akka

ಮರ್ತ್ಯ ಲೋಕದ ಭಕ್ತರ ಮನವ ಬೆಳಗಲೆಂದು ಇಳಿ ತಂದನಯ್ಯ ಶಿವನು
ಕತ್ತಲೆಯ ಪಾಳೆಯವ ರವಿ ಹೊಕ್ಕಂತಾಯಿತಯ್ಯ ಚಿತ್ತದ ಪ್ರವೃತಿಯ ಹಿಂಗಿಸಿ ಮುಕ್ತಿ ಪಥವ ತೋರಿದನಲ್ಲಾ ಅಸಂಖ್ಯಾತರುಗಳಿಗೆ ತನುವೆಲ್ಲ ಸ್ವಯಂ ಲಿಂಗ ಮನವೆಲ್ಲಾ ಚರಲಿಂಗ ಭಾವವೆಲ್ಲ ಮಹಾಘನ ಬೆಳಗು ಚೆನ್ನಮಲ್ಲಿಕಾರ್ಜುನಯ್ಯ ನಿಮ್ಮ ಶರಣ ಸಮ್ಯಜ್ಞಾನಿ ಬಸವಣ್ಣನ ಶ್ರೀಪಾದಕ್ಕೆ ಶರಣೆಂದು *ಎನ್ನ ಭವಂ ನಾಸ್ತಿಯಾಯಿತಯ್ಯ

ಈ ಭೂಲೋಕವೆಂಬುವುದೇ ಮರ್ತ್ಯಲೋಕ .
ಇಲ್ಲಿರುವ ಮಾನವರ ಮನ ಅಜ್ಞಾನದ ಕತ್ತಲೆಯ ಗೂಡಾಗಿದೆ .
ಆಸೆ, ಆಕಾಂಕ್ಷೆ ,ಮದ ,ಮತ್ಸರ ಕಾಮ ,ಕ್ರೋಧ, ಲೋಭ, ಮೋಹ ಗಳ ಅರಿಷಡ್ವರ್ಗಗಳ ಕತ್ತಲೆಯ ಕೂಪಾದ ಭಕ್ತರ ಮನಂಗಳು .
ಈ ಕತ್ತಲೆಯನ್ನು ದೂಡಿ ಮಾನವರ ಮನದಲ್ಲಿ ಬೆಳಕನ್ನುಂಟು ಮಾಡುವ ಶಿವಸ್ವರೂಪಿಯಾದ ಆದ ಶ್ರೀ ಚೆನ್ನಮಲ್ಲಿಕಾರ್ಜುನನು ಈ ಭೂಲೋಕದಲ್ಲಿ ಇಳಿದು ಬಂದಿದ್ದಾನೆ .

ಕತ್ತಲೆಯನ್ನು ಹೋಗಲಾಡಿಸಿ ಬೆಳಕನ್ನು ನೀಡುವ ರವಿಯ ಹಾಗೆ ಎಲ್ಲಿ ಕತ್ತಲು ಇರುತ್ತದೆಯೋ .ಯಾರ ಮನವು ಬರೀ ಕತ್ತಲೆಯಿಂದಲೇ ಆವರಿಸಿಕೊಂಡಿರುತ್ತದೆಯೋ ಅಲ್ಲಿ ಸೂರ್ಯನ ಬೆಳಕಿನ ಕಿರಣಗಳು ಪ್ರಕಾಶಮಾನವಾಗಿ ಮನವನ್ನು ಬೆಳಗಿ ಮುಕ್ತಿಯ ಪಥಕ್ಕೆ ನಮ್ಮ ನ್ನು ಕೊಂಡೊಯ್ಯುವ ಪರಮಾತ್ಮ. ಅಂದರೆ ಸನ್ಮಾರ್ಗದ ದಾರಿ . ಸನ್ನಡತೆ ,ಸೌಜನ್ಯತೆ,ಸುಮದುರತೆ ಸಮಚಿತ್ತದ ಅರುವಿನ ಜ್ಞಾನ.
ರವಿಯು ಪ್ರಕಾಶಿಸುವಂತೆ.
ಮನದ ತಮಂದತೆ ದೂರಾಗಿ ಬೆಳಕಿನ ಕಿರಣಗಳು ಪ್ರಕಾಶಿಸಿದಾಗ ಈ ದೇಹವೆಲ್ಲವೂ ಒಂದು ರೀತಿಯಾಗಿ ಲಿಂಗಮಯವಾಗಿ ತೋರುತ್ತದೆ.

ಈ ಮರ್ತ್ಯ ಲೋಕದ ಅಸಂಖ್ಯಾತ ಮನಗಳ ಬೆಳಕು ಈ ನನ್ನ ಚೆನ್ನಮಲ್ಲಿಕಾರ್ಜುನನು. ಎನ್ನುವ ಅರಿವಿನ ಬೆಳಕಿನ ಜ್ಞಾನದ ಪಥದತ್ತ ಸಾಗಿದ ಅಕ್ಕನ ಧೃಢವಾದ ನಿಲುವನ್ನು ನಾವಿಲ್ಲಿ ಕಾಣುತ್ತೇವೆ .
ಅಕ್ಕಮಹಾದೇವಿಗೆ ಚೆನ್ನಮಲ್ಲಿಕಾರ್ಜುನನೇ ಬೆಳಕು .ಆತನೇ ಸೂರ್ಯ.

ಹೇಗೆ ಈ ಭೂಮಿಯ ಮೇಲಿನ ಚರಾಚರ ಜೀವಿಗಳ ಬದುಕಿಗೆ ,ಅವರೆಲ್ಲರ ಚಟುವಟಿಕೆಗಳಿಗೆ ಹೇಗೆ ಸೂರ್ಯ ಕಾರಣಕರ್ತನೋ ಹಾಗೇ ನನಗೆ ನನ್ನ ಚೆನ್ನಮಲ್ಲಿಕಾರ್ಜುನನೇ ! ಬೆಳಕು ಹಾಗೂ ಕಾರಣಕರ್ತ.
ನನ್ನ ಮನದ ಭಾವದ ತುಂಬೆಲ್ಲ ಚೆನ್ನಮಲ್ಲಿಕಾರ್ಜುನನೇ ಪ್ರಜ್ವಲಿಸುತ್ತಿದ್ದಾನೆ .
ಆತನೇ ಮಹಾಘನ ನಿರಾಳ ಸ್ವರೂಪಿ ಭಗವಂತ.
ಕಣ್ಣಿಗೆ ಕಾಣಲಾರದ ಅಮೂರ್ತ ಸ್ವರೂಪಿ .

ಅಂತಹ ಅರಿವಿನ ಬೆಳಕಿಗೆ ದಾರಿ ತೋರಿಸಿದ ಸಮ್ಯಕ್ ಜ್ಞಾನಿಯಾದ ಬಸವಣ್ಣನ ಅಡಿ ಪಾದಕ್ಕೆ ನನ್ನ ಶಿರಸಾಷ್ಟಾಂಗ ನಮಸ್ಕಾರಗಳು.
ಸಮ್ಯಕ್ ಜ್ಞಾನಿಯಾದ ಬಸವಣ್ಣನ ಪಾದ ಮುಟ್ಟಿ ನನ್ನ ಭವಂ ನಾಸ್ತಿಯಾಯಿತು .

ನನ್ನಲ್ಲಿರುವ ಅಜ್ಞಾನವೆಂಬ ಮನದ ಕತ್ತಲೆಯು ತೊಲಗಿ ಸುಜ್ಞಾನದ ದೀಪ್ತಿಯ ಬೆಳಕನ್ನು ಕಂಡೆ .
ಇಂಥಹ ಬೆಳಕಿನ ದಾರಿಯನ್ನು ಕಾಣಿಸಿ ಈ ಸಂಸಾರ ಎನ್ನುವ ಬಂಧನದಿಂದ ನನ್ನನ್ನು ಪಾರುಮಾಡಿ ಸತ್ಯ ಮಾರ್ಗ ದ ಅರಿವಿನ ನೆಲೆಯಾದ ಮುಕ್ತಿಯ ಪಥಕ್ಕೆ ಕೊಂಡೊಯ್ಯುವ ಬಸವಣ್ಣನ ಅಡಿ ಪಾದಕ್ಕೆ ವಂದಿಸುವೆ .ಎನ್ನುವ ಅಕ್ಕಳು ಬಸವಣ್ಣನ ಮೇಲೆ ಇಟ್ಟಿರುವ ನಿಜವಾದ, ದೃಢವಾದ ಭಕ್ತಿಯನ್ನು ನಾವಿಲ್ಲಿ ಕಾಣಬಹುದಾಗಿದೆ .

ಒಟ್ಟಿನಲ್ಲಿ ಬಸವಣ್ಣ ತಿಳಿಸಿಕೊಟ್ಟ ಅರಿವಿನ ಪ್ರತೀಕ ಆ ಅರಿವೇ ತನ್ನ ಪತಿ. ಎಂದು ಹೇಳುವ ಅಕ್ಕನ ವೈಚಾರಿಕತೆ ನಮ್ಮನ್ನು ಆಳಕ್ಕಿಳಿಸಿ ಬಿಡುತ್ತದೆ .
ಉಡುತಡಿಯಿಂದ ಕಲ್ಯಾಣಕ್ಕೆ, ಕಲ್ಯಾಣದಿಂದ ಕದಳಿಯ ಪಯಣ, ಇದು ಮನುಷ್ಯನ ಹುಟ್ಟಿನಿಂದ ಅರಿವಿನವರೆಗಿನ ಪಯಣ .ಅಂತರಂಗ ಪ್ರವೇಶಿಸುವ ಕಾಯ ಪಯಣ.
ಚೆನ್ನಮಲ್ಲಿಕಾರ್ಜುನ ,ಕದಳಿ ಎಲ್ಲವೂ ಭೌತಿಕ ಸಂಗತಿಗಳು .ಅಕ್ಕಮಹಾದೇವಿಗೆ ತನ್ನ ಅರಿವಿನ ಮೂಲಕ ಜ್ಞಾನವೆಂಬ ಬೆಳಕಿನ ದರ್ಶನ ಪಡೆಯುವುದೇ ಗುರಿಯಾಗಿರುತ್ತದೆ .ಇದನ್ನು ಶಿವಯೋಗದ ಲಿಂಗ ಧ್ಯಾನದಲ್ಲಿ ಮಾತ್ರ ಸಾಧಿಸಿಕೊಳ್ಳಲಿಕ್ಕೆ ಸಾಧ್ಯ. ಎಂದು ಹೇಳುವ ಅಕ್ಕನ ಗಟ್ಟಿತನ ನಮಗಿಲ್ಲಿ ಎದ್ದು ಕಾಣುತ್ತದೆ .


Leave a Reply

Back To Top