ಕಾವ್ಯ ಸಂಗಾತಿ
ಡಾ. ಜಿ.ಪಿ.ಕುಸುಮಾ ಮುಂಬಯಿ
ಸರ್ಕಲ್
ಚಿತ್ರ ಕೃಪೆ: ಗೂಗಲ್
ನಗರದೆದೆಯ ಮೇಲೆ
ಈ ಸರ್ಕಲ್ ಎಷ್ಟೊಂದು ದೊಡ್ಡದಿದೆ ಗೊತ್ತೆ
ವಾಹನಗಳು ಅದೆಷ್ಟು
ಓಡಾಡುತ್ತಿವೆ
ರಸ್ತೆ ದಾಟುವುದೇ ಕಷ್ಟ ವಾಗುತ್ತಿದೆ.
ಜನರು ರಾಶಿ ರಾಶಿಯಾಗಿ
ಓಡಾಡುವ ಸರ್ಕಲ್ನಲ್ಲಿ
ಗುಬ್ಬಚ್ಚಿ
ಅದರಷ್ಟಕ್ಕದು ಹಾರುತ್ತಿತ್ತು.
ಮೊನ್ನೆ ಒಬ್ಬ
ಹಾರುವ ಹಕ್ಕಿಯ ಸ್ವಾತಂತ್ರ್ಯ
ಕಳಚಿದ
ನಡು ರಸ್ತೆಯಲ್ಲಿ ನಡುಹಗಲಲ್ಲೇ
ತಿವಿದುಬಿಟ್ಟ
ಒಂದೆರಡಲ್ಲ ಎಷ್ಟು ತುಂಡು ಮಾಡಿದ
ಎಂದು ಟಿ.ವಿ.ಯೆದುರು ಕೂತು ನೋಡಿದ
ಜೀವನದಲ್ಲಿ ಮುಂದೆ ಹೋಗುತ್ತಿದ್ದವರೆಲ್ಲ
ನಿಂತು ವೀಡಿಯೋ ಮಾಡುತ್ತಿದ್ದರು
ವೈರಲ್ ಮಾಡಿ
ಮೃದುವಾದ ಹಾಸಿಗೆಯ ಮೇಲೆ
ನಿದ್ದೆ ಹೋದರು.
ಗೀತೆ ಬೈಬಲ್ ಕುರಾನ್ ಗಳು
ಅಂದು ಮುಖ ಮುಖ ನೋಡಿಕೊಂಡವು
ಕೆಂಪು ಬಣ್ಣ ನೆಲದ ಮಣ್ಣಿನ
ಹಸಿವು ತಗ್ಗಿಸಲು
ಅದೆಷ್ಟು ದುಡಿಯುತ್ತಿತ್ತೆಂದರೆ
ಅವನು ಹೊಡೆದಷ್ಟು ಚಿಮ್ಮುತ್ತಿತ್ತು.
ದಿನದಿನದ ಕೆಲಸವೆಂಬಂತೆ
ಬೇಟೆಯಾಡುವುದು
ಸುಲಭವಾಗಿ
ಬದುಕು ಬಜಾರು ಮಾಡಿಕೊಂಡವರ
ಎದೆಶಕ್ತಿಗೆ ಬೇಜಾರು ಬರೋತನಕ
ಹಾರುವುದ ಮರೆಯಬೇಕೇ
ಹಕ್ಕಿಗಳು ಸರ್ಕಲ್ನಲ್ಲಿ ?
ಡಾ. ಜಿ.ಪಿ.ಕುಸುಮಾ ಮುಂಬಯಿ
ಮಾರ್ಮಿಕವಾದ ಮನ ತಟ್ಟಿದ ಕವನ