ಸತೀಶ್ ಬಿಳಿಯೂರು ಅವರಕವಿತೆ-ಅಕ್ಕ ನಗುತಾಳೆ

ಮೊಗದ ತುಂಬ ನಗು
ಕಳೆಗಟ್ಟುವ ಸೊಬಗು
ಮನಬಿಚ್ಚಿ ಅಕ್ಕ ನಗುತಾಳೆ
ನರ್ತಿಸಿ ಕುಣಿತಾಳೆ

ಮನೆ ಕಾರ್ಯದ ಮಧ್ಯೆ
ಮಕ್ಕಳ ಕಲಿಕೆಯ ವಿದ್ಯೆ
ಹಾಳಾಗದಂತೆ ಪಾಲನೆಗೈದು
ದಣಿವರಿಯದೆ ನನ್ನಕ್ಕ ನಗುತಾಳೆ

ನೋವು ದುಃಖ ನುಂಗಿ
ಕಷ್ಟವ ಮನದೊಳಗೆ ಹುದುಗಿ
ತಾಳ್ಮೆಯ ಕಳೆಯಗದೆ ಕೊರಗದೆ
ಅಕ್ಕ ನಗುತಾಳೆ ಹಾಡಿ ಕುಣಿತಾಳೆ

ಸುರಿವ ಕಂಬನಿಗೆ ಸೋತು
ತಲೆದಿಂಬಿಗೆ ಒರಗಿ ಕೂತು
ರಾತ್ರಿಯೆಲ್ಲ ಮರುಗಿ, ಕೊರಗಿ
ಹಗಲು ಏನಿಲ್ಲವೆಂಬಂತೆ ನಗುತಾಳೆ

ತನ್ನ ಮಡಿಲಿಗಿರದ ಕೂಸು
ನೆಮ್ಮದಿಯ ನಗೆ ಸೂಸು
ಕಿತ್ತುಕೊಂಡ ಭಗವಂತನ ಮುಂದೆ
ಅಕ್ಕ ನಗುತಾಳೆ ನನ್ನಕ್ಕ ನಗುತಾಳೆ

ಎಲ್ಲರ ಒಳಿತಿಗಾಗಿ ಶ್ರಮಿಸಿ
ತನ್ನ ಕಣ್ಣೀರು ತಾನೇ ಒರೆಸಿ
ತಾ ದಿನ ಸುಖವೆಂಬಂತೆ
ಅಕ್ಕ ನಗುತಾಳೆ ನನ್ನಕ್ಕ ನಗುತಾಳೆ


Leave a Reply

Back To Top