ವಾಣಿ ಯಡಹಳ್ಳಿಮಠ ಅವರ ಗಜಲ್

ನೀ ಹೋಗುವಾಗ ದಾರಿಯುದ್ದಕ್ಕೂ
ನಿನ್ನೆನಪುಗಳ ಕಳೆಯನು ಕೀಳುತ ಹೋಗು
ಹಿಂದಿರುಗಿ  ಬಾರದಂತೆ ಮುಳ್ಳಿನ
ಹಾಸಿಗೆಯ ಹಾಸುತ ಹೋಗು

ನೀ ಕೊಟ್ಟ ಗುಲಾಬಿ ಗಿಡದಲ್ಲೀಗ
ಮೊಗ್ಗುಗಳು  ಅರಳುವುದಿಲ್ಲ
ನನ್ನಂಗಳದಲ್ಲಿನ ಒಲವಿನ ಮಣ್ಣಿನ
ವಾಸನೆಯ ಮರೆಯುತ ಹೋಗು

 ನೀ ಕಳುಹಿಸಿದ ಪತ್ರಗಳಿಂದ
ಪ್ರೇಮದ ಪಿಸುಮಾತು ಕೇಳಿಸುತಿಲ್ಲ  
 ಈ ಸುಳ್ಳಿನ ಕಂತೆಗಳಿಗೆ ಬೆಂಕಿ ಹಚ್ಚುತ
ನಂಬಿಕೆಯ ಕತ್ತನು ಸೀಳುತ ಹೋಗು

ಚಂದ್ರ ಚುಕ್ಕಿಗಳೊಂದಿಗೆ ಮಾತಾಡುವ
ಮನಸಿಲ್ಲ ಈ ಮನಸಿಗೀಗ
ಹುಣ್ಣಿಮೆಯ ಬೆಳದಿಂಗಳಿಗೆ ಅಮವಾಸೆಯ
ಕತ್ತಲನು ನೀಡುತ ಹೋಗು

ಮನಸಿಗೆ ಹಚ್ಚಿದ ಮದರಂಗಿಯ
ರಂಗೋಲಿಯಲಿ ನಿನ್ಹೆಸರು ಬರೆದಿದ್ದಳು ‘ವಾಣಿ ‘
 ನಿನ್ನ ಕೈಯ್ಯಾರೆ ಕರಿಮಸಿಯಿಂದ
ಆ ಹೆಸರನು ಅಳಿಸುತ ಹೋಗು

4 thoughts on “ವಾಣಿ ಯಡಹಳ್ಳಿಮಠ ಅವರ ಗಜಲ್

Leave a Reply

Back To Top