ಕಾವ್ಯ ಸಂಗಾತಿ
ಎಸ್ಕೆ ಕೊನೆಸಾಗರ ಹುನಗುಂದ
ಬೆಳಕ ಸೂರ್ಯನಿಗೂ ಕತ್ತಲು
ಇಲ್ಲಿ ಭಾಷೆ, ಮಾತು
ಮಲೀನವಾಗಿವೆ ಸಾಕಷ್ಟು
ಇವರ ನಾಲಿಗೆಗೆ ಸಿಕ್ಕು
ಮತ್ತೆ ಧರ್ಮದ ಹೊದಿಕೆಯಲಿ
ದೇವರು ಧರ್ಮದ ಭೇದ
ಎಲ್ಲೆಡೆ ಹೆಚ್ಚಿದೆ ದ್ವೇಷರೂಪದಿ
ಬಣ್ಣಗಳ ರೂಪ, ಅಭಿಮಾನಕೆ
ನೆಮ್ಮದಿ ದೂರ ನೂರಡಿ
ಅನ್ನ ಕೊಡುವ ನೆಲದಿ
ಕೆಡುಕಿನ ಬೀಜ ಬಿತ್ತಿ
ಅಸಮಾನತೆಯ ಬೆಳೆ
ಇಲ್ಲಿ ದಾಂಗುಡಿ ಇಟ್ಟಿದೆ
ಬದುಕೆಂಬ ನಮ್ಮ ಸುತ್ತಲೂ
ಭಯ, ಸಂಶಯದ ಗೋಡೆ
ಎದ್ದು ನಿಂತಿವೆ ಆಳೆತ್ತರದಿ
ಮನದ ಕಣ್ಣೂ ಮುಚ್ಚಿವೆ
ಹಣೆಯ ನಾಮದ ಕತ್ತಲಿಂದ
ಸಮರಸದ ಕಣ್ಬೆಳಕಿಗೆ ಮಂಕು
ಭಯದ ನೆರಳಲ್ಲಿ ನಡೆವರಿಗೆ
ಬೆಳಕ ಸೂರ್ಯನು ಕಾಣನು!
ಎಸ್ಕೆ ಕೊನೆಸಾಗರ ಹುನಗುಂದ