ವಿಶೇಷ ಸಂಗಾತಿ
ಮಧುನಾಯ್ಕ ಲಂಬಾಣಿ
‘ಗೊರೂರು ಪ್ರಶಸ್ತಿ ಮಧುರ ಭೇಟಿ’
ಅಂದು ನಾನು ಶಾಲೆಯಿಂದ ಮನೆಗೆ ಬಂದಾಗ ಸಂಜೆ ಐದಾಗಿತ್ತು. ಸ್ವಲ್ಪ ಸಮಯದ ನಂತರ ನನ್ನ ಫೋನ್ ರಿಂಗಣಿಸಿತು. ನನ್ನವಳು ಗೊಣಗುತ್ತಿದ್ದಳು ಇವರಿಗೆ ಅದೇನಾಗಿದೆಯೋ ಏನೋ ಒಂದು ಕ್ಷಣನೂ ತಪ್ಪದೇ ಪೋನ್ ಬರತ್ವೆ..ರಾಜ್ಯದ ಮುಖ್ಯಮಂತ್ರಿಗೂ ಇಷ್ಟು ಫೋನ್ ಬಂದಿರಲ್ಲ…… ನಾನು ಫೋನ್ ಎತ್ತಿ ನೋಡಿದೆ. ಅದು ಹಾಸನದ ಗೊರೂರು ಅನಂತರಾಜು. ಫೋನ್ ರಿಸೀವ್ ಮಾಡಿದೆ.
ಸರ್ ನಮಸ್ತೆ ಎಂದೆ
ನಮಸ್ತೆ ಮಧು…ಈ ವರ್ಷದ ಅಂದರೆ ೨೦೨೪ರಲ್ಲಿ ನಿಮಗೆ ಗೊರೂರು ರಾಮಸ್ವಾಮಿ ಅಯ್ಯಂಗಾರ್ ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಿರುವ ವಿಚಾರ ಸುಂದರೇಶ ತಿಳಿಸಿರುವರು. ಆ ಮೂಲಕ ನಿಮ್ಮ ಸಾಹಿತ್ಯ ಸೇವೆ ಗೌರವಿಸಲು ತೀರ್ಮಾನಿಸಲಾಗಿದೆ. ನೀವು ಮಾತ್ರ ಅಂದು ಹಾಸನದ ಗೊರೂರಿಗೆ ಬರಲೇ ಬೇಕು ಎಂದರು. ‘ ಸರ್ ನನಗೇಕೆ ಈಗಲೇ ಗೊರೂರು ರಾಮಸ್ವಾಮಿಯವರ ಹೆಸರಿನಲ್ಲಿ ಪ್ರಶಸ್ತಿ. ಅವರು ಮೇರು ಪರ್ವತ. ನಾನು ಹೂವಿನ ಹಡಗಲಿಯ ಬೇಲಿಯ ಹೂವು….ಎಂದೆ.
ಅದಕ್ಕೆ ಅವರು ತಮ್ಮೆಲ್ಲರ ಅಭಿಮಾನದ ಆಯ್ಕೆ ಎಂದರು. ನಾನು ಒಪ್ಪಿಕೊಳ್ಳಲೇ ಬೇಕಾಯಿತು. ಈ ಗೊರೂರು ಅನಂತರಾಜು ಅಂದ್ರೆ ಚಿಕ್ಕ ದೇಹ ಆದರೆ ವಿಚಾರ ಅಗಾದ. ಸಾಹಿತ್ಯ ಕಲೆಯ ಕುರಿತು ಸದಾ ಚಿಂತನೆ ಮಾಡುತ್ತಿರುವ ೬೩ ರ ಆಸುಪಾಸಿನ ಪಾದರಸದಂತೆ ಹಾಸನ ಜಿಲ್ಲೆಯ ತುಂಬಾ ಓಡಾಡುವ ಚಿರ ಯುವಕ. ಸಾಹಿತ್ಯ ವಲಯದಲ್ಲಿ ತನ್ನದೇ ಆದ ವಿಶಿಷ್ಟ ಶೈಲಿಯಲ್ಲಿ ಛಾಪು ಮೂಡಿಸಿದ ವ್ಯಕ್ತಿ. ಕರ್ನಾಟಕದ ತುಂಬೆಲ್ಲಾ ತಮ್ಮ ಬರವಣಿಗೆಯ ಮೂಲಕ ಚಿರಪರಿಚಿತರು. ಪತ್ರಿಕಾ ಮಾಧ್ಯಮಗಳಿಗೆ ಇವರ ಬರಹ ಬೇಕು. ಕಲಾವಿದರ,ಸಾಹಿತಿಗಳ ಪರಿಚಯದ ಲೇಖನಗಳು, ಐತಿಹಾಸಿಕ ಸ್ಥಳಗಳ ಕುರಿತು ಪರಿಚಯಾತ್ಮಕ ಬರಹಗಳು, ಸಿನಿಮಾ ಕ್ಷೇತ್ರದ ಪ್ರಸ್ತುತ ಪರಿಸ್ಥಿತಿಗಳ ಬರಹ, ಹಾಸ್ಯ ಚುಟುಕುಗಳು ಇನ್ನೂ ಅನೇಕ ಬರಹಗಳು ಇವರ ಲೇಖನಿಯಿಂದ ಪ್ರತೀ ದಿನ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತವೆ. ಹೀಗಾಗಿ ಸಾಹಿತಿಗಳು ಕಲಾವಿದರು ಪತ್ರಿಕಾ ಮಾಧ್ಯಮದವರಿಗೆ ಇವರು ಆಪ್ತಮಿತ್ರರು.
ಗೊರೂರು ರಾಮಸ್ವಾಮಿ ಅಯ್ಯಂಗಾರ್ ರವರ ಹುಟ್ಟುಹಬ್ಬದ ನಿಮಿತ್ತ ಗೊರೂರಿನಲ್ಲಿ ಹಮ್ಮಿಕೊಂಡ ಕಾರ್ಯಕ್ರಮಕ್ಕೆ ನಾನು ಸಿದ್ಧನಾದೆ. ನಾನು ಹಾಸನದಿಂದ ಗೊರೂರಿಗೆ ಹೋಗಬೇಕು. ಅಂದು ಸಂಜೆ ಹಾಸನದಲ್ಲಿ ೬ ಗಂಟೆಗೆ ತಲುಪಿದೆ. ಬಸ್ ಇಳಿದ ಕೂಡಲೇ ನನಗೆ ಹಾಸನದ ಯಾಕೂಬ್ ಕರೆ ಮಾಡಿದರು. ‘ಭೈಯಾ…ಈಗ ಎಲ್ಲಿದ್ದೀರಾ….ಎಂದರು.ನಾನು ಹಾಸನದಲ್ಲಿ ಬಂದಿಳಿದಿರುವ ವಿಷಯ ಗೊರೂರು ಅನಂತರಾಜು ರವರಿಂದ ತಿಳಿದು ನನಗೆ ಉಳಿದು ಕೊಳ್ಳಲು ರೂಮಿನ ವ್ಯವಸ್ಥೆ ಮಾಡಿದರು. ನನಗಾಗಿ ಯಾಕೂಬ್ ಆ ಲಾಡ್ಜ್ ನ ಬಾಗಿಲಲ್ಲೇ ನಿಂತು ನಾನು ಆಟೋದಲ್ಲಿ ಬರುವುದನ್ನು ಕಾದು ನನಗೆ ರೂಮನಲ್ಲಿ ರಾತ್ರಿ ಉಳಿಯಲು ವ್ಯವಸ್ಥೆ ಮಾಡಿದರು.
ಈ ಯಾಕೂಬ್ ಒಬ್ಬ ಮುಸ್ಲಿಂ ಭೈಯಾ. ಕನ್ನಡಾಭಿಮಾನಿ ಕಲಾವಿದ. ‘ ಭೈಯಾ…ಈ ಕನ್ನಡ ನನಗೆ ಅನ್ನ ಕೊಡ್ತಾಯಿದೆ. ನಾವು ಓದಿದ ಭಾಷೆಗೆ ನಾವು ಗೌರವ ಕೊಡಬೇಕು. ಸಾಹಿತ್ಯ ಬೆಳೆಸಬೇಕು ಕಲಾವಿದರನ್ನು ಪ್ರೋತ್ಸಾಹಿಸಬೇಕು ಹೀಗೆಲ್ಲಾ ಮಾತನಾಡುವ ಈ ಯಾಕೂಬ್..ಒಬ್ಬ ಚಿತ್ರಕಲಾವಿದ ಆಶ್ಚರ್ಯ ಅಂದ್ರೆ ಈ ಯಾಕೂಬ್ ಗೊರೂರು ಅನಂತರಾಜುರವರ ಊರು ಗೊರೂರು. ಅನಂತರಾಜು ಅವರಿಗಿಂತ ಐದಾರು ವರ್ಷಗಳ ಚಿಕ್ಕವರು. ಇಂದೂ ಕೂಡ ಅದೇ ಸ್ನೇಹ ಪ್ರೀತಿಯಿಂದ ಬದುಕುತ್ತಿರುವ ಆತ್ಮೀಯ ಗೆಳೆಯರು ಇದು ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿ. ಸಾಹಿತ್ಯ ಮತ್ತು ಕಲೆಯ ಸಮಾಗಮ. ಒಬ್ಬರನೊಬ್ಬರು ಬಿಟ್ಟುಕೊಡದ ವಿಶೇಷ ವ್ಯಕ್ತಿಗಳು. ಯಾಕೂಬ್ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಕನ್ನಡ ಗೋಡೆ ಬರಹಗಳನ್ನು ಬರೆಯುವ ಮೂಲಕ ಸದಾ ಕ್ರಿಯಾಶೀಲ ವ್ಯಕ್ತಿ. ಮನಸ್ಸು ಪ್ರೀತಿ ತುಂಬಿದ ಕೊಡ. ಸದಾ ಮಾತನಾಡುತ್ತಾ ಗಮನ ಸೆಳೆಯುವ ಮೂಲಕ ನನಗೂ ಗೆಳೆಯನಾಗಿದ್ದ. ನನಗೆ ಊಟ ಟೀ ಎಲ್ಲಾ ವ್ಯವಸ್ಥೆ ಮಾಡಿದ ಯಾಕೂಬ್.
ಮರುದಿನ ಮುಂಜಾನೆ ಎಂಟರ ಸುಮಾರಿಗೆ ನನ್ನ ಫೋನ್ ರಿಂಗ್ ಆಯಿತು. ಅದು ಸುಂದರೇಶ್ ಡಿ ಉಡುವೇರೆ ಸರ್ ನಮಸ್ತೆ ಎಂದೆ..
‘ಸರ್ ರಾತ್ರಿ ನಿದ್ರೆಯೆಲ್ಲಾ ಚೆನ್ನಾಗಿ ಆಯ್ತಾ ಎಂದರು.
ಹೌದು ಸರ್ ಯಾಕೂಬ್ ಎಲ್ಲಾ ಅನುಕೂಲ ಮಾಡಿಕೊಟ್ಟಿದ್ದಾರೆ. ತೊಂದ್ರೆ ಇಲ್ಲ ಎಂದೆ. ಅದಕ್ಕೆ ಅವರು
ನಾನು ಯಾಕೂಬ್ ಗೆ ಎಲ್ಲಾ ಹೇಳಿದ್ದೆ..
ಧನ್ಯವಾದಗಳು ಸರ್ ಎಂದೆ ಕಾರ್ಯಕ್ರಮಕ್ಕೆ ತಾವು ಗೊರೂರಿಗೆ ಹತ್ತು ಗಂಟೆಗೆ ಬರಬೇಕು ಎಂದರು ಆಗಲಿ ಎಂದು ನಾನು ರೆಡಿಯಾದೆ.
ಸುಂದರೇಶ್ ದೇಹ ದೊಡ್ಡದು ಹಾಗೇ ಮನಸ್ಸು ದೊಡ್ಡದು. ನಾನು ಹೂವಿನಹಡಗಲಿಯ ಹಿರೇಕೊಳಚಿ ಗ್ರಾಮದಿಂದ ಪ್ರವಾಸಕ್ಕೆ ಹೋದಾಗ ಗೊರೂರಿನಲ್ಲಿ ನಮ್ಮ ಶಾಲೆಯ ಎಲ್ಲಾ ಮಕ್ಕಳಿಗೂ ಶಿಕ್ಷಕರಿಗೂ ಊಟದ ವ್ಯವಸ್ಥೆ ಮಾಡಿದವರು.
ಪ್ರೀತಿಯಿಂದ ನೋಡಿಕೊಂಡವರು.ಖಾಸಗಿ ಪ್ರೌಢಶಾಲೆಯಲ್ಲಿ ಗುಮಾಸ್ತರು ಸಾಹಿತ್ಯ ಕಲೆ ಶಿಕ್ಷಣ ಸಂಘಟನೆಗೆ ಕಾರ್ಯ ನಿರ್ವಹಿಸುವ ಸಂಘಟಕರು.ಇವರ ಈ ಕಾರ್ಯ ವೈಖರಿಯಿಂದ ಗೊರೂರು ರಾಮಸ್ವಾಮಿ ಅಯ್ಯಂಗಾರ್ ರವರ ನೆನಪು ಕರ್ನಾಟಕದಲ್ಲಿ ಮತ್ತೆ ಚಿಗುರಿತು.ನಾನು ಮತ್ತು ಯಾಕೂಬ್ ಗೊರೂರು ತಲುಪಿದಾಗ ಮೆರವಣಿಗೆ ನಡೆಯುತ್ತಿತ್ತು. ಮೆರವಣಿಗೆಯ ಮೂಲಕ ಗೊರೂರು ರಾಮಸ್ವಾಮಿ ಅಯ್ಯಂಗಾರ್ ರವರು ವಾಸವಿದ್ದ ಮನೆಯ ಮುಂದೆ ಧ್ವಜಾರೋಹಣ ನೆರವೇರಿಸಿದರು ನಾನು ಗೊರೂರು ರಾಮಸ್ವಾಮಿ ಅಯ್ಯಂಗಾರ್ ರವರು ಆಡಿ ಬೆಳೆದು ಬದುಕಿ ಹೋದ ಆ ಮನೆಯೊಳಗೆ ಕಾಲಿಡುವ ಮುನ್ನ ರೊಮಾಂಚಿತನಾದೆ. ಭಾವುಕನಾದೆ ಮತ್ತು ಭಾಗ್ಯವಂತ ಎಂದುಕೊಂಡೆ. ವೇದಿಕೆಯ ಕಡೆ ಸಾಗಿದೆವು.
ವೇದಿಕೆಯ ಮೇಲೆ ರಾಮಸ್ವಾಮಿ ಅಯ್ಯಂಗಾರ್ ರವರ ಮಗಳು ವಸಂತಮೂತಿ೯ ಕೆನಡಾದಿಂದ ಬಂದಿದ್ದರು.ಇನ್ನೂ ಅನೇಕ ಗಣ್ಯ ಮಾನ್ಯರು ವೇದಿಯಲ್ಲಿ ವಿರಾಜಮಾನರಾಗಿದ್ದರು. ಸುಂದರೇಶ ಬಳಗ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಿದ್ದರು.ಗೊರೂರು ರಾಮಸ್ವಾಮಿ ಅಯ್ಯಂಗಾರ್ ರವರನ್ನು ಪರಿಚಯಿಸುವ ಕಿರುನಾಟಕ ಪ್ರೌಢಶಾಲಾ ಮಕ್ಕಳಿಂದ ನೆರವೇರಿತು. ರಾಮಸ್ವಾಮಿರವರ ಬಾಲ್ಯ, ವಿದ್ಯಾಭ್ಯಾಸ ಸ್ವಾತಂತ್ರ್ಯ ಹೋರಾಟ ಗಾಂಧೀಜಿರರೊಂದಿಗಿನ ಅವರ ಸಂಬಂಧ ಮದುವೆ ಸಾಹಿತ್ಯ ಹೋರಾಟದ ಹಾದಿ ಜೈಲುವಾಸ ಎಲ್ಲವನ್ನೂ ಅತ್ಯಂತ ಸರಳವಾಗಿ ಸುಂದರವಾಗಿ ಬಿತ್ತರಿಸಿದರು. ನನ್ನ ಕಣ್ಣಂಚಲಿ ಕಣ್ಣೀರ ಹನಿಗಳು ಹನಿದವು. ಇಂತಹ ಚಿಕ್ಕ ಊರಲ್ಲಿ ಆಗಿ ಹೋದ ಮಹಾಚೇತನದ ಕುರಿತು ಕನ್ನಡಿಗರಾದ ನಾವು ಸ್ಮರಿಸಲೇ ಬೇಕು ಎಂಬ ಭಾವ ಮೂಡಿತು.ಅಂತಹ ಮಹಾನ್ ವ್ಯಕ್ತಿಯ ಹೆಸರಿನಲ್ಲಿ ನಾನು ರಾಜ್ಯ ಪ್ರಶಸ್ತಿ ಪಡೆಯುತ್ತಿರುವುದು ನನ್ನ ಪೂರ್ವ ಜನ್ಮದ ಪುಣ್ಯ ಎಂದು ಭಾವಿಸಿದೆ. ಈ ಗೊರೂರು ಗ್ರಾಮಕ್ಕೆ ನಾನು ಬಂದಿದ್ದು ಎರಡನೇ ಬಾರಿ.ಈ ಚಿಕ್ಕ ಬರಹಗಾರನಿಗೆ ಗುರುತಿಸಿ ಗೌರವಿಸಿದ ಗೊರೂರು ಅನಂತರಾಜು, ಸುಂದರೇಶ್ ರವರಿಗೂ ನನಗೆ ಕಿಂಚಿತ್ತು ತೊಂದರೆ ಆಗದ ಹಾಗೆ ಕಿಂಚಿತ್ತೂ ತೊಂದರೆ ಆಗದ ಹಾಗೆ ನೋಡಿಕೊಂಡ ಯಾಕೂಬ್ ನನ್ನನ್ನು ಗೊರೂರು ರಾಮಸ್ವಾಮಿ ಅಯ್ಯಂಗಾರ್ ಪ್ರಶಸ್ತಿಗೆ ಆಯ್ಕೆ ಮಾಡಿದ ಸುಂದರೇಶ್ ರವರಿಗೂ ಸನ್ಮಾನಿಸಿದ ಗೊರೂರು ಗ್ರಾಮದ ಜನತೆಗೂ ನಾನು ಸದಾ ಚಿರಋಣಿ.
——————————————–
ಮಧುನಾಯ್ಕ ಲಂಬಾಣಿ
ಸಂಸ್ಥಾಪಕ ಅಧ್ಯಕ್ಷರು
ಕರ್ನಾಟಕ ರಾಜ್ಯ ಬರಹಗಾರರ ಸಂಘ(ರಿ) ಹೂವಿನ ಹಡಗಲಿ