ಯಾರಿಗೆಲ್ಲ ರೈಲು ಪಯಣ ಇಷ್ಟಯಿಲ್ಲ ಹೇಳಿ?..ಚುಕು ಬುಕು ಚುಕು..ಬುಕು  ಕೂ…ಕೂ…ಎಂಬ ಸದ್ದು ಬಾಲ್ಯದಿಂದಲೂ ರೈಲಿನ ಆಟವಾಡಿದ ನೆನಪು..ಉದ್ದನೆಯ ಬೋಗಿಗಳು, ಸ್ಲಿಪರ್ ಬೋಗಿಗಳು, ಜನರಲ್ ಬೋಗಿಗಳು,ಲಗೇಜ್ ಬೋಗಿಗಳನ್ನು ಹೊತ್ತು ರೈಲು ಹಳಿಯ ಮೇಲೆ…ನಯನಾಜೂಕಿನಂತೆ ಶರವೇಗದಂತೆ ಚಲಿಸುವ ರೈಲು ಪಯಣ ಆರಾಮದಾಯಕ,ಸುಖದಾಯಕ,ಸಾಮಾನ್ಯನು ಸಂಚರಿಸಬಹುದಾದ ಅಗ್ಗದ ದರ ಹೊಂದಿರುವ ರೈಲು ಪಯಣವೆಂದರೆ ತಪ್ಪಿಲ್ಲ.ಮಕ್ಕಳಿಗೆ ರೈಲಿನ ಅನುಭವವನ್ನು ಅವಕಾಶ ಸಿಕ್ಕಾಗ ಪಾಲಕರು ಮಾಡಿಕೊಟ್ಟರೆ ಅದೊಂದು‌ ನೆನಪಿನ ಬುತ್ತಿಯಲ್ಲಿ ತುತ್ತನಿಟ್ಟಂತೆ!.ನಮಗೆಲ್ಲ ಸಮಯ ನಿಗದಿಯಾಗಬೇಕು,ರೈಲು ಹತ್ತಲು,ಪಯಣಿಸಲು ತಾಳ್ಮೆಬೇಕು. ಯಾಕೆಂದರೆ ನಮಗೆ ಅರ್ಜಂಟ್,ಅರ್ಜಂಟ್ ನಮ್ಮ ಸ್ಥಳ ತಲುಪಬೇಕು. ನಮ್ಮ ಹತ್ತಿರ ರೈಲಿಗಿಂತ ಪರ್ಯಾಯ ವ್ಯವಸ್ಥೆ ಇದ್ದರಂತೂ ನಾವ್ಯಾರು ತಲೆಕೆಡಿಸಿಕೊಳ್ಳೊದಿಲ್ಲ.ಜೀವನದಲ್ಲಿ ಒಂದಲ್ಲ ಒಂದು ಸಲ ರೈಲು ಹತ್ತುವ ಸಾಹಸ ಮಾಡಬೇಕು,ಅನ್ನೊರಿಗೆ,

“ಎರಡು ಸಮಾನಾಂತರ ಹಳಿಗಳ ಮೇಲೆ ಚಲಿಸುವ ಯಂತ್ರ ಚಾಲಿತ ವಾಹನವನ್ನು ರೈಲು ಅನ್ನಬಹುದು!.

ರೈಲು ಬಂತು ರೈಲು
ಚುಕುಬುಕು ಚುಕುಬುಕು ರೈಲು
ಹಳಿಗಳ ಮೇಲೆ ಜಾರಿ ಬಂತು
ಹೆಬ್ಬಾವಿನಂತೆ ಉದ್ದಗಿದ್ದು
ಜನಜಂಗುಳಿಯ ಮಧ್ಯ ಬಂತು
ಭಾರತೀಯ ರೈಲ್ವೆ ಹೆಮ್ಮೆಯದು

ಹೌದು..ಕಣ್ರಿ..ಚಿಕ್ಕವರಿದ್ದಾಗ ನನ್ನಪ್ಪ ಹುಬ್ಬಳ್ಳಿಯಿಂದ ಬಿಜಾಪುರಕ್ಕೆ ಅಂದರೆ ವಿಜಯಪುರಕ್ಕೆ, ಕುಟುಂಬ ಸಮೇತವಾಗಿ ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದ ನೆನಪು.ಜನರಲ್ ಬೋಗಿ ಹತ್ತಿ ಕುಳಿತವರಿಗೆ, ಕಾಲಿಗೆ ತೊಡರು ಬಳ್ಳಿಯಂತೆ,ಜನಜಂಗುಳಿ. ನಾವು ಚಿಕ್ಕವರಾಗಿದ್ದರಿಂದ ಅಲ್ಲೆ ಸೀಟಿನ ಕೆಳಗೆ ಅಡ್ಡಲಾಗಿ ಮಲಗಿಸಿದ್ದರು.ಪ್ರತಿ ನಿಲ್ದಾಣದ ನಿಲುಗಡೆಯ ಸಮಯದಲ್ಲಿ ಕಿಟಕಿಯ ಹತ್ತಿರ ಮಾರಲು ಬರುವ ಪೇರಲ ಹಣ್ಣು,ಚಾ,ಕುರುಕಲು ತಿಂಡಿ ಮಾರುವವರ ದಂಡಿಗೆ ಕೊರತೆಯಿರಲಿಲ್ಲ.. ಅಪ್ಪ…. ಹಣ್ಣು,ಲಿಂಬುಹುಳಿ ಪೆಪ್ಪರ ಮಿಠಾಯಿ ಮಾತ್ರ ಕೊಡಿಸಿದ್ದ ಕಾಸು ಬೇಕಲ್ಲ!..ನಮಗೆ ರೈಲು ಚಲಿಸುವ ಮಜವನ್ನು ಅನುಕರಿಸುವುದೊಂದು ಪಾಠವಾಗಿತ್ತು. ಕೂ…ಕೂ. ಚುಕು ಬುಕು
ಎಂದು ಸದ್ದು, ದಟ್ಟ ಹೊಗೆಯೊಂದಿಗೆ,ಕಲ್ಲಿದ್ದಲ ಅಂಗಿಷ್ಟಿಕೆಯ ಜೊತೆಗೆ ಸಾಗುವದಕ್ಕಿರಬೇಕು,’ಉಗಿ ಬಂಡಿ ‘ಅಂತ ಕರಿತಿದ್ದುದು.ಸಾಮಾನ್ಯ ಬೋಗಿಯಲ್ಲಿ ಪಯಣಿಸುವವರು ಜಗತ್ತಿನ ಎಲ್ಲ ಜ್ಞಾನ ಪಡೆದವರು. ಒಬ್ಬರಿಗಿಂತ ಒಬ್ಬರು..ಅದೊಂದು ಖುಷಿನೇ ಬೇರೆ!.ಸ್ವಚ್ಛತೆಯಿಲ್ಲ ಅಷ್ಟೇ!. ನಮಗಾಗ ಅದರ ಅರಿವು ಕಡಿಮೆ..ಯಾಕೆಂದರೆ ರೈಲ ಹತ್ತಿದಿವಿ ಅನ್ನೊದೆ ಮಕ್ಕಳಿಗೆ ಮುಖ್ಯ!.

ಇನ್ನೂ, ಹಸಿವಾದರೆ ಬುತ್ತಿಗಂಟು ಜೊತೆಗಿರುತ್ತಿತ್ತು.ಅಪ್ಪ ಯಾವತ್ತು ಹೋಟೆಲ್ ಗೆ ಕರೆದುಕೊಂಡ ಹೋದ ನೆನಪಿಲ್ಲ,ದುಡ್ಡು ದಂಡ,ಅದೇ ಉಳಿದ್ರೆ ಮತ್ತ್ಯಾವುದಕ್ಕೋ ಬರಬಹುದೆಂಬ ಲೆಕ್ಕಾ ಚಾರ!.ಅದು ಸರಿ ಇರಬಹುದು.ಆಗಿನ ಸಮಯ ಒಂದೊಂದು ರೂಪಾಯಿಯು ಅಮೂಲ್ಯವಾದದ್ದು.ರೈಲಲ್ಲಿ ಬುತ್ತಿಗಂಟು ಬಿಚ್ಚಿ ರೊಟ್ಟಿ ಕಾಳ ಪಲ್ಯ ಸುತ್ತಿ ಕೊಟ್ಟ ಮೇಲೆ, ತಿನ್ನುತ್ತ ಕಿಟಕಿಯಿಂದ ಚಲಿಸುವ ಮರಗಿಡಗಳು,ಲೈಟ್ ಕಂಬಗಳನ್ನು ಲೆಕ್ಕ ಹಾಕುತ್ತ ಹೊರಟ ನೆನಪು.ಅಕ್ಕಪಕ್ಕದಲ್ಲಿಯ ಜನರ ಪರಿಚಯ,ಕುಶಲೋಪರಿ,ವಿಳಾಸ ವಿನಿಮಯ,ಎಷ್ಟೋ ಅಪರಿಚಿತ ಮುಖಗಳು ಚಿರಪರಿಚಿತವೆನಿಸಿದ್ದು ಆಗಲೇ…ರೈಲಿನ ಬೋಗಿಗಳು ಒಂದಕ್ಕೊಂದು ಸಂಪರ್ಕ ಕಲ್ಪಿಸಿದಂತೆ,ಜೊತೆಜೊತೆಯಾಗಿ ಸಾಗುವ ನಂಟಿನಂತೆ.ನಾವು ರೈಲಿನಂತೆ ಒಗ್ಗೂಡಿಕೊಂಡು,ಬೆನ್ನಿಗಂಟಿಸಿಕೊಂಡು ಬದುಕಲು ಸಾಧ್ಯವಾ? ಎಂಬ ಪ್ರಶ್ನೆ ಕಾಡುತ್ತದೆ.

ರೈಲು ಸಂಚಾರ…ಪ್ರತಿ ಜನಸಾಮಾನ್ಯನ ಬದುಕಿಗೆ ರತ್ನಗಂಬಳಿ ಹಾಸಿದಂತೆ.”ರೈಲು” ತನ್ನದೇ ಆದ ಇತಿಹಾಸವನ್ನು  ಹೊಂದಿದೆ..ನಮ್ಮ ದೇಶದಲ್ಲಿ ರೈಲು ಸಂಚಾರ ಆರಂಭವಾಗಿದ್ದು ಬ್ರಿಟಿಷರ ಆಡಳಿತದಲ್ಲಿ.
ಮೊದಲ ರೈಲು”ರೆಡ್ ಹಿಲ್ಸ್” ನಿಂದ 1837ರಲ್ಲಿ  ಚಿಂತದ್ರಿಪೆಟ್ ಸೇತುವೆಗೆ ಓಡಿತು;ಇದನ್ನು ರೆಡ್ ಹಿಲ್ ರೈಲ್ವೇ ಎಂದು ಕರೆಯಲಾಗುತ್ತಿತ್ತು.1854 ಆಗಸ್ಟ್‌ 15ರಂದು ಕೋಲ್ಕತ್ತದ “ಹೌರಾ ನಿಲ್ದಾಣ’ದಿಂದ ಹೂಗ್ಲಿಗೆ 24 ಮೈಲು ಸಂಚರಿಸಿದ ಈಸ್ಟ್‌ ಇಂಡಿಯಾ ಕಂಪೆನಿಯ ರೈಲು ಭಾರತದ ಮೊದಲ ಪ್ರಯಾಣಿಕರ ರೈಲು” ಇತಿಹಾಸದಲ್ಲಿ ದಾಖಲಾಗಿದೆ. ಎರಡು ವರ್ಷಗಳ ನಂತರ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಮದ್ರಾಸ್‌ನಲ್ಲಿ ರೈಲು ಸಂಚಾರ.ಬ್ರಿಟಿಷ್  ರು ತಮ್ಮ ಅನುಕೂಲಕ್ಕಾಗಿ,ಮತ್ತು ಅವಶ್ಯಕ ವಸ್ತುಗಳನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿಸಲು ಸುಲಭೋಪಾಯ ಮಾಡಿದ್ದರು. ಎರಡು ಸಮಾನ ಹಳಿಗಳ ಮೇಲೆ ಓಡಾಟಮಾಡುವ ವಾಹನದ ಉಪಯೋಗ ಸೃಷ್ಟಿಸಿದ್ದು ಹೊಸಸಂಚಲನಕ್ಕೆ ಮುನ್ನುಡಿ ಬರೆದಂತೆ.ಅಂದು ಭಾರತದಲ್ಲಿ ಗವರ್ನರ್ ಜನರಲ್ ಆಗಿದ್ದ “ಲಾರ್ಡ್ ಡಾಲ್ ಹೌಸಿ” ಅವರನ್ನ ಭಾರತದ ರೇಲ್ವೆಯ ಜನಕ ಅಥವಾ ಪಿತಾಮಹ ಎಂದ ಕರೆಯುತ್ತಾರೆಂದು ಓದಿದ್ದೆ.

ಸ್ವಾತಂತ್ರ್ಯ ನಂತರ ರೈಲ್ವೆಯ ದೃಷ್ಟಿಕೋನ ಬದಲಾಗಿದ್ದು,ಇಡೀ ದೇಶದ ನರನಾಡಿಯಂತೆ ದೊಡ್ಡ ದೊಡ್ಡ ನಗರಗಳಿಗೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಬೃಹತ್ ಪ್ರಮಾಣದಲ್ಲಿ ಇದಕ್ಕೊಂದು ಚಾಲನೆ‌ಸಿಕ್ಕಿದ್ದು ಭಾರತೀಯ ಇತಿಹಾಸದಲ್ಲಿ ಅತ್ಯಂತ ಜನಪ್ರಿಯ ಕೊಡುಗೆ ಎನ್ನಬಹುದು.ಭಾರತೀಯ ರೈಲ್ವೆಯ ಭಾರತ ಸರ್ಕಾರದ, ರೈಲ್ವೆ ಖಾತೆಯ ಅಧೀನದ ಒಂದು ಇಲಾಖೆ. ಭಾರತ ಉದ್ದಗಲಕ್ಕೂ ಹರಡಿದ ರೈಲು ಮಾರ್ಗಗಳ ನಿರ್ವಹಣೆಯ ಜವಾಬ್ದಾರಿ ಈ ಇಲಾಖೆಯದಾಗಿದೆ. ಭಾರತದ ಸಂಪೂರ್ಣ ರೈಲು ಸಾಗಾಟದ ಏಕಸ್ವಾಮ್ಯ ಭಾರತೀಯ ರೈಲ್ವೆಯ ಕೈಯಲ್ಲಿದೆ.ಆರಂಭದಲ್ಲಿ ” ಭಾರತೀಯ ರೈಲ್ವೆಯ ಸಂಚಾರ, ಸಾರಿಗೆ ಮತ್ತು ವಾಣಿಜ್ಯ ಇಲಾಖೆಯ ಉನ್ನತ ಆದಾಯದ ಅಧಿಕಾರಿಗಳು” ಎಂದು ಕರೆಯಲ್ಪಡುವ ಈ ಸೇವೆಯನ್ನು 4 ಮಾರ್ಚ್ 1967 ರಂದು ” ಭಾರತೀಯ ರೈಲ್ವೆ ಸಂಚಾರ ಸೇವೆ”


“Indian Railway Traffic Service” ಎಂದು ಮರುನಾಮಕರಣ ಮಾಡಲಾಯಿತು .ಜನರಿಗೊಂದು ಸುವರ್ಣಾವಕಾಶ!.ಕೈಗೆಟುಕುವ ದರದಲ್ಲಿ ಆರಾಮಾಗಿ ತಲುಪಬಹುದು.ಕೇವಲ ಜನರಿಗಾಗಿ ಮಾತ್ರ ರೈಲು ಬಳಕೆಯಾಗದೇ..ಸರ್ವತೋಮುಖ ಅಭಿವೃದ್ಧಿಗೆ ಅಂದರೆ ರೈಲು ಖನಿಜಗಳು, ಗೊಬ್ಬರ, ರಾಸಾಯನಿಕಗಳು, ತೈಲೋತ್ಪನ್ನಗಳು, ಕೃಷಿ ಉತ್ಪನ್ನಗಳು, ಕಬ್ಬಿಣ ಮತ್ತು ಉಕ್ಕು ಇವೇ ಮೊದಲಾದ ತರಹಾವಿ ಸರಕುಗಳನ್ನು ಭಾರತೀಯ ರೈಲು ಸಾಗಿಸುತ್ತದೆ. ಬಂದರುಗಳು ಹಾಗೂ ದೊಡ್ಡ ನಗರಗಳಲ್ಲಿ ಸರಕು ಸಾಗಾಣಿಕೆಗಾಗಿಯೇ ರೈಲನ್ನು( ‘ಗೂಡ್ಸ’) ಬಳಸಲಾಗುತ್ತಿದೆ.

ಭಾರತೀಯ ರೈಲ್ವೆ ಸಂಚಾರ ಸೇವೆಯ ‘ಲೋಗೋ’ದಲ್ಲಿ ‘IRTS’ ನ ಪರಂಪರೆಯನ್ನು ಪ್ರತಿನಿಧಿಸುವ ಲೋಗೋ ಮುಂದಿನ ದಿನಗಳಲ್ಲಿ ರಾಷ್ಟ್ರ ನಿರ್ಮಾಣದಲ್ಲಿ ಅದರ ಪಾತ್ರವನ್ನು ಎತ್ತಿ ತೋರಿಸುತ್ತದೆ ಎಂಬ ಸಾಂಸ್ಕೃತಿಕ ಹಿನ್ನಲೆಯ ಕೊಡುಗೆಯಾಗಿದೆ.ಈ ಲೋಗೊ ದಲ್ಲಿ
ಚಿನ್ನದಲ್ಲಿದೆ ಅಶೋಕ್ ಸ್ತಂಭ,ಚಕ್ರವನ್ನು ಬಲವಾಗಿ ಹಿಡಿದಿರುವ ಜೋಡಿ ಕೈಗಳು ರಾಷ್ಟ್ರವನ್ನು ಸಮೃದ್ಧಿ ಮತ್ತು ಅಭಿವೃದ್ಧಿಯತ್ತ ಕೊಂಡೊಯ್ಯುವುದನ್ನು ಸೂಚಿಸುತ್ತವೆ.

ಬೆಂಗಳೂರನಿಂದ ಹುಬ್ಬಳ್ಳಿಗೆ ಹೋಗೋ ರೈಲಿನ  ಪ್ಲ್ಯಾಟ್ ಫಾರ್ಮ್ ನಂಬರ್ 8,Train NO…..07340 ನಂಬರ ಟ್ರೇನ್..ಬಂದಿದೆ ಪ್ರಯಾಣಿಕರು ತಮ್ಮ ಸೀಟನ್ನು ದೃಢೀಕರಣ ಮಾಡಬೇಕಾಗಿ…ಇನ್ನೂ ಕೆಲವೇ ನಿಮಿಷಗಳಲ್ಲಿ ಹೊರಡುತ್ತದೆ…ಎಂಬ ಸಂದೇಶಗಳು ಮೈಕ್ನಲ್ಲಿ ಹೇಳುತ್ತಿರುವಾಗ,ನಮ್ಮ ಲಗೇಜ್ವ ಹಿಡಿದು ನಮ್ಮ ಟ್ರೇನ್ ಬಂತು ಹೋಗೋಣು ಬಾ…ಅಂತ ನನ್ನ ಪತಿ ದೇವರು ಶಂಕರ ಕರೆದಾಗ ಹಳದಿ ಬಣ್ಣದ  ಟ್ರೇನ್ ನಿನ ‘ sleeper coach’ ಹತ್ತಿದ್ದು ಪ್ರಥಮನಾಭವ!. “ಬಸ್ಸಿನ ಸೀಟುಗಳಂತೆ ಸಿದ್ದವಾದ ಸೀಟಿಲ್ಲದ ಬೆಡ್” ಹೊದಿಕೆಯನ್ನು ನಾವು ತಂದಿರಬೇಕು.ಮಲಗಿ ಪಯಣಿಸಲು ಯೋಗ್ಯವಾಗಿದ್ದು, ಸುರಕ್ಷಿತವಾಗಿದೆ.ಮಹಿಳೆಯರು ಒಬ್ಬಂಟಿಯಾಗಿಯು ಪ್ರಯಾಣ ಮಾಡಲು ಯಾವುದೇ ತೊಂದರೆಯಿಲ್ಲ.ರೈಲು ಸೇವೆ ಎಲ್ಲವನ್ನೂ ಒಳಗೊಂಡಿದೆ.ಒಳ್ಳೆಯಕ್ಕಾಗಿ ಬಳಸಿದರೆ ಎಲ್ಲವೂ ಒಳ್ಳೆಯದೆ.

ಪ್ರತಿ ಬೋಗಿ( ಕೋಚು ,ಡಬ್ಬಿ ) ಪ್ರತ್ಯೇಕ ವಸತಿ ವರ್ಗವನ್ನು ಹೊಂದಿರುತ್ತದೆ; ಸ್ಲೀಪರ್ ವರ್ಗ ಅತ್ಯಂತ ಜನಪ್ರಿಯವಾದದ್ದು. ಈ ಪ್ರಕಾರದ ಒಂಬತ್ತು ಕೋಚುಗಳನ್ನು ಸಾಮಾನ್ಯವಾಗಿ ಜೊತೆಗೂಡಿಸಲಾಗುತ್ತದೆ. ಹವಾನಿಯಂತ್ರಿತ ಕೋಚುಗಳನ್ನು(ಎ.ಸಿ) ಲಗತ್ತಿಸಲಾಗುತ್ತದೆ. ಸಾಮಾನ್ಯ ಟ್ರೈನು ಮೂರರಿಂದ ಐದು ಹವಾನಿಯಂತ್ರಿತ ಕೋಚುಗಳನ್ನು ಹೊಂದಿರುತ್ತದೆ.ಈಗೀಗ ಆನ್‍ಲೈನ್ ಪ್ರಯಾಣಿಕ ಟಿಕೆಟ್ ನೀಡಿಕೆಯು 2004ರಲ್ಲಿ ಜನಸಾಮಾನ್ಯರಿಗೆ ಪರಿಚಯಿಸಲ್ಪಟ್ಟಿತು.ಇದರಿಂದ ಎಲ್ಲ ವರ್ಗದ ಜನರು ತಮಗಿಷ್ಟವಾದ,ವ್ಯವಸ್ಥೆ ಹೊಂದಿರುವ ಬೋಗಿಯನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಮೊಬೈಲ್ ಬುಕ್ಕಿಂಗ್ ಅಂದರೆ ಆನ್ಲೈನ್ ಸರಳ,ಸುಲವಾಗಿದೆ.

ಒಟ್ಟಾರೆ ಹೇಳುವುದಾದರೆ, ರೈಲುಪಯಣವೇನೋ…ಉತ್ತಮವೇ.ರೈಲು ಸಾರ್ವಜನಿಕ ಆಸ್ತಿ ನಿಜ!. ಆದರೆ ಅದರಲ್ಲಿ ಪಯಣಿಸುವ ನಾಗರಿಕರು ಟಿಕೆಟ್ ಇಲ್ಲದ ಪಯಣ ಮಾಡುವುದನ್ನು ತಪ್ಪಸಿಬೇಕು.ಟಿಕೆಟ್ ಚಕ್ಕಿಂಗ್ T.C ಯವರ ಕೈಗೆ ಸಿಕ್ಕು ದಂಡಕಟ್ಟಿಸಿಕೊಳ್ಳು ಸ್ಥಿತಿ ಬಂದರೆ ಅಸಭ್ಯ ಅಸಹ್ಯ ಅಲ್ಲವಾ?..ಇನ್ನೂ ಸ್ವಚ್ಛತೆಗೆ ಆದ್ಯತೆಯನ್ನು ನೀಡಬೇಕಾಗಿದ್ದು ನಾವುಗಳು.ಎಲ್ಲೆಂದರಲ್ಲಿ ಕಸ ಬಿಸಾಡುವ ನಾವು “ಸ್ವಚ್ಚತ ಭಾರತ”ದ ಕನಸಿಗೆ ದಕ್ಕೆ ತರುವಂತಹ ಕೆಲಸ ಮಾಡಿದರೆ ಎಷ್ಟು ಚೆನ್ನ?.ರೈಲಿನಲ್ಲಿ ಪ್ರಯಾಣ ಮಾಡುವ ಎಲ್ಲರ ಮನಸ್ಥಿತಿಯ ಒಂದೆತರನಾಗಿರುವುದಿಲ್ಲ.
ಎಷ್ಟೋ ಹೆಣ್ಣು ಮಕ್ಕಳು, ಗಂಡು ಮಕ್ಕಳು ನೂರಾರು ಕನಸು ಕಂಡು ಪಟ್ಟಣಕ್ಕೆ ಸುಲಭವಾಗಿ ಬಂದಿರುತ್ತಾರೆ.ಆದ್ರೆ,ವಿಧಿಯಾಟದ ಮುಂದೆ ಸೋತು,ದರೋಡೆ,ಕೊಲೆ,ಸುಲಿಗೆ,ಮೋಸ,ನಯವಂಚರ ಗ್ಯಾಂಗ್ ಅಪರಿಚಿತರಂತೆ ಇದ್ದು,ಸದ್ದಿಲ್ಲದೇ ದೋಚುವವರು ನೆವದೊಂದಿಗೆ. ಟಿಕೆಟ್ ಇಲ್ಲದೆ ಪಯಣಿಸುವ ಜನರೊಂದಿಗೆ ಮಾಯವಾಗುವವರು!.
ಸಾಧಕ,ಬಾಧಕಗಳನ್ನು ಮೆಲುಕು ಹಾಕುತ್ತ,ಒಳ್ಳೆಯ ಚಿಂತನೆಗೆ ತಲೆಬಾಗಬೇಕು.ಈಗೆಲ್ಲ ರೈಲ್ವೆ ಇಲಾಖೆ ಆಧುಕಿನ ‘ಟಚ್ಚ್’ ನೀಡಿದ್ದನ್ನು ನಾವೆಲ್ಲ ಒಪ್ಪಿಕೊಳ್ಳಲೇಬೇಕು. ವಿಶ್ರಾಂತಿ ರೂಮ್ಗಳು ಅದು ಎ.ಸಿಯುಕ್ತ.
ಹಸುಗೂಸುಗಳಿಗೆ ಹಾಲೂಣಿಸಲು ಪ್ರತ್ಯೇಕ ವ್ಯವಸ್ಥೆ, ಸಿ.ಸಿ.ಕ್ಯಾಮೆರಾಗಳು,ಹೆಣ್ಣು ಮಕ್ಕಳ ಸುರಕ್ಷತೆ ಹೀಗೆ ಹತ್ತುಹಲವಾರು ವ್ಯವಸ್ಥೆ ಒದಗಿಸಿದರೂ,ಕೆಲ ಕಿಡಗೇಡಿಗಳು ರೈಲು ದುರಂತಗಳು ಜೀವಹಾನಿಗೆ ಕಾರಣವಾಗುತ್ತಿರುವುದು ವಿಷಾದನಿಯ!. ರೈಲು ಅಪಘಾತ ನೆನೆದರೆ ಎದೆ ಝಲ್ ಎನ್ನಿಸುವುದು.ಇಂತಹ ಅನಾಹುತಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಗೊಳ್ಳಲು ಭಾರತೀಯ ರೈಲ್ವೆ ಇಲಾಖೆ ಶಿಸ್ತಿನ, ಕಠಿನ ಕಠೋರ ನಿಯಮ ಕೈಗೊಂಡರೆ,ಒಳಿತು.

ನಮ್ಮ ದೇಶದ ಹೆಮ್ಮೆಯನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ.ಮನುಷ್ಯನ ಮಾತು ರೈಲುಮಾರ್ಗದಂತೆ ಸರಳ,ನೇರ,ದಿಟ್ಟ, ನಿರಂತರವಾಗಿರಬೇಕು. ದೇಶದ ಕೋಟ್ಯಾಂತರ ಜನರ ಜೀವನಾಡಿ..ನನಗಂತೂ ರೈಲು ಪ್ರಯಾಣ ತುಂಬಾನೆ ಇಷ್ಟ… ನೀವು ಒಮ್ಮೆ ಸಮಯ ಸಿಕ್ಕಾಗ ರೈಲು ಪ್ರಯಾಣ ಮಾಡಿ…


2 thoughts on “

Leave a Reply

Back To Top