ಕಾವ್ಯ ಸಂಗಾತಿ
ಬಸವರಾಜ ಬೀಳಗಿ
ಮಹಾತ್ಮ
ಆ ಕರಾಳ ರಾತ್ರಿಯಲ್ಲಿ, ಶಾಂತಿಯ ಹಾಡು ಹಾಡಿದವ,
ಪ್ರೀತಿಯ ಧ್ವನಿಯಲ್ಲಿ, ಹೋರಾಟದ ದಾರಿ ತುಳಿದವ.
ಪ್ರೀತಿಯ ಬತ್ತಿ ಹೊಸೆದು, ಸಮಾನತೆಯ ಹಣತೆ ಹಚ್ಚಿದವ,
ಭಯದ ಕಣ್ಣಲ್ಲಿ ಕಣ್ಣಿಟ್ಟು, ಧೈರ್ಯದ ಬೀಜ ಬಿತ್ತಿದವ.
ದೃಢವಾದ ಹೆಜ್ಜೆಯೂರಿ, ಬಿರುಗಾಳಿಯ ಎದೆ ಬಿರಿದವ,
ಬಣ್ಣ ಬಣ್ಣದ ನೂಲು ನೇಯ್ದು, ಕನಸುಗಳ ಕೌದಿ ಹೂಲೆದವ.
ಚಂದ್ರನಿರದ ರಾತ್ರಿಯಲ್ಲಿ, ನಕ್ಷತ್ರದಂತೆ ಬೆಳಗಿದವ,
ಸತ್ಯದ ದೀಪ ಹಚ್ಚಿ, ದಾಸ್ಯದ ಅಂಧಕಾರ ಕಳೆದವ.
ಮೋಡವಿರದ ಆಕಾಶದಿಂದ, ಮಳೆಯಾಗಿ ಸುರಿದವ,
ಗುಲಾಮಗಿರಿಯ ಕಸ ಕಿತ್ತು, ಸ್ವಾತಂತ್ರ್ಯದ ಬೆಳೆ ಬೆಳೆದವ.
ಬಸವರಾಜ ಬೀಳಗಿ