ಕಾವ್ಯ ಸಂಗಾತಿ
ಗಂಗಾಧರ ಬಿ ಎಲ್ ನಿಟ್ಟೂರ್
ಯಶಸ್ಕರ
ಪವಿತ್ರಾತ್ಮನ ಬಲ ಗುರುವಾಗಿ ಒಳಗಿದ್ದೊಡೆ
ಪ್ರೇತ ಪ್ರಾರಬ್ಧ ಎತ್ತಣದು ಜಗದೊಳಗೆ
ಪರದೈವ ಕಾಣು ಗಂಗಯ್ಯ
ಭಂಗುರದ ಬಾಳೆಂಬ ಬಡಿದಾಟಕೆ ಬೆಚ್ಚದೆ
ಬವಣೆಯ ಭಾವಕ್ಕೆ ಬಸವಳಿದು ಬತ್ತದೆ
ಬೇಕಾಗಿ ಬಾಳು ಗಂಗಯ್ಯ
ಹುಸಿಯಾಟ ಕಟ್ಟಿಟ್ಟು ಜಗದಾಟ ಕೈಬಿಟ್ಟು
ಹೂಮನದಿ ಹೊಸೆದ ಹೊಂಗನಸ ಬಿಚ್ಚಿಟ್ಟು
ಹಸಿರಾಗು ಜಗದಿ ಗಂಗಯ್ಯ
ಯಶದ ತೃಷೆಗೆ ಕೆಸರ ಹಂಗೇಕೆ ಯೋಗಿತಾ
ಯಶೋನಿಧಿಯ ಯಶದ ನೆಲೆವೀಡಿನೊಳು
ಯಶಸ್ಕರನಾಗು ಗಂಗಯ್ಯ
——————
ಗಂಗಾಧರ ಬಿ ಎಲ್ ನಿಟ್ಟೂರ್
Very nice sir
Nice