ವರದೇಂದ್ರ ಕೆ ಮಸ್ಕಿ ಅವರ ಕವಿತೆ-ಠರಾವು

ಭಾವನೆಗಳೇ ಇಲ್ಲದ ಬಂದೂಕು,
ಗುಂಡು, ಮದ್ದುಗಳ ಮೃಗೀಯ ಹೃದಯಗಳಿಗೆ
ಕರುಣೆಯ ಕಂಪನ್ನು ಕಲಿಸಿ
ಸೈನ್ಯದಲ್ಲೂ ಮೃದುತ್ವ ಬಯಸಿದ ನಮ್ಮ ಗಾಂಧಿ
ಅಹಿಂಸಾ ತತ್ವ, ಸತ್ಯದ ಸತ್ವ ಸಾರಿ
ಮಾತ್ಸರ್ಯವನ್ನು ಮಧುವಾಗಿಸಿದ ಭೃಂಗ
ಸರಳತನದ ಸಂಪನ್ಮೂಲ ಈ ಭಾರತದ ನಂದಿ

ಕಪ್ಪು ಬಿಳುಪಿನಲಿ ಅಸಾಮ್ಯತೆ ಕಂಡು ಕೆರಳಿ
ಮನಸಿನ ರಂಗಿಗೆ ಪ್ರಬಲತೆಯ ತೋರಿ
ಅನ್ಯಾಯ, ಅಧರ್ಮ, ಅನರ್ಥ ನಡೆಯ ಹುಂಬ ಹೋರಿಗೆ
ಸತ್ಯ, ನಿಷ್ಠೆ, ಧರ್ಮಾಮೃತ ಅನರ್ಘ್ಯ ರತ್ನಗಳನ್ನು
ಬೋಧಿಸಿದ ಮಹಾನ್ ಛಲವಾದಿ, ಲೌಕಿಕ ಪ್ರವಾದಿ

ಆಕ್ರೋಶದ ಗುಡುಗು, ಸಿಡಿಲು, ರಕ್ತದೋಕುಳಿಗೆ ನಡುಗದ ಆ ಬಿಳಿ ಮಂದಿ
ಶಾಂತ ನಂದಿಯ ಅಸಹಕಾರ ಚಳುವಳಿಗೆ ನಲುಗಿದರು
ರಕ್ತದ ಮೆಹಂದಿಗೆ ಕರವೊಡ್ಡದೆ ತೊಲಗಿದರವರು
ಕಪ್ಪು ಮನಸಿನ ಬಿಳಿಯರು, ದುಷ್ಟ ಮನಸಿನ ದುರುಳರು

ಬಾಪುವಿನ ಸತ್ಯಾಗ್ರಹ, ಸಂಗ್ರಾಮ, ಚಳುವಳಿ
ಭಾರತಾಂಬೆಯ ಮಣ್ಣಿಗೆ ಸ್ವಾತಂತ್ರ್ಯದ ಬಳುವಳಿ
ಆದರೆ, ಆದರೆ, ಆದರೆ
ಸಾರ್ಥಕವಾಗಿಲ್ಲ ಇನ್ನೂ ಆ ಗಾಂಧಿ, ನಂದಿ, ಪ್ರವಾದಿಯ ಕಳಕಳಿ
ಅರಿಯ ಬೇಕು, ಅನುಸರಿಸಬೇಕು,
ಗಾಂಧಿ ಬರೆದ ಸಾರ್ವತ್ರಿಕ ಪ್ರೇಮದ ನಡಾವಳಿ

Leave a Reply

Back To Top