‘ಚಹ ಮತ್ತು ಅವಳು’ ಕವಿತೆ -ಆದಪ್ಪ ಹೆಂಬಾ

ನನ್ನ ಹೃದಯ ಮಿಡಿಯುವುದು ಎರಡಕ್ಕೇ
ಚಹದ ಸ್ವಾದಕ್ಕೆ ಒಂದು
ಅವಳ ಮುದ ನೀಡುವ ನಗುವಿಗೆ ಎಂದೆಂದೂ….
ನಾಲಿಗೆ ಚಹವ ಬಿಡಲೊಲ್ಲದು
ಹೃದಯ ಅವಳ  ಧ್ಯಾನಿಸುವುದ||

ನೂರು ಬಾರಿ
ಮಾಡಿರುವೆ ಆಣೆ ಪ್ರಮಾಣ
ನನ್ನಿಷ್ಟದ ದೇವರ ಮುಂದೆ
ಚಹ ಕುಡಿಯುವುದಿಲ್ಲ ಅವಳ ನೆನೆಯುವುದಿಲ್ಲೆಂದು
ಮೂರೇ ದಿನ
ಮತ್ತೆ ಮಂಕನಾಗುವೆ ಬಾಯ್ತುಂಬ ಚಹದ ಸ್ವಾದ
ಹೃದಯದ ತುಂಬ
ಅವಳ ನಗುವಿನದೇ ನಿನಾದ||

ನಿಜ….
ಚಹ ನನ್ನೆಡೆಗೆ ಬರುವುದಿಲ್ಲ
ಆದರದರ ಘಮ?
ಅವಳೂ….
ನನ್ನೆಡೆಗೆ ಬರುವುದಿಲ್ಲ
ಆದರವಳಧರದ ನಗು?
ಬಿಡಿ ಅವು ನಿಲ್ಲುವವಲ್ಲ
ನಾ ಬಿಡುವವನಲ್ಲ||

ಇವತ್ತೇನೋ
ಹ್ಯಾಪೀ ಹೃದಯದ ದಿನವಂತೆ
ಚಹವೇ ಇಂದು ನಿನಗೇನು ಕೆಲಸ? ಸರಿಯಾಚೆ
ಅವಳ
ಹೃದಯಕ್ಕೆ ತುಂಬ ಹೇಳುವುದಿದೆ
ನಗುವಿಗೆ ಬೇಡುವುದಿದೆ
ಕಣ್ಹೊಳಪಿಗೆ ಕೇಳುವುದಿದೆ
ಸದಾ ನೀವು ನನ್ನೊಲವಿಗೆ
ಸ್ಪೂರ್ತಿಯ ಸೆಲೆಯಾಗಿರಿ ಎಂದು.
ನನ್ನ ಹೃದಯದ ಮಿಡಿತವಾಗಿರಿ ಎಂದು.


2 thoughts on “‘ಚಹ ಮತ್ತು ಅವಳು’ ಕವಿತೆ -ಆದಪ್ಪ ಹೆಂಬಾ

Leave a Reply

Back To Top