ಕಾವ್ಯ ಸಂಗಾತಿ
ರತ್ನರಾಯಮಲ್ಲ
ಹೊಸ ಗಜಲ್
ಮನದಲಿದೆ ಸಾಗರದಷ್ಟು ಒಲವು ಕೈಕಟ್ಟಿ ನಿಂತಿರುವೆ ಕಾಲದ ಮುಂದೆ
ಕಂಗಳು ಕನವರಿಸುತಿವೆ ನಿನ್ನ ಕಾಣಲು ತಲೆ ಬಾಗಿರುವೆ ಕಾಲದ ಮುಂದೆ
ಎಲ್ಲೆಡೆಯೂ ಅಂಧಕಾರ ಆವರಿಸಿದೆ ಬೆಳಕಾಗಿ ಬಂದು ಆಲಂಗಿಸಿ ಬಿಡು
ನಿನ್ನೆಜ್ಜೆಯ ಗೆಜ್ಜೆನಾದ ಆಲಿಸಲು ತಾಳ್ಮೆಯನು ಸಾಕಿರುವೆ ಕಾಲದ ಮುಂದೆ
ನಿನ್ನದೇ ಧ್ಯಾನದಲಿ ಹಗಲಿರುಳು ಕಳೆಯುತಿರುವೆ ಭಾರವನು ಹೊತ್ತಂತೆ
ನೀ ಉಸುರುವ ಅನುರಾಗದ ಹೊಳೆಯಲಿ ಕಾದಿರುವೆ ಕಾಲದ ಮುಂದೆ
ನನ್ನೆದೆಯಲಿ ಪ್ರೇಮದ ಅರಮನೆ ಕಟ್ಟಿರುವೆ ಮುತ್ತಿನ ಮಳೆ ಸುರಿಸು ಬಾ
ಹೃದಯಗಳ ಮಿಲನಕ್ಕಾಗಿ ಮಂಡಿಯೂರಿ ಬೇಡಿರುವೆ ಕಾಲದ ಮುಂದೆ
ಸಂದೇಶಗಳನು ಹೊತ್ತು ತುರುವ ಪಾರಿವಾಳವಾಗಿದೆ ಈ ಜಂಗಮವಾಣಿ
ಭಾವನೆಗಳ ತೋಟದಲಿ ಮಲ್ಲಿಗೆ ಸುಮವನು ಬಿತ್ತಿರುವೆ ಕಾಲದ ಮುಂದೆ
ರತ್ನರಾಯಮಲ್ಲ