ಕಾವ್ಯಸಂಗಾತಿ
ಪ್ರೇಮಾ ಟಿ.ಎಂ ಆರ್
-‘ಪ್ರೇಮವೆಂದರೆ ಬರೀ ಇಷ್ಟೇ’
ಸಣ್ಣಗೆ ಜಿನುಗುವ ಮಳೆ
ಕೈಯ್ಯಲಿ ಕೊಫಿ ಮಗ್ಗು
ಆ ಅಂಗಳದಂಚಿನ ಕಿಟಕಿ ಕರೆಯುತ್ತದೆ
ಬಾವಿಕಟ್ಟೆಯ ಮೇಲೆ ಮಲಗಿದ
ಪಾರಿಜಾತಗಳು
ಮತ್ತೆ ನೆನಪುಗಳ ಮೆರವಣಿಗೆ
ಛೇ ನೀನೇಕೆ ನೆನಪಿಗೆ ನುಗ್ಗುತ್ತೀಯಾ
ಮಾಡಲು ಬೇರೆ ಕೆಲಸಗಳಿವೆ ನನಗೆ
ಕ್ಷಣದಲ್ಲಿ ಕಾವ್ಯ ಗೀಚಿಬಿಡುವ
ನಿನ್ನ ನೋಟ
ಆ ಸರೋವರದಲ್ಲಿ ಅರಳಿಕೊಳ್ಳುವ ನಾನು
ಎಲ್ಲವೂ ನಿಜವೆ ಆಗಿದ್ದರು
ಸಾಕ್ಷಿಯೆಲ್ಲಿದೆ
ನಮ್ಮ ನಡುವೆ ಬಿದ್ದುಕೊಂಡ
ಮೌನ ಸಮ್ಮತಿ ಸಾಕಲ್ಲವೇ
ಎಂದುಕೊಂಡರೆ ಇದ್ದಕ್ಕಿದ್ದಂತೆ
ಹೆಸರ ಕೆದಕಬೇಕೆ ನೀನು
ಹೆಸರಿಲ್ಲದಾತೀತವಂತೆ ಪ್ರೀತಿ
ಕಾಲ ಬೇಲಿ ಹೆಸರು ಜಾತಿಗಳ
ಹಂಗಿಲ್ಲದ ಎದೆಯ ಹರಿದಾಟವಂತೆ
ಬರೀ ಒಂದುಸಿರ ಸ್ಪರ್ಶವೇ ಸಾಕುಬಿಡು
ಅಂದುಕೊಂಡೆ
ಒಡ್ಡುಕಟ್ಟುವ ಹುನ್ನಾರದ ಸುಳಿವಿಗೆ
ಜಾರಿಕೊಳ್ಳದೇ ಇನ್ನೇನು ಮಾಡಲಿ
ಹಾಗೆಂದರೂ
ಈ ನೆನಪು ಬಿಟ್ಟರಲ್ಲವೇ..
ಮತ್ತೆ ಹೆಸರ ಹೇಳಿ ಹೋಗಬೇಕನಿಸಿತು
ಅಲ್ಲುರುಳಿದ ಅದೇ ಪಾರಿಜಾತದ ಘಮಘಮಕೆ
ಹೆಸರು ಬೇಕೆ
ಬರೀ ಪರಿಮಳವೆಂದರೆ ಸಾಕೇ?
ಅದೇ ನಾನು
ಹೆಸರಲ್ಲಿ ಮುಗಿಯದ
ಪರಿಮಳ
ಮಳ್ಳು ನೀನು
ಸುಮ್ಮನೆ ಪಾರಿಜಾತದ ಘಮವ
ಒಮ್ಮೆ ಎದೆಗೆಳೆದುಕೋ ಹಾಗೇ ಹೊರಟು ಬಿಡು
ಬೊಗಸೆಯೊಡ್ಡಬೇಡ
ತುಂಬಿಕೊಳ್ಳುವದಲ್ಲ ಪ್ರೇಮ
ಪ್ರೇಮಾ ಟಿ.ಎಂ ಆರ್
ಚೆಂದದ ಕವಿತೆ