ಕಾವ್ಯ ಸಂಗಾತಿ
ಡಾ. ಸದಾಶಿವ ದೊಡಮನಿ
ಕನಸಿನೊಳಗೊಂದು ಕಣಸು
ನಿನ್ನೆ ತಮ್ಮ ಮತ್ತೆ
ಕನಸಿನ ಮನೆಗೆ ಬಂದಿದ್ದನು
ಹೆಂಡತಿ, ಮಕ್ಕಳನ್ನು ಕರೆದು ತಂದಿದ್ದನು
ಅವ್ವ, ಕಣ್ಣ ತುಂಬಾ ನೀರು ತುಂಬಿಕೊಂಡು ವಯ್ದು ಕೊಟ್ಟಳು
ನಾನು, ಯಾಕೋ ಇಷ್ಟು ದಿನ ಎಲ್ಲಿ ಹೋಗಿದ್ದೆ?
ಏನೇನೋ ಪ್ರಶ್ನೆಗಳನ್ನು ಕೇಳುತ್ತಲೇ ಇದ್ದೆ
ಅವನು, ಮುಗಿಲಿಗೆ ಮುಖ ತೋರಿ
ಏನೇನೋ ಉತ್ತರಿಸುತ್ತಿದ್ದ
ಒಂದೂ ಅರ್ಥವಾಗುತ್ತಿರಲಿಲ್ಲ!
ಈ ನಡುವೆ ಅವ್ವ,
ನನ್ನ ಪ್ರಶ್ನೆಗಳ ನಡವನ್ನೇ ತುಂಡರಿಸಲು ಯತ್ನಿಸುತ್ತಿದ್ದಳು
ಇರಲಿ ಬಾ, ಒಳಗೆ
ವಾತ್ಸಲ್ಯ ಗುಡ್ಡವೇ ಕರಗಿ ತಮ್ಮನನ್ನು ಒಳಗೆ
ಆಹ್ವಾನಿಸುತ್ತಿದ್ದಳು
ತಮ್ಮನ ಕಿರಿ ಮಗನನ್ನು ಎತ್ತಿಕೊಂಡೆ
ನನ್ನ ನೋಡಿ ಒಂದೇ ಸಮನೆ ಆಳುತ್ತಿದ್ದನು
ಎಲ್ಲೋ ಬಿದ್ದು ಹಣೆ ಒಡೆದುಕೊಂಡಿದ್ದನು
ಹಿರಿಯ ಮಗನನ್ನು ತೊಡೆಯ ಮೇಲೆ ಕರೆದುಕೊಂಡೆ
ಮೇಣದಿಂದ ಮಾಡಿದಂತಿದ್ದ
ತಲೆ ನೇವರಿಸಿ ಕೇಳಿದೆ
ಶಾಲೆಗೆ ಹೋಗುತ್ತಿರುವೆಯಾ?
ಇಲ್ಲ!
ಯಾಕೆ?
ಸುಮ್ಮ! ನಕ್ಕ!
ಮತ್ತೆ ನಕ್ಕ!!
ನೀನು ಇಲ್ಲಿಯೇ ಇರು
ಶಾಲೆ ಕಲಿಸುತ್ತೇನೆ
ಹೂಂಗುಟ್ಟಿದ ….
ಎಚ್ಚರವಾಯಿತು!!
—————
ಡಾ. ಸದಾಶಿವ ದೊಡಮನಿ