ಸಿಲ್ಕ್ ಸಾರಿಗಳು ತುಂಬಾ ದುಬಾರಿ, ಅಷ್ಟಕ್ಕೂ ರೇಷ್ಮೆ ಸೀರೆಗಳನ್ನು ನಾನೇನು ಪ್ರತಿದಿನ ಬಳಸುತ್ತೀನ ಕಪಾಟಿನ ತುಂಬಾ ಉಡದೇ ಇರೋ ಅದೆಷ್ಟೋ ಸೀರೆಗಳು ಇವೆ. ರೇಷ್ಮೆ ಸೀರೆ ಬೇಡ  ದೇವರಿಗೆ ಏರಿಸೋಕೆ ಒಂದು ಕಾಟನ್ ಸೀರೆ ತಗೋತೀನಿ ಸಾಕು…. ಇದು ಪ್ರತಿ ಹಬ್ಬದಲ್ಲೂ ನೀನು ಹೇಳುವ ಮಾತು.
 ದುಬಾರಿ ಕಪ್ ಗಳು, ಡಿನ್ನರ್ ಸೆಟ್ ಗಳು, ಹೊಸ ಬೆಡ್ ಶೀಟ್ಗಳು ಅತಿಥಿಗಳು ಬಂದಾಗ ಮಾತ್ರ.

 ಹಬ್ಬ ಹರಿದಿನಗಳು ಬಂದಾಗ ಮನೆಯ ಸ್ವಚ್ಛತೆ, ಕಿಡಕಿ, ಬಾಗಿಲುಗಳ ಧೂಳನ್ನು ಒರೆಸುವುದು, ಕರ್ಟನ್ಗಳು ಮತ್ತು ಹಾಸಿಗೆಗಳನ್ನು ವಾಷಿಂಗ್ ಮಷೀನ್ ಗೆ ಹಾಕುವುದು, ನಂತರ ಹಬ್ಬಕ್ಕೆ ಬೇಕೆಂದು ಸಿಹಿ ಖಾರದ ತಿಂಡಿಗಳನ್ನು ಮಾಡಿ ಡಬ್ಬಕ್ಕೆ ತುಂಬಿ  ಇಡುವುದು ಹೀಗೆ ಸದಾ ಕೆಲಸ ಎಂದು ಅಡುಗೆ ಮನೆಯನ್ನು ತಲೆಯ ಮೇಲೆ ಹೊತ್ತು, ಹೊತ್ತು ಹೊತ್ತಿಗೆ ಬಿಸಿಯಾದ ಅಡುಗೆ ಮಾಡಿ ಹಾಕುವುದು ಜೀವನ ಎಂಬಂತೆ ಆಡುತ್ತೀಯಲ್ಲ. ಏನನ್ನಾದರೂ ಖರೀದಿಸುವಾಗ ಹಣ ಸಾಲದೆ ಬಂದರೆ ಎಲ್ಲದಕ್ಕೂ ನೀನೇ ಮುಂದಾಗಿ ತ್ಯಾಗ ಮಾಡುವ ಮೂಲಕ ಹೊಂದಾಣಿಕೆ ಮಾಡುತ್ತೀಯಲ್ಲ. ಮನೆಯ ಎಲ್ಲರ ಅಗತ್ಯಗಳಿಗೂ ತಕ್ಕಂತೆ ನಿನ್ನನ್ನು ನೀನು ಬದಲಾಯಿಸಿಕೊಳ್ಳುತ್ತಾ ಕೊನೆಗೆ ಒಂದು ದಿನ ನಿನಗೇ ನೀನು ಗೊತ್ತಾಗದಷ್ಟು ಬದಲಾಗಿಬಿಡುವೆ ಎಂದು ಹಲವು ಬಾರಿ ಮನಸ್ಸಿಗೆ ತೋಚುತ್ತಿತ್ತು.

 ನನ್ನಮ್ಮನಿಗೆ ಜೀವನವನ್ನು, ಅದರ ಸವಿಯನ್ನು ಸವಿಯಲು ಗೊತ್ತಿಲ್ಲ, ಮೋಜು ಮಾಡುವುದು ಸಂಭ್ರಮ ಪಡುವುದು ಗೊತ್ತೇ ಇಲ್ಲ ಎಂದು ನಾನಂದುಕೊಳ್ಳುತ್ತಿದ್ದೆ, ಆದರೆ ಇದೀಗ ನನ್ನದೇ ಜವಾಬ್ದಾರಿಗಳ ಭಾರದಲ್ಲಿ ಮೋಜು ಮಸ್ತಿಗಳು ಮರೆಯಾಗಿ ಹೋಗಿವೆ! ಹೀಗೇಕೆ? ಎಂಬುದರ ಅರಿವು ನನಗೀಗ ಆಗುತ್ತಿದೆ.

 ಅಡುಗೆ ಮನೆಯಲ್ಲಿ ಒಲೆಯ ಉರಿ ಅಡುಗೆಯನ್ನು ಬೇಯಿಸಿದರೆ, ಉರಿಯಲ್ಲದ ಝಳ ಮತ್ತು ಅಡುಗೆ ಮನೆಯ ಧಗೆಗೆ ನೀನು ಜೀವಂತ ಬೇಯುವೆ… ನಮಗಾಗಿ ರಸದೌತಣ ಬಡಿಸುವೆ ಆದರೂ ನಾನು ಬಂದು ಸಹಾಯ ಮಾಡುತ್ತಿರಲಿಲ್ಲ ನಿನಗೆ…. ಈಗ ಆ ಬಗ್ಗೆ ಖೇದವೆನಿಸುತ್ತದೆ ಅಮ್ಮ.

 ಬಿಸಿಯಾದ ಡಬರಿಯನ್ನು ಗ್ಯಾಸ್ ಸ್ಟವ್ ಮೇಲಿಂದ  ಕೆಳಗಿಳಿಸುವೆ ನೀ. ಕಾಯಲಿಟ್ಟ ಹಾಲು ಉಕ್ಕು ಬಂದದ್ದು ಅದು ಹೇಗೆ ನಿನಗೆ ಗೊತ್ತಾಗುತ್ತದೆಯೋ… ಹಾಲುಕ್ಕುವ ಮುನ್ನವೇ ಅಡುಗೆ ಮನೆಗೆ ಮರಳುವೆ. ಯಾವುದೋ ಒಂದು ದಿನ ಹಾಲು ಕಾಯಿಸಲು ಹೇಳಿದರೆ ಹಾಲು ಉಕ್ಕಿ ಅರ್ಧ ಪಾತ್ರೆಯಷ್ಟು ಹಾಲು ಚೆಲ್ಲಿದಾಗಲೇ ನಮಗೆ ಗೊತ್ತಾಗುತ್ತದೆ… ಇನ್ನು ನಾವ್ಯಾರು ಇಲ್ಲದಾಗ ಅಪ್ಪ, ಅಣ್ಣ ಹಾಲು ಕಾಯಿಸಿದರಂತೂ ಪಾತ್ರೆ ಕರಟಿ ಹೋಗಿರುತ್ತದೆ… ನೀನು ಮಾತ್ರ ಒಂದು ದಿನವೂ ಉಕ್ಕಿಸದೆ ಹಾಲು ಕಾಯಿಸುವೆ ಎಂಬುದು ನಮಗೆಲ್ಲ ಸೋಜಿಗದ ಸಂಗತಿ. ಚಪಾತಿ, ರೊಟ್ಟಿ ಬೇಯಿಸುವಾಗ ಕೂಡ ಅದು ಹೇಗೆ ಬಿಸಿಯಾದ ಚಪಾತಿಯನ್ನು ಚುಚ್ಚುಗದ ಸಹಾಯವಿಲ್ಲದೆ ನೀನು ತಿರುಗಿಸಿ ಹಾಕುವೆಯೋ…. ನನಗೂ ಸ್ವಲ್ಪ ಆದರೆ ಗುಟ್ಟು ಹೇಳಿ ಕೊಡು ಅಮ್ಮ ಎಂದು ನಿನ್ನನ್ನು ಕೇಳುತ್ತಿದ್ದ ನಾನು ಈಗ ಸಂಸಾರದಲ್ಲಿ ಅದೆಲ್ಲವನ್ನು ಕಲಿತಿರುವೆ ಅಮ್ಮ.

 ಅದು ಹೇಗೆ ತರಕಾರಿಯನ್ನು ಚಕಚಕನೆ ಹೆಚ್ಚಿದರೂ ಒಂದು ಬಾರಿಯೂ ಕೈ ಬೆರಳನ್ನು ಕುಯ್ದುಕೊಂಡಿಲ್ಲ, ಆಕಸ್ಮಿಕವಾಗಿ ಎಣ್ಣೆ ಸಿಡಿದು ಗಾಯವಾದರೂ ಕೆಲಸ ಮಾಡದೆ ನೀನು ಸುಮ್ಮನೆ ಕುಳಿತಿದ್ದು ನೋಡಿಯೇ ಇಲ್ಲ. ಮನೆಯವರೆಲ್ಲರ ಬೇಕು ಬೇಡಗಳನ್ನು ಪೂರೈಸುವ ನೀನು ಕೆಲವೊಮ್ಮೆ ಕೆಲಸದ ಒತ್ತಡದಿಂದ ಎಣ್ಣೆಯಲ್ಲಿ ಕಾಯ್ದ ಸಾಸಿವೆಯಂತೆ ಚಟಪಟ ಎನ್ನುವುದು ಉಂಟು…. ಆಗೆಲ್ಲ ನಾವು ಆಮೆ ತನ್ನ ಚಿಪ್ಪಿನಲ್ಲಿ ಅವಿತಿಟ್ಟುಕೊಳ್ಳುವಂತೆ ಮೌನದ ಚಿಪ್ಪೊಳಗೆ ನಮ್ಮನ್ನು ನಾವು ಬಂಧಿಸಿಕೊಳ್ಳುತ್ತಿದ್ದೆವು. ಈಗ ಗೃಹಿಣಿಯಾಗಿ ನಿನ್ನ ಒತ್ತಡದ ಅನುಭವದ ಕಾವು ನನಗೂ ತಟ್ಟುತ್ತಿದೆ ಅಮ್ಮ

 ಸದಾ ನೀಟಾಗಿ ಸಮಯಕ್ಕೆ ಸರಿಯಾಗಿ ಇರುವಂತಹ ಸೀರೆ, ಚೂಡಿದಾರ್ ತೊಟ್ಟು ಮೆಲುನಗೆಯ ಆಭರಣವನ್ನು ಧರಿಸಿ  ತಯಾರಾಗುತ್ತಿದ್ದ ನೀನು ಎಲ್ಲರನ್ನೂ ಎಲ್ಲವನ್ನು ಅದು ಹೇಗೆ ಪ್ರೀತಿಯಿಂದ ಮಾತನಾಡಿಸುತ್ತಿದ್ದೆ ಎಂಬುದು ಆಶ್ಚರ್ಯ. ದೊಡ್ಡವರಿಗೆ ಕೊಡಬೇಕಾದ ಗೌರವ, ವಾರಿಗೆಯವರೊಂದಿಗಿನ ವಿಶ್ವಾಸದ ಮಾತುಕತೆಗಳು, ನನ್ನ ಸ್ನೇಹಿತರೊಂದಿಗೆ ತೋರುತ್ತಿದ್ದ ಪ್ರೀತ್ಯಾದರಗಳು ಪುಟ್ಟ ಮಕ್ಕಳಿಗೆ ತೋರುತ್ತಿದ್ದ ಅಕ್ಕರೆ ಎಲ್ಲವೂ ನಿನ್ನ ವ್ಯಕ್ತಿತ್ವದ ಔನ್ನತ್ಯವನ್ನು ತೋರುತ್ತಿದ್ದವು.ತುಸು ದೊಡ್ಡವಳಾಗುತ್ತಿದ್ದಂತೆ ನಾನು ನಿನಗೆ ಆಧುನಿಕವಾಗಿ ಅಲಂಕರಿಸಲು ಮಾಡಿದ ಪ್ರಯತ್ನಗಳೆಲ್ಲವನ್ನು ನನ್ನ ಖುಷಿಗೆ ನೀನು ಒಪ್ಪಿದರೂ, ನಂತರ ಬೇಡವೆಂದು ನಯವಾಗಿ ಗದರಿ ಸುಮ್ಮನಾಗಿಸುತ್ತಿದ್ದೆ. ಹಾಗೆಲ್ಲ ನನ್ನಮ್ಮ ಔಟ್ ಡೇಟೆಡ್ ಎಂದು ನನಗನ್ನಿಸಿ ಜಗಳ ಕಾಯ್ದರೂ ಅಪ್ಪ, ಅಣ್ಣ ಇಬ್ಬರೂ ಅಮ್ಮನ ಬೆಂಬಲಕ್ಕೆ ನಿಲ್ಲುತ್ತಿದ್ದುದರಿಂದ ನಾನು ಸುಮ್ಮನಾಗುತ್ತಿದ್ದೆ. ಮನುಷ್ಯನಿಗೆ ಗೌರವ ಬರುವುದು ಆತನ ವ್ಯಕ್ತಿತ್ವದಿಂದಲೇ ಹೊರತು ಆತ ಧರಿಸುವ ಬಟ್ಟೆಗಳು ಮತ್ತು ಚಿನ್ನದ ಒಡವೆಗಳಿಂದಲ್ಲ ಎಂಬುದರ ಅರಿವು ನಿನ್ನ ಗೈರು ಹಾಜರಿಯಲ್ಲಿಯೂ ನಿನ್ನನ್ನು ಪ್ರೀತಿಸುವ ಮತ್ತು ಗೌರವಿಸುವ ಜನರನ್ನು ಕಂಡಾಗ ನನಗೆ ವೇದ್ಯವಾಗುತ್ತಿದೆ.

 ಇದೀಗ ಆಟದಲ್ಲಿ ನನ್ನ ಸರದಿ ….  ಮದುವೆಯಾಗಿ ಎರಡು ಮಕ್ಕಳ ತಾಯಿಯಾಗಿರುವ ನನಗೆ ಸದ್ಯಕ್ಕೆ ನಿನ್ನ ಜಾಗದ ಎಲ್ಲ ಅನುಭವದ ಅರಿವಾಗುತ್ತಿದೆ. ಹೆಣ್ಣು ಮಕ್ಕಳು ಮುಖದ ಸೌಂದರ್ಯ, ದೇಹದ ಮೈ ಮಾಟ, ಯೌವನ, ಅಲಂಕಾರ, ಹವ್ಯಾಸ, ಕಣ್ಣುಗಳಲ್ಲಿನ ಕಾಂತಿಯನ್ನು ಮನೆಯ ಕೆಲಸ ಕಾರ್ಯಗಳಲ್ಲಿ ಮತ್ತು ಕುಟುಂಬದ ಸದಸ್ಯರ ಬೇಕು ಬೇಡುಗಳನ್ನು ನೋಡಿಕೊಳ್ಳುವುದರಲ್ಲಿ ಕಳೆದುಕೊಳ್ಳುತ್ತಾರೆ ಎಂಬುದರ ಅರಿವಾದಾಗ ನಿನ್ನ ನೆನಪಾಗದೆ ಇರುವುದಿಲ್ಲ ಅಮ್ಮ.

 ತಲೆ ಸ್ನಾನ ಮಾಡಿ ತೊಯ್ದ ತಲೆಕೂದಲನ್ನು ಒಣಗಿಸದೆ, ಪೂಜೆ ಮಾಡಿ ಮನೆಯವರಿಗೆ ತಿಂಡಿ ಮಾಡಲು ಅಡುಗೆ ಮನೆಗೆ ಧಾವಿಸುವ ನಾನು ಥೇಟ್ ನಿನ್ನದೇ ಪ್ರತಿರೂಪವಾಗಿ ತೋರುವೆ ಅಮ್ಮ. ಮುಂಜಾನೆ ಬೇಗನೆ ಎದ್ದು ದೇವರಿಗೆ ಕೈ ಮುಗಿದು ಮನೆಯ ಕೆಲಸ ಪ್ರಾರಂಭಿಸುವ ನಾನು ನಿನ್ನದೇ ಸಂಸ್ಕಾರಗಳಲ್ಲಿ ಮುಂದುವರೆದಿದ್ದೇನೆ. ಪೂಜೆ- ಪುನಸ್ಕಾರ, ವ್ರತ-ಕಥೆ, ಹಿರಿಯರ ಸೇವೆ, ಮನೆಗೆ ಬರುವ ಅತಿಥಿಗಳ ಊಟ ಉಪಚಾರ ಎಂದು ಅಡುಗೆ ಮನೆ, ತಲ ಬಾಗಿಲು, ಹಿತ್ತಲು, ತರಕಾರಿ ಮತ್ತು ದಿನಸಿ ಅಂಗಡಿಗಳಿಗೆ ಎಡತಾಕುವ ನಾನು, ಈ ಹಿಂದೆ ನೀನು ಈ ಎಲ್ಲ ಕೆಲಸಗಳನ್ನು ಮಾಡುವಾಗ ಸುಳಿಯುತ್ತಿದ್ದ ಅಮ್ಮನಿಗೆ ದಣಿವಾಗೋಲ್ವೇ! ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ಮನೆಯ ಎಲ್ಲಾ ಕೆಲಸ ಕಾರ್ಯಗಳಲ್ಲಿ ಕುಟುಂಬದ ಎಲ್ಲರ ಬೇಕು ಬೇಡಗಳಲ್ಲಿ ನನ್ನ ವೈಯಕ್ತಿಕ ಆಶಯಗಳು ನಿಧಾನವಾಗಿ ಕಣ್ಮರೆಯಾಗುತ್ತಿವೆ. ಅಮ್ಮ..ಇದೀಗ ನಿನ್ನ ಕರ್ತವ್ಯ ಮತ್ತು ತ್ಯಾಗದ ಅರಿವಾಗುತ್ತಿದೆ ನನಗೆ.

 ಅಷ್ಟೆಲ್ಲಾ ಕೆಲಸದ ಮಧ್ಯೆಯೂ ನನ್ನ ಮತ್ತು ಅಣ್ಣನ ಕಿರಿಕಿರಿಗಳನ್ನು, ಅಪ್ಪನ ಗೊಣಗಾಟವನ್ನು, ಅಜ್ಜ ಅಜ್ಜಿಯ ವಯೋ ಸಹಜ ತೊಂದರೆಗಳನ್ನು ಹಲವಷ್ಟು ಭಾರಿ ಮಾತಿಲ್ಲದೆ ಸಹಿಸಿ ಯಾವಾಗಲೋ ಒಮ್ಮೆ ಜ್ವಾಲಾಮುಖಿಯಂತೆ ಸಿಡಿಯುತ್ತಿದ್ದ ಭೂಮಿ ತೂಕದ ನಿನ್ನ ವ್ಯಕ್ತಿತ್ವದ ಆಳ, ಅಗಲ, ಹರವು ನನಗೀಗ ಅರ್ಥವಾಗುತ್ತಿದೆ ಅಮ್ಮ.

 ನನ್ನ ಮತ್ತು ಅಣ್ಣನ ವಿವಾಹವಾದ ನಂತರ ನಮ್ಮ ನಮ್ಮ ಕುಟುಂಬಗಳ ಹೊಣೆಗಾರಿಕೆಯನ್ನು ನಮನಮಗೆ ಬಿಟ್ಟು ಕೇವಲ ಸಲಹೆ ಸಹಕಾರಗಳನ್ನು ನೀಡುತ್ತಾ, ಮನೆಗೆಲಸಗಳಲ್ಲಿ ಸಹಾಯ ಮಾಡುತ್ತಾ ಇರುವ ನಿನ್ನನ್ನು ಕಂಡರೆ ಹೆಮ್ಮೆ ಆಗುತ್ತದೆ.

 ಆದರೂ ಒಂದು ಮಾತು ಹೇಳುವ ಆಸೆ ಅಮ್ಮ…

 ನಿವೃತ್ತಿಯಾದ ಅಪ್ಪನ ಜೊತೆ ಜೊತೆಗೆ ಸ್ವಯಂ ನಿವೃತ್ತಿಯನ್ನು ತುಸುಮಟ್ಟಿಗೆ ಘೋಷಿಸಿ ಈಗಲಾದರೂ ಅಪ್ಪನ ಜೊತೆ ಪ್ರವಾಸ ಹೋಗು, ದೇಶಗಳನ್ನು ಸುತ್ತಾಡಿ, ತೀರ್ಥಕ್ಷೇತ್ರಗಳಿಗೆ ಭೇಟಿ ನೀಡಿ. ನಿಮ್ಮದೇ ವಯಸ್ಸಿನ ಸ್ನೇಹಿತರ ಜೊತೆಗೂಡಿ ವಿಹಾರ, ಮಾತುಕತೆಯಾಡಿ.ಒಳ್ಳೆಯ ಸಂಗೀತವನ್ನು ಆಲಿಸಿ, ಚಲನಚಿತ್ರಗಳನ್ನು ನೋಡಿ. ಮೊಮ್ಮಕ್ಕಳೊಂದಿಗೆ ನಿಮ್ಮ ಬಾಲ್ಯದ ಸವಿ ಘಟನೆಗಳನ್ನು ಹಂಚಿಕೊಳ್ಳಿ. ನಿಮ್ಮಿಷ್ಟದಂತೆ ಜೀವನ ನಡೆಸಿ.
 ಎಲ್ಲರಿಗೂ ಎಲ್ಲವನ್ನೂ ಮಾಡಿದ ನೀವು ನಿಮಗಾಗಿಯೂ ಜೀವಿಸಿ.

 ಅಮ್ಮ ಎಂದರೆ ಕೇವಲ ಪ್ರೀತಿ ಮತ್ತು ನಾವು ಕೇಳಿದ್ದನ್ನೆಲ್ಲ ಮಾಡಿ ಹಾಕುವ, ನಮ್ಮ ಬಟ್ಟೆಗಳನ್ನು ಒಗೆದು ಇಸ್ತ್ರಿ ಮಾಡುವ, ನಮ್ಮೆಲ್ಲಾ ಬೇಕು ಬೇಡಗಳನ್ನು ನೋಡಿಕೊಳ್ಳುವ, ಮಕ್ಕಳಲ್ಲಿ ಶಿಸ್ತು ಸಮಯಪ್ರಜ್ಞೆ ಆತ್ಮವಿಶ್ವಾಸವನ್ನು ಹುಟ್ಟಿಸುವ, ಅಪ್ಪನ ಸಿಟ್ಟು ಹಠಮಾರಿತನಗಳನ್ನು ಪ್ರೀತಿಯಷ್ಟೇ ಸಲೀಸಾಗಿ ಸ್ವೀಕರಿಸುವ ಸಹಿಸಿಕೊಳ್ಳುವ ಸಾಮಾನ್ಯ ಹೆಣ್ಣು ಮಗಳಂತೆ ತೋರುವ ಪ್ರತಿಯೊಬ್ಬ ಅಸಾಮಾನ್ಯ ತಾಯಿ ಅಲ್ಮೆ?

 ನಾವು ನಮ್ಮ ಬದುಕನ್ನು ಸರಿಯಾಗಿ ನಿರ್ವಹಿಸಲು ಆ ದೇವರು ನಮಗಾಗಿಯೇ ಕಳುಹಿಸಿರುವ ದೇವತೆ  ತಾಯಿ. ನಮ್ಮೆಲ್ಲಾ ತಪ್ಪುಗಳನ್ನು ಸಹಿಸಿಕೊಂಡು, ನಮ್ಮನ್ನು ಸರಿಯಾದ ದಾರಿ ತೋರಿಸಿ ಬೆಳೆಸುವ ಗುರು ನಮ್ಮ ತಾಯಿ. ಹಾಗೆ ತಾಯಂದಿರೆಲ್ಲಾ ತಮ್ಮ ತಮ್ಮ ವೈಯಕ್ತಿಕತೆಯನ್ನು ಬದಿಗಿಟ್ಟು ಸಮಷ್ಟಿ ಪ್ರಜ್ಞೆಯಿಂದ ಕಾರ್ಯನಿರ್ವಹಿಸಿದ ಕಾರಣವೇ ಇಂದು ಅವರವರ ಮಕ್ಕಳು ಎಲ್ಲ ರಂಗದಲ್ಲೂ  ಮುಂದೆ ಬರಲು ಕಾರಣವಾಗಿದೆ, ಅಲ್ಲವೇ? ಅಮ್ಮ.

 ನಮ್ಮ ಸುಖ ಸಂತೋಷದಲ್ಲಿ ಖುಷಿಯನ್ನು ಕಾಣುವ ನಮ್ಮ ನೋವು ನಲಿವಿನಲ್ಲಿ ಪಾಲ್ಗೊಳ್ಳುವ, ಅದೆಷ್ಟೇ ಕಷ್ಟವಾದರೂ ನಮ್ಮ ಏಳಿಗೆಗೆ ದುಡಿಯುವ  ಅಮ್ಮ…. ನಿನಗಾಗಿಯೂ ನೀನು ಬದುಕು. ನಿನಗೆ ಸಂತೋಷ ನೀಡುವ ಕೆಲಸಗಳನ್ನು ಮಾಡು, ನಿನ್ನ ಸಣ್ಣ ಪುಟ್ಟ ದೈಹಿಕ ತೊಂದರೆಗಳನ್ನು ದೊಡ್ಡದಾಗಲು ಬಿಡದೆ ನಿನ್ನ ಊಟ ತಿಂಡಿಯೆಡೆ ಗಮನ ಕೊಡು. ಆರೋಗ್ಯವನ್ನು ಕಾಯ್ದುಕೋ. ನೀನೇ ಹೇಳುವ ಹಾಗೆ ದೇವರು ಕೊಟ್ಟಿರುವ ಈ ಬದುಕನ್ನು “ಜಿಯೋ, ಜಿ ಭರ್ ಕೇ” ಎಂಬಂತೆ ಜೀವಿಸು. ಸದಾ ಸಂತೋಷವಾಗಿ ನೂರು ಕಾಲ ನಮ್ಮೊಂದಿಗೆ ನಗುನಗುತ್ತಾ  ಇರು ಅಮ್ಮ.

 ನಿನ್ನ ಪ್ರೀತಿಯ ಮಗಳು

——————————————————–

One thought on “

Leave a Reply

Back To Top