ಡಾ. ಮೀನಾಕ್ಷಿ ಪಾಟೀಲ್ ಅವರ ಕವಿತೆ-ಪ್ರೀತಿ ಇಲ್ಲವೆಂದಲ್ಲ

ಪ್ರೀತಿ ಒಳಗೊಳಗೆ ಅರಳಿ
ನರಳಿ ಬಿಕ್ಕುತ್ತಿದೆ
ಮಾತಿಗೆ ಮಾತು ಮಥಿಸಿ
ಒಡಲಾಳದಲ್ಲಿ ಒರಟುತನ
ಒಲವ ತೋರಿ
ನಗೆಯ ಬೀರಿ
ಪ್ರೀತಿಯ ಹೆಸರಲ್ಲಿ
ಕಣ್ಣು ಮುಚ್ಚಾಲೆ ಆಟ
ಆಟ ಕೂಟಗಳ ಮಾಟ
ಬೆಂಬಿಡದ ಬೇಟ
ಬೇಸರಗೊಂಡ ಮನಸ್ಸಿಗೆ
ಪ್ರೀತಿಯ ಸಿಂಚನ
ಲಜ್ಜೆ ಇಲ್ಲದ ಮನಸು
ಸೆಜ್ಜೆಯ ಕಡೆ ಹೆಜ್ಜೆ ಹಾಕಿದೆ
ಮತ್ತದೇ ಮೈ ಮನಸುಗಳ
ಮಿಲನ…….


ಪ್ರೀತಿಯ ಲೆಕ್ಕವಿಟ್ಟವರಾರು
ದ್ವೇಷಕ್ಕೆ ಲೆಕ್ಕ ಉಂಟು
ಪೇಟೆಯ ಬೀದಿಯಲ್ಲಿ ಗದರಿದ್ದು
ಸರಿಕರೆದುರು ಅವಮಾನಿಸಿದ್ದು
ದುಃಖದ ಬಿಕ್ಕಳಿಕೆಗೆ
ಬೀಗ ಜಡಿದಿದ್ದು
ಭಾವನೆಗಳ ಬಂಧಿಸಿದ್ದು
ಒಂದೇ ಎರಡೆ……….
ಮತ್ತೆ ಪಿಸು ಮಾತುಗಳಿಗೆ
ದನಿಯಾದದ್ದು
ಇವೆಲ್ಲವೂ ಅಂಗೈಯಲ್ಲಿನ ಅರಮನೆ ಎನ್ನಲೇ
ಇಲ್ಲ
ಪ್ರೀತಿಯ ಹೆಸರಿನ
ಬೇರೆ ಬೇರೆ ರೂಪಗಳೇ………


Leave a Reply

Back To Top