ನೋಬೆಲ್ ಪ್ರಶಸ್ತಿ ವಿಜೇತ ರಾಷ್ಟ್ರಕವಿ ರವೀಂದ್ರನಾಥ ಟ್ಯಾಗೋರ್ ಅವರು ಬರೆದ ಏಸುಕ್ರಿಸ್ತನ ಜನನದ ಮೇಲಿನ The Child ಕವನದ ಕನ್ನಡ ಭಾಷಾಂತರ- ವಂದಗದ್ದೆ ಗಣೇಶ್ ಅವರಿಂದ

ದಟ್ಟ ಕಾನನದಲ್ಲಿ ಹಚ್ಚ ಹಸಿರೆಲೆ ಮೇಲೆ
ಮಂಜಿನ ಹನಿಗಳು ತಾ ತುಂಬಿ ತುಳುಕಾಡುತಿರಲು
ಬೆಳಗಿನಾ ಎಳೆ ಬಿಸಿಲು ತೂರಿ ಬರುತಿರುವಾಗ
ತಾರೆಗಳ ತಾಣವನು ಗಮನಿಸಿದ ಜೋಯಿಸರು
“ಇತ್ತ ಬನ್ನಿ ಗೆಳೆಯರೆ ಇತ್ತ ಬನ್ನಿ” ಎಂದು
ಚಲಿಸುತಿಹ ಭಕ್ತರನು ಕೈಬೀಸಿ ಕರೆದರು

ಮಂದಿಯೆಲ್ಲರು ನಿಂತು ಸುತ್ತಲೂ ನೋಡುತಿರೆ
ಬಟ್ಟೆಯಿಕ್ಕೆಡೆಗಳಲ್ಲಿ ತುಂಬಿ ತುಳುಕುವ ಧಾನ್ಯಗಳು
ದ್ರಾಕ್ಷಿ, ಖರ್ಜೂರ, ಆಲೀವ್ ತೋಟಗಳು
ಕಾಯಕದಿ ಕುಂಬಾರ, ಕುರಿ ಕಾಯುವಾ ಕುರುಬ
ಕೊಡ ಹೊತ್ತು ನೀರಿಗೆ ಹೊರಟಂತ ಮಹಿಳೆ
ಉತ್ತು ಬಿತ್ತಲು ಅಣಿಯಾದ ನೇಗಿಲ ಯೋಗಿ,

“ಎಲ್ಲಿದೆ? ಎಲ್ಲಿದೆ? ನಮ್ಮ ದೇವ ಮಂದಿರ
ಎಲ್ಲಿ ಜನಿಸಿಹನವನು, ಎಲ್ಲಿಹುದು ಆ ಹೊನ್ನಿನ ಗಣಿ?
ಹೃದಯ ಮಂದಿರದ ಆ ದೇವ ದೇವನ ತಾಣ?
ತಾರೆಗಳ ತಾಣವದು ದಿಕ್ಕು ತಪ್ಪಿಸುವುದೇ ಇಲ್ಲ,
ಇಲ್ಲೇ, ಎಲ್ಲೋ ಅಡಗಿದೆ, ಬನ್ನಿ ಅರಸೋಣ.
ತಾರೆಗಳು ತೋರಿಸಿದ ತಾಣದ ದಿಕ್ಕಿನಲಿ
ಜೋಯಿಸರು ಚಲಿಸಿದರು ಭಕ್ತಿ ಪರವಶರಾಗಿ
ಸುಪ್ರಭಾತದ ತರದಿ ಹೊರ ಬರುವ ಸ್ವರದಂತೆ

ಝರಿಯೊಂದು ರಭಸದಲಿ ಧುಮುಕುತಿತ್ತು
ನೂರಾರು ಮರಗಿಡ ಬಳ್ಳಿಗಳ ಮಧ್ಯದಲಿ
ಅಡಗಿ ನಿಂತಿರುವ ಆ ಪರ್ಣಕುಟೀರವ ಕಂಡು
ಭಕ್ತರೆಲ್ಲರು ಕುಣಿದರು ಅಮಿತೋತ್ಸಾಹದಲಿ.
ಸ್ವಾಮಿಯ ದರ್ಶನಕಾಗಿ ಜೋಯಿಸರ ಜೊತೆ
ಭಕ್ತರೆಲ್ಲರು ಕೂಡಿ ಪ್ರಾರ್ಥಿಸಲು ತಾಯಿಯ
“ಬಾಗಿಲು ತೆಗೆಯೇ ಅಮ್ಮ ಬಾಗಿಲು ತೆಗೆಯೇ” ಎಂದು
ಸೂರ್ಯದೇವನು ಕೂಡಾ ಇಣುಕಿ ನೋಡುತಲಿದ್ದ
ಆ ಜಗದೀಶನ ದಿವ್ಯ ದರ್ಶನವ ಪಡೆಯಲು.

ಸ್ವರ್ಗಲೋಕದ ಬಾಗಿಲನು ತಾಯಿ ತಾ ತೆರೆದಾಗ
ಹುಲ್ಲಿನ ತಡಿಯಲ್ಲಿ ವಿರಮಿಸುತಲಿದ್ದನು ಆ ದೇವ
ತೊಡೆಯ ಮೇಲೆಯೆ ಮಲಗಿ ನಿದ್ರಿಸುತಿಹ ದೇವನ
ಮೇಲೆ ತಿಳಿಯಾದ ಎಳೆ ಬಿಸಿಲು ಬಂದು ಮುತ್ತಿಟ್ಟಾಗ
ಧ್ರುವ ತಾರೆಯಂತೆ ಮಿರ ಮಿರ ಮಿಂಚುತಲಿದ್ದನಾ ದೇವ ಮುಗ್ಧ ಕಂದನ ಆ ವದನದಲಿ ಚಿಮ್ಮುವ ತಿಳಿ ನಗುವ ಕಂಡು“ಜಯವಾಗಲಿ ಪ್ರಭುವಿಗೆ, ಜಯವಾಗಲಿ ನವಜಾತನಿಗೆ ಜಯವಾಗಲಿ ಮಹೇಶ್ವರನಿಗೆ, ಜಯವಾಗಲಿ ಜಗತ್ಪಾಲಕನಿಗೆ”
ಎನುತ ಸಮಸ್ತ ಜನತೆಯು ಕೂಡಿ ಹಾಡಿ ನಮಿಸಿದರು.


Leave a Reply

Back To Top