ಜಯಂತಿಸುನಿಲ್ ಅವರ ಗಜಲ್

 ನಿನ್ನ ಪ್ರೇಮದ ಒಂದು ಹನಿಗಾಗಿ ಬಾಯ್ತೆರೆದ ಭುವಿಯಾಗಿರುವೆ…
ಮತ್ತೆ ಸಿಗುವೆ ಎಂದೇಳಿ ಹೋದ ನಿನಗಾಗಿ ಜಾತಕದ ಪಕ್ಷಿಯಾಗಿರುವೆ..!!

ಒಡಲೊಡಲ ಕಡಲು ಅಬ್ಬರಿಸುತ್ತದೆ ನಿನ್ನ ನೆನೆದು…
ಊಹಿಸಬಬಲ್ಲೆಯಾ? ಕಣ್ಣ ಕ್ಯಾನಿವಾಸಿಗಿಳಿದ ನೀ ನನ್ನಿಷ್ಟದ ಬಿಂಬವಾಗಿರುವೆ..!!

ಹೃದಯವ ವಿಹ್ವಲಗೊಳಿಸಬೇಡ ಬಾ.. ಇಂದಾದರೂ ಕೂತು ಮಾತನಾಡೋಣ…
ಬದುಕೆಂಬ ಏಕಾಂಗಿ ಕವಿತೆಯಲಿ ಬರೆಯದೆ ಉಳಿದ ಪದವಾಗಿರುವೆ!!

ಈ ಬದುಕು ಬಿಸಿಲು ನೆರಳಿನ ಬೀದಿಯಲಿ ವಿಹರಿಸಿ ವಿರಾಗಿಯಾದಂತಿದೆ..
ನಿನ್ನ ಅನುಕ್ತ ವ್ಯಥೆಯಲ್ಲೇ ಮುಳುಗಿ ನೊಂದು ಬೆಂದ ಹೆಣ್ಣಾಗಿರುವೆ!!

ನೀನಿಲ್ಲದೆ ಮೊಗದಲಿ ಚೆಲುವಿಲ್ಲಾ, ಮುಡಿದ ಮಲ್ಲಿಗೆಯಲಿ ಘಮವಿಲ್ಲಾ
ನಿಜ ಪ್ರೇಮದಸಿವು ನಿನಗಿದ್ದರೆ ರುಜು ಹಾಕು ಬಾ.. ತೆರೆದ ಪುಸ್ತಕವಾಗಿರುವೆ..!!

ನಿಶ್ಚಲ  ನೀಲಾಕಾಶ ಬಚ್ಚಿಟ್ಟುಕೊಳ್ಳುವುದಿಲ್ಲಾ ಏನನ್ನೂ, ಕೊನೆಗೆ ನೋವನ್ನೂ
ನಾ ಹೆಣ್ಣು, ಹೆಣ್ಣೇ ಹಾಗೆ ಸಹಿಸುತ ಎಲ್ಲವನ್ನೂ ಕರ್ಪೂರದ ಗೊಂಬೆಯಾಗಿರುವೆ..!!

ಭಾಷೆಯಲಿ ವ್ಯಾಕರಣವಿದ್ದಂತೆ ನನ್ನಲಿ ನೀನು, ನಿನ್ನೊಳಗೆ ನಾನು
ನೀ ಸಿಗದೆ ಜಯವಿಲ್ಲಾ ಬಾಳಲಿ ಒಲಿದು ಬಾ ಬಳಿಗೆ ನೀ ಎನ್ನ ಬಾಳಿಗೊಲಿದ ಭಾಗ್ಯವಾಗಿರುವೆ..!!


Leave a Reply

Back To Top