ಕಂಸ (ಕಂಚುಗಾರನಹಳ್ಳಿ ಸತೀಶ್)ಅವರ ಕವಿತೆ ‘ಪ್ರೀತಿಎಂಬುದು ನಶೆಯೋ ಭ್ರಮೆಯೋ ‘

ಪ್ರೀತಿ ಎಂಬುದು ನಶೆಯೋ ಭ್ರಮೆಯೋ
ಪ್ರೇಮಿಗಳಿಗೆ ಪ್ರೀತಿಯೇ ಅಮಲು
ಜಗತ್ತನ್ನೇ ಗೆದ್ದು ಬೀಗುತ್ತೇವೆಂಬ ಹುಂಬುತನ
ಕಣ್ಣಿಂದ ಶುರುವಾಗಿ ಕಲ್ಲು ಮುಳ್ಳುಗಳ ಹಾದಿಯಾ ಸವೆಸಿ ಕಣ್ಣೀರಿನಲ್ಲಿ ಕೈ ತೊಳೆದರೂ ಸುಖ ಉಣ್ಣುವ ಹಂಬಲ

ನೆರೆಹೊರೆಯವರಿಗೆ ಇವರು ಭ್ರಮಾಲೋಕದ ಹಾರಲಾರದ ಪ್ರಣಯ ಪಕ್ಷಿಗಳು
ರಣಹದ್ದುಗಳು ಬಂದು ಕ್ಷಣ ಕ್ಷಣಕ್ಕೂ ಕುಟುಕುವುದ ನೋಡಿ ಮೋಜು ಮಾಡೋ ಚಿತ್ರಗುಪ್ತರು
ರಣಹದ್ದುಗಳಿಂದ ತಪ್ಪಿಸಿಕೊಂಡರು ಜನರ ಬಾಯಿಂದ ತಪ್ಪಿಸಿಕೊಳ್ಳಲಾರದೆ ಜೀವನಪರ್ಯಂತ ಹೆಣಗುವರು

ಗೆಲುವು ದಾಖಲಿಸಲು ಮದುವೆಯ ಸಂಕೋಲೆ ಮೊರೆ ಹೋದರು ಜಾತಿ ಧರ್ಮ ಬಡತನ ಸಿರಿತನ ಮೇಲು ಕೀಳೆಂಬ ಸಂಕೋಲೆಯಲ್ಲಿ ಬಂಧಿಯಾಗಿ ನರಳುವರು
ಇಲ್ಲಿ ಗೆದ್ದು ಬೀಗುವವರಿಗಿಂತ ಸೋಲಿನ ಸುಳಿಯಲ್ಲಿ ಸಿಲುಕಿ ಸಾಯುವವರೇ ಹೆಚ್ಚು

ಸತ್ತಾಗ ಬದುಕಿ ಸಾಧಿಸಬಾರದಿತ್ತೆ ಎಂದು ಮರುಗುವರಿಗೆ ಏನು ಕಡಿಮೆ ಇಲ್ಲ
ಹೋರಾಡುವಾಗ ಹೆಗಲು ಕೊಡದೆ ಸುಮ್ಮನೂ ಇರದೆ ಹೀಗಳೆಯುತ್ತಿದ್ದವರೇ ಎಲ್ಲಾ

ಅತ್ತು ಕರಗುವರು ಎರಡು ದಿನಕೆ ಮೌನವಾಗಿ ಮರೆತುಬಿಡುವರು
ಪ್ರೀತಿ ಗೆದ್ದವರ ಕಂಡು ಸಂತಸ ಪಡದೆ ಕೊಂಕು ಮಾತನಾಡುತ್ತ ಕಿರುಕುಳ ಕೊಡುತ
ಬದುಕಿರುವವರನ್ನು ಸಾಯಿಸುವವರು ಇವರೇ

ಇಲ್ಲಿ ಸತ್ತವರಿಗೆ ಬದುಕಿಲ್ಲ
ಬದುಕಿರುವವರಿಗೆ ನೆಮ್ಮದಿ ಇಲ್ಲ
ಪ್ರೀತಿ ಪಾತ್ರರಿಗೆ ನಶೆ ವಾಚಾಳಿಗಳಿಗೆ ಭ್ರಮೆ
ಕವಿಗೆ ಪ್ರೀತಿ ನಶೆಯೋ ಭ್ರಮೆಯೋ ಎಂಬ ಗೊಂದಲ


Leave a Reply

Back To Top