ಕನ್ನಡ ಸಂಗಾತಿ
ಶ್ರೀವಲ್ಲಿ ಮಂಜುನಾಥ್ ಅವರ
ಕನ್ನಡ ಭಾಷಾ ಅಭ್ಯುದಯಕ್ಕೆ
ಯುವಜನಾಂಗದ ಪಾತ್ರ
‘ಕನ್ನಡ ‘ ಪ್ರಪಂಚದ ಅತಿ ಪುರಾತನ ಭಾಷೆ . ಕನ್ನಡ ಬರಹಗಾರರ ಮತ್ತು ಸಾಮಾಜಿಕ ಕ್ರಾಂತಿಕಾರರಿಂದ ಇದು ಶ್ರೀಮಂತವಾಗಿಯೂ ಬೆಳೆದಿದೆ. ಅತ್ಯಂತ ವೈಭವವಯುತ ಹಿನ್ನೆಲೆಯೊಡನೆ , ಆಧುನಿಕ ಕನ್ನಡವೂ ಶ್ರೀಮಂತವಾಗಿಯೇ ಇದೆ. ಅತಿ ಹೆಚ್ಚು ಅಂದರೆ ಎಂಟು ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಭಾಷೆ ಎಂಬ ಹೆಗ್ಗಳಿಕೆಯೂ ಕನ್ನಡಕ್ಕಿದೆ. ಇಂತಹ ಭಾಷೆಗೆ ಇತ್ತೀಚೆಗೆ ಮನ್ನಣೆ ಸಿಗುತ್ತಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಯಾವುದೇ ಭಾಷೆಯಾದರೂ ಅದರ ಬಳಕೆಯಿಂದ ಮಾತ್ರ ಅದು ಬೆಳೆಯಲು ಸಾಧ್ಯ. ಅದನ್ನು ಬಳಸಿ , ಬೆಳಸುವ ಜವಾಬ್ಧಾರಿ ಇಂದಿನ ಯುವ ಜನಾಂಗದ ಮೇಲಿದೆ. ಯುವ ಜನರಲ್ಲಿ ಇದರ ಅರಿವನ್ನು ಮೂಡಿಸುವುದು ಹಿರಿಯರ ಕರ್ತವ್ಯವಾಗಿದೆ. ಹಾಗೆಯೆ ಸರ್ಕಾರವೂ ಕೂಡ ಈ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಿ, ಅನುಷ್ಠಾನಗೊಳಿಸಿ ಅದು ಯುವ ಜನಾಂಗಕ್ಕೆ ತಿಳಿಯುವಂತೆ ಮಾಡಿದರೆ ಕನ್ನಡ ಭಾಷೆ ಅಭ್ಯುದಯ ಹೊಂದುವುದರಲ್ಲಿ ಯಾವ ಸಂದೇಹವೂ ಇಲ್ಲ.
ಯುವಜನರು ಕನ್ನಡ ಭಾಷೆಯನ್ನು ತಮ್ಮದೆಂಬ ಅಭಿಮಾನದಿಂದ ಒಪ್ಪಿಕೊಂಡು ಬಳಸಬೇಕು. ಕನ್ನಡದಲ್ಲಿ ಮಾತನಾಡಲು ಹಿಂದು ಮುಂದು ನೋಡಬಾರದು. ಬಾಲ್ಯದಿಂದಲೇ ಮಕ್ಕಳಿಗೆ ಕನ್ನಡ ಭಾಷೆಯನ್ನು ಕಲಿಸಬೇಕು, ಹಾಗಾದರೆ ಮಾತ್ರ ಅವರಿಗೆ ತಮ್ಮ ಭಾಷೆಯ ಮೇಲೆ ಅಭಿಮಾನ , ಗೌರವ ಮೂಡಲು ಸಾಧ್ಯ. ನಮ್ಮ ಹಿಂದಿನ ಸಾಹಿತಿಗಳ, ಮತ್ತು ನಮ್ಮ ಸಂಸ್ಕೃತಿಯ ಅರಿವನ್ನು ಯುವ ಜನರಿಗೆ ತಿಳಿಸಿಕೊಡುವ ಕೆಲಸವಾಗಬೇಕು. ಅದರಿಂದ ಆಕರ್ಷಿತರಾದ ಅವರು ತಾವು ಕೂಡ ಆಸಕ್ತಿವಹಿಸಿ ಭಾಷೆಯನ್ನು ಬಳಸುವುದಷ್ಟೇ ಅಲ್ಲ ತಾವು ಕನ್ನಡದಲ್ಲಿ ಬರೆದು ಅದನ್ನು ಬೆಳೆಸುವುದಕ್ಕೂ ಮುಂದೆ ಬರುತ್ತಾರೆ. ಖಾಸಗಿ ಕ್ಷೇತ್ರಗಳಲ್ಲಿ ಕೆಲಸ ಸಿಗಬೇಕಾದರೆ ಆಂಗ್ಲ ಭಾಷೆ ಕಡ್ಡಾಯ ಅದ್ದುದರಿಂದ ಬಾಲ್ಯದಿಂದಲೇ ಅದರತ್ತ ನಡೆದ ಯುವ ಜನರಿಗೆ ಜೊತೆ ಜೊತೆಯಲ್ಲಿ ಕನ್ನಡ ಭಾಷೆಯನ್ನು ಕಲಿಸುವುದು ತೀರಾ ಅಗತ್ಯ. ಇಲ್ಲವಾದರೆ ಕನ್ನಡವನ್ನು ಬಳಸುವವರಿಲ್ಲದೆ ಅದು ಮೃತ ಭಾಷೆಯಾಗಬಹುದು. ಅದಕ್ಕೆ ಎಚ್ಚರಿಕೆಯಾಗಿ ಈಗಾಗಲೇ ಸರ್ಕಾರ ‘ಕನ್ನಡ’ ವನ್ನು ಒಂದು ಭಾಷೆಯಾಗಿ ಓದುವುದನ್ನು ಕಡ್ಡಾಯಗೊಳಿಸಿದೆ . ಅದರಂತೆಯೇ ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಸರ್ಕಾರಿ ನೌಕರಿ ನೀಡುವ ಆಧ್ಯತೆ ಸಿಗುವಂತಾದರೆ ಬಹು ಮಂದಿ ತಮ್ಮ ಮಕ್ಕಳಿಗೆ ಕನ್ನಡ ಕಲಿಸಲು ಮುಂದಾಗುತ್ತಾರೆ. ಅಷ್ಟೇ ಅಲ್ಲದೆ ಸರ್ಕಾರಿ ಕಛೇರಿಗಳಲ್ಲಿ ಕನ್ನಡ ಕಡ್ಡಾಯಗೊಳಿಸಬೇಕು.
ಇಷ್ಟೆಲ್ಲಾ ಅಡ್ಡಿ ಆತಂಕಗಳ ನಡುವೆಯೂ ಆಶಾಜ್ಯೋತಿಯೆಂದರೆ , ಇಂದಿನ ಯುವ ಪೀಳಿಗೆ ಸಾಮಾಜಿಕ ಜಾಲ ತಾಣಗಳ ಮೂಲಕ ಕನ್ನಡವನ್ನು ಪ್ರಚುರಗೊಳಿಸುತ್ತಾ , ಬೆಳಸುವ ಕೆಲಸವನ್ನು ಮಾಡುತ್ತಿದೆ . ಬಹಳ ಒಳ್ಳೆಯ ಸಾಹಿತ್ಯ ರಚನೆಯಾಗುತ್ತಿದೆ. ಭಾಷೆಯ ಬಗ್ಗೆ ಪ್ರೀತಿ ಇರುವವರು ಅನೇಕ ಗುಂಪುಗಳನ್ನು ಮಾಡಿಕೊಂಡು , ಕವಿ ಪರಿಚಯ, ಕವನ ರಚನೆ , ಸ್ಪರ್ಧೆಗಳನ್ನು ಏರ್ಪಡಿಸಿ ಅದರ ಮೂಲಕ ಕನ್ನಡ ಭಾಷೆಯ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದ್ದಾರೆ. ಅನೇಕ ಯುವಕ ಯುವತಿಯರು ಹೊಸ ಅಲೆಯ ಚಲನ ಚಿತ್ರಗಳನ್ನು ಮಾಡಿ ತನ್ಮೂಲಕ ದೇಶ-ವಿದೇಶದ ಜನರು ಕನ್ನಡ ಚಿತ್ರರಂಗದತ್ತ ತಿರುಗುವಂತೆ ಮಾಡಿದ್ದಾರೆ. ಅವರ ಯಶಸ್ಸು ಕಂಡ ಉಳಿದವರು ಈಗ ತಾವೂ ಕನ್ನಡದ ಬಗ್ಗೆ ಆಸಕ್ತಿ ತೋರುತ್ತಿದ್ದಾರೆ. ಹೀಗೆ ಒಂದು ಕಡೆ ಕನ್ನಡಕ್ಕೆ ಪ್ರೋತ್ಸಾಹವಿದ್ದರೆ, ಹೆಚ್ಚಿನ ಖಾಸಗಿ ಸಂಸ್ಥೆಯಲ್ಲಿ ಆಂಗ್ಲ ಭಾಷೆಗೆ ಪ್ರಾತಿನಿಧ್ಯವಿರುವುದರಿಂದ, ಜನರು ತಮ್ಮ ಮಕ್ಕಳಿಗೆ ಕನ್ನಡ ಭಾಷೆಯನ್ನು ಕಲಿಸುವುದನ್ನೇ ನಿಲ್ಲಿಸಿದ್ದಾರೆ. ಸರ್ಕಾರ ಕನ್ನಡವನ್ನು ಕಡ್ಡಾಯ ಮಾಡಿದ್ದರಿಂದ ಮಾತ್ರ ಮಕ್ಕಳು ಕನ್ನಡ ಕಲಿಯುತ್ತಿದ್ದಾರೆ ಎಂಬುದು ಅತ್ಯಂತ ಖೇದದ ಮತ್ತು ಆತಂಕಕಾರಿ ವಿಷಯವಾಗಿದೆ.
ಸರ್ಕಾರವು ಕನ್ನಡದ ಕಲಾವಿದರಿಗೆ ಮನ್ನಣೆ ನೀಡಬೇಕು. ಕನ್ನಡ ಸಾಹಿತ್ಯ, ನೃತ್ಯ, ಸಂಗೀತ, ಚಿತ್ರಕಲೆ, ಶಿಲ್ಪಕಲೆ , ಯಕ್ಷಗಾನ , ಕ್ರೀಡೆ ಹೀಗೆ ಇಲ್ಲ ಕ್ಷೇತ್ರದಲ್ಲಿ ಉತ್ತೇಜನ ನೀಡಿದಲ್ಲಿ, ಯುವಜನಾಂಗವು ತಮ್ಮ ಆಸಕ್ತಿಧಾಯಕ ಕ್ಷೇತ್ರದಲ್ಲಿ ಮುಂದುವರೆದು ತನ್ಮೂಲಕ ಕನ್ನಡ ಭಾಷೆಯ ಅಭಿವೃದ್ಧಿಗೆ ಒತ್ತಾಸೆ ನೀಡುತ್ತಾರೆ. ಯುವ ಲೇಖಕರು ಇತ್ತೀಚೆಗೆ ಕನ್ನಡದಲ್ಲಿ ಕಥೆ, ಕಾವ್ಯ, ಕಾದಂಬರಿಗಳನ್ನು ಬರೆಯುತ್ತಿದ್ದಾರೆ. ಅವರ ಲೇಖನಗಳು ಇನ್ನಿತರ ಭಾಷೆಗಳಿಗೆ ಭಾಷಾಂತರ ವಾಗುತ್ತಿದೆ ಇದು ಹೆಮ್ಮೆಯ ವಿಷಯ. ಯುವಜನತೆಯ ಪುಸ್ತಕಗಳ ಪ್ರಕಟಣೆಗೆ ಸರ್ಕಾರ ಮುಂದಾಗಬೇಕು. ಅವರಿಗೆ ಧನ ಸಹಾಯ ನೀಡಬೇಕು. ಹಾಗಾದಾಗ ಮಾತ್ರ ಕನ್ನಡ ಮೃತ ಭಾಷೆಯಾಗದೆ ಜೀವಂತವಾಗಿರಲು ಸಾಧ್ಯ.
ಶ್ರೀವಲ್ಲಿ ಮಂಜುನಾಥ್