ಕಾವ್ಯ ಸಂಗಾತಿ
ಸರೋಜಾ ಎಸ್.ಅಮಾತಿ
ದೇವನೊಲುಮೆ
ಬೆರಗಿನ ಬೆಳಗಾಗಲು ಆಗಸದ ಸುತ್ತ
ಕಳೆಯುತ ಕತ್ತಲು ಹೋಗುವುದೆತ್ತ?
ನೆಲದಲದು ಹಸಿರುಸಿರು ಪಲ್ಲವಿಸಿ
ಗೆಲುವಿನ ಚೆಲುವ ಸುಮವದು ಹಾರೈಸಿ
ನಿತ್ಯದ ಸೃಷ್ಟಿಯದು ನವ ನೂತನ
ಕಾಣುತ ದೃಷ್ಟಿಯಲಿ ಹೊಸ ಚೇತನ
ನೆಲದೊಡಲಲಿ ಬೀಜವದು ಅಂಕುರಿಸಿ
ಬೇರಿನುಸಿರು ಎಲೆ ಬಳ್ಳಿಯಲಿ ಸಂಚರಿಸಿ
ಮಳೆಹನಿಯದು ಸ್ನೇಹದಿ ನೀರುಣಿಸಲು
ತೆನೆ ತೆನೆ ಕಾಳಾಗುತ ತಾ ತಲೆದೂಗಲು
ಹಸಿದವರಿಗೆ ತುತ್ತನಿತ್ತು ಅನ್ನವಾಯಿತು
‘ಜೀವಸಿರಿ’ ಭೂತಾಯಿಗೆ ಶರಣೆಂದಿತು!
ಸೃಷ್ಟಿಯ ಉದಾರತೆ ಉಡುಗೊರೆಯಂತೆ
ತೋರುವ ಮಮತೆ ಅಂತಃಕರಣದ ಕರೆಯಂತೆ
ಪ್ರತೀ ಬೆಳಗು ಭರವಸೆಯ ಹೊಂಗನಸಿನಂತೆ
ಕಂಪು ಸೂಸುವ ಮುಗುಳ್ನಗೆಯ ಮಲ್ಲಿಗೆಯಂತೆ
ಬದುಕಿನುದ್ದಕ್ಕೂ ಸ್ಮರಿಸು ನೇಸರ ಪ್ರೇರಣೆಯಂತೆ
ಜನಿಸಿಹ ಜೀವಕ್ಕೆಲ್ಲ ದೇವನೊಲುಮೆಯಂತೆ!
ಸರೋಜಾ ಎಸ್.ಅಮಾತಿ,ಮುಂಬೈ