ಎ.ಎನ್.ರಮೇಶ್.ಗುಬ್ಬಿ ಅವರ ಕವಿತೆ-ಚಿದಂಬರ ರಹಸ್ಯ.!

ಹಣತೆ ಪುಟ್ಟದಾದರೇನು..?
ಹಣತೆಯೊಳಗಿನ ಬೆಳಕಿನ ಕಾಂತಿ
ಬೆಳಗುವ ವ್ಯಾಪ್ತಿ ಬಲು ದೊಡ್ಡದು

ಛಾವಿ ಚಿಕ್ಕದಾದರೇನು.?
ದೊಡ್ಡ ಬೀಗವನೂ ತೆರೆವ ಕೌಶಲ್ಯ
ತಂತ್ರ ನೈಪುಣ್ಯಗಳ ಯುಕ್ತಿ ಅನೂಹ್ಯ.!

ಬೀಜ ಸಣ್ಣದಾದರೇನು..?
ಬೀಜದೊಳಗಿನ ಜೀವ ಕಾರುಣ್ಯ
ವೃಕ್ಷವಾಗುವ ಶಕ್ತಿ ಚೈತನ್ಯ ಅಪಾರ.!

ಕವಿತೆ ಚಿಕ್ಕದಾದರೇನು..?
ಕವಿತೆಯೊಳಗಿನ ಅರ್ಥಗಳ ವಿಸ್ತಾರ
ಭಾವಾನುಭಾವಗಳ ಸಾರ ಅಗಾಧ.!

ಆಕೃತಿ ಕಿರಿದಾದರೇನು.?
ಒಳಗಣ ಪ್ರಕೃತಿ ಪ್ರತಿಭೆ ಸಾಮರ್ಥ್ಯ
ಸಾಧನೆಯ ಸಾಮರ್ಥ್ಯ ಅಪೂರ್ವ.!

ಗಾತ್ರ ಸಣ್ಣದಾದರೇನು.?
ತುಂಬಿಕೊಂಡ ಪ್ರಬಲ ಪ್ರಖರ ಸತ್ವ
ಅಂತಃಶಕ್ತಿ ಯುಕ್ತಿಗಳಿಗಷ್ಟೇ ಮಹತ್ವ.!

ಇಳೆಯ ಮರ್ಮ ಬಲ್ಲಿರೇನು.?
ದೃಷ್ಟಿಯ ಪರಿಮಿತಿಯಷ್ಟೆ ಸೀಮಿತ
ಸೃಷ್ಟಿಯ ಪರಿಧಿಯದು ಅಪರಿಮಿತ.!

ಜಗದ ಸೃಷ್ಟಿ ವೈಶಿಷ್ಟ್ಯವಿದು
ಬಾಹ್ಯ ನೋಟ ಆಟ ಮಾಟಕಿಂತಲೂ
ಆಂತರ್ಯದ ಚೈತನ್ಯಕೂಟ ಕಲ್ಪನಾತೀತ.!

ನಿಯಾಮಕನ ವಿಸ್ಮಯವಿದು
ಜನರ ನೇತ್ರಕ್ಕೂ ಅತೀತ ಸೃಷ್ಟಿರಹಸ್ಯ
ಸ್ಥೂಲ ಸೂಕ್ಷ್ಮ ಅಣುರೇಣುಗಳ ಭಾಷ್ಯ.!

Leave a Reply

Back To Top