ರಾಧಿಕಾ ಕಾಮತ್ ಅವರಕಥೆ-‘ಕೋಪದ ಕೈಗೆ ಬುದ್ಧಿ ಕೊಟ್ಟಾಗ’

 ಅವಳೋರ್ವ ಪ್ರಕೃತಿಪ್ರೇಮಿ,ಹುಟ್ಟಿದ್ದು ಹಳ್ಳಿಯಲ್ಲಿ.. ಹಾಗಾಗಿ ಅಲ್ಲಿನ ಗಿಡ,ಮರ ನದಿ,ಬೆಟ್ಟ, ದನಕರು, ಅಡುಗೆಮನೆ, ಸೌದೆಒಲೆ, ಒಲೆಯ ಮೇಲೆ ಕುದಿಯುವ ಗಂಜಿ ಎಲ್ಲವೂ ಅವಳ ಬರಹದ ವಸ್ತುಗಳಾಗಿ ಬಿಟ್ಟಿದ್ದವು

ಹೈಸ್ಕೂಲ್ ಮೆಟ್ಟಿಲೇರಿದಾಗ ಗುರುಗಳು ಇವಳಲ್ಲಿನ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿದ ಕಾರಣ ಸಾಹಿತ್ಯ ಸಂಘ ಕಲಾ ಸಂಘಗಳಲ್ಲಿ ತನ್ನ ಬರವಣಿಗೆಯ ಮೂಲಕ ಜನರ ಕಣ್ಣಿಗೆ ಬಿದ್ದಾಗ ಪತ್ರಿಕೆಯ ಸಂಪಾದಕರು ತಮ್ಮ ಪತ್ರಿಕೆಗಳಿಗೆ ಅಂಕಣ ಬರಹ ಬರೆಯುವಂತೆ ಆಹ್ವಾನಿಸ ತೊಡಗಿದರು.
ಒಟ್ಟಾರೆ ರಕ್ತದಲ್ಲೇ ಕವಿ ಹೃದಯ ಹೊತ್ತ ಹೆಣ್ಣು  ಮದುವೆಯಾಗಿ ಹಳ್ಳಿಯನ್ನೇ ಸೇರಿದಾಗ ಅವಳಿಗೆ ಒಂದಿನಿತೂ ಬೇಸರವಾಗಲಿಲ್ಲ
ಹುಡುಗ ಓದಿದವನಾದರೂ ಹಿರಿಯರಿಂದ ಬಂದ ಭೂಮಿ ತೋಟ ನೋಡಿಕೊಳ್ಳುತ್ತಿದ್ದ  ಇವಳಿಗೆ ಬರಹಕ್ಕೆ ಇನ್ನಷ್ಟು ಉತ್ತಮ ವಾತಾವರಣ ದೊರಕಿದ್ದು ಅವಳ ಅದೃಷ್ಟವೇ ಸರಿ
ಒಂದೇ ಒಂದು ಬೇಸರ ಎಂದರೆ ಅವಳ ಪತಿಗೆ ಸಾಹಿತ್ಯದತ್ತ ಒಂದಿಷ್ಟೂ ಒಲವು ಇಲ್ಲದಿರುವುದು ಹಾಗಂತ ಅವಳ ಬರವಣಿಗೆಗೆ ಅವನ ಆಕ್ಷೇಪವಿರಲಿಲ್ಲ… ಆತ ತಾನಾಯಿತು ತನ್ನ ಕೃಷಿ ಕಾಯಕವಾಯಿತು ಎಂಬಂತೆ ಇಡೀ ದಿನ ದುಡಿಯುವ ಮಣ್ಣಿನ ಮಗನಾಗಿ ಬಿಟ್ಟಿದ್ದ
ತನ್ನ ದಾಂಪತ್ಯ ಜೀವನಕ್ಕೆ ಯಾವುದೇ ಚ್ಯುತಿ ಬಾರದಂತೆ ಆಕೆ ಎಲ್ಲವನ್ನೂ ಸಮರ್ಥವಾಗಿ ನಿರ್ವಹಿಸುತ್ತಿದ್ದ ಕಾರಣ ಮನೆಯ ಜೊತೆ ಸಾಹಿತ್ಯ ಕ್ಷೇತ್ರದಲ್ಲಿ ಮಿಂಚತೊಡಗಿದಳು
ಅವಳ ಬರಹಗಳು ಎಷ್ಟು ಪರಿಣಾಮಕಾರಿ ಆಗಿರುತ್ತಿತ್ತು ಅಂದ್ರೆ ಬರಹಗಳು ತಮ್ಮ ಕಣ್ಣೆದುರೇ ನಡೆದಂತೆ ಭಾಸವಾಗುವಷ್ಟು

ಕಾಲಚಕ್ರ ಉರುಳುತ್ತಲೇ ಇತ್ತು….
ಅದೊಂದು ದಿನ ಯಾವುದೋ ಕಥಾ ಸ್ಪರ್ಧೆಯ ಜೊತೆಗೆ ಲೇಖನ ಸ್ಪರ್ಧೆಗೂ ಬರೆಯಬೇಕಿತ್ತು  ಕತೆಯನ್ನು ಹಿಂದಿನ ದಿನವೇ ಬರೆದು ಮುಗಿಸಿ ಪೋಸ್ಟ್ ಮಾಡಿದ್ದಳು
ಮಧ್ಯಾಹ್ನದ ಊಟದ ಬಳಿಕ ಲೇಖನ ಬರೆಯಲು ಕುಳಿತಳು (ಈಗಿನಂತೆ ಮೊಬೈಲ್ ನಲ್ಲಿ ಟೈಪಿಸುವ ಕಾಲವಾಗಿರಲಿಲ್ಲ)
ಮನಸಿನಲ್ಲಿ ಮೂಡಿದ ವಿಷಯಗಳಿಗೆ ಭಾವನೆಗಳಿಗೆ ಅಕ್ಷರರೂಪ ಕೊಡಿಸುವ ಕಾರ್ಯದಲ್ಲಿ ಎಷ್ಟು ತನ್ಮಯಳಾಗಿದ್ದಳೆಂದರೆ ಹೊರಗಿನ ಪ್ರಪಂಚವನ್ನೇ ಮರೆತು ಬಿಟ್ಟಿದ್ದಳು
ಲೇಖನವನ್ನು ಬರೆದು 2-3 ಸಲ ಓದಿ ಸರಿಯಾಗಿದೆ ಎಂದು ಸಮಾಧಾನ ಪಟ್ಟುಕೊಂಡು ಖುಷಿಯಿಂದ ಲಕೋಟೆಯೊಳಗೆ ಇರಿಸಿ ಕಳಿಸಬೇಕಾದ ವಿಳಾಸ ಬರೆದು ಸಂತೃಪ್ತಿಯಿಂದ ಏಳಬೇಕು ಅನ್ನುವಾಗಲೇ ದುಡುದುಡು ಎಂದು ಕೋಣೆಗೆ ಬಂದ ಪತಿಯ ಮುಖದಲ್ಲಿ ರೌದ್ರಾವತಾರ ನೋಡಿ ಬೆಚ್ಚಿದಳು ಏನಾಯ್ತು ಅಂತ ಕೇಳಲು ಬಾಯಿ ತೆರೆಯುವ ಮೊದಲೇ ಆತ.. ಅವಳು ಬರೆದು ಮೇಜಿನ ಮೇಲೆ ಇಟ್ಟಿದ್ದ ಆಕೆಯ ನೆಚ್ಚಿನ ಪೆನ್ನನ್ನು “ಲಟಕ್” ಎಂದು ಮುರಿದು ಹಾಕಿದ  ಆಗತಾನೇ ಬರೆದು ಮುಗಿಸಿದ್ದ ಲೇಖನದ ಲಕೋಟೆ ನೋಡಿದವನೇ ಎಳೆದು ಚೂರು ಚೂರು ಮಾಡಿ ಬಿಸಾಕಿ  ಹೊರಗೆ ಹೋಗಿಬಿಟ್ಟ
ಇವಳಿಗೆ ಎಲ್ಲವೂ ಅಯೋಮಯ ಏನು ಅನ್ನೋ ವಿಷಯ ತಿಳಿಯದೇ ಕೇಳಲು ಧೈರ್ಯ ಸಾಲದೇ ಅವನ ಹಿಂದೆಯೇ ಓಡಿ ಬಂದು ನೋಡುತ್ತಾಳೆ ಅಂಗಳದಲ್ಲಿ ಒಣಗಿಸಿದ ಕೊಬ್ಬರಿ ಎಲ್ಲಾ ಒದ್ದೆಯಾಗಿ ಬಿಟ್ಟಿದೆ ಪತಿ ಆಳುಗಳ ಸಹಾಯದಿಂದ ಒಟ್ಟು ಮಾಡುತ್ತಿರುವುದು ಕಂಡು ಬಂತು
ಲೇಖನ ಬರೆಯುವ ತಲ್ಲೀನತೆ ನಡುವೆ ಅದ್ಯಾವಾಗ ಮಳೆ ಬಂತೋ ಇವಳಿಗೆ ತಿಳಿಯಲೇ ಇಲ್ಲ..ಪತಿ ತೋಟದಿಂದ ಓಡಿ ಬಂದಿದ್ದ

ಅವಳಿಗೆ ತುಂಬಾ ಬೇಸರವಾಯಿತು ಜೊತೆಗೆ ತಾನು ಮಾಡಿದ್ದು ತಪ್ಪು ಎನ್ನುವ ಅಪರಾಧಿ ಪ್ರಜ್ಞೆ ಕಾಡತೊಡಗಿತು ಕಣ್ಣಲ್ಲಿ ನೀರು ತುಂಬಿಕೊಂಡು ನಿಧಾನವಾಗಿ ಮನೆಯೊಳಗೆ ತೆರಳಿದಳು
ಸಂಜೆ ಯಥಾ ಪ್ರಕಾರ ಮನೆಕೆಲಸ ಮುಗಿಸಿ ಮಲಗಿದಳು ಪತಿಯೂ ಮಾತನಾಡಿಸಲು ಹೋಗಲಿಲ್ಲ. ಪತಿಗೂ ತಪ್ಪು ಮಾಡಿದ ಅವಳಿಗೆ ಇಷ್ಟು ಕೊಬ್ಬು ಇರಬೇಕಾದರೆ ನಾನು ಗಂಡಸು ನನಗೆಷ್ಟು ಇರಬೇಡ ಎನ್ನೋ ಭಾವದಲ್ಲಿ ತಾನೂ ಮಾತನಾಡದೇ ಉಳಿದುಬಿಟ್ಟ ಆದರೆ ಈ ನಡುವೆ ಅವಳು ಕೈಯಲ್ಲಿ ಪೆನ್ನು ಹಿಡಿದಿದ್ದಾಗಲಿ ಬರೆದದ್ದಾಗಲಿ ಆತ ನೋಡಿರಲಿಲ್ಲ ಸೂಕ್ಷ್ಮವಾಗಿ ಗಮನಿಸಿದಾಗ ಅದು ನಿಜ ಎಂದು ಅವನಿಗೆ ತಿಳಿದಾಗ ತಾನು ಅಂದು ವರ್ತಿಸಿದ ರೀತಿಯ ಬಗ್ಗೆ ಬೇಸರವಾಯ್ತು

ಸಂಜೆಯೇ ಪೇಟೆಗೆ ತೆರಳಿ ಒಂದು ಬೆಲೆಬಾಳುವ ಪೆನ್ ತೆಗೆದುಕೊಂಡು ಬಂದು ಅವಳ ಕೈಗೆ ನೀಡಿದಾಗ ಅದ್ಯಾವುದೋ ಅಪರಿಚಿತ ವಸ್ತು ಎಂಬಂತೆ ನೋಡಿ ಹಾಗೇ ಹೋಗಿಬಿಟ್ಟಳು ಇವನು ಅವಳ ಮುಖದ ಭಾವನೆ ಅರ್ಥಮಾಡಿಕೊಳ್ಳಲು ವಿಫಲನಾದ ಮುಂದೆ ಅವಳ ನಡವಳಿಕೆಯಲ್ಲಿ ಬಹಳಷ್ಟು ಬದಲಾವಣೆ ಕಂಡು ಬಂದಾಗ ಅನಿವಾರ್ಯವಾಗಿ ಮನೋ ತಜ್ಞರ ಬಳಿ ಕರೆದೊಯ್ದ… ಪರೀಕ್ಷಿಸಿದ ವೈದ್ಯರು ಮನಸಿಗೆ ತೀವ್ರತರವಾದ ಆಘಾತ ಉಂಟಾಗಿ ಹಳೆಯ ನೆನಪುಗಳನ್ನು ಮರೆತು ಬಿಟ್ಟಿದ್ದಾರೆ ಅಂದಾಗ ಈತ ಬೆಚ್ಚಿ ಬಿದ್ದ
ತಾನು ಒಂದು ಕ್ಷಣದ ಕೋಪ ಕೈಗೆ ಬುದ್ಧಿ ಕೊಟ್ಟ ಪರಿಣಾಮ ಇಷ್ಟೆಲ್ಲಾ ಆಯ್ತಲ್ಲ ಅಂತ ನೊಂದುಕೊಂಡ
ಕೊಬ್ಬರಿ ಒದ್ದೆಯಾದ ಕೋಪಕ್ಕೆ ತನ್ನ ವರ್ತನೆಯನ್ನು ಹಳಿದು ಕೊಂಡ
ಕಾಲ ಮಿಂಚಿತ್ತು…
ಅಂದು ಒದ್ದೆಯಾಗಿತ್ತು ಒಣಗಿದ ಕೊಬ್ಬರಿ
ಇಂದು ಅರಳುವ ಹೂವು ಬಾಡಿತ್ತು ಕಮರಿ


Leave a Reply

Back To Top