ಕಾವ್ಯ ಸಂಗಾತಿ
ಕಿರಣ ಗಣಾಚಾರಿ
‘ಬೆಳಕು ಮಾತನಾಡಿತು’
ಆರಿಸುತ್ತೇನೆಂದು
ಮಾನವತೆಯ ಮೀರಿ ಮೈ ಮೇಲೆ ಬರದಿರು
ಸುಟ್ಟು ಕರಕಲಾಗುವೆ
ಗಾಳಿಗೆದೆಗೊಡ್ಡಿ ಹೋರಾಡುವುದಷ್ಟೆ ನನ್ನ ಛಲ
ಅರಿತು ಅಳಿಯುವುದು ಉಳಿಯುವುದು
ನಿನ್ನ ಅಂತ:ಸತ್ವದ ಬಲ
ಮೀರಿಸುತ್ತೇನೆಂದು
ಕಾಡ್ಗಿಚ್ಚಾಗಿ ಹಬ್ಬುತ್ತ ಹೋಗದಿರು
ಹಿಡಿ ಶಾಪಕೆ ಗುರಿಯಾಗುವೆ
ನಿಶ್ಚಲವಾಗಿರುವುದಷ್ಟೆ ನನ್ನ ಗುರಿ
ಅನುಸರಿಸುತ್ತ ದಾರಿಕಂಡುಕೊಳ್ಳುವುದು
ನಿನ್ನ ವಿವೇಚನೆಯೆ ಸರಿ
ಧರಿಸುತ್ತೇನೆಂದು
ಹಲವಾರು ಮುಖವಾಡಗಳ ತೊಡದಿರು
ನಕಲಿಯಾಗುವೆ
ಸುಜ್ಞಾನ ವೃಕ್ಷವಾಗುವುದಷ್ಟೆ ನನ್ನ ಧ್ಯೇಯ
ಅರ್ಜಿಸುವುದು ವರ್ಜಿಸುವುದು
ನಿನಗೊಪ್ಪಿತ ನ್ಯಾಯ
ಉರಿಯುತ್ತಲೇ ಇರುತ್ತದೆಂದು
ಅಪಹಾಸ್ಯದ ವಿನೋದ ಬೇಡ
ಬೆಂಕಿ ಬಿರುಗಾಳಿಯೂ ನನ್ನ ರೂಪಗಳೆ
ತಲೆ ಬಾಗಿದವರ …ನೇವರಿಸಿ
ಬಳಿ ಬಂದವರ…ಹರಸಿ
ಬಳಲಿದವರ…ಸಂತೈಸಿ
ಕತ್ತಲ ತಬ್ಬಿದವರ ಒಳಹೊಕ್ಕು
ಬೆಳಕಿನ ಬೀಜ ನೆಡುವೆ
ಬೇಕೆಂದರೂ ಬೇಡವೆಂದರೂ
ಬೆಳಕ ದಾಸೋಹಿಯಾಗಿರುವೆ
ದೀಪವಾಗಿ ಸದಾ ಜಗ ಬೆಳಗುತಿರುವೆ
ಕಿರಣ ಗಣಾಚಾರಿ