ಕಾವ್ಯ ಸಂಗಾತಿ
ದೇವರಾಜ್ ಹುಣಸಿಕಟ್ಟಿ
ಅವಳು ಆಜಾದಿಯ ಹುಡುಗಿ….!
“ನಕಾಬು “ಗಳಲ್ಲಿ
ಹಿಡಿದು ಕಟ್ಟಲಾರರಿ ನೀವು
ಅವಳ ಕನಸುಗಳ..
ಬೇಡಿ ಕಳಚಿದ ಅವಳ ಬಾಹುಗಳ..
ಮುಡಿ ಹಿಡಿದು ಜಗ್ಗಿದರೂ
ಬಗ್ಗಿ ಬಡಿಯಲಾರರಿ…
ಅವಳ ಹೊಕ್ಕಳು ಹುರಿಯಲ್ಲಿ
ಬಿಡುಗಡೆಗೊಂಡ ನಿರಾಳ
ಉಸಿರುಗಳ….
ಲೋಕದ ಹುಟ್ಟಿನ ಟೇಕೆದಾರರೇ..
ಅವಳು ರುದ್ರಿ ಕಾಳ ಭದ್ರಿ..
ನಿಮ್ಮ ತಲೆಗಳ ಚೆಂಡಾಡಿದವಳು…
ಹಸಿ ಹಸಿ ರಕ್ತವನ್ನೇ ಕುಡಿದು ತೇಗಿದವಳು…
ಬಟ್ಟೆ ಕಳಚಿದಳೆಂದು ಬಿಳಿಚದಿರಿ…
ಹೊಟ್ಟೆ,ಹೊಕ್ಕಳು ಇನ್ನೇನೋ ಎವೆ ಇಕ್ಕಿ ಕದ್ದು ನೋಡಿದವರೇ..
ಇದೀಗ ಕಣ್ಣ್ ಬಿಟ್ಟೇ ನೋಡಿ..
ಅವಳು ಬಟ್ಟೆ ಕಳಚಿದರೂ
ನೀವು ಬೆತ್ತಲು….!
ಸಾಕಲ್ಲವೇ?
ಮತ್ತೊಮ್ಮೆ ಓದಿಕೊಳ್ಳಿ..
ಅವಳು ಆಜಾದಿಯ ಹುಡುಗಿ…..
ಅವಳು ಕಳಚಿದ್ದು…
ಬರೀ ಬಟ್ಟೆಯಲ್ಲ….ನಿಮ್ಮ….
ಧರ್ಮದ “ಅಂಕುಶ”
ಪುರುಷತ್ವದ “ಅಹಂ “
ಶತಮಾನಗಳ “ಬೇಡಿ “
ಇನ್ನು ಇಷ್ಟೇ ಅಂದ್ರ್ ಇಷ್ಟೇ..
ಬೆತ್ತಲಾದವನನ್ನು ಬೆತ್ತಲಾಗಿಯೇ
ಹೆತ್ತವಳ ಮುಂದೆ ನಿಮ್ಮದೆಂತ..
ಪೌರುಷ ಅಂತೀನಿ.!
–ದೇವರಾಜ್ ಹುಣಸಿಕಟ್ಟಿ