ಭವದ ಬಳ್ಳಿಯ ಬೇರು’ ಎಂಬ ರೂಪಕವನ್ನು ನಾಗಲಾಂಬಿಕೆ ವಚನವೊಂದರಲ್ಲಿ ಬಳಸುತ್ತಾಳೆ, ‘ಎನ್ನ ಭವದ ಬಳ್ಳಿಯ ಬೇರು ಹರಿಯಿತ್ತಯ್ಯಾ’ (5.793) ಎಂದು. ‘ಹರಿ’ ಎಂಬ ಪದಕ್ಕೆ ಎರಡು ಅರ್ಥಗಳನ್ನು ತಗುಲಿಸಿಕೊಂಡಿರುವ ಕಾರಣದಿಂದ ಥಟ್ಟನೆ ಕೊಕ್ಕೆಯಾಗಿ ಸಿಕ್ಕುತ್ತದೆ. ‘ಹರಿ’ ಎಂಬುದಕ್ಕೆ ‘ಕೀಳು’, ‘ಕತ್ತರಿಸು’ ಎಂಬ ಅರ್ಥಗಳು ಇರುವಂತೆಯೇ, ಕ್ರಿಯಾಪದವಾಗಿ ನಿರಂತರ ‘ಚಲನೆ’, ‘ಧಾಳಿ’ ಮಾಡು, ‘ಮುತ್ತಿಗೆ’ ಹಾಕು, ‘ಸೇನೆ’, ‘ದಂಡು’ ಇತ್ಯಾದಿ ಅರ್ಥಗಳನ್ನೂ ಹೊಂದಿದೆ. ಯಾವುದೇ ಕಾಲ, ಭಾಷೆಗಳ ಕವಿ-ಕಾವ್ಯಗಳು ತನಗೆ, ತನ್ನ ಸಮಾಜ-ಪರಿಸರಕ್ಕೆ ಬೇಡದ ಎಲ್ಲವನ್ನು ‘ಕತ್ತರಿಸುವ’, ಅದರ ಮೇಲೆ ಬಹುತೀಕ್ಷ್ಣವಾಗಿ ‘ಧಾಳಿ’ ಮಾಡುವ, ‘ಮುತ್ತಿಗೆ’ ಹಾಕುವ ಕೆಲಸವನ್ನು ಮಾಡುತ್ತಿರುತ್ತದೆ. ಬೇಡದ್ದನ್ನು ಕತ್ತರಿಸಿದ ಅನಂತರ ಉಳಿದುದನ್ನು ಹಿಡಿದು ಮುಂದೆ ನಡೆಯುವ ಸ್ವಾತಂತ್ರ್ಯವನ್ನು, ಹಕ್ಕನ್ನು ಪಡೆದಿರುತ್ತದೆ, ಪಡೆಯುವಂತೆ ತನ್ನ ಓದುಗನನ್ನು ಆತ್ಮೀಯವಾಗಿ ಒತ್ತಾಯಿಸುತ್ತದೆ. ‘ಸೇನೆ’ ಎಂಬ ಅರ್ಥವನ್ನೂ ಹೊಂದಿರುವುದರಿಂದ ‘ಸಮುದಾಯಿಕಪ್ರಜ್ಞೆ’ಯನ್ನೂ ಸೂಚಿಸುತ್ತಿದೆ. ಈ ಎಲ್ಲ ಅರ್ಥಸಾಧ್ಯತೆಗಳ ಹಿನ್ನೆಲೆಯಲ್ಲಿ ‘ಹರಿಯಿತ್ತಯ್ಯಾ’ ಎಂಬ ಪದವು ಏಕಕಾಲದಲ್ಲಿ ಬೇಡದ್ದನ್ನು ಕತ್ತರಿಸಿ ಮುನ್ನಡೆಯುವ ಚಲನೆಯನ್ನು, ಸಾಮಾಜಿಕವಾಗಿ ಅನಗತ್ಯ ಎನಿಸಿದುದರ ಮೇಲೆ ಪ್ರಬಲವಾಗಿ ಮಾಡುವ ಧಾಳಿಯನ್ನೂ ಸೂಚಿಸುತ್ತಿದೆ. ಈ ಕಾರಣದಿಂದ ಕವಿತೆಗಳ ಕುರಿತು ಬರೆಯುತ್ತಿರುವ ಬರಹಗಳಿಗೆ ವಚನಕಾರ್ತಿ ನಾಗಲಾಂಬಿಕೆ ಕೊಟ್ಟಿರುವ ‘ಭವದ ಬಳ್ಳಿಯ ಬೇರು’ ಎಂಬುದನ್ನು ಇಟ್ಟುಕೊಂಡಿದ್ದೇನೆ. ಕಾವ್ಯದ ಓದು, ಓದುಗನೊಳಗೆ ವಿಸ್ಮೃತಿಯಲ್ಲಿನ ವಿಷಯಗಳನ್ನು ಸ್ಮೃತಿಗೆ ತಂದು ನಿರಂತರವಾಗಿ ಕಾಲಪ್ರವಾಹದಲ್ಲಿ ಹರಿಯುವಂತೆ ಮಾಡುತ್ತದೆ, ಓದುಗನ ಭವ-ಭಾವಗಳನ್ನು ಭದ್ರಪಡಿಸುತ್ತದೆ. 

‘ಪ್ರಾಯೋಗಿಕ ವಿಮರ್ಶೆ’ ಎಂಬುದು ಭಾರತೀಯ ಕಾವ್ಯಮೀಮಾಂಸೆಯಲ್ಲಿ ಔಚಿತ್ಯ ದಿಂದ ಮೊದಲ್ಗೊಂಡು ರಸ, ಧ್ವನಿ ಯಂತಗ ಗಹನ ವಿಷಯಗಳವರೆವಿಗೂ ಬಿಡಿ-ಇಡಿಗಳ ರೂಪದಲ್ಲಿ ಕಲಾಕೃತಿಯೊಂದನ್ನು ನೋಡುವ ವಿಧಾನವು ವಿಸ್ತಾರವಾಗಿ ಬೆಳೆದು ಬಂದಿದೆ. ಪಾಶ್ವಾತ್ಯರಲ್ಲಿ Practical Critinism ಎಂಬುದನ್ನು ಐ. ಎ. ರಿಚರ್ಡ್ಸ್ ನು ತನ್ನ ಬಹುಮಹತ್ವದ ಕೃತಿಯಾದ Meaning Of Meaning ನಲ್ಲಿ ಆರಂಭ ಮಾಡುತ್ತಾನೆ. ಕಾವ್ಯದ ನಿಕಟವಾದ ಓದು ಇದಾಗಿದೆ. Protocol Method ನಲ್ಲಿ ತರಗತಿಯ ಒಳಗೆ ಪ್ರಯೋಗ ಮಾಡುತ್ತಾನೆ. ಕನ್ನಡದ ನವ್ಯ ಸಾಹಿತ್ಯ ಸಂದರ್ಭದಲ್ಲಿ ‘ಪ್ರಾಯೋಗಿಕ ವಿಮರ್ಶೆ’ ಗೆ ಸಮಾನಾಂತರ ‘ಪದ್ಯ ಬಗೆವ ಬಗೆ’ ಎಂಬ ನುಡಿಗಟ್ಟನ್ನು ಟಂಕಿಸಿ, ಮೊಟ್ಟ ಮೊದಲು ಬಳಸಿದವರು ಪ್ರೊ. ಯು. ಆರ್. ಅನಂತಮೂರ್ತಿಯವರು. ಡಾ. ಗೋಪಾಲಕೃಷ್ಣ ಅಡಿಗರ ‘ಶ್ರೀ ರಾಮನವಮಿಯ ದಿವಸ’ ಕವಿತೆಯನ್ನು ಪ್ರಾಯೋಗಿಕ ವಿಮರ್ಶೆಗೆ ಒಳಪಡಿಸಿದ ಸಂದರ್ಭದ ತಮ್ಮ ಮಾತುಗಳಿಗೆ ಕೊಟ್ಟ ಶೀರ್ಷಿಕೆಯೇ ಈ ‘ಪದ್ಯ ಬಗೆವ ಬಗೆ’ ಎಂಬುದಾಗಿದೆ. (ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ. ಮಾನಸ ಗಂಗೋತ್ರಿಯಲ್ಲಿ ಮಾಡಿದ ಅಡಿಗರ ಪದ್ಯ ಕೇಂದ್ರಿತ ಭಾಷಣ. ಅನಂತರ ರುಜುವಾತು ಸಂಚಿಕೆ 4. 1981 ರಲ್ಲಿ ಅವರ ಮಾತುಗಳು ಅಕ್ಷರ ರೂಪಗೊಂಡು ಪ್ರಕಟವಾಗಿದೆ.) ಪ್ರೊ. ಯು. ಆರ್. ಅನಂತಮೂರ್ತಿಯವರ ‘ಪದ್ಯ ಬಗೆವ ಬಗೆ’ ಎಂಬ ನುಡಿಗಟ್ಟಿನಲ್ಲಿ ‘ಬಗೆವ’ ಪದಕ್ಕೆ ಎರಡು ಅರ್ಥದ ಪಾತಳಿಗಳಿವೆ. ಒಂದು, ಕವಿತೆಯೇ ತನ್ನ ಅರ್ಥವನ್ನು ಹೀಗೆ ಎಂದು ‘ಬಗೆ’ಯುತ್ತಿರುತ್ತದೆ, ಹಿಂದೆ ಕವಿ ಇರುತ್ತಾನೆ. ಮತ್ತೊಂದು, ಕವಿತೆ, ಕವಿ ಎರಡೂ ಹೀಗೆಯೇ ‘ಬಗೆ’ಯುತ್ತಿದೆ, ‘ಬಗೆ’ಯುತ್ತಿರುವುದು ಎಂದು ಓದುಗ ಕೃತಿನಿಷ್ಠವಾಗಿ ‘ಬಗೆ’ ದು ಗ್ರಹಿಸಿ ಆಡುವ ಮಾತು. ಅನಂತರದ ಹಾದಿ ಮತ್ತೂ ಸೂಕ್ಷ್ಮವಾಗುತ್ತಾ, ಕವಿ, ಕವಿತೆ ಹೀಗೆ ‘ಬಗೆ’ಯುತ್ತಿರುವುದು ಸರಿಯೆ ? ಹೀಗೆಯೆ ಏಕೆ ‘ಬಗೆ’ಯುತ್ತಿದೆ ? ಹೀಗೆ ‘ಬಗೆ’ದಿದ್ದರಿಂದ ಆಗು-ಮಾಡುತ್ತಿರುವ, ಕಟ್ಟಿ-ಕೊಳ್ಳುತ್ತಿರುವ, ಕಟ್ಟಿಕೊಡುತ್ತಿರುವ ಅರ್ಥವಾದರೂ ಏನು ? ಎಂದು ಓದುಗ ‘ಬಗೆಯುವುದು’. ಈ ಎಲ್ಲ ಮಾತುಗಳ ಹಿನ್ನೆಲೆಯಲ್ಲಿ ಇಲ್ಲಿನ ಲೇಖನಗಳು ಎರಡನೆಯ ಭಾಗಕ್ಕೆ ಸೇರುತ್ತದೆ. ಮತ್ತೂ ಹೇಳುವುದಾದರೆ, ‘ಸದ್ಯದ ಯಾವುದೇ ಕವಿಯೊಬ್ಬನ ಕವಿತೆಯು ‘ಪ್ರಾಯೋಗಿಕ ವಿಮರ್ಶೆ’ ಎಂಬ ‘ಅಗ್ನಿದಿಬ್ಯ’ ದ ಮೂಲಕ ಹಾದು ಬರುವುದರಿಂದ ಮಾತ್ರವೇ ಸಾಂಸ್ಕೃತಿಕವಾಗಿಯೂ ಸಂಪುಷ್ಟವಾಗಿರುತ್ತದೆ.’ ಎಂಬ ನಂಬಿಕೆಯ ಕಾರಣದಿಂದ ಈ ವಿಮರ್ಶೆಗಳು ಆರಂಭವಾಗುತ್ತಿವೆ.  

೧೯೯೧ ರ ‘ಹೊಸ ಆರ್ಥಿಕ ನೀತಿ’ ಯ ಒಪ್ಪಂದದ ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣಗಳ ನಂತರ ಭಾರತೀಯ ನಾಗರೀಕ ಸಮಾಜ ಅತೀದೊಡ್ಡ ಸವಾಲುಗಳಿಗೆ ಮುಖಾಮುಖಿಯಾಗಿದೆ. ಒಂದು, ಮನುಷ್ಯ ತನ್ನ ವೈಯಕ್ತಿಕತೆಯನ್ನು ಕಾಪಿಡುವುದು. ಮತ್ತೊಂದು, ಸಾಮುದಾಯಿಕಪ್ರಜ್ಞೆಯನ್ನು ತೋರ್ಪಡಿಸುವ ಚಹರೆಗಳನ್ನು ಮೊದಲಿಗಿಂತ ಹೆಚ್ಚಾಗಿ ಬಲಪಡಿಸುತ್ತಾ ನಡೆಯುತ್ತಿರುವುದು. ಹಾಗೆ ಗಮನಿಸಿದರೆ ಇದು ವಿರುದ್ಧ ದಿಕ್ಕಿನ ಚಲನೆ. ಪ್ರೊ. ಯು. ಆರ್. ಅನಂತಮೂರ್ತಿಯವರೇ ಹೇಳುವಂತೆ ‘ಪಶ್ಚಿಮಕ್ಕೆ ಮುಖ ಪೂರ್ವಕ್ಕೆ ನಡಿಗೆ’ ಯ ಚಲನೆ. ವೈಯುಕ್ತಿಕತೆ ಕಾಪಿಡುವ ಕೆಲಸದಿಂದ ಇಂದಿನ ದಿನಗಳಲ್ಲಿ ಸಂಬಂಧಗಳ ವಿಘಟನೆ, ಅವಿಭಕ್ತ ಕುಟುಂಬದಿಂದ ವಿಭಕ್ತ ಕುಟುಂಬಕ್ಕೆ ಬದಲಾವಣೆ, ವೃದ್ಧಾಶ್ರಮ-ಅನಾಥಾಶ್ರಮಗಳ ನಿರ್ಮಾಣ, ಮೊಬೈಲ್ ನ ಬಳಕೆ, ಅದರಲ್ಲಿನ ಕೋಡ್ ವ್ಯವಸ್ಥೆ ಇವೆಲ್ಲವೂ ಮೊದಲನೆಯದನ್ನು ನಿರಂತರವಾಗಿ ಪೋಷಿಸುತ್ತಲೇ ಬರುತ್ತಿದೆ. ಇದು ಫ್ರಾಯ್ಡ್ ಹೇಳುವ ಆಳಮನಸ್ಸಿನಲ್ಲಿನ ‘ಅಹಂ’ ನ್ನು ಬೇರೆ ಬೇರೆ ಚಹರೆಗಳ ಕಡೆಯಿಂದ ಸ್ಥಾಪಿಸುತ್ತಿರುವುದಕ್ಕೆ ಸಾಕ್ಷಿಯಾಗಿ ಕಾಣಿಸುತ್ತಿದೆ. ಇವುಗಳೊಂದಿಗೆ ಪರ-ವಿರೋಧಗಳ ಕರ್ಷಣವನ್ನು ನಿರಂತರವಾಗಿ ಸಾಧಿಸುತ್ತಿರುವ ಮನುಷ್ಯನ ಒಂಟಿತನಕ್ಕೆ‌, ಅಹಮಿಕೆಗೆ ಪೋಷಕವಾಗಿ ನಿಂತಿರುವುದು ಭಾಷೆ, ಜಾತೀ ಮತ್ತು ಮತಧರ್ಮ ಎಂಬ “ತ್ರಿವಿಧ ಪ್ರಜ್ಞೆ”. ಈ ಮೂರರಲ್ಲಿ ಅತೀ ದುರ್ಬಲವಾದದ್ದು, ಯಾವ ಕ್ಷಣದಲ್ಲಾದರೂ ಮನುಷ್ಯ ಬಿಟ್ಟು ಮುನ್ನಡೆಯಬಹುದೆಂದು ಬಗೆದಿರುವುದು ಭಾಷೆಯಾದರೆ, ಸಾಮಾಜಿಕ ಚಹರೆಗಳನ್ನು ಉಳಿಸಿಕೊಳ್ಳುವಲ್ಲಿ ಬಲಶಾಲಿಯಾಗಿ ಬಂಧಿಯಾಗಿರುವುದು ಜಾತಿಯಿಂದ, ರಾಜಕೀಯವಾಗಿ ಕೇಂದ್ರೀಕರಣ ಶಕ್ತಿ ಸಂಚಯದ ತುದಿಯಲ್ಲಿ ಇರುವುದು ಮತಧರ್ಮ. ಈ “ತ್ರಿವಿಧ ಪ್ರಜ್ಞೆ” ಯ ಹೊಡೆತಕ್ಕೆ ಸಿಕ್ಕ ಮನುಷ್ಯ ಪ್ರತಿಯೊಂದು ಬಾರಿಯೂ ಪೂರ್ವಸ್ಮರಣೆಯನ್ನು ಕಳೆದುಕೊಳ್ಳುತ್ತಲೆ ಇರುತ್ತಾನೆ ಅಥವ ಇದಕ್ಕೆ ವ್ಯತಿರಿಕ್ತವಾಗಿ ಬದಲಾಗುತ್ತಾನೆ. ಮನುಜಕುಲದ ಮೂಲಭೂತ ಗುಣಗಳಾದ ಪ್ರೀತಿ, ನಂಬಿಕೆ, ವಿಶ್ವಾಸ ಇತ್ಯಾದಿಗಳು ‘ವಿಸ್ಮೃತಿ’ ಗೆ ಸಂದಿರುತ್ತವೆ. ಅವುಗಳನ್ನು ‘ಸ್ಮೃತಿ ಪಟಲ’ಕ್ಕೆ ಕರೆತರುವ, ಅಚ್ಚೊತ್ತಿ ನಿಲ್ಲಿಸುವ ಕೆಲಸಗಳನ್ನು ಮಾನವಿಕ ಶಾಸ್ತ್ರಗಳು ಮೇಲಿಂದ ಮೇಲೆ ಮಾಡುತ್ತಲೇ ಇರುತ್ತವೆ. ಬಹುಮುಖ್ಯವಾದ ಪಾತ್ರ ‘ಸಾಹಿತ್ಯ’ ದ್ದಾದರೆ, ‘ಪ್ರಬಲ’ವಾಗಿ ‘ಕವಿತೆ’ ಸೂಕ್ಷ್ಮವಾಗಿ ಮಹಾಮಾರ್ಗವನ್ನೇ ಸೃಷ್ಟಿಸಿಬಿಡುತ್ತದೆ.

ವೈಯಕ್ತಿಕವಾಗಿ ಪ್ರಬಲವಾಗುತ್ತಾ‌, ಸಾಮಾಜಿಕವಾಗಿಯೂ ಪ್ರಬಲನಾಗುವ ಅರ್ಹತೆ ಭಾಷೆಯ ಮೇಲಿನ ಹಿಡಿತದಿಂದ ಕವಿಯೊಬ್ಬನಿಗೆ ಬರುತ್ತದೆ. ‘ಸಾಮುದಾಯಿಕಪ್ರಜ್ಞೆ’ ಯ ಚಹರೆಗಳನ್ನು ಉಳಿಸಿಕೊಂಡು ನಿಂತರೆ ಕವಿಯೊಬ್ಬ ಮತ್ತೂ ಮುನ್ನೆಲೆಗೆ ಬಂದುಬಿಡುತ್ತಾನೆ.‌ ಈ ಮುನ್ನೆಲೆ ಎಂಬುದರಲ್ಲಿಯೂ ಭಿನ್ನತೆ ಇದೆ. ಒಂದು ‘ಪ್ರಾದೇಶಿಕತೆ’ಯ ಚಹರೆಗಳನ್ನು ಕೇಂದ್ರವಾಗಿಟ್ಟುಕೊಂಡು ರಚನೆಯಾದ ಕಲಾಕೃತಿ ಮತ್ತೊಂದು ಪ್ರದೇಶದಲ್ಲಿನ ಸಾಂಸ್ಕೃತಿಕ ಪರಿಸರದಲ್ಲಿ ಬೆಳೆದವರೊಡನೆ, ಆ ಚಹರೆಗಳ ಜೊತೆಗೆ ಹೇಗೆ ಸಂವಹನಕ್ಕೆ ನಿಲ್ಲುತ್ತದೆ ? ಅಂತಹ ಸಂವಹನ ಓದುಗರಿಗೆ ಕೊಡುವುದಾದರೂ ಏನನ್ನು ? ಆ ಕಲಾಕೃತಿ ಸೃಷ್ಟಿಸುವ ಅರ್ಥದ ಪಾತಳಿಗಳು ಯಾವುವು ? ಭಾಷಿಕವಾಗಿ ಏಕೆ ಅರ್ಥದ ಪಾತಳಿಗಳು ನಿರ್ಮಾಣವಾಗುತ್ತವೆ ? ಅದನ್ನು ಕವಿಯೆನಿಸಿಕೊಂಡವ ತನ್ನ ಕೃತಿಯಲ್ಲಿ ಎಷ್ಟು ಪರಿಣಾಮಕಾರಿಯಾಗಿ, ಪ್ರಬಲವಾಗಿ ನಿರ್ವಹಣೆ ಮಾಡಿದ್ದಾನೆ ? ಇಂತಹ ಹಿನ್ನೆಲೆಗಳಲ್ಲಿ ನಿರ್ಮಾಣವಾದ ಪಠ್ಯವೊಂದರ ‘ಶಿಖರಧ್ವನಿ’ ಯಾವುದು ? ಯಾವ ಪ್ರಮಾಣದಲ್ಲಿ ‘ಶಿಖರಧ್ವನಿ’ಯ ನಿರ್ಮಾಣವಾಗಿದೆ ? ‘ಶಿಖರಧ್ವನಿ’ ಯ ಸಂಯೋಜನೆಗೆ ಕವಿಯೊಬ್ಬ ಬಳಕೆಮಾಡಿಕೊಂಡಿರುವ ಪರಿಕರಗಳು ಯಾವುವು ? ಪರಿಕರಗಳ ಸಂಯೋಜನೆಯಿಂದ ಕವಿಯೊಬ್ಬ ಸಾಧಿಸುವ ಸಂವಹನ ಸಾಫಲ್ಯ ಯಾವ ಪ್ರಮಾಣದ್ದು ? ಸಾಫಲ್ಯ ಎಂಬುದನ್ನು ಓದುಗ ಅರ್ಥಮಾಡಿಕೊಳ್ಳುವ, ಅಳೆಯುವ ಬಗೆ ಹೇಗೆ ? ಎಂಬುದು ಇಂದಿಗೆ ಬಹುಮುಖ್ಯವಾದ ಪ್ರಶ್ನೆಗಳಾಗಿವೆ.

ಪ್ರಾದೇಶಿಕ ಭಾಷೆಯ ಬಳಕೆಯು ವಿಭಿನ್ನತೆಯ ಜೊತೆಗೆ, ಇತರೆ ಪಠ್ಯಗಳ ಮಧ್ಯೆ ‘ಅನನ್ಯತೆ’ಯನ್ನು ತಂದುಕೊಡುವುದರ ಜೊತೆಗೆ, ಸಂವಹನದಲ್ಲಿ ವಿಘಟನೆಯನ್ನೂ ಸೃಷ್ಟಿಸುತ್ತದೆ ಎನ್ನುವುದನ್ನು ಮರೆಯಬಾರದು. ಓದುಗ ಬಳಗ ಕೆಲವು ಪಠ್ಯಗಳೊಂದಿಗೆ ಅಂತರವನ್ನು ಕಾಯ್ದುಕೊಳ್ಳುವಲ್ಲಿ ಭಾಷೆಯ ಕೊಡುಗೆಯೂ ಇದೆ ಎಂಬುದನ್ನು ಮರೆಯಬಾರದು. ಭಾಷೆಯೊಂದರಿಂದ ಮಾತ್ರ ಹಾಗಾಗಲಾರದು, ಭಾಷೆಯ ಮೂಲಕವೆ ಕವಿಯೊಬ್ಬ ಕಟ್ಟಿಕೊಳ್ಳುವ ಅನುಭವ ಸಾಂದ್ರತೆ, ಪಡೆಯುವ ಅಭಿವ್ಯಕ್ತಿ, ಭಾವತೀವ್ರತೆ, ಇವುಗಳಿಗೆ ಕಾರಣವಾಗುವ ಗ್ರಥನ ಕೌಶಲ, ಅದು ಸೃಷ್ಟಿಸುವ ಪಠ್ಯದ ಭಾವ-ಕ್ರಿಯಾಕೇಂದ್ರಗಳು ಈ ಎಲ್ಲವುಗಳಿಂದಲೂ ಓದುಗ ದೂರ ಉಳಿಯುತ್ತಾನೆ. 

ಒಂದು ಕಾಲದ ಸಾಹಿತ್ಯ ಚರ್ಚೆ, ವಾಗ್ವಾದ, ಸಂವಾದಗಳಲ್ಲಿ ಕೇಂದ್ರಸ್ಥಾನದಲ್ಲಿದ್ದ ಕೃತಿ, ಮತ್ತೊಂದು ಕಾಲದಲ್ಲಿ ಅಂಚಿಗೆ ಬಂದು ಬಿಡುತ್ತದೆ. ಕವಿತೆ ‘ಕಾಲ-ಸಂಭವ’ ದ್ದಾಗಿರುತ್ತದೆ. ನಂತರದ ‘ಕಾಲ’ ದಲ್ಲಿ ‘ಭಿನ್ನ-ಸಂಭವ’ ವನ್ನೂ ಪಡೆಯುತ್ತದೆ. ‘ಕಾಲ-ಸಂಭವ’ ಪ್ರಜ್ಞಾಪೂರ್ವಕವಾಗಿ ತೀವ್ರವಾದಷ್ಟು ಸಂವೇದನೆ, ಸಾಂಸ್ಕೃತಿಕ ಪರಿಸರಗಳು ನಿಷ್ಕ್ರಿಯತೆಯ ಬಿಂದುವನ್ನು ಮುಟ್ಟಿದ ಹಾಗೆ ಅಥವ ಕಲಾಕೃತಿಯೇ ಎಲ್ಲವೂ ಎನ್ನುವ ಭ್ರಮೆಯನ್ನು ಉಂಟುಮಾಡಿದ ಹಾಗೆ. ಕವಿತೆಗಳು ‘ಕಾಲ-ಸಂಭವ’ ದಲ್ಲಿ ಸರಳರೂಪದಲ್ಲಿದ್ದರೆ (Linear), ಮತ್ತೆ ಕೆಲವು ವಕ್ರರೂಪವಾಗಿರುತ್ತವೆ (Crooker),  ಯಾವುದು ಶ್ರೇಷ್ಠ- ಯಾವುದು ಕನಿಷ್ಠ ಎಂಬ ಚರ್ಚೆಗಳನ್ನು ನಾನು ಮಾಡುವುದಿಲ್ಲ. ಪ್ರಾಯೋಗಿಕ ವಿಮರ್ಶೆಯು ಅದನ್ನು ಗುರುತಿಸುವುದರ ಜೊತೆಗೆ ಪಠ್ಯಕೇಂದ್ರಿತವಾಗಿ ಕೆಲವಾದರೂ ಕಾರಣವನ್ನು ಕೊಡಬಹುದಾದ ಸಾಧ್ಯತೆಯನ್ನು ಹೊಂದಿದೆ. ಈ ಎರಡು ವಿನ್ಯಾಸಗಳಲ್ಲಿ ಅಭಿವ್ಯಕ್ತಿ ಪಡೆವ ಪಠ್ಯವೊಂದರ ಆವಿರ್ಭಾವಕ್ಕೆ ಸಾಂಸ್ಕೃತಿಕ ಕಾರಣ-ಮಹತ್ವ ಇರುತ್ತದೆನ್ನುವುದನ್ನು ಮರೆಯಬಾರದು. ಈ ಎಲ್ಲವನ್ನು ಕಾವ್ಯವೊಂದನ್ನು ಕಂಡೊಡನೆ ಒತ್ತಾಯ ಪಡಿಸುವ ಕಾರಣದಿಂದಲೇ ಓದು, ಗ್ರಹಿಕೆಗಳು ತೀವ್ರವಾಗುತ್ತಾ ಪ್ರಬಲವಾಗಿದ್ದಿದೆ. ಓದಿದೊಡನೆ ಗಟ್ಟಿಗೊಳಿಸಿದ, ‘ಪ್ರಬಲ’ ಎನಿಸಿದ ಕೆಲವೇ ಆಯ್ದ ಕವಿತೆಗಳನ್ನು ಪ್ರಾಯೋಗಿಕ ವಿಮರ್ಶೆಗೆ ಒಳಪಡಿಸುತ್ತಿದ್ದೇನೆ. 

ಪ್ರಜ್ಞೆ, ಭಾವ ಮತ್ತು ಆಲೋಚನಾ ವಿಧಾನವನ್ನೇ ಬದಲಾಯಿಸುವಷ್ಟು ಪ್ರಬಲ ಎನಿಸುವ ಇತ್ತೀಚಿನ ಕೆಲವಾದರೂ ಘಟನೆಗಳನ್ನು ನೆನಪಿಸಿಕೊಳ್ಳಬೇಕಾದ ಸಮಯವಿದು. ಕಾರಣ ಮತ್ತು ಕಾರ್ಯಗಳಿಗೆ ಪ್ರತ್ಯಕ್ಷ ಅಥವ ಪ್ರರೋಕ್ಷವಾಗಿ ಸಂಬಂಧ ಸಾಧಿಸಿರುವ ಮನುಷ್ಯ ಕುಲ ಕೆಲವಾದರೂ ಪಾಠಗಳನ್ನು ಕಲಿಯಬೇಕಾದ ತುರ್ತನ್ನು ಕಾಲ – ದೇಶಗಳು ಒದಗಿಸಿತ್ತು. ಅವುಗಳಿಂದ ಪಾಠ ಕಲಿತಂತೆ ನಟನೆ ಮಾಡಿ, ಕಾಲ ಸರಿದಂತೆ ಮೂಲಸ್ಥಿತಿಗೆ ಮನುಷ್ಯ ಬಂದಿರುವುದು ಹೊಸ ವಿಷಯವೇನಲ್ಲ.

ಹಣದ ಅಮಾನ್ಯೀಕರಣ, ದಿನೇ ದಿನೇ ದೇಶ, ರಾಜ್ಯಗಳ ಒಳಹೊರಗೆ ಖಾಯಿಲೆಯಂತೆ ಉಲ್ಭಣಗೊಂಡಿರುವ ಧರ್ಮಾಧಾರಿತ ಸಮಸ್ಯೆ, ನೆಲದಲ್ಲಿನ ಸಂವೇದನಾಶೀಲತೆನ್ನೇ ಕಿತ್ತು ಬರಡಾಗಿಸುತ್ತಿದೆ, ‘ಕರೋನ’ ವೈರಾಣು ಸೃಷ್ಟಿಮಾಡಿದ ಸಮಸ್ಯೆ – ಪರಿಣಾಮ ಅಗಾಧವಾದದ್ದು. ಆತ್ಮೀಯರು, ಪ್ರೀತಿಪಾತ್ರರು ಎನಿಸಿಕೊಂಡವರಿಂದ ಶತ್ರುಗಳು ಎಂದುಕೊಂಡವರವರೆಗೆ ಹೆಣಗಳ ರಾಶಿಯನ್ನು ಮನುಷ್ಯ ಹಿಂದೆಂದೂ ಕಂಡಿರಲಿಲ್ಲ, ಕೆಲವೇ ಸಮಯದಲ್ಲಿ ಕಂಡಾಯಿತು. ಈ ದೃಶ್ಯಗಳು ದೊಡ್ಡದೊಂದು ಪಾಠವನ್ನು ಕಲಿಸಿದೆ ಎಂದು ಮಾನವೀಯತೆಯ ಪರಾಕಾಷ್ಠೆಯನ್ನೇ ಏರಿದ್ದ ಮನುಷ್ಯ, ಮೂಲದಲ್ಲಿ ಬದಲಾಗಲೇ ಇಲ್ಲ. ಕರೋನಾ ನಂತರ ಉಳಿದಿರುವ ನಾವೆಲ್ಲರೂ ಇಂದಿಗೆ ನಾಲಕ್ಕೋ-ಐದೋ ವರ್ಷಗಳ ಹಾಲುಗಲ್ಲದ ಹಸುಳೆಗಳು ಎನ್ನುವುದನ್ನು ಮರೆಯಬಾರದು ! ಅಕ್ಕಪಕ್ಕದ ದೇಶಗಳಾದ ಪಾಕಿಸ್ತಾನ-ಬಾಂಗ್ಲಾಗಳಲ್ಲಿನ ಸಮಸ್ಯೆ, ದೇಶದ ಒಳಗಡೆಯ ರೈತರ ಸಮಸ್ಯೆ ಯಾವುವೂ ಏನೂ ಕಲಿಸಲಿಲ್ಲವೆನ್ನುವುದು ದಿನೇ ದಿನೇ ಮನುಷ್ಯನ ಭಾಷೆ, ಧಾಟಿ, ಧೋರಣೆ ಮತ್ತು ಸಂ-ರಚನೆಗಳ ಕಡೆಯಿಂದ ಸಾಕ್ಷಿಯೇ ದೊರೆಯುತ್ತಿಲ್ಲ. ಇತ್ತೀಚೆಗೆ ಆರಂಭವಾಗಿ ವಿಶ್ವವನ್ನೆಲ್ಲ ತನ್ನೆಡೆಗೆ ಸೆಳೆದುಕೊಂಡು ಹೊಸ ಹೊಸ ಪ್ರಯೋಗಗಳಿಗೆ ಕಾರಣವಾಗುತ್ತಿರುವ AI ಅನ್ನು Artificial Intelligence is no match for natural Stupidity ಎಂಬ ಬಲವಾದ ಕಾರಣಕ್ಕಾಗಿ ನಂಬಬೇಕಿದೆಯೆ ? ಇವೆಲ್ಲವನ್ನು ಗಂಭೀರವಾಗಿ ಆಲೋಚಿಸದ, ಬದಲಾಗದ ಹೊರತು, ಸಾಹಿತ್ಯ ಮಾನವೀಯತೆ, ವಿಶ್ವಭ್ರಾತೃತ್ವ, ಸಮಾನತೆಯನ್ನು  ಸಾರುತ್ತದೆನ್ನುವ ಹಳೆಯ ಹಾಡಿನ್ನು ಸಿಕ್ಕ ಸಿಕ್ಕಲ್ಲೆಲ್ಲ ಗುನುಗುವ, ಮರುಳು ಮಾಡುವ ಹಾಡಿನತಟ್ಟೆಯೊಂದರ ತುಣುಕನ್ನು ಮಾತಲ್ಲಿ ಹೊತ್ತು ತಿರುಗುತ್ತಿದ್ದೇವೆ – ಎನಿಸುವುದಿಲ್ಲವೆ ? 

ಮನುಷ್ಯ – ಯಾವುದರಿಂದಲೂ ಬದಲಾಗದ, ಬದಲಾದಂತೆ ನಟಿಸುವಲ್ಲಿ ಚಾಣಾಕ್ಷ್ಯತೆ ವಹಿಸಿ ಕಂಡುಕೊಂಡ “ಅಚಲಮಾರ್ಗಿ” ಎನಿಸುವುದಿಲ್ಲವೆ ? ಇಂತಹ ಸ್ಥಿತಿಯನ್ನು ಮುಟ್ಟುವ ಮನುಷ್ಯರ ಆಳಮನಸ್ಸಿನ ಪ್ರತಿಫಲನವಾದ ಕಲೆಯಲ್ಲಿ ಯಾವ ಬದಲಾವಣೆನ್ನು, ವಿಕಾಸವನ್ನು ನಿರೀಕ್ಷಿಸಬೇಕಿದೆ ? ವಿಕಾಸ, ಬದಲಾವಣೆಗಳು ಆಗಿವೆ ಎನ್ನುವುದಾದರೆ, ಹಿಂದಿನ ಮತ್ತು ಬದಲಾಗಿರುವ ಇಂದಿನ ‘ಸ್ಥಿತಿ’ ಯ ನಡುವೆ ಇರುವ ವ್ಯತ್ಯಾಸ ಅಂತರಗಳೆಷ್ಟು ? ಬದಲಾವಣೆ ವಿಕಾಸಗಳು ಆಗಿವೆ ಎನ್ನುವುದಾಗಿದ್ದರೆ ಭಾಷೆ, ರೂಪ,  ವಸ್ತು, ನಿರ್ವಹಣೆ, ತಂತ್ರಗಳ ಕಡೆಯಿಂದ ಹಿಂದಿನದರಿಂದ ಬಿಡಿಸಿಕೊಂಡು ಕಲಾಕೃತಿಯೊಂದು ಭಿನ್ನವಾಗಬೇಕಿತ್ತು ! ಸಾವನ್ನು ಕಂಡವರ ಮನಃಸ್ಥಿತಿಯೂ ಬದಲಾಗಿಲ್ಲವೆಂದಾದರೆ, ಸಾಹಿತ್ಯದಂತಹ ಒಂದು ಪ್ರಕಾರ ಮಾಡಬಹುದಾದದ್ದಾದರೂ ಏನನ್ನು ? ಕೇವಲ ಕಾಲ ಹರಣಕ್ಕೋ, ಭಜನಾ ಮಂಡಳಿ ನಿರ್ಮಾಣ ಮಾಡಿಕೊಂಡು ನಿಲ್ಲುವುದಕ್ಕೆ ಮಾತ್ರ ಸಾಹಿತ್ಯ ಮಾನದಂಡವಾಗಿದೆಯೆ ? ‘ಬದಲಾಗಿದೆ’ ಎಂದು ಬಲವಾಗಿ ಹೇಳುವುದಾದರೆ, ಮೇಲಿನ‌ ಘಟನೆಗಳೋತ್ತರ ಕಾಲ-ದೇಶಗಳಲ್ಲಿ ಕಟ್ಟಿಕೊಂಡಿರುವ “ಅಭಿವ್ಯಕ್ತಿ‌ ಕಲಾ‌ ಸಂಹಿತೆ” ಯ ಮಾನದಂಡಗಳು ಯಾವುವು ? ಇಂತಹ ಒಂದನ್ನು ಕಟ್ಟಿಕೊಳ್ಳಬೇಕಾದ ‍ತುರ್ತು ಇಲ್ಲವೆಂದರೆ ಅಂತಹವರ ಸ್ಥಿತಿ ಏನಿದೆ ? ಅಂತಹವರಿಂದ ಅಭಿವ್ಯಕ್ತಿಗೊಳ್ಳುವ ಕಲಾ ಸಂಹಿತೆಯಾದರೂ ಏನಿದೆ ? ಎಂಬುದನ್ನು‌ ಗಂಭೀರವಾಗಿ ಸಹೃದಯ ಎನಿಸಿಕೊಳ್ಳಲು ತುದಿಗಾಲಲ್ಲಿ ನಿಂತವರು ಮೊದಲು ಯೋಚಿಸಬೇಕಿದೆ, ಎನಿಸುವುದಿಲ್ಲವೆ ? ಇಂತಹವುಗಳನ್ನು ನಮ್ಮ ಕಾಲ-ದೇಶಗಳಲ್ಲಿ ಮೀರಿಕೊಳ್ಳುವ, ಕಡೆಯಪಕ್ಷ ವ್ಯಕ್ತಿಗತವಾಗಿಯಾದರೂ ಮೀರುವಲ್ಲಿ –  ಆದಿಮಹಾಕವಿ ಪಂಪ ಹೇಳುವ “ಮೆಲ್ಪು ಬಲ್ಪನರಿಗುಂ” ಮತ್ತು ಆಚಾರ್ಯ ರಮಣ ಮಹರ್ಷಿಗಳು ಜಗತ್ತಿಗೆ ಕೊಟ್ಟ ಕಟ್ಟಕಡೆಯ ಸಂದೇಶವಾದ “ಚುಮ್ಮಾ ಇರು” ಎನ್ನುವುದರಿಂದ ಕಟ್ಟಿಕೊಳ್ಳಬಹುದಾದ ಸಾಧ್ಯತೆ ಇದೆಯೆ ?  ಈ ಆಶಯಗಳನ್ನು ಅಂಚಿಗೆ ತಳ್ಳಿದ ಸಾಹಿತ್ಯವೋ, ಕಲೆಯೋ ಕೇಂದ್ರದಲ್ಲಿ ನಿಲ್ಲಿಸಿಕೊಂಡಿರುವುದಾದರೂ ಏನನ್ನು ? ಇದರಿಂದ ಆಗುತ್ತಿರುವ, ಆಗು-ಮಾಡುತ್ತಿರುವ, ಆಗು-ಮಾಡಬೇಕೆಂದು ತುದಿಗಾಲಲ್ಲಿ ನಿಂತವರ ಮನಃಸ್ಥಿತಿಯಾದರೂ ಏನು ? ಎನ್ನುವುದನ್ನು ಗಂಭೀರವಾಗಿ ನಿರ್ವಚನೆ ಮಾಡಿಕೊಳ್ಳದ ಸದ್ಯದ ಸಾಹಿತ್ಯ ಯಾವ ಕಾಲಕ್ಕೂ ತನ್ನ “ಅಭಿವ್ಯಕ್ತಿ ಕಲಾ‌ ಸಂಹಿತೆ” ಯನ್ನು ಪುನರ್ನವೀಕರಣ ಮಾಡಿಕೊಳ್ಳಲಾರದು. ಈ ಎಲ್ಲ ಘಟನೆಗಳೂ ವ್ಯಕ್ತಿಗತವಾಗಿ, ಸಾಮುದಾಯಿಕವಾಗಿ, ಸಾಮಾಜಿಕವಾಗಿ ಬದುಕುವ ಮನುಷ್ಯನನ್ನು, ಎಡೆಬಿಡದೆ ಕಾಡದೆ ಇರುವುದರಿಂದ ಬದುಕು, ಅದರ ಅಭಿವ್ಯಕ್ತಿಯಾದ ಕಲೆಗಳ “ಸಂಹಿತೆ” ಬದಲಾಗಿಲ್ಲವೆನೋ !

*

 ವೈಯುಕ್ತಿಕತೆಯಲ್ಲಿ ನಿಂತಿದ್ದೂ, ಭಾಷಿಕ, ಕಲಾತ್ಮಕ, ಕಾವ್ಯಾತ್ಮಕ ಅಂಶಗಳ ಮೂಲಕ ‘ಪ್ರಬಲ’ ಎನಿಸಿದ ಕವಿತೆಗಳನ್ನು ಮಾತ್ರ ತೆಗೆದುಕೊಂಡಿದ್ದೇನೆ. ನಮ್ಮ ವೇಗದ ಓಟದ ಬದುಕಿನಲ್ಲಿ ಉಚಿತವೋ ಅನುಚಿತವೋ ಅಥವ ಒತ್ತಡಗಳ ಕಾರಣಕ್ಕಾಗಿಯೋ ಮರೆತ ಎಷ್ಟೋ ವಿಷಯಗಳನ್ನು ಕೆಲವಾದರೂ ಕವಿತೆಗಳು ‘ಸ್ಮೃತಿ’ಗೆ ತಂದು ನಿಲ್ಲಿಸುತ್ತದೆ, ಪ್ರಬಲ ಕವಿಯಾದವನು ಕವಿತೆಗಳ ಮೂಲಕ ಮುಂದೆ ನಿಲ್ಲಿಸುತ್ತಾನೆ. ನಮ್ಮದೇ “ಭವದ ಬಳ್ಳಿಯ ಬೇರ” ನ್ನು ನೆನಪಿಸುವ ಕೆಲಸವನ್ನು ಕವಿತೆಗಳ ಮೂಲಕ ಮಾಡುತ್ತಾನೆ ಎಂದು ನಂಬಿದ್ದೇನೆ. ‘ಭವದ ಬಳ್ಳಿಯ ಬೇರು’ ಸರಣಿಗೆ ಒಂದು ಮಿತಿಯನ್ನು ಹಾಕಿಕೊಂಡಿದ್ದೇನೆ. ಹೊಸಗನ್ನಡ ಕಾವ್ಯ ಪರಂಪರೆಯಿಂದ, ಸದ್ಯದಲ್ಲಿ ಬರೆಯುತ್ತಿರುವ ಕೆಲವು ಕವಿಗಳ ಕವಿತೆಗಳನ್ನು ಮಾತ್ರ ತೆಗೆದುಕೊಂಡಿದ್ದೇನೆ. 


One thought on “

  1. ತುಂಬ ಅರ್ಥಪೂರ್ಣ ವಿಶ್ಲೇಷಣೆ. ಹೊಸಗಣ್ಣಿನಿಂದ ಕಾವ್ಯ ನೋಡುತ್ತಿರುವ ಪರಿ.

    ಇನ್ನೂ ಈ ಕುತೂಹಲವಿದೆ ಮುಂದಿನ ಲೇಖನಗಳಿಗೆ.

Leave a Reply

Back To Top