ಕಾವ್ಯ ಸಂಗಾತಿ
ವೈ.ಎಂ.ಯಾಕೊಳ್ಳಿ
ಸಮೃದ್ಧಿ ಸಾಲು
ಅಪ್ಪ ಗುಳೆ ಹೊಡೆದ
ಎರೆ ಸಾಲಿನ
ನಡುವೆ ಅದೆಂತ ಚಂದದ
ಬೀಜಗಳ ಅಕ್ಷರಗಳು
ಒಂದು ಕಾಗುಣಿತ ತಪ್ಪಿಲ್ಲ
ಒಂದಕ್ಷರ ,ಗುರುಲಘುಗಳು
ಹೆಚ್ಚಲ್ಲ ಕಮ್ಮಿಯಲ್ಲ
ಗಮಕಿಯೊಬ್ಬನ
ಸುಸ್ರಾವ್ಯ ರಾಗಕ್ಕೆ
ತೊನೆವ ಗಿಡ ಬಳ್ಳಿಗಳ
ಓಲಾಟದ ಹಾಡು
ಗರಿಗರಿಗೂ ಮೂಡಿ ನಿಂತ ಚಿಗುರು .
ಹೂವಾಗಿ ಕಾಯಾಗಿ ಹಣ್ಣಾಗಿ
ಎದೆಯ ಹೊಲದ ತುಂಬ
ಫಸಲು ಸಮೃದ್ಧಿ
ಕಣ್ಣಿಗೆ ಕಣ್ಣು ಹಚ್ಚದೆ ಕಾವಲಿದ್ದು
ಕಟ್ಟಿದ್ದ ಬೆಳೆಯ ಅವರಿವರ
ಕೆಟ್ಟ ದೃಷ್ಟಿ ಕೈಗಳಿಗೆ
ಹತ್ತದಂತೆ ಕಾವಲಿದ್ದು ಕಾಯುವ
ಸೇನಾಪತಿಯವನು
ಅದೇನು ಮಾಯ ಮಾಡಿಯೊ
ಕಟ್ಟೆಚ್ಚರದ ಬೇಲಿ ಜಿಗಿಯುವ
ಕಳ್ಳಕಾಕರು ಸುತ್ತ ಮುತ್ತ
ಕಟಾವಿಗೆ ಬಂದ ಬೆಳೆಯ
ಎಗರಿಸಿರಿಯಾರೆಂಬ
ಸಂಶಯದಲಿ ಕಾಪಿಟ್ಟವನು
ಬಾಳುವೆಯೆಂಬ ಬೆಳೆಗೆ
ಅವನ ಕಣ್ಣಾಸರೆಯ ಕಾವಲಿಗೆ
ಕೃತಜ್ಞ ಫಲಗಳು
ಅವನ ಉಸಿರು ಹೊತ್ತು
ಹೆಸರನೀಯಲು ಕಾಯುತ್ತಿವೆ
ಈಗ…
ವೈ.ಎಂ.ಯಾಕೊಳ್ಳಿ
ಸುಂದರ ಭಾವ ಧನ್ಯವಾದಗಳು ಸರ್