ಕಾವ್ಯ ಸಂಗಾತಿ
ವಂದಗದ್ದೆ ಗಣೇಶ್
ನನ್ನೊಲುಮೆಯ ಹೂವು
ನನ್ನಂತರಂಗದಲಿ ನನ್ನೊಲುಮೆ ಹೂವಾಗಿ
ಅರಳಿ ನಿಂತಿಹ ನನ್ನ ಪ್ರೇಮ ಸಿರಿಯೆ
ನಿನ್ನ ಸೌರಭ ಸವಿದು ಧನ್ಯನಾಗಿಹೆನಿಂದು
ಹೇಗೆ ತೀರಿಸಲದರ ಋಣವ ನಾನು?
ನಿನ್ನ ಚೆಲುವಿನ ಮೊಗಕೆ ನಿನ್ನ ಮೋಹದ ನಗೆಗೆ
ಅಂದು ನಾ ಮರುಳಾಗಿ ಮೆಚ್ಚಿಕೊಂಡೆ
ಇಂದು ಮೆಚ್ಚುವೆ ಕೂಡ ನಿನ್ನ ನಿರ್ಮಲ ಮನಕೆ
ಆ ಪ್ರೀತಿ ವಾತ್ಸಲ್ಯ ಚೆಲುವ ಸಿರಿಗೆ
ನಿನ್ನಂತರಂಗದಲ್ಲಿ ನನ್ನ ಭಾವನೆ ನೂರು
ನುಡಿಯಾಗಿ ಮಿಡಿಯುವುವು ಮೌನವಾಗಿ
ಅರಿತ ಅಂಗನೆಯಾಗಿ ಮೊಗದಲ್ಲಿ ನಗೆ ಚೆಲ್ಲಿ
ಅವುಗಳಿಗೆ ಸ್ಪಂದಿಸುವೆ ನಿತ್ಯ ನೀನು
ಎಂಥ ಮಾಂತ್ರಿಕ ನಿನ್ನಲಿಹುದೋ ಕಾಣೆ
ಬರಿಯ ಮಡದಿಯು ಅಲ್ಲ ದೇವಿ ನೀನು
ಕಾರ್ಯೇಶು ದಾಸಿ ನೀ ಕರಣೇಶು ಮಂತ್ರಿ ನೀ
ಭೋಜೇಶು ನೀ ಮಾತಾ ಮೆಚ್ಚಿಕೊಂಡೆ
ನನ್ನ ಕೈ ಹಿಡಿದು ಮೇಲೆತ್ತಿ ಮೈ ತೊಳೆಸಿ
ನಿನ್ನಂತರಾಳದ ಸವಿಯ ಉಣಬಡಿಸಿ
ಪ್ರೀತಿ ವಾತ್ಸಲ್ಯದಲಿ ಮೈದಡವಿ ಉಪಚರಿಸಿ
ಮರುಜನ್ಮ ನೀಡಿದ ತಾಯಿಯಲ್ಲವೆ ನೀನು
ನೀ ಪಡುವ ಕಷ್ಟಕೆ ನೀ ಕೊಡುವ ಸಂತಸಕೆ
ಆ ಸೇವೆ ಆ ಪ್ರೇಮ ಭಾವ ಸಿರಿಗೆ
ಯಾವ ಕಾಣಿಕೆಯಿತ್ತು ಧನ್ಯನಾಗಲಿ ಹೇಳು?
ಕಳೆದುಕೊಳ್ಳಲಿ ಹೇಗೆ ನಿನ್ನ ಋಣವ?
ಕೋಟಿ ಹೊನ್ನನು ಕೊಡಲು ಸಾಟಿಯಾಗದು ನಿನಗೆ
ಮುತ್ತು ರತ್ನವು ಕಡಿಮೆ ನಿನ್ನ ಬೆಲೆಗೆ
ಉಪಕೃತಿಯ ನೆನೆ ನೆನೆದು ಸಂತಸದಿ ಮೈಮರೆದು
ನಿನಗರ್ಪಿಸುವೆನಿದೋ ನನ್ನ ಕವನ
———————————–
ವಂದಗದ್ದೆ ಗಣೇಶ್, ಸಾಗರ
ಸೂಪರ್