ ಊಟಿಯಲ್ಲಿ ಚಹಾ ಎಲೆಗಳ ರಫ್ತು ಕಂಪೆನಿಯ ಎಂ.ಡಿ. ನಂದಕುಮಾರ್.
“ಸರಿ ಬಿಡು! ಫರ್ವಾ ಇಲ್ಲ. ನನ್ನ ಬಗ್ಗೆ ಕಾಳಜಿ ಬೇಡ. ನಾನು ನೋಡ್ಕೊಳ್ತೀನಿ.” ಕೈಯಲ್ಲಿಯ ಲೈಟರ್ ನಿಂದ ತುಟಿಗಳ ನಡುವಿನ ಸಿಗರೆಟ್ಟಿನ ಜೀವನಕ್ಕೆ ಕೌಂಟ್ ಡೌನ್ ಹೇಳುತ್ತಾ ಅಂದೆ.
“ಯೋಧನ್ ಗೆ ಎಲ್ಲ ಹೇಳಿದ್ದೇನೆ. ಏನು ಬೇಕಿದ್ರೂ ನೋಡ್ಕೊತಾನೆ” ಮೆಲ್ಲಕ್ಕೆ ಹೇಳುತ್ತಾ “ ಏನು ಬೇಕಾದ್ರೂ” ಎನ್ನುವ ಮಾತನ್ನು ಸ್ವಲ್ಪ ಒತ್ತಿ ಹೇಳಿದ. ಅಂದರೆ ಲಿಕ್ಕರ್, ಸಿಗರೆಟ್ ಗಳಲ್ಲ. ಮತ್ತೇನು ಬೇಕಿದ್ರೂ ಯೋಧನ್ ಎಂದು ಕರೆಯಲ್ಪಡುವ ಒರಿಯಾದ ದುರ್ಯೋಧನ್ ಏರ್ಪಾಡು ಮಾಡುತ್ತಿದ್ದ.
“ ಸರಿ. ಹಾದಿ ಗೊತ್ತಿದೆ ತಾನೇ… “
ಅನೌನ್ಸ್ ಮೆಂಟ್ ಕೇಳುತ್ತಾ…. ತಲೆಯಾಡಿಸಿದೆ.
*******
“ಪ್ಯಾರ್ ಮಾಂಗಾ ಹೈ ತುಮ್ಹೀಸೆ ನ ಇನ್ಕಾರ್ ಕರೋ” ನನ್ನ ಜೊತೆಯಲ್ಲೇ ಅಳ್ತಾ ಒಲವನ್ನು ಬೇಡುತ್ತಿದ್ದ ಕಿಶೋರ್ ಕುಮಾರ್. ಘಾಟ್ರೋಡ್ದಿನಲ್ಲಿ ಮೆಲ್ಲಕ್ಕೆ ಸಾಗುತ್ತಿದ ಕಾರು. ಆಗಾಗ ಕಾಣುತ್ತಿದ್ದ ಒಂದೋ ಎರಡೋ ಗಾಡಿಗಳು ಬಿಟ್ಟರೆ ಜಾಸ್ತಿ ಟ್ರಾಫಿಕ್ ಇಲ್ಲ. ಮೋಡ ಮುಸುಕಿದ ಬಾನು. ಹಸಿರು ಹೊದ್ದ ಬೆಟ್ಟಗಳು, ತೆಳು ಪರದೆ ಹಾಸಿದ ಹೊಗೆ ಮಂಜು, ಶೂನ್ಯವನ್ನು ತುಂಬಿಕೊಂಡ ಕಣಿವೆಗಳು, ಉನ್ಮತ್ತ ರಾಗಗಳನ್ನು ಹುಡುಕುವ ನಿಸರ್ಗ. ಕವಿಗಳಿಗೆ ಎಣ್ಣೆ ಹಾಕ್ದೇನೇ ಬೇಕಾದಷ್ಟು ಪ್ರೇರಣೆ……
ಹೀಗೆ ಆಲೋಚನೆಗಳಲ್ಲಿ ಮುಳುಗಿದಾಗಲೇ ಹಿಂದಿನ ಸೀಟಿನಿಂದ ಅರ್ಧ ಕೂಲ್ಡ್ರಿಂಕನ್ನು ಕುಡಿದ ಜಾನೀವಾಕರ್ ಕೈಗೆ ಬಂದು, ತುಟಿಗಳ ಮೂಲಕ ಗಂಟಲೊಳಗೆ, ಹೊಟ್ಟೆಗೆ, ಅಲ್ಲಿಂದ ಮೆತ್ತಗೆ ಮತ್ತಾಗಿ ಮೆದುಳನ್ನು ತಲುಪಿ…..
“ಊಹ್… ಈ ಎಣ್ಣೆಯೇ ಇಲ್ದಿದ್ರೆ ಅದೆಷ್ಟು ಆತ್ಮಹತ್ಯೆಗಳು ಆಗುತ್ತಿದ್ದವೂ ಈ ಜಗತ್ತಿನಲ್ಲಿ… ಹೌದೂ.. ಕುಡಿದು ಗಾಡಿ ಓಡಿಸೋದು ತಪ್ಪಾ… ಭಗ್ನ ಪ್ರೇಮಿಗಳಿಗೆ ಯಾವ ರಿಯಾಯ್ತಿ ಇಲ್ಲವಾ? ಈ ಭಗ್ನಪ್ರೇಮಿಕ ಅಂದರೆ ಯಾರು? ಹುಡುಗಿಯನ್ನು ಬಿಟ್ಟವನಾ ಅಥವಾ ಹುಡುಗಿಯಿಂದ ಬಿಡಲ್ಪಟ್ಟವನಾ? ಏನೋ ಗೊಂದಲ…. ಪ್ರೇಮಿಕನಾಗಿ ಇವನು ಫೆಯಿಲ್ಯೂರಾ ಅಥವಾ ಪ್ರೇಮನೇ ಫೆಯುಲ್ಯೂರಾ?
ನನ್ನ ಆಲೋಚನೆಗಳ ವೇಗದಲ್ಲೇ ಜಾನೀವಾಕರ್ ಸಹ… ನೋ… ನೋ… ಇದೀಗ ಜಾನೀ ರನ್ನರ್. ಘಾಟ್ರೋಡ್ಡಿನಲ್ಲಿ ೯೦ಕಿ.ಮೀ ಪ್ರತಿ ಗಂಟೆಗೆ.
ಈಗ ಇವಳಿದ್ದರೆ ಏನಂತಿದ್ದಳೋ…….?
“ ಯೂ ಸ್ಟುಪಿಡ್!! ಐನೋ ಯುವಿಲ್ನೆವರ್ ಛೇಂಜ್. ನಿನಗೆ ಬದುಕುವುದೇ ಗೊತ್ತಿಲ್ಲ. ನಿನ್ನ ಪ್ರೀತಿಸಿದ್ದೀನಿ ನೋಡು.. ನನ್ನ ಕರ್ಮ”
ಪ್ರೀತಿಸಿದ್ದಾಳಾ?,,,, ಅವಳು ನನ್ನ…. ನನ್ನಂತೆ ಇರುವ ನನ್ನ ಪ್ರೀತಿಸಿದ್ದಾಳಾ!?
ನಿದಾನವಾಗಿ ಗತಕಾಲಕ್ಕೆ.. ಅಂದಿನ ನನ್ನ ಕೋಣೆಗೆ.. ನನ್ನ ಕೋಣೆಯಲ್ಲಿನ ಜೀವನಕ್ಕೆ… ಜಾರುತ್ತಾ….
ನಾ…..ನು…
“ಪಾಸ್ ಬೈಠೊ ಜರಾ ಆಜ್ ತೋ”
ಕಿಶೋರ್ ಕುಮಾರ್ ಹಾಡುತ್ತಲೇ ಇದ್ದ.
*******
“ವಂಶೀ! ನೀನೇನು ಮಾಡ್ತಿದ್ದೀಯಾ ಅಂತ ಅರ್ಥವಾಗ್ತಿದೆಯಾ ನಿಂಗೆ?”
ಪ್ರಶ್ನೆ ಮುಂಚಿತವಾಗಿ ಬಂತೋ ಅಥವಾ ಅವಳೋ ! ಬಿರುಸಿನಿಂದ ಬಂದು ಬೀನ್ ಬ್ಯಾಗಿನ ಮೇಲಿದ್ದ ಸಿಡಿಯನ್ನ ತೆಗೆಯದೇ ಕೂತಳು ಉಮ. ಅವಳ ಜೊತೆಯಲ್ಲೇ ಬಂದು ರೂಮೆಲ್ಲ ಹರಡಿಕೊಂಡ ಪ್ಲೇಬಾಯ್ ವಿಮೆನ್ ಸ್ಪ್ರೇ ಪರಿಮಳ. ಉಮ ಯಾರು ಎಂದರೆ ಮೂರು ವರ್ಷಗಳ ಕೆಳಗೆ ನನ್ನ ಹಾಗೇನೇ ಕೆಲ ಪುಸ್ತಕಗಳು ಓದಿ, ಒಂದು ಸರ್ಟಿಫಿಕೆಟ್ ಸಂಪಾದಿಸಿಕೊಂಡು ಬಂದ ಉಮ. ಪ್ರಾಜೆಕ್ಟ್ ಸಲುವಾಗಿ ನನ್ನ ಟೀಮಿಗೆ, ಮತ್ತೆ ನನ್ನ ಜೀವನದೊಳಗೆ ಬಂದು ನನ್ನ ಪ್ರಾಣವಾಗಿ ಹೋದ ಉಮ. ಇಪ್ಪತ್ತೈದು ವರ್ಷಕ್ಕೆ ಅರವತ್ತೈದು ಸಾವಿರ ಸಂಬಳ ತೆಗೆದುಕೊಳ್ಳುತ್ತಿದ್ದ ಉಮ. ಮಲ್ಟಿ ನೇಷನ್ ಕಂಪೆನಿಯಲ್ಲಿನ ಉದ್ಯೋಗವನ್ನು ಕೈಬಿಟ್ಟಿದ್ದಕ್ಕೆ ನನ್ನನ್ನ ತರಾಟೆಗೆ ತೆಗೆದುಕೊಳ್ಳಲು ಬಂದ ಉಮ.
ಮುಪ್ಪಾಳ್ಳ ಉಮಾಮಹೇಶ್ವರಿ….
ಅವಳ ಕೆಳಗೆ, ಬೀನಬ್ಯಾಗ್ ಮೇಲೆ ಸಿಕ್ಕಿ ಹಾಕಿಕೊಂಡ ಅದ್ನಾನ್ ಸಾಮಿಯ ಬಗ್ಗೆ ಮರುಕ ಪಡುವುದೋ ಅಥವಾ ಮತ್ಸರ ಪಡುವುದೋ ತಿಳಿಯದ ಅಯೋಮಯ ಸ್ಥಿತಿಯಲ್ಲೇ ಅವಳಿಗೆ ಉತ್ತರ ಹೇಳಿದೆ….
“ಅರ್ಥವಾಗಲು ಏನಿದೆ? ಬೂಟು ಪಾಲಿಷ್ ಮಾಡಿಕೊಳ್ತಾ ಇದ್ದೇನೆ.”
ನನ್ನ ಸೆನ್ಸ್ ಆಫ್ ಹ್ಯೂಮರ್ ನ ಕಾಲಿಗೆ ಹಾಕಿ ತಿಕ್ಕಿದಂತೆ ಕಿರಿಚಿದಳು.
“ಸ್ಟಾಪ್ ಜೋಕಿಂಗ್ ವಂಶೀ! ಆ ಹೆಚ್ ಆರ್ ವಸಂತ್ ಪಾಂಡೆ ಇದಕ್ಕು ಮುಂಚೆ ನಮ್ಮ ಕಂಪೆನಿಯಲ್ಲಿ ಇದ್ದ. ನಿನ್ನ ಜಾಬ್ ಸಲುವಾಗಿ ಅವನ್ನ ಎಷ್ಟು ಬೇಡಿಕೊಂಡಿದ್ದೆ ಗೊತ್ತಾ? ಆ ಕೆಲಸಕ್ಕೆ ಸೆಲೆಕ್ಟಾದ್ರೆ ಎರಡು ವರ್ಷದಲ್ಲಿ ಯುಎಸ್ ಗೆ ಹಾರಬಹುದು.”
“ಉಮಾ ಪ್ಲೀಜ್! ನನಗೆ ಆ ಕೆಲಸ ಇಷ್ಟವಿಲ್ಲ. ಐ ಕಾಂಟ್ ಲಿವ್ ಲೈಕೆ ಮನಿ ಪ್ಲಾಂಟ್….”
ಅವಳ ಮೇಲಿನ ಪ್ರೀತಿಯೋ ಅಥವಾ ಹಣ ಸಂಪಾದಿಸಲಾಗದ ನನ್ನ ಕೈಲಾಗದ ತನವೋ… ನನ್ನ ಮಾತುಗಳು ಮೃದುವಾಗೇ ಹೊರಬಂದವು.
ದಿಢೀರನೆ ಎದ್ದು ಮೇಜಿನ ಮೇಲಿದ್ದ ಪುಸ್ತಕವನ್ನು ತನ್ನ ಕೈಗೆ ತೆಗೆದುಕೊಂಡಳು. ಅವಳ ಕೋಪಕ್ಕೆ ಬಲಿಯಾಗುತ್ತಿದ್ದ ಕಾಫ್ಕಾನನ್ನ ಉಳಿಸಲಾರದೆ, ಮನಸ್ಸಿನಲ್ಲೆ ಕ್ಷಮೆ ಕೇಳುತ್ತ, ಅವಳ ಉಗುರುಗಳ ಪಾಲಿಷನ್ನು ನೋಡುತ್ತ ಅವಳೆಡೆಗೆ ನಡೆದೆ.
ಹಸಿರು ಬಣ್ಣದ ಜರೀ ಕುಸುರಿ ಅನಾರ್ಕಲಿ ದಿರಿಸಿನಲ್ಲಿ, ಕಾಡಿಗೆ ಹಚ್ಚದ ಸುಂದರ ನಯನಗಳಿಂದ ನನ್ನನ್ನೇ ನೋಡುತ್ತಿದ್ದ ಅವಳನ್ನು ಹತ್ತಿರಕ್ಕೆ ಎಳೆದುಕೊಳ್ಳುತ್ತ,
“ಉಮಾ! ಪ್ಲೀಜ್ ಟ್ರೈಟು ಅಂಡರ್ಸ್ಟಾಂಡ್ ಮೈ…..” ಅಂತ ಹೇಳುತ್ತಿರುವಾಗಲೇ,
“ಓಹ್! ಷಟ್ ಯುವರ್ ಮೌತ್. ಯೂ….” ಎನ್ನುತ್ತ ನನ್ನ ಕೊಡವಿಕೊಂಡು ದೂರ ಸರಿದಳು.
“ಉಮಾ! ನಿನಗೆ ನನ್ನ ಬಗ್ಗೆ ಕಾಳಜಿ ಇಲ್ವಾ??”
“ ಏನು ಕಾಳಜಿ ತೊಗೊಳ್ಬೇಕು? ನಮ್ಮ ಮದುವೆಗೆ ಅಪ್ಪನ್ನ ಹೇಗೆ ಒಪ್ಪಿಸಬೇಕು ಅಂತ ನಾನು ಯೋಚನೆ ಮಾಡ್ತಿದ್ದೀನಿ. ನಿನ್ನ ಗಂಡ ಏನು ಮಾಡ್ತಾನೆ? ಅಂತ ನಾಳೆ ಯಾರಾದರೂ ಕೇಳಿದರೆ ಏನು ಹೇಳಬೇಕು ನಾನು ಅಂತ ಆಲೋಚನೆಯಲ್ಲಿದ್ದೀನಿ. ನಮ್ಮ ಮಕ್ಕಳಿಗೆ ಕೊಡಬಲ್ಲ ಸ್ಟೇಟಸ್ ಬಗ್ಗೆ ಆಲೋಚಿಸ್ತಾ ಇದ್ದೀನಿ. ಇನ್ನೇನು ಚಿಂತೆ ಮಾಡ್ಬೇಕು ಹೇಳು? ನಿನಗಿವೇನು ಹಿಡಿಸಲ್ಲ. ಎಷ್ಟೋತ್ತೂ ಆ ಕಚಡಾ ಪುಸ್ತಕಗಳು ಓದ್ತಾ, ಯಾರನ್ನೋ ಉದ್ದಾರ ಮಾಡೋರ ಹಾಗೆ ಬರೆಯುತ್ತಾ…ಷಿಟ್”
ತನ್ನ ಕೋಪಕ್ಕೆ ನಾಲ್ಕಡಿ ಗಾಳಿಯಲ್ಲಿ ಹಾರಿ, ನನ್ನ ಎದೆಯನ್ನ ಬಲವಾಗಿ ತಾಗಿ ಕೆಲ ಪುಟಗಳನ್ನು ಕಳೆದುಕೊಂಡ ಕಾಫ್ಕಾ, ತನ್ನ ಕೈ ಬಿರುಸುತನಕ್ಕೆ ಪಕ್ಕದಲ್ಲಿದ್ದ ರ್ಯಾಕ್ ನಲ್ಲಿ ಹಿಂದಕ್ಕೆ ಸರಿದ ಇತರೆ ಪುಸ್ತಕಗಳು….. ಇವುಗಳನ್ನು ನೋಡುತ್ತಾ ನಾನು… ಹಣ ಸಂಪಾದಿಸಲು ಕೈಲಾಗದ ನಾಲಾಯಕ್ಕು….
“ಸಾರೀ ವಂಶೀ! ನಾನು ಹೀಗೇ ಇರೋದು ಅಂದ್ರೆ ಅದು ನಿನ್ನಿಷ್ಟ. ಆದರೆ ನನ್ನಿಂದ ಮಾತ್ರ ಆಗದು”
ಹೊರಗಡೆಗೆ ಹೋಗುತ್ತಿರುವ ಅವಳ ಹೆಜ್ಜೆ ಸದ್ದಿಗಿಂತ ಮುಂಚೆ ನಾನು ಕೇಳಿಸಿಕೊಂಡ ಮಾತುಗಳಿವು….
ಹಾಗೆ ಹೊರಟು ಹೋದ ಒಂದು ವಾರದ ವರೆಗೂ ಫೋನ್ ತೊಗೊಂಡಿರಲಿಲ್ಲ. ಕಾಣಿಸಲೂ ಇಲ್ಲ. ಒಂದು ಸಂಜೆ ನನ್ನ ಫ್ಲಾಟಿನ ಮುಂದೆ ಒಂದು ಕರೆಯೋಲೆ ಕಾಲಿಗೆ ತಾಗಿ.. ತೆಗೆದು ನೋಡಿದರೆ..
ಉಮಾ ಮುಪ್ಪಾಳ್ಳ ವೆಡ್ಸ್,,,,,!!??? ಕಣ್ಣು ಮಸಕಾಗಿ, ಇನ್ನೇನೂ ಕಾಣದಂತಾಗಿ “ಈಗಲಾದರೂ ಅಳು ಮಾರಾಯಾ” ಅಂತ ಮೆದುಳಿನ ಸಂಕೇತಗಳನ್ನು ಪಡೆದ ಕಂಗಳು, ಅದರ ಆಜ್ಞೆಯನ್ನು ಪಾಲಿಸುತ್ತ……
ಕೋಣೆಯಿಂದ… ಗತ ಜೀವನದ ಕೋಣೆಯಿಂದ…. ಜಾರಿ… ಕಾರಿನಲ್ಲಿ ಬಿದ್ದು… ಅಯೋಮಯದಿಂದ ಎಚ್ಚರಗೊಳ್ಳುವಷ್ಟರಲ್ಲಿ… ಜಾನೀ ರನ್ನರ್ ವೇಗ ೧೨೦ ಕಿ.ಮೀ ತಾಸಿಗೆ……..
ಕೂದಲೆಳೆಯ ತಿರುವಿನಲ್ಲಿ ಎದುರಿನಲ್ಲಿ ಬರುತ್ತಿದ್ದ ಟೀ ಲೀಫ್ ಲೋಡ್ ವ್ಯಾನ್ ನ ತಪ್ಪಿಸಲು ಹೋಗಿ……
ಮೂರು ನೂರು ಡಿಗ್ರೀ ತಿರುಗಿದ ಸ್ಟೀರಿಂಗ್….
ಅರವತ್ತೈದು ಡಿಗ್ರೀ ತಿರುಗಿದ ಕಾರು…
ಅಮಲಿನಲ್ಲಿ ಸೋತುಹೋಗುತ್ತಿದ್ದ ರೆಪ್ಪೆಗಳನ್ನ ತೆರೆದು, ಕಣ್ಣ ಮುಂದೆ ಓಡಿ ಬರುತ್ತಿದ್ದ ಅಸ್ಪಷ್ಟ ಆಕಾರಗಳನ್ನ ಮೆದುಳಿಗೆ ಕಳಿಸಿ ವಿಶ್ಲೇಷಿಸುತ್ತಾ….
ನಾ…..ನು…..
*****
“ನಾನು ಎಲ್ಲಿದ್ದೀನಿ?!” ಆಶ್ಚರ್ಯ ಅಯೋಮಯಗಳ ರೊಟೀನ್ ಪ್ರಶ್ನೆ. ಕೆಲ ಸಮಯ ಏನೂ ಅರ್ಥವಾಗಲಿಲ್ಲ. ಕೆಲ ಕ್ಷಣಗಳ ಮಟ್ಟಿಗೆ ಏನೂ ಹೊಳೆಯದ ಅಯೋಮಯ ಸ್ಥಿತಿ. ಬೆಟ್ಟದ ತಿರುವಿನಲ್ಲಿ ಕಾರಿನ ನಿಯಂತ್ರಣ ತಪ್ಪಿಸಿದ ಜಾನಿ ವಾಕರ್ ಯಾವಾಗಲೋ ಮಾಯವಾಗಿರುತ್ತಾನೆ. ಮತ್ತೆ… ನನ್ನ ಮುಂದೆ ಬರುತ್ತಿರುವವರು ಯಾರು!?
“ಹೇಗಿದೆ ಸಾರ್?” ಯೋಧನ್ ಕೇಳಿದ. ನಂದೂವಿನ ಗೆಸ್ಟ್ ಹೌಸ್ ನಲ್ಲಿ ಕೆಲಸಗಾರನಾದ ಇಪ್ಪತ್ತೆರಡು ವರ್ಷದ ಒರಿಯಾ ದುರ್ಯೋಧನ್.
“ಹ್ಮ್….! ಇಲ್ಲಿಗೆ ಹೇಗೆ ಬಂದೆ…?”
“ಯಾರೋ ಒರು ಪೊಂಬಳ್ ಕರ್ಕೊಂಬಂದ್ಲು ಸಾರ್. ನಿಮ್ಮ ಕೈಗೆ ಬ್ಯಾಂಡೇಜ್ ಸಹ ಅವಳೇ ಹಾಕಿಸಿದ್ಲು.” ಅಂದ. ನನ್ನ ಮನಸ್ಸಿನಲ್ಲಿಯ ಪ್ರಶ್ನೆ ಅರ್ಥಮಾಡಿಕೊಂಡವನಂತೆ “ ಕಾರು ಕೂಡಾ ನಾನು, ವಾಚ್ ಮ್ಯಾನ್ ಪಾಂಡಿ ಸೇರಿ ತಂದುಬಿಟ್ಟೆವು ಸಾರ್. “ ಎರಡನೆಯ ಪ್ರಶ್ನೆಗೆ ನಾನು ಕೆಳೋಕೆ ಮುಂಚಿತವಾಗೇ ಉತ್ತರ. ಒರಿಯಾ, ತಮಿಳು, ಕನ್ನಡ ಮಿಶ್ರಿತ ವಿಚಿತ್ರ ಭಾಷೆ ಅವನದ್ದು.
“ಜ್ಯೂಸ್ ತರ್ಲಾ ಸಾರ್?” ಆಜ್ಞೆಗಾಗಿ ಕಾದ ಆಳಿನಂತೆ ಕೇಳಿದ.
“ಬೇಡ” ಎಂಬಂತೆ ಸನ್ನೆ ಮಾಡಿ ಕಣ್ಣು ಮುಚ್ಚಿದೆ. ನಿದ್ರೆಯ ಮಂಪರು ಕವಿಯಿತು…
*******
ನಿದ್ದೆ ಮಾಡಿ ಎದ್ದು ಗಡಿಯಾರದ ಕಡೆಗೆ ನೋಡಿದರೆ….. ಸಂಜೆ ನಾಲ್ಕುವರೆ. ಯೋಧನ್ ತಂದ ಚಹಾ ಕಪ್ಪನ್ನು ತೆಗೆದುಕೊಳ್ಳುತ್ತ, ಕಳಕ್ ಅಂದ ಬಲಗೈ ಮುಂಗೈಗೆ ಕಟ್ಟಿದ ಕಟ್ಟನ್ನು ನೋಡುತ್ತ….
“ಆ! ಯೋಧೂ! ನನ್ನ ಇಲ್ಲಿಗೆ ತಂದ ಹುಡುಗಿ ಯಾರು?”
“ತೆರಿಯಾದು ಸಾರ್ ! ನಮ್ಮ ನಂದು ಸಾರ್ ಗೆ ಪರಿಚಯವಿದ್ದ ಡಾಕ್ಟರ್ ಹತ್ತಿರಕ್ಕೇ ಕರೆದುಕೊಂಡು ಹೊಗಿದ್ದು. ಅವರಿಗೆ ನೀವುದಾ ನಂದು ಸಾರಿನ ಕಾರ್ಡು ತೋರಿಸಿದರಂತೆ. ಕಟ್ಟು ಕಟ್ಟಿದ ಮೇಲೆ ಇಲ್ಲಿಗೆ ತಂದಿದ್ದಾರೆ. ಡಾಕ್ಟರ್ ಜೊತೆಗೇ ಅಂದ ಪೊಣ್ಣು ಬಂದಿದ್ದು. ನಿಮ್ಮನ್ನ ಒಳಗೆ ತಂದು, ಮತ್ತೆ ನೋಡಿದ್ರೆ ಕಾಣಿಸಲಿಲ್ಲ.” ಅವನದ್ದೇ ಆದ ವಿಚಿತ್ರ ಭಾಷೆಯಲ್ಲಿ ಹೇಳಿದ.
ಅಮಲಿನಲ್ಲಿದ್ದೆನೇನೋ, ನಡೆದ ಯಾವ ಘಟನೆಯೂ ನೆನಪಿಗೆ ಬರ್ತಾ ಇಲ್ಲ.
ಮೈಯೆಲ್ಲ ನೋವಿದ್ದಂತೆ ಅನಿಸಿತು. ಸ್ನಾನ ಮಾಡಿ, ಯೋಧನ್ ತಂದ ಎರಡನೆಯ ಟೀ ಕುಡಿದು, “ಸರಿ! ನಾನು ಸ್ವಲ್ಪ ಹೊರಗಡೆ ತಿರುಗಾಡಿ ಬರ್ತೀನಿ” ಸಿಗರೇಟ್ ಹೊತ್ತಿಸಿ ನಡೆದೆ.
ಹಾಗೆ ಎಷ್ಟು ಹೊತ್ತು ನಡೆದೆನೋ ತಿಳಿಯದು. ಎದುರಲ್ಲಿ ಯಾವುದೋ ವ್ಯೂ ಪಾಯಿಂಟ್. ಅಲ್ಲಿದ್ದ ಮನುಷ್ಯರನ್ನ ಗಮನಿಸ್ತಾ ಪಕ್ಕದಲ್ಲೇ ಇದ್ದ ಬೆಂಚಿನ ಮೇಲೆ ಕೂತು ಸಿಗರೇಟಿಗೆ ಬೆಂಕಿ ತಾಗಿಸಿದೆ.
“ಹಲೋ! ನಿಮ್ಮನ್ನೇ… ಆ ಸಿಗರೇಟ್ ಸ್ವಲ್ಪ ನಂದಿಸ್ತೀರಾ! ಇದು ಪಬ್ಲಿಕ್ ಪ್ಲೇಸ್”
ನನ್ನನ್ನೇನಾ!? ಕೈಯಲ್ಲಿದ್ದ ಸಿಗರೆಟ್ ನ ನೋಡಿದೆ. ಹೌದು. ನನ್ನನ್ನೇ. ಆ ಮಾತು ಕೇಳಿಬಂದ ಕಡೆಗೆ ನೋಟ ಹರಿಸಿದರೆ…..
ದೊಡ್ಡ ಕಂಗಳು, ಲಿಪ್ ಸ್ಟಿಕ್ ನಿಂದ ಕೆಂಪಾದ ತುಟಿಗಳು, ಎತ್ತರ ಒಂದೈದೂ ಐದಿರಬಹುದು. ವಯಸ್ಸು ಒಂದಿಪ್ಪತ್ತೈದು ಇರಬಹುದು. ಬಿಳಿ ಟೀ ಷರ್ಟ್, ನೀಲಿ ಫೇಡೆಡ್ ಜೀನ್ಸ್, ಪೋನೀಟೈಲ್ ಗಳಿಂದ “ ಅಡ್ಡಿಇಲ್ಲ” ಗಿಂದ ಸ್ವಲ್ಪ ಚಂದವಿದ್ದಳು.
ಸಿಗರೆಟ್ ನನ್ನ ತುಟಿಗಳ ನಡುವಿನಿಂದ ಬಿದ್ದು ಕಾಲ ಕೆಳಗೆ ನಲುಗಿ ಹೋಯಿತು. ನಾನು ಪಕ್ಕಕ್ಕೆ ತಿರುಗಿ ಹೊರಟಾಗ….
“ಓಯ್! ಆ ಹಕ್ಕಿ ನೋಡು ಎಷ್ಟು ಚಂದವಾಗಿದೆ” ತನ್ನ ಪಕ್ಕದಲ್ಲಿದ್ದ ಗೆಳತಿಗೆ ತೋರಿಸುತ್ತಿದ್ದಳು. ಅದೇ ಹಕ್ಕಿ ಕೆಲ ನಿಮಿಷಗಳ ಕೆಳಗೆ ಒಂದು ಚಿಟ್ಟೆಯನ್ನ ಹರಿದು ತಿಂದಿದ್ದು ನೋಡಿದ್ದರೆ ಏನಂತಿದ್ದಳೋ ! ಯಾಕೋ ನಗೆ ಬಂತು.
******
ಸಮಯ ಎಂಟೂವರೆಯಾಗಿರಬಹುದು. ಚಂದ್ರ ಮೆಲ್ಲಕ್ಕೆ ಮೇಲೇರುತ್ತಿದ್ದ. ಗೆಸ್ಟ್ ಹೌಸಿನ ಲಾನ್ ನಲ್ಲಿ ಬಂದು ಕೂತ್ಕೊಂಡೆ. ವಿಸ್ಕೀ ಬಾಟಲ್… ಸೋಡಾ, ಸಿಗರೆಟ್ ಪಾಕೆಟ್ ತಂದು ಪಕ್ಕದಲ್ಲಿದ್ದ ಟೀಪಾಯ್ ಮೇಲಿಟ್ಟು…
“ಮತ್ತೇನಾದರೂ ವೇಣುಮಾ ಸಾರ್?” ಕೇಳಿದ ಯೋಧನ್. ಬೇಡ ಎಂಬತೆ ಸನ್ನೆ ಮಾಡಿ ಹೋಗಂದೆ.
ಪಕ್ಕದಲ್ಲಿದ್ದ ಮ್ಯೂಜಿಕ್ ಪ್ಲೇಯರ್ ನಿಂದ ಮೆತ್ತಗೆ ಹರಿಪ್ರಸಾದ್ ಚೌರಸಿಯಾ ಕೊಳಲು. ಯಾವುದೋ ಹಳೆಯ ನೆನಪುಗಳನ್ನು ಬಡಿದೆಬ್ಬಿಸಿದಂತೆ, ಮತ್ತೆ ಅಳಿಸಿ ಹಾಕಿದ ಹಾಗೆ. ಹೀಗೆ ಸಾಹಿತ್ಯವಿಲ್ಲದ ಸಂಗೀತ ಕೇಳಿದಾಗಲೆಲ್ಲ ಆಗುವ ಅನುಭವವೇ ಇದು. ಯಾವ ಯಾವ ನೆನಪುಗಳೋ ಹಾಗೇ ಮಾಂಟೇಜ್ ಷಾಟ್ಸ್ ತರಾ ಕಣ್ಣ ಮುಂದೆ ಹಾದು ಹೋಗುತ್ತಿರುತ್ತವೆ.
*****
“ಎಕ್ಸ್ ಕ್ಯೂಜ್ ಮಿ! ಸ್ವಲ್ಪ ಲೈಟರ್ ಕೊಡ್ತೀರಾ?”
ಯಾವುದೋ ಕೊರಳು ಕೇಳಿಸಿ, ತಿರುಗಿ ನೋಡಿದರೆ ಅವಳೇ… ಅಲ್ಲಿ ಸಿಗರೆಟ್ ನಂದಿಸಲು ಹೇಳಿದ ಹುಡುಗಿ
“ಸಾರೀ! ನನಗೆ ಸಿಗರೇಟಿನ ಹೊಗೆ ಬಾಯಿಂದ ಬಿಟ್ಟರೆ ಮೂಗಿನಿಂದ ಎಳೆಯೋದು ಇಷ್ಟವಾಗುವುದಿಲ್ಲ” ಮಾತಾಡುತ್ತಲೇ ಸಲಿಗೆಯಿಂದ ಟೀಪಾಯ್ ಮೇಲಿನ ಲೈಟರ್ ತೆಗೆದುಕೊಂಡಳು.
ಮಾರ್ಲ್ಬೆರೋ ಲೈಟ್ಸ್… ಅವಳ ತುಟಿಗಳ ಮೇಲೆ ತನ್ನ ಸಾವಿಗೆ ಸಿದ್ಧವಾಯಿತು.
ಪಕ್ಕದಲ್ಲಿದ್ದ ಬೆಂಚಿನ ಮೇಲೆ ಕೂತು…..
“ಅಕ್ಕೋ ಅಲ್ಲಿಯ ಕಾಟೇಜ್ ನಲ್ಲಿದ್ದೇವೆ. ಮೂರು ದಿನಗಳ ಟೂರ್.. ಊಟೀ ನನಗೆ ಹೊಸತಲ್ಲ. ಆದರೆ ಇವರಿದ್ದಾರಲ್ಲ, ಗೆಳತಿಯರು, ಇವರಿಗೋಸ್ಕರ ಬಂದೆ.”
“ಪ್ಲೀಸ್! ಇನ್ನು ಹೊರಡ್ತೀರಾ” ನನ್ನ ಬೇಸರವನ್ನು ಹೊರಹಾಕದಿರಲು ಪ್ರಯತ್ನ ಪಡುತ್ತಲೇ ಗಟ್ಟಿಯಾಗಿ ಹೇಳಿದೆ.
“ಓಕೆ ಓಕೆ ! “ ಹೊರಡುತ್ತಾ ನಿಂತು “ಚಕ್ರವಾಕನಾ?”
“ಅಲ್ಲ. ಅದು ಆಹಿರ್ ಭೈರವ್.” ನನ್ನ ಅಸಹನೆ ತಡೆದುಕೊಳ್ಳಲಿಲ್ಲ ಈ ಸಲ. ನಿಜಕ್ಕೆ ನನಗೆ ಆ ರಾಗಗಳ ಬಗ್ಗೆ ಜಾಸ್ತಿ ಗೊತ್ತಿಲ್ಲ. ಇದ್ದ ಬದ್ದ ಜ್ಞಾನವನ್ನು ಉಪಯೋಗಿಸಿದೆ.
“ ಅದೇ !.. ಹಿಂದುಸ್ತಾನೀ ಆಹಿರ್ ಭೈರವ್, ಕರ್ನಾಟಕ ಚಕ್ರವಾಕ. ‘ ಸೋಲಾ ಬರಸ್ ಕಿ ಬಾಲೀ ಉಮರ್ ಕೋ ಸಲಾಂ’ ಹಾಡು ಕೇಳಿದೀರಲ್ಲ! ಏಕ್ ದೂಜೆ ಕೆ ಲಿಯೆ ಚಿತ್ರದ್ದು. ಇದೇ ರಾಗ. ಮಾಂಡಲಿನ್ ಶ್ರೀನಿವಾಸ್ ಹೆಚ್ಚಾಗಿ ಪ್ಲೇ ಮಾಡೋ ರಾಗ ಇದೇ ಅಂತ ಅನಿಸತ್ತೆ… ಎಮ್ಮೆಸ್ ‘ಅವರ ಪಿಬರೇ ರಾಮ ರಸಂ’ ಕೇಳಿದಿರಲ್ಲಾ!”
“ಕ್ಲಾಸಿಕಲ್ ಮ್ಯೂಜಿಕ್ ಟಚ್ಚಿದೆಯಾ?”
“ ಸ್ವಲ್ಪ ಸ್ವಲ್ಪ! ಅಮ್ಮ ಇದ್ದಾಗ ಹಾಡ್ತಿದ್ಲು.”
“ಅಂದ್ರೆ…..!”
“ಹೌದು! ಸತ್ತು ಮೂರು ವರ್ಷಗಳಾದವು. ಅಪ್ಪನಿಂದ ಬೇರೇ ಆದ ಮೇಲೆ ಮನೆ ನಡೆಸಲು ಕೆಲ ದಿನ ಸಂಗೀತದ ಪಾಠ ಹೇಳೋಳು. ಹಾಗೆ ನಂಗೆ ಸಹ ಸ್ವಲ್ಪ ಗೊತ್ತು.”
ಸಿಗರೆಟ್ ಆರಿಸದೇನೇ ಯಾಷ್ ಟ್ರೇ ನಲ್ಲಿ ಹಾಕಿ…
“ ಈ ವಾತಾವರಣದಲ್ಲಿ ಮೆಹ್ದೀ ಹಸನ್ ಸಹ ತನ್ನ ಕೊರಳು ಜೋಡಿಸಿದರೆ ಎಷ್ಟು ಚೆನ್ನಾಗಿರತ್ತೆ ಅಲ್ವಾ?”
“ಹ್ಮ್! ಆದರೆ ಗಝಲ್ ಗಳ ವಿಷಯದಲ್ಲಿ ನನಗೆ ಮೆಹ್ದಿಗಿಂದ ಜಗ್ಜಿತ್ ಸಿಂಗ್ ಜಾಸ್ತಿ ಸೇರ್ತಾನೆ” ನನಗರಿವಿಲ್ಲದಂತೆ ನಾನೂ ಮಾತನಾಡಲು ಶುರು ಮಾಡಿದ್ದೆ. ಇವಳ ಸ್ಥಾನದಲ್ಲಿ ಯಾವನಾದ್ರೂ ಗಂಡಸು ಇದ್ದಿದ್ರೆ ಹೀಗೆ ಮಾತಾಡುತ್ತಿದ್ದೆನಾ?
“ಅದೇನು ಹಾಗೆ…?”
“ಗೊತ್ತಿಲ್ಲ…. ಮೆಹ್ದಿ ಅಂದ್ರೆ ಇಷ್ಟವಿಲ್ಲ ಅಂತಲ್ಲ. ಅದೇನೋ ಕೆಲ ವಿಷಯಗಳು ಹಾಗೆ ಉಳಿದು ಹೋಗುತ್ತವೆ.”
ಪಕ್ಕದಲ್ಲಿದ್ದ ಕುರ್ಚಿಯಲ್ಲಿ ಕೂತು ಟೀಪಾಯ್ ಮೇಲಿದ್ದ ಪುಸ್ತಕಗಳು, ಕಾಗದಗಳು ನೋಡಿ….. ಎಡ ಹುಬ್ಬು ಮಾತ್ರ ಮೇಲೇರಿಸಿ…..
“ನಿಮಗೇನು ತೊಂದರೆ ಇಲ್ಲದಿದ್ರೆ ನಾನು ಸ್ವಲ್ಪ ಹೊತ್ತು ಇಲ್ಲಿ ಕೂತ್ಕೋಬಹುದಾ?”
ಹಾಗೆ ಕೇಳ್ತಾ ಕೇಳ್ತಾ ಮಾತು ಮುಗಿಯೋಕೆ ಮುಂಚೇನೇ, ನನ್ನ ಪರವಾನಿಗೆ ಬಂತೋ ಇಲ್ವೋ ನೋಡದೇನೇ ಕೂತು… ಸಿಗರೇಟ್ ಹಚ್ಚಿದ್ದಳು.
ನಾನು ಅವಳನ್ನೇ ನೋಡುತ್ತಿದ್ದೆ.
“ಯಾರೀ ಹುಡುಗಿ? ಅರ್ಧ ರಾತ್ರಿಯ ಹೊತ್ತಿನಲ್ಲಿ ಇಲ್ಲಿಗೆ ಯಾಕೆ ಬಂದಿದ್ದು? ಯಾವ ತರದ ಸಂಕೋಚ ಇಲ್ದೇ, ನಾನ್ಯಾರು ಅಂತ ತಿಳಿಯದೇ ಇಷ್ಟು ಸಲಿಗೆಯಿಂದ ಹೇಗೆ ಹೀಗಿರುತ್ತಿದ್ದಾಳೆ? ಯಾವುದಕ್ಕೂ ಸರಿಯಾದ ಉತ್ತರ ಸಿಗದೇ, ಹಾಗೇ ಸುಮ್ಮನೆ ಅವಳನ್ನೇ ನೋಡ್ತಾ ಕೂತೆ.
ಪುಸ್ತಕ ನೋಡುತ್ತಿದ್ದ ಕಣ್ಣುಗಳು, ನಿರ್ಲಕ್ಷವಾಗಿ ಬಿಟ್ಟಿದ್ದಕ್ಕೆ ಸ್ವೇಚ್ಛೆಯಾಗಿ ಗಾಳಿಯಲ್ಲಿ ಹಾರಾಡುತ್ತಿದ್ದ ಕೂದಲು, ಎಡಗೈಯಲ್ಲಿ ಸಿಗರೆಟ್, ಬಲಗೈಯಲ್ಲಿ ಪುಸ್ತಕ.. ಅವಳು ಕೂತಿದ್ದ ಭಂಗಿ…..
ಯಾವುದೋ ಕವಿಯ ಕವಿತೆ ಕಿವಿಯಲ್ಲಿ ಗುಯ್ಗುಟ್ಟಿದ ಹಾಗಾಗಿ ತಲೆ ಕೊಡವಿಕೊಂಡು ನೋಡಿದರೆ, ಕಾಫ್ಕಾನನ್ನ ಲಾಲಿಸುತ್ತ, ಪುಟಗಳನ್ನ ಸವರುತ್ತಾ….
“ಹ್ಮ್….! ಪುಸ್ತಕಗಳು, ಸಂಗೀತ, ಬೆಳದಿಂಗಳಲ್ಲಿ ಕೂತದ್ದು ಎಲ್ಲಾ ಸರಿಯಾಗಿವೆ. ಆದರೆ ಈ ಗಡ್ಡ, ಲಿಮಿಟ್ ದಾಟಿ ಕುಡಿಯೋ ತರ ಇದ್ದ ವೇಷ…! “ ನನ್ನ ಕಣ್ಣಲ್ಲಿ ನೋಡ್ತಾ…..
ಅವಳ ಉಪಮೆಗೆ ನಗೆ ಬಂದು. ಅಷ್ಟರಲ್ಲಿ ‘ಅವಳ’ ನೆನಪಾಗಿ ನಕ್ಕೆನೋ ಇಲ್ಲವೋ ಅಂತ ನನಗೇ ಅರ್ಥವಾಗದ ಹಾಗೆ ಭಾವ ಕೊಟ್ಟು….
“ಕೆಲ ವೇಷಗಳು ಅಷ್ಟೇ. ಸಿನಿಮಾಟಿಕ್ ಆಗಿರುತ್ತವೆ.”
ಸಿಗರೆಟ್ ಹಚ್ಚಿಕೊಂಡು ಬೆಳದಿಂಗಳ ಬೆಳಕಲ್ಲಿ ಅವಳ ಮುಖ ನೋಡಿದೆ. ಇನ್ನೂ ಜೀವನದಲ್ಲಿ ನೋವು ತಿಳಿದ ಹಾಗಿಲ್ಲ. ಒಬ್ಬರನ್ನ ಕಳೆದುಕೊಳ್ಳುವುದು ಅದೆಷ್ಟು ನೋವು ಕೊಡುತ್ತದೋ ಅವಳಿಗಿನ್ನೂ ಅನುಭವಕ್ಕೆ ಬಂದಿಲ್ಲ ಅನಿಸತ್ತೆ.
“ಯಾರನ್ನದರೂ ಪ್ರೀತ್ಸಿ ಕಳೆದುಕೊಂಡರೆ ನಿಮಗೂ ಗೊತ್ತಾಗತ್ತೆ. ತುಂಬಾ ಗಾಢವಾಗಿ ಬಯಸಿದವರು ದೂರವಾದರೆ ಆ ನೋವು ಹೇಗಿರತ್ತೆ ಅಂತೆ ನಿಮಗಿನ್ನೂ ತಿಳಿಯದು ಅಂತ ಕಾಣತ್ತೆ.”
“ತುಂಬಾ ಡಿಸ್ಟರ್ಬ್ಡ್ ಆಗಿದ್ದೀರಿ ಅನಿಸತ್ತೆ. ಕಾರಣ ಕೂಡಾ ಸ್ವಲ್ಪ ಮಟ್ಟಿಗೆ ಗೊತ್ತಾಯಿತು. ನಿಮಗೊಂದು ವಿಷಯ ಹೇಳಲೇ? ಮನುಷ್ಯರನ್ನ ನಾವೆಂದೂ ಮಿಸ್ಸಾಗಲ್ಲ. ನಮ್ಮ ಇಷ್ಟವನ್ನ, ಪ್ರೀತಿಯನ್ನ ಕೆಲವರಿಗೆ ಮಾತ್ರ ಮೀಸಲಾಗಿರಿಸಿದಾಗಲೇ ಸಮಸ್ಯೆ ಆಗೋದು”
“ಅಂದರೆ?!”
“ಅಂದರೆ….. ! ಪ್ರೀತಿ ಅನ್ನೋದು ಒಂದು ಡಿಪೆಂಡೆಂಟ್ ಫೀಲ್ ಅನಿಸತ್ತೆ ನನಗೆ. ಅದು ಮತ್ತೊಂದು ಫೀಲ್ ಜೊತೆ ಬೆರೆತರೆ ಮಾತ್ರ ಅಲ್ಲದೇ ಅದೊಂದೇ ಬೇರೇ ಆಗಿ ಇರಲಿಕ್ಕಾಗುವುದಿಲ್ಲ. ಯಾವುದೋ ಒಂದು ಇಷ್ಟ, ಮರುಕ, ಅಭಿಮಾನ, ಕೀಳರಿಮೆ ಹೀಗೆ ಬಹಳಷ್ಟು ಭಾವನೆಗಳು ಪ್ರೀತಿಯನ್ನು ಬಯಸುವುದಕ್ಕೋ ಅಥವಾ ಪ್ರೀತಿಸುವುದಕ್ಕೋ ಕಾರಣವಾಗುತ್ತವೆ. ಆ ಭಾವನೆಗೆ ಕಾರಣವಾದ ಮುಖ್ಯವಾದ್ದನ್ನು ನಮ್ಮ ಸ್ವಂತ ಇಷ್ಟಗಳು ಮೆಟ್ಟಿ ನಿಂತಾಗ ತಂತಾನೇ ಪ್ರೀತಿ ಕಮ್ಮಿಯಾಗುತ್ತದೆ.”
“ಹಾಗಾದರೆ ಪ್ರೀತಿಸಿದವರು ದೂರವಾಗಲಿಕ್ಕೆ ನಾವೇ ಕಾರಣ ಅಂತೀರಾ?”
“ಹ್ಮ್! ಪ್ರೀತಿಸಿದವರು ದೂರವಾದರೆ ಅಷ್ಟು ದುಃಖಪಡುವ ಅಗತ್ಯವಿಲ್ಲ ಅಂತ ನನ್ನ ಅಭಿಪ್ರಾಯ. ನಮ್ಮ ಮೇಲೆ ಅವರಿಗಿರುವ “ಸ್ಪೆಷಲ್ ಫೀಲ್’ ಮಾಯವಾಗಿರಬಹುದು. ಇಲ್ಲಾಂದ್ರೆ ನಮ್ಮ ಇಷ್ಟವನ್ನ ಅವರ ಸಲುವಾಗಿ ಬಿಡಲಾರದೆ ನಾವೇ ಅವರನ್ನ ನಿರ್ಲಕ್ಷ ಮಾಡಿರಬಹುದು. ಈ ಎರಡರಲ್ಲಿ ಯಾವುದೊಂದು ನಡೆದರೂ ಅಲ್ಲಿ ಪ್ರೀತಿ ಇಲ್ಲ ಅಂತ ಅರ್ಥ. ಪ್ರೀತಿನೇ ಇಲ್ಲದಿರುವಾಗ ಅವರು ನಮ್ಮ ಪಕ್ಕದಲ್ಲಿದ್ದರೂ ಅಥವಾ ಇಲ್ಲದಿದ್ದರೂ ವ್ಯತ್ಯಾಸ ಏನಿದೆ…..?”
“…………..”
“ನಾವು ಮನುಷ್ಯರನ್ನ ಮನುಷರನ್ನಾಗಿ ಪ್ರೀತಿಸುವುದಿಲ್ಲವೇನೋ.! ಅವರ ಹುದ್ದೆ, ಕೆಲಸ, ನಡವಳಿಕೆ, ಅವರಲ್ಲಿರುವ ಯಾವುದೋ ವಿಶೇಷ ಗುಣ…..ಅಥವಾ ಲೈಂಗಿಕ ಅಗತ್ಯ ಇವೆಲ್ಲ ಪ್ರೀತಿಯ ಸ್ತರವನ್ನು, ಪ್ರೀತಿಯ ಎಲ್ಲೆಗಳನ್ನು ನಿರ್ಣಯಿಸುತ್ತವೆ.”
ಅವಳು ನಿಲ್ಲಿಸದಂತೆ ಮಾತನಾಡುತ್ತಲೇ ಇದ್ದಳು. ನನಗೂ ಕೇಳಲು ಆಸಕ್ತಿ ಎನಿಸುತ್ತಿತ್ತು. ಅವಳು ಹೇಳುತ್ತಿರುವ ಮಾತುಗಳೆಲ್ಲವೂ ನನ್ನನ್ನು ನಾನೇ ನೋಡಿಕೊಳ್ಳುತ್ತಿರುವಂತೆ, ನನ್ನ ಮುಂದೆ ಒಂದು ಕನ್ನಡಿ ಹಿಡಿದಂತೆ….
“ಹಲೋ…! ಏನಾಯಿತು? ಹಾಗೇ ನಿಂತುಬಿಟ್ರಿ? ಎನೀ ಥಿಂಗ್ ರಾಂಗ್ ವಿತ್ ಮಿ?”
“ ನೋ…ನೋ… ಐ ಯಾಮ್ ಒಕೆ….!” ನನ್ನ ದನಿಯಲ್ಲಿ ನನಗೇ ಸಂಶಯದ ಅನಿಸಿಕೆ. “ನಾನು ಸತ್ಯವಾಗ್ಲೂ ಓಕೇನಾ….?”
ಇಬ್ಬರ ನಡುವೆ ಕೆಲ ಕ್ಷಣ ಮೌನ. ಮತ್ತೆ ಕೇಳಿದೆ.
“ಏನು ಓದಿಕೊಂಡಿದ್ದಿಯಾ ನೀನು?”
“ಹ್ಮ್! ಏನೋ ಬಿಡಿ. ಸ್ವಲ್ಪ ಮಟ್ಟಿಗೆ ಓದಿದ್ದೀನಿ. ವಿವರಗಳೇನೂ ಕೇಳಬೇಡಿ.”
ತುಂತುರಾಗಿ ಬೀಳುತ್ತಿದ್ದ ಮಂಜಿಗೆ ಶಾಲನ್ನು ಭುಜಗಳ ಮೇಲ್ ಹಾಕಿಕೊಂಡೆ. ಸ್ವೆಟರ್ ಕಿಸೆಗಳಲ್ಲಿ ಕೈಗಳನ್ನು ಇಟ್ಟುಕೊಂಡಳು ಅವಳು. ರಾತ್ರಿಯ ಮುಖದ ಮೇಲೆ ಮಚ್ಚೆಗಳಂತೆ ನಾವಿಬ್ಬರೂ… ಇಲ್ಲಿ… ಹೇಗೆ….?
“ಹೇ! ಗಿಟಾರ್ ಬಾರಿಸ್ತೀರಾ ನೀವು?” ಪಕ್ಕದಲ್ಲಿಟ್ಟಿದ್ದ ನನ್ನ ಗಿಟಾರನ್ನ ಕೈಗೆತ್ತಿಕೊಳ್ಳುತ್ತ ಕೇಳಿದಳು.
“ಹೌದು. ಆಗಾಗ.”
“ಮತ್ತೆ ಈಗ….” ನಗೆಯೊಂದಿಗೆ ಕೇಳಿದಳು.
ನಾನೂ ನಕ್ಕೆ. ಅವಳ ಕೈಯಿಂದ ಗಿಟಾರ್ ತೆಗೆದುಕೊಂಡೆ. ಚೌರಾಸಿಯಾನನ್ನ ಸ್ವಲ್ಪ ನಿಲ್ಲಲು ಹೇಳುವಂತೆ ಅದನ್ನು ನಿಲ್ಲಿಸಿದಳು ಅವಳು.
ನನಗೇ ತಿಳಿಯಲಿಲ್ಲ, ಎಷ್ಟು ರಸ ನಿಮಿಷಗಳು ಆ ತಂತಿಗಳ ಮೇಲಿಂದ ಉದುರಿ ಗಾಳಿಯಲ್ಲಿ ಬೆರೆತುಹೋದವೋ!
ಬೆರಳುಗಳ ನೋವು… ಮೆದಳನ್ನು ತಲುಪಿ…..
ಕಣ್ಣು ತೆರೆದು…
ಮುಂದಿದ್ದ ಗ್ಲಾಸಿನಲ್ಲಿಯ ವಿಸ್ಕೀಯನ್ನ ಒಂದೇ ಗುಟುಕಿನಲ್ಲಿ ಖಾಲಿ ಮಾಡಿದೆ. ಸಾಕಾಗಲಿಲ್ಲ ಅಂತ ಅನಿಸಿತು.
ಅದರ ಬೆನ್ನಲ್ಲೆ ಮತ್ತೊಂದು ಲಾರ್ಜ್…. ಐಸ್, ನೀರು ಏನೂ ಬೆರಸದೇನೇ…..
“ಏನಾಯಿತು…!” ಎನ್ನುವಂತೆ ಹುಬ್ಬು ಹಾರಿಸಿದಳು. “ನಿಲ್ಲಿಸಿದಿರಿ?”
“ಮುಗಿಯಿತು.”
’ವಿಸ್ಕೀ…?”
……. ……. ……
“ಮ್ಯೂಸಿಕ್?”
“ಅಲ್ಲ.”
“ಮತ್ತೆ??”
“ಏನೋ ಕಳೆದುಕೊಂಡಿದ್ದೇನೆಂಬ ಭಾವನೆ.”
“ಅಂದರೆ…. ಇಡೀ ನೋವನ್ನು ಸಂಗೀತದಿಂದ ಒರೆಸಿಬಿಟ್ರಾ?”
“ಇರಬಹುದು.”
…………….
ಕೆಲ ಕ್ಷಣಗಳಾದ ಮೇಲೆ ಬೆಚ್ಚಿಬಿದ್ದಂತೆ “ ಓ! ಟೈಂ ಆಗಲೇ ಬೆಳೆಗ್ಗೆ ಐದೂವರೆ. ನಾನು ಹೊರಡಬೇಕು.”
“ಹೋಗಲೇಬೇಕಾ?” ಅಂತ ಕೇಳಲಾರದೇ “ಸರಿ…..!” ಅಂದೆ.
ಎದ್ದು ಹೊರಡ್ತಾ ಹಿಂದಕ್ಕೆ ತಿರುಗಿ….
“ಬಾಸ್! ಲೈಫ್ ತುಂಬಾ ಸಿಂಪಲ್ಲಾಗಿರುತ್ತೆ. ಪ್ರೀತಿಗೆ ಸಾಕಾಗುವಷ್ಟು ಮನುಷ್ಯರಿದ್ದರೂ ನಾವೇ ಅದನ್ನು ಕೆಲವರಿಗಷ್ಟೇ ಜಾಸ್ತಿ ಕೊಟ್ಟು ಕಾಂಪ್ಲಿಕೇಟ್ ಮಾಡ್ಕೊಳ್ತೀವಿ.”
“ಅರ್ಥವಾಗಲಿಲ್ಲ.”
“ನಮಗೆ ಯಾರೋ ಲೈಕಾಗ್ತಾರೆ. ನಂತರ…. ನಮಗೆ ಲೈಕಾಗುವಂತೆ ಅವರಿರಬೇಕು ಅಂತ ನಾವು ಅಂದ್ಕೊಳ್ತೀವಿ. ಬಹುಶ ಅದೇ ಮನುಷ್ಯರನ್ನ ದೂರ ಮಾಡುತ್ತೇನೋ… ಯೋಚಿಸಿದ್ದೀರಾ….”
“ಆಗಬಹುದು! ಆದರೆ ಆಚೆ ಮನುಷ್ಯರೂ ಹಾಗೇ ತಿಳಿದುಕೊಳ್ಳ ಬೇಕಲ್ಲ! ದೂರವಾದಾಗಿನ ನೋವು ಅವರಿಗೆ ಅರ್ಥವಾಗುವುದಿಲ್ಲ. ಅವರು ಸಂತೋಷವಾಗಿರ್ತಾರೆ. ನನ್ನಂಥಾ ಕೆಲವರೇ ಹೀಗೆ ನೋವಲ್ಲಿ ಉಳಿದುಹೋಗುತ್ತಾರೆ.”
“ಹ…. ಹ…. ಅದೇನು ಇಲ್ಲಾನಿಸತ್ತೆ. ನಾವು ಕೆಲ ಸಮಯಗಳಲ್ಲಿ ಹಾಗೆ ಇರಬೇಕು ಅಂತ ಅಂದುಕೊಳ್ಳುತ್ತೇವೇನೋ! ಯೂ ನೋ. ನಮ್ಮ ಜೊತೆಗಿದ್ದ ಒಬ್ಬ ಮನುಷ್ಯ ಸತ್ತು ಹೋದರೂ ಜಾಸ್ತಿ ಅಂದರೆ ಒಂದು ಹತ್ತು ದಿನಗಳಲ್ಲಿ ನಾವು ಮರೆತು ಮಾಮೂಲಿನಂತಾಗುತ್ತೇವೆ. ಆಗಬಹುದು ಸಹ. ಆದರೆ ಆ ಮನುಷ್ಯನ ಮೇಲಿರುವ ಇಷ್ಟ ನಮ್ಮನ್ನು ಹಾಗೆ ಆಗಲು ಬಿಡುವುದಿಲ್ಲ ಅಷ್ಟೇ. ಅವರ ಮೇಲಿನ ಪ್ರೀತಿ ಇಷ್ಟೇನಾ ಎನ್ನುವ ಗಿಲ್ಟಿ ಕಾನ್ಷಸ್ ನಿಂದ ಡೆಲಿಬರೇಟ್ಲಿ ನಾವು ಆ ನೋವನ್ನು ಕಂಟಿನ್ಯೂ ಮಾಡ್ತಾ ನಾವು ಎಷ್ಟು ಇಷ್ಟ ಪಡಬಹುದು ಅಂತ ನಮ್ಮನ್ನ ನಾವೇ ಸಾಬೀತು ಪಡೆಸಿಕೊಳ್ತೀವಿ ಅಂತ ಅನಿಸತ್ತೆ ನನಗೆ. “
ನಿಜಾನಾ? ಇದು ನಿಜಾನಾ?? ಇದೇ ನಿಜವಾ…..!?
ಈ ಹುಡುಗಿಗೆ ಅದೆಷ್ಟು ವಯಸ್ಸಿರಬಹುದು? ಎಲ್ಲಿಂದ ಬಂದಿದೆ ಇಷ್ಟು ಭರವಸೆ. ಈ ಪರಿಣತಿ….? ಹೇಗೆ ಇವಳನ್ನು ಖಂಡಿಸಲಿ..!? ನನ್ನ ವಿಫಲ ಪ್ರೀತಿ ನಿಜವೆಂದು ಹೇಗೆ ಹೇಳಲಿ? ಅದು ಸಮರ್ಥನೆ ಆಗದಾ?
ಹೌದು! ನಾನು ನಿಜವಾಗಿ ಅವಳನ್ನು ಪ್ರೀತಿಸಿದೆನಾ…?? ಒಂದು ವೇಳೆ ಅವಳನ್ನ ಪ್ರೀತಿಸಿದ್ರೆ, ಅವಳೇ ಬೇಕೆಂದು, ನನಗನಿಸಿದ್ದರೆ, ಅವಳಿಗೆ ಹಿಡಿಸುವ ಹಾಗೆ ನಾನೇಕೆ ಬದಲಾಗಲಿಲ್ಲ??
ನನ್ನ ಆಲೋಚನೆಗಳು ತನಗೆ ಸಂಬಂಧವಿಲ್ಲದ ಹಾಗೆ….“ಸರಿ. ಮತ್ತೆ ಸಿಗೋಣ”…. ಹೇಳಿ ನಿಂತಳು.
ಹೊರಡುತ್ತಿದ್ದಾಗ ಕೇಳಿದೆ.”ನಿನ್ನ ಹೆಸರು?”
“ಮತ್ತೆ ಸಿಕ್ಕಾಗ ಹೇಳ್ತೆನೆ.” ಹೆಜ್ಜೆಯ ಸದ್ದು ಮೃದುವಾದ ಹುಲ್ಲಿನ ಮೇಲೆ ಸರಿಯುತ್ತ ಅವಳ ಜೊತೆ ಹೊರಟು ಹೋಯಿತು.
ಅಮಲೇರಿತ್ತೋ ಅಥವಾ ಮೆದಳು ಅಲೋಚನೆಗಳ ಭಾರವನ್ನು ತಾಳದಾಯಿತೋ… ನಿಸ್ಸತ್ತುವಿನಿಂದ ಕಣ್ಣು ಹೂತುಹೋಗಿದ್ದವು…..
**
ಯೋಧನ್ ಕರೆಯಿಂದ ಕಣ್ಣು ತೆಗೆದೆ. ಟೀ ಕಪ್ ಕೈಗೆ ಕೊಟ್ಟು.
“ಸಾರ್ ಆ ಹುಡುಗಿ ವಂದಿಲ್ಲೆಯಾ! ಅಂದ ಪೊಣ್ಣು ಹೇಗೆ ಸಿಕ್ಕಳು?”
“ಯಾವ ಹುಡುಗಿ ಕಣೋ?”
“ಅದೇ ನಿಂಗಳುಕ್ಕು ಇಂಗೆ ತಂದಿದ್ದು ಅಂದ ಹುಡುಗಿ ಸಾರ್….! ಬೆಳೆಗ್ಗೆ ಬರ್ತಿದ್ರೆ ಗೇಟ್ ಹತ್ತಿರ ಕಂಡಳು.”
“ವಾಟ್…! ನನ್ನನ್ನ ಹಾಸ್ಪಿಟಲ್ ಗೆ ಕರೆದುಕೊಂಡು ಹೋಗಿದ್ದು, ಇಲ್ಲಿಗೆ ಕರೆದುಕೊಂಡು ಬಂದದ್ದು ಈ ಹುಡುಗೀನಾ ??”
“ಆಮ! ಅಂದ ಪೊಣ್ಣೇ ಸಾರ್! ಅವಳ ಬಗ್ಗೆ ಜಾಸ್ತಿ ತಲೆ ಕೆಡಸಿಕೊಳ್ಳ ವೇಂಡಾ… ಕಾತ್ತಾಲೆ ಕಂಡುಕೊಂಡೆ. ಅಂದ ಪೊಣ್ಣ ನಲ್ಲ ಪೊಣ್ಣು ಅಲ್ಲ. ಅಂದ ಕಾಟೇಜ್ ವಾಚ್ ಮನ್ ಸೊಲ್ಲಿಟ್ಟಾ.. ಮೊನ್ನೆ ಯವುದೋ ಕಸ್ಟಮರ್ ಜೊತೆ ಬಂದಿದ್ದಳಂತೆ.. ಪಣಂ ಹತ್ತಿರ ಗಲಾಟೆ ಆಗಿ ಅಂದ ಪಯ್ಯ ಹೋಗಿಬಿಟ್ರೆ ಇಲ್ಲೇ ಮತ್ಯಾರಾದರೂ ಸಿಗ್ತಾರಾ ಅಂತ ನೋಡಿ ಯಾರೂ ಸಿಗದೇ ಹೋಗಿಬಿಟ್ಟಳಂತೆ….”
….. …………….
ಯೋಧನ್ ಇನ್ನೇನೋ ಹೇಳ್ತಾ ಇದ್ದ. ನನಗೇನೂ ಕೇಳೋದು ಬೇಡ ಅನಿಸಿತ್ತು.
ತೆಲುಗು ಮೂಲ: ನರೇಷ್ಕುಮಾರ್ ಸೂಫೀ
ಕನ್ನಡಕ್ಕೆ: ಚಂದಕಚರ್ಲ ರಮೇಶಬಾಬು
naresh Sufi naresh.boplay@gmail.com
ಇವರಿಗೆ: Ramesh Babu ramesh.reply54@gmail.com
ದಿನಾಂಕ: ನವೆಂ 1, 2024, 02:20 ಅಪರಾಹ್ನ
ವಿಷಯ: permission to translate my story PERULENI VENNELA
ಮೇಲ್: gmail.com
ಸೈನ್: gmail.com
ಭದ್ರತೆ: ಉತ್ತಮ ಮಟ್ಟದ ಎನ್‌ಕ್ರಿಪ್ಶನ್ (TLS) ಇನ್ನಷ್ಟು ತಿಳಿಯಿರಿ
: Google magic ಪ್ರಕಾರ ಮುಖ್ಯವಾಗಿದೆ.
Dear Ramesh Babu
I grant you permission to translate my story PERULENI VENNELA, from TELUGU to KANNADA. Please acknowledge my authorship and ensure a faithful translation.
Confirm acceptance by replying to this email.
Thank you
Naresh Kumar Sufi
--------------------------