ಶ್ರೀಸಾಮಾನ್ಯರಿಗೆ ದನಿಯಾದ ಅಸಾಮಾನ್ಯ ಸಾಧನೆಯ ಯುವಕ…… ಮಂಜುನಾಥ್ ತೋಟಗೇರ ವ್ಯಕ್ತಿ ಪರಿಚಯ-ವೀಣಾ ಹೇಮಂತ್ ಗೌಡ ಪಾಟೀಲ್

ಅದು 2014ನೇ ಇಸವಿ. ಆಗತಾನೆ ಎಲ್ಲೆಡೆ ವಾಟ್ಸಪ್ ಕಾಲಿಟ್ಟಿದ್ದು ಜಿಲ್ಲಾ ಕೇಂದ್ರದಲ್ಲಿ ವಾಸವಾಗಿದ್ದ ಟ್ರ್ಯಾಕ್ಟರ್ ಶೋರೂಮ್ ನಲ್ಲಿ  ಕಾರ್ಯನಿರ್ವಹಿಸುತ್ತಿದ್ದ ಪದವೀಧರನಾದ ಉತ್ಸಾಹಿ ಯುವಕನೋರ್ವ ತನ್ನ ಪರಿಚಿತ ವಲಯದ ಸ್ನೇಹಿತರ ಗುಂಪೊಂದನ್ನು ವಾಟ್ಸಪ್ ನಲ್ಲಿ ಕ್ರಿಯೇಟ್ ಮಾಡಿದ. ಸಾಮಾನ್ಯವಾಗಿ ಮೆಸೇಜ್ಗಳು, ವಿಡಿಯೋಗಳಿಂದ ಕೂಡಿದ ಗುಂಪುಗಳ ನಡುವೆ ರಕ್ತದಾನವನ್ನು ಮುಖ್ಯ ಉದ್ದೇಶವನ್ನಾಗಿಸಿಕೊಂಡು ಪ್ರಾರಂಭವಾದ ಈ ವಾಟ್ಸಪ್ ಗ್ರೂಪ್ ಮೂಲಕ ಹಲವಾರು ಜನ ಗರ್ಭಿಣಿಯರಿಗೆ, ಅಪಘಾತದಿಂದ ತೀವ್ರ ರಕ್ತಸ್ರಾವ ದಿಂದ ಬಳಲುತ್ತಿರುವವರಿಗೆ ಸೂಕ್ತ ಗುಂಪಿನ ರಕ್ತವನ್ನು ಅವಶ್ಯಕ ಸಮಯದಲ್ಲಿ ಪೂರೈಕೆ ಮಾಡುತ್ತಿದ್ದರು.

 ಅದೊಂದು ದಿನ ಮುಂಜಾನೆ ತನ್ನ ಕೆಲಸದಲ್ಲಿ ನಿರತನಾಗಿದ್ದ ಈ ಉತ್ಸಾಹಿ ಯುವಕನನ್ನು ತುರ್ತಾಗಿ ಸರ್ಕಾರಿ ಆಸ್ಪತ್ರೆಗೆ ಬರಲು ಹೇಳಿದ ಆಸ್ಪತ್ರೆಯವರು ಆತ ಬಂದ ಕೂಡಲೇ ನೆನ್ನೆ ದಾಖಲಾದ ಗರ್ಭಿಣಿ ಸ್ತ್ರೀ ಹೆರಿಗೆಯಾಗಿದ್ದು ಆತನಿಂದಲೇ ಆಕೆಗೆ ಎಬಿ ನೆಗೆಟಿವ್ ರಕ್ತ ಪೂರೈಕೆ ಆಗಲು ಅನುಕೂಲವಾಗಿದ್ದನ್ನು ಹೇಳಿದರು. ಜವಾಬ್ದಾರಿ ಹೊರಬೇಕಾದ ಆಕೆಯ ಪತಿ ಅಲ್ಲೆಲ್ಲೋ ಕುಡಿದು ಬಿದ್ದಿರುವುದಾಗಿಯೂ ಅತ್ಯಂತ ವಿರಳವಾಗಿರುವ ಎಬಿ ನೆಗೆಟಿವ್ ರಕ್ತ ಪೂರೈಸಿ ಬಾಣಂತಿ ಮತ್ತು ಮಗುವಿನ ಜೀವ ಉಳಿಕೆಗೆ ಕಾರಣವಾದ ಆತನ ಕೈಯಲ್ಲಿ ಮಗುವನ್ನು ಇಟ್ಟು ಆತನೇ ಮಗುವಿಗೆ ಹೆಸರಿಡಲು ಕೋರಿಕೊಂಡರು. ಕೊಂಚ ಸಂತಸ ಮತ್ತು ತುಸು ಆತಂಕ ಮಿಶ್ರಿತ ಭಾವ ದಿಂದ ಆತ ಕೈಯಲ್ಲಿರುವ ಹೆಣ್ಣುಮಗುವಿಗೆ ಅಂದು ಭಾನುವಾರವಾದ ಕಾರಣ ಭಾನು ಎಂದು ಹೆಸರಿಟ್ಟಾಗ ಎಲ್ಲರೂ ಚಪ್ಪಾಳೆ ತಟ್ಟಿ ಸಂತಸ ವ್ಯಕ್ತಪಡಿಸಿದರು. ಕಳೆದ ಮೂರು ನಾಲ್ಕು ವರ್ಷಗಳಿಂದ ಆ ಯುವಕನು ಮಾಡುತ್ತಿರುವ ಈ ರಕ್ತದಾನದ ವ್ಯವಸ್ಥೆಯ ಕೆಲಸ ಜೀವ ಉಳಿಸುವ ಮಹೋನ್ನತ ಕಾರ್ಯವು ಸಾಮಾಜಿಕ ಜಾಲತಾಣಗಳ ಮೂಲಕ ಎಲ್ಲೆಡೆ ಹರಡಿ 2016ರಲ್ಲಿ ಬಿ ಟಿವಿಯವರ ‘ಭರವಸೆಯ ರಕ್ತದಾನಿ’ ಎಂದು ಗುರುತಿಸಿ ಗೌರವಿಸಿದರೆ, 2017ರಲ್ಲಿ ಕೊಪ್ಪಳದ ಪಬ್ಲಿಕ್ ಟಿವಿಯವರು “ಪಬ್ಲಿಕ್ ಹೀರೋ”ಎಂದು ಕರೆದು ಗೌರವಿಸಿದರು. ಆತನೇ ಮಂಜುನಾಥ್ ತೋಟಗೇರ್.

 ಮಂಜುನಾಥನ ತಂದೆ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.ತಮ್ಮ ಮೊದಲ ಪತ್ನಿಯ ಮರಣ ನಂತರ ಇಬ್ಬರು ಗಂಡು ಮಕ್ಕಳನ್ನು ಜೋಪಾನ ಮಾಡಲು ಆಕೆಯ ತಂಗಿಯನ್ನೇ ಮದುವೆಯಾದರು.ಆಗ ಹುಟ್ಟಿದ ಮಂಜುನಾಥ್ ಗೆ ಮತ್ತೆ ಓರ್ವ ತಮ್ಮ ಮತ್ತು ತಂಗಿ ಜನಿಸಿದರು. ಯಾವುದಕ್ಕೂ ಕೊರತೆ ಇಲ್ಲದಂತೆ  ಮಕ್ಕಳು ಬೆಳೆದರು. ಮಂಜುನಾಥನಿಗೆ 10 ವರ್ಷ ಆದಾಗ ಆತನ ತಂದೆ ತೀರಿ ಹೋದರು. ಇಲ್ಲಿಂದ ಅವರ ಸಂಕಷ್ಟಗಳ ಸರಮಾಲೆ ಆರಂಭವಾಯಿತು.

 ಅಪ್ಪನ ಮರಣದ ನಂತರ ಮೊದಲ ಹೆಂಡತಿಯ ಮಕ್ಕಳಿಬ್ಬರು ತಮ್ಮ ಚಿಕ್ಕಪ್ಪನ ಆಶ್ರಯಕ್ಕೆ ಹೋಗಿ ಇವರಿಂದ ದೂರವಾದರು. ಬರುವ ಅಲ್ಪ ವೇತನದಲ್ಲಿ ತಾಯಿ ಮತ್ತು ಮೂರು ಜನ ಮಕ್ಕಳ ಜೀವನ ಸಾಗಬೇಕಾಗಿದ್ದು ಕುಟುಂಬ ನಿರ್ವಹಣೆ ದುಸ್ತರವಾಯಿತು.

 ಹತ್ತು ವರ್ಷದ ಮಂಜುವನ್ನು ಉಚಿತವಾಗಿ ನಡೆಸುವ ತುಮಕೂರಿನ ಸಿದ್ದಗಂಗಾ ಶಾಲೆಗೆ ಕಳುಹಿಸಲಾಯಿತು. ರಜಾ ದಿನಗಳಲ್ಲಿ ಮನೆಗೆ ಬರುತ್ತಿದ್ದ ಮಂಜು ಮೆಡಿಕಲ್ ಶಾಪುಗಳಲ್ಲಿ ಕೆಲಸ ಮಾಡಿ ತಾಯಿಗೆ ಸಹಾಯ ಮಾಡುತ್ತಿದ್ದನು.ಮಂಜು ಹತ್ತನೇ ತರಗತಿಯನ್ನು ಪ್ರಥಮ ಶ್ರೇಣಿಯಲ್ಲಿ ಪಾಸಾಗಿ ಶ್ರೀ ಕೊತ್ತಲ ಬಸವೇಶ್ವರ ಸೇಡಂ ನವರು ಕೊಡ ಮಾಡುತ್ತಿದ್ದ ಎರಡೂವರೆ ಸಾವಿರ ರೂಗಳ ಸ್ಕಾಲರ್ಶಿಪ್ ಅನ್ನು ಪಡೆದನು. ಮೊದಲ ಬಾರಿಗೆ ತಾಯಿಯೊಂದಿಗೆ ಹೋಗಿ ತನ್ನ ಬಹುಮಾನದ ಹಣದಲ್ಲಿ ಒಂದು ಸೆಕೆಂಡ್ ಹ್ಯಾಂಡ್ ಸೈಕಲ್ ಖರೀದಿಸಿದ ಮಂಜು ರಸ್ತೆ ಬದಿಯಲ್ಲಿ ಮಾರಾಟ ಮಾಡುತ್ತಿದ್ದ ಶರಟುಗಳನ್ನು ಖರೀದಿಸಿ ಉಳಿದ ಹಣವನ್ನು ಮನೆಯ ಖರ್ಚಿಗೆ ಬಳಸಲು ತಾಯಿಗೆ ನೀಡಿದನು.

 ನಂತರ ತಾವು ವಾಸವಾಗಿರುವ ಭಾಗ್ಯನಗರದಲ್ಲಿಯೇ 2005 ರಲ್ಲಿ ವಾಣಿಜ್ಯ ವಿಭಾಗವನ್ನು ಆಯ್ದುಕೊಂಡು ಪಿಯು ತರಗತಿಗೆ ಅಡ್ಮಿಶನ್ ಮಾಡಿಸಿದ ಮಂಜು ಬೆಳಗಿನ ಜಾವ ಬೇಗನೆ ಎದ್ದು ಹಾಲಿನ ಪ್ಯಾಕೆಟ್ ಗಳನ್ನು ಮನೆ ಮನೆಗೆ ತಲುಪಿಸಿ ಬಂದು ಮತ್ತೆ ಕೊಂಚ ಹೊತ್ತು ಮಲಗಿ ಕಾಲೇಜಿಗೆ ಹೋಗುತ್ತಿದ್ದನು. ಮತ್ತೆ ಮಧ್ಯಾಹ್ನದ ಊಟದ ನಂತರ ಕುಟುಂಬ ನಿರ್ವಹಣೆಗಾಗಿ ತಾಯಿ ಮತ್ತು ಅಜ್ಜಿ ಸೇರಿ ಮಾಡುತ್ತಿದ್ದ ಖಡಕ್ ರೊಟ್ಟಿಗಳನ್ನು ಡಾಬಾಗಳಿಗೆ ಹೋಟೆಲುಗಳಿಗೆ ತನ್ನ ಸೈಕಲ್ನಲ್ಲಿ ಹೋಗಿ ಕೊಟ್ಟು ಬರುತ್ತಿದ್ದ.

 ಮುಂದೆ 2007 ರಲ್ಲಿ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಕಾಲೇಜಿಗೆ ಬಿ.ಕಾಂ. ಪದವಿ ತರಗತಿಗೆ ಅಡ್ಮಿಶನ್ ಮಾಡಿಸಿದ ಮಂಜು ಮುಂಜಾನೆಯ ಕಾಲೇಜು ಅವಧಿಯ ನಂತರ ಮಧ್ಯಾಹ್ನದ ಮೇಲೆ ಮೆಡಿಕಲ್ ಶಾಪ್ ನಲ್ಲಿ ಕೆಲಸ ಮಾಡಿ ಕುಟುಂಬಕ್ಕೆ ಸಹಾಯ ಮಾಡುತ್ತಿದ್ದನು. ಈ ಮಧ್ಯದಲ್ಲಿ ಓದನ್ನು ನಿಲ್ಲಿಸಿದ್ದ ತಮ್ಮನಿಗಾಗಿ ತಾಯಿ ಬ್ಯಾಂಕ್ನ ಹಣಕಾಸು ಸಹಾಯದಿಂದ ಕಂತಿನಲ್ಲಿ ಖರೀದಿಸಿದ್ದ ಆಟೋರಿಕ್ಷಾ ವನ್ನು ಕೂಡ ಸುಮಾರು ಆರು ತಿಂಗಳ ಕಾಲ ಚಲಾಯಿಸಿದ ಮಂಜುನಾಥ್.

 ಬಿ ಕಾಮ್ ಮುಗಿದ ನಂತರ 2010ರಲ್ಲಿ ಹುಬ್ಬಳ್ಳಿಯ ಫೈನಾನ್ಸ್ ಒಂದರಲ್ಲಿ ಎರಡು ವರ್ಷಗಳ ಕಾಲ ಕಾರ್ಯನಿರ್ವಹಿಸಿದ ಮಂಜು ಮತ್ತೆ ಕೊಪ್ಪಳಕ್ಕೆ ಮರಳಿದನು. ಕಾರ್ ಶೋರೂಮ್ ಒಂದರಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ  ಸೇರಿಕೊಂಡ ಮಂಜುಗೆ 2013ರಲ್ಲಿ ಕುಟುಂಬದ ಆರ್ಥಿಕ ಪರಿಸ್ಥಿತಿ ಅಷ್ಟೇನೂ ಉತ್ತಮವಾಗಿಲ್ಲದ ಕಾರಣ ಗಂಗಾವತಿಯಲ್ಲಿ ನಡೆದ ಸಾಮೂಹಿಕ ವಿವಾಹದಲ್ಲಿ ಮಾಡಲಾಯಿತು.
 2014ರಲ್ಲಿ ಓರ್ವ ಪುತ್ರಿಯನ್ನು ಪಡೆದ ಮಂಜುವಿನ ಆರ್ಥಿಕ ಪರಿಸ್ಥಿತಿ ಕೊಂಚ ಉತ್ತಮಗೊಂಡಿದ್ದರೂ ಮಾಡಬೇಕಾದ ಕರ್ತವ್ಯಗಳು ಸಾಕಷ್ಟಿದ್ದವು.

 ಇದೇ ಸಮಯದಲ್ಲಿ ಮಂಜು ವಾಟ್ಸಪ್ ನಲ್ಲಿ ಆರಂಭಿಸಿದ ರಕ್ತದಾನಿಗಳ ಗುಂಪು ಸಾಕಷ್ಟು ಜನ ಗರ್ಭಿಣಿ ಮಹಿಳೆಯರಿಗೆ, ಅಪಘಾತ ಪೀಡಿತರಿಗೆ ತುರ್ತು ರಕ್ತದ ಪುರೈಕೆಯನ್ನು ಆರಂಭಿಸಿ ಕೇವಲ ಎರಡು ಮೂರು ವರ್ಷಗಳಲ್ಲಿ ನೂರಾರು ಜನರ ಪ್ರಾಣ ಉಳಿಸಿತು. ಕ್ರಮೇಣ ಈ ವಿಷಯ ಸಾಮಾಜಿಕ ಜಾಲತಾಣಗಳ ಮೂಲಕ ಎಲ್ಲೆಡೆ ಹರಡಿ ರಾಜ್ಯಾದ್ಯಂತ ಮಂಜುವನ್ನು ಗುರುತಿಸಿ ಗೌರವಿಸಲಾಯಿತು.

  ಗಣ್ಯ ವ್ಯಕ್ತಿಯೊಬ್ಬರಿಗೆ ಟ್ಯಾಕ್ಸಿ ಚಾಲಕನಾಗಿ ಕಾರ್ಯನಿರ್ವಹಿಸಲು ಆರಂಭಿಸಿದ ಮಂಜುವಿನ ಏಳಿಗೆ ಮತ್ತು ಸಾಮಾಜಿಕ ಪ್ರಸಿದ್ಧಿಯನ್ನು ಸಹಿಸಲಾರದ ಕೆಲ ಜನರು ಆತನ ಕುರಿತು ಅಪಪ್ರಚಾರ ಮಾಡಲಾರಂಭಿಸಿದಾಗ ಬಹಳಷ್ಟು ನೊಂದುಕೊಂಡ ಮಂಜು ಆತ್ಮಹತ್ಯೆಗೂ ಮನಸ್ಸು ಮಾಡಿದ್ದ. ಆ ಸಮಯದಲ್ಲಿ ಆತನ ಬೆನ್ನಿಗೆ ನಿಂತ ಕೆಲ ಆಪ್ತರು ಜನರ ಬಾಯಿಯನ್ನು ಮುಚ್ಚಿಸಲು ಸಾಧ್ಯವಿಲ್ಲ, ನೀನು ಮಾಡುತ್ತಿರುವ ಒಳ್ಳೆಯ ಕೆಲಸಗಳನ್ನು ಮುಂದುವರೆಸಿಕೊಂಡು ಹೋಗು ಎಂದು ಒತ್ತಾಸೆಯಾಗಿ ನಿಂತು ಮಂಜುವಿನ ಆತ್ಮಬಲವನ್ನು ಹೆಚ್ಚಿಸಿದರು.

 ಹಂತ ಹಂತವಾಗಿ ಒಂದೊಂದೇ ಕೆಲಸಗಳನ್ನು ನಿರ್ವಹಿಸುತ್ತಾ ಅಂತಿಮವಾಗಿ ಮೊದಲ ಬಾರಿ ಡಿಜಿಟಲ್ ಮಾಧ್ಯಮದ ಯೂಟ್ಯೂಬ್ ಚಾನೆಲ್ ಆದ ಕನ್ನಡ ಚಾನೆಲ್ ಮಾಧ್ಯಮ ವರದಿಗಾರನಾಗಿ ಪವಾಡ ಬಯಲುಗಾರರಾದ  ಹುಲಿಕಲ್ ನಟರಾಜ್, ಕನ್ನಡ ಚಲನಚಿತ್ರ ರಂಗದ ಹಿರಿಯ ನಟ ದೊಡ್ಡಣ್ಣ, ಅಂಗನವಾಡಿ ಶಾಲೆಗಳಿಗೆ ಬಣ್ಣ ಬಳಿಯಲು ತಮ್ಮ ವೇತನದ ಶೇಕಡ 10 ರಷ್ಟನ್ನು ಬಳಸುವ ಜಿಲ್ಲಾ ಪಂಚಾಯತ್ ಅಧಿಕಾರಿಯಾಗಿರುವ ಮಲ್ಲಿಕಾರ್ಜುನ ತೊದಲಬಾಗಿಯವರಂತಹ ಗಣ್ಯರನ್ನು ಸಂದರ್ಶಿಸಿರುವ ಮಂಜುನಾಥ್ ರವರು, ಸಮಾಜದ ವಿವಿಧ ಸ್ಥರಗಳಲ್ಲಿರುವ ಶ್ರೀಸಾಮಾನ್ಯರ ನೋವಿಗೆ, ತೊಂದರೆಗಳಿಗೆ ದನಿಯಾಗಿ ಕಾರ್ಯನಿರ್ವಹಿಸಿದ್ದಾರೆ. ವಿದ್ಯಾರ್ಥಿಗಳ ಭವ್ಯ ಭವಿಷ್ಯಕ್ಕೆ ನೆರವಾಗುವ ಸಮಾಜ ಪರ ಸಂಘಟನೆಗಳಿಗೆ ಧ್ವನಿಯಾಗುವ, ಸಾಮಾನ್ಯರ ತೊಂದರೆಗಳಿಗೆ ಕಿವಿಯಾಗಿ, ಸಾರ್ವಜನಿಕರಿಗೆ ಆಗುವ ತೊಂದರೆಗಳನ್ನು ಸರ್ಕಾರಕ್ಕೆ ಮುಟ್ಟಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಮಂಜುನಾಥ್ ಇಂದು ತಮ್ಮದೇ ಸ್ವಂತ ವಾಹನದಲ್ಲಿ ಸಂದರ್ಶನವನ್ನು ಕೈಗೊಳ್ಳುತ್ತಾ ಜನಪರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಗಣ್ಯಾತಿ ಗಣ್ಯರ, ಸಾಧಕರು ಮತ್ತು ಸಮಾಜಮುಖಿ ವ್ಯಕ್ತಿಗಳನ್ನು ಸಂದರ್ಶಿಸುತ್ತಾ ಜನರ ಮತ್ತು ಅಧಿಕಾರಿಗಳ ನಡುವಿನ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

 ಮಾಧ್ಯಮ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿ ವಹಿಸಿ ಕಾರ್ಯನಿರ್ವಹಿಸುತ್ತಿರುವ ಮಂಜುನಾಥ್ ಅವರಿಗೆ ಸಹಜವಾಗಿಯೇ ಜೀವ ಬೆದರಿಕೆಯ ಕರೆಗಳು ಕೂಡ ಬಂದಿವೆ ಎಂದರೆ ಅವರ ದಿಟ್ಟ ಮತ್ತು ಜನಪರ ಒಲವು, ನಿಲುವುಗಳ ಕುರಿತು ನಮಗೆ ಅರಿವಾಗಬಹುದು.

 ಸುವರ್ಣ ಚಾನೆಲ್ ನ ಮುಖ್ಯ ವರದಿಗಾರರಾದ ಅಜಿತ್ ಹನುಮಕ್ಕನವರ್ ಅವರಿಂದ ಪ್ರಭಾವಿತಗೊಂಡ ಮಂಜುನಾಥ್ ಅವರು ರೈತನ ಬಾಳನ್ನು ಕುರಿತ ‘ಒಂಟಿಮರ’ ಎಂಬ ಕಿರು ಚಿತ್ರವನ್ನು ತಯಾರಿಸಿ ಅದನ್ನು ಅಜಿತ್ ಹನುಮಕ್ಕನವರ್ ಅವರಿಂದಲೇ ಬಿಡುಗಡೆಗೊಳಿಸಿದರು.  ಅವರಂತೆಯೇ ದಿರಿಸನ್ನು ಧರಿಸಿ, ಹಾವಭಾವ, ಪ್ರಶ್ನೆಗಳನ್ನು ಕೇಳುವ ವಿಧಾನಗಳನ್ನು ಕಂಡ ಜನರು ಅವರಿಗೆ ‘ಜೂನಿಯರ್ ಅಜಿತ್ ಹನುಮಕ್ಕನವರ್’ ಎಂದು ಕರೆದು ಗೌರವಿಸಿದ್ದಾರೆ.

 ಸಂದರ್ಶಕರಿಗಿರಬೇಕಾದ ಚಾಕಚಕ್ಯತೆ, ಜ್ಞಾನ, ವಿಷಯದ ಕುರಿತಾದ ಸಮಗ್ರ ಮಾಹಿತಿ, ಸಮಯಪ್ರಜ್ಞೆ ಮತ್ತು ಮಾತಿನ ಮೇಲಿನ ಹಿಡಿತಗಳನ್ನು ಹೊಂದಿರುವ ಮಂಜುನಾಥ್ ಇದೀಗ ಕೊಪ್ಪಳದ ಪ್ರಮುಖ ಡಿಜಿಟಲ್ ಮಾಧ್ಯಮ ವರದಿಗಾರರಾಗಿದ್ದಾರೆ, ಆದರೂ ಕೂಡ ಇವರ ಪ್ರತಿಭೆಗೆ ತಕ್ಕ ಮನ್ನಣೆ ದೊರೆಯುತ್ತಿಲ್ಲ ಎಂಬುದು ವಿಪರ್ಯಾಸದ ಸಂಗತಿ.

 ವೈಯುಕ್ತಿಕ ಬದುಕಿನಲ್ಲಿ ಸುಖಿಯಾಗಿರುವ ಇವರ ಕಾರ್ಯಗಳಿಗೆ ತಾಯಿ ಅಕ್ಕಮಹಾದೇವಿಯವರ ಪ್ರೋತ್ಸಾಹ ಮತ್ತು ಆಶೀರ್ವಾದ,ಪತ್ನಿ ಮೀನಾಕ್ಷಿಯವರ ಸಹಕಾರ ಮತ್ತು ನೆರವು ಇದ್ದು ಮಕ್ಕಳಾದ ಸೃಷ್ಟಿ ಮತ್ತು ಆಕಾಂಕ್ಷ ಅವರನ್ನು ಒಳಗೊಂಡ ಪುಟ್ಟ ಸಂಸಾರ ಇವರದು.

 ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಯೂನಿಯನ್ ಲೀಡರ್ ಆಗಿದ್ದ ತಮ್ಮ ತಂದೆಯವರ ನಾಯಕತ್ವ ಗುಣವನ್ನು ಬಳುವಳಿಯಾಗಿ ಪಡೆದುಕೊಂಡಿರುವ ಮಂಜುನಾಥ್ ಅವರ ತಾಯಿ ಅಕ್ಕಮಹಾದೇವಿ ಮತ್ತು ಅಜ್ಜಿ ಗೌರಮ್ಮ ಮಾಲಿಪಾಟೀಲ್ ರವರ ಕಷ್ಟಕರ ಜೀವನದಲ್ಲಿಯೂ ಧೈರ್ಯಗೆಡದೆ ಬದುಕು ಸಾಗಿಸಿದ ಆದರ್ಶಪ್ರಾಯ ರೀತಿಗಳು,ಬಾಲ್ಯದಲ್ಲಿ ಸಹಿಸಿದ ಕಷ್ಟ ನಿಷ್ಟುರಗಳು ಅವರ ಇಂದಿನ ಬೆಳವಣಿಗೆಗೆ ಕಾರಣವಾಗಿವೆ.
 ಈ ಹಂತದಲ್ಲಿ ಅವರು ಉಂಡ ನೋವುಗಳು, ಸಹಿಸಿದ ಅವಮಾನಗಳು ಅವರನ್ನು ಇಂದು ಯಶಸ್ಸಿನ ಮೆಟ್ಟಿಲಲ್ಲಿ ನಿಲ್ಲಿಸಿದೆ ಎಂದರೆ ತಪ್ಪಲ್ಲ.

 ಇನ್ನಷ್ಟು ಜನಪರ ವರದಿಗಳು, ಸಾಧನೆಗಳ ಮತ್ತು ಸಾಧಕರ ಕುರಿತಾದ ಸಂದರ್ಶನಗಳ ಮೂಲಕ ಅವರ ಪ್ರತಿಭೆ ಬೆಳಕು ಕಾಣಲಿ.ರಾಜ್ಯ ಮತ್ತು ರಾಷ್ಟ್ರಮಟ್ಟದ ದೃಶ್ಯ ಮಾಧ್ಯಮಗಳಲ್ಲಿ ಕಾರ್ಯ ನಿರ್ವಹಿಸಬೇಕೆನ್ನುವ ಮಂಜುನಾಥ್ ಅವರ ಆಶಯ ನೆರವೇರಲಿ ಎಂದು ಹಾರೈಸುವ


Leave a Reply

Back To Top