ಡಾ. ಅರಕಲಗೂಡು ನೀಲಕಂಠ ಮೂರ್ತಿ ಅವರ ಕವಿತೆ-ಮೌನ ಭಣಗುಡುವ ಮೈದಾನ!

ಗೆದ್ದವರು ಸೋತವರು
ಅಳಿದವರು ಉಳಿದವರು
ಎಲ್ಲ ಥರ ಆಳಿದವರು
ಇಲ್ಲಿ ಮಲಗಿದ್ದಾರೆ
ನಿಶ್ಚಿಂತೆಯ ನಿದ್ದೆಯಲಿ!

ಒಂದೊಮ್ಮೆ ಜರ್ಬಿನಲಿ
ಕೋಡೆತ್ತಿ ತಿವಿದುರುಳಿಸಿದ
ಅಸಾಧ್ಯ ಎತ್ತುಗಳು
ಜಗಕೆಲ್ಲ ಹಾಲುಣಿಸಿದ
ತಾಯಿಮನದ ಹಸುಗಳು
ಘರ್ಜನೆಯ ಸಿಡಿಲ ಧ್ವನಿಯಲಿ
ದಟ್ಟ ಕಾನನವನೆ ಗಡಗಡ ನಡುಗಿಸಿ
ಮುಗ್ಧ ಬೇಟೆಗಳ ರಕ್ತ ಹರಿಸಿ
ಉರುಳಿಸಿ ನೆಕ್ಕಿ ನೆಕ್ಕಿ ತಿಂದು ತೇಗಿದ್ದವು
ಮತ್ತು ಆ ಮುಗ್ಧ ಬೇಟೆಗಳು
ಎಲ್ಲ ಅಕ್ಕಪಕ್ಕ ಜೊತೆಯಲ್ಲಿ
ಮಲಗಿದ್ದಾಗಿದೆ ಇಲ್ಲಿ!

ನಿಂತ ಠೀವಿಯ ಭಂಗಿಯಲಿ ಮೆರೆದಿದ್ದ
ಓಡೋಡಿ ಅಂತಿಮ ಗೆರೆ ದಾಟಿದ್ದ
ಹಾರಾಡಿ ಜಗತ್ತನ್ನೆ ಕೈಲಿ ಹಿಡಿದಿದ್ದ
ಎಲ್ಲ ಥರದ ಜಗದ್ವಿಖ್ಯಾತರೆಲ್ಲ
ಇಲ್ಲೆ ಸದ್ದಿಲ್ಲದೆ ಮಲಗಿದ್ದಾರೆ!

ಒಮ್ಮೊಮ್ಮೆ ಮೊಳಗಿದ್ದ
ಅರಚಿ ಅಬ್ಬರಿಸಿದ್ದ
ಎಲ್ಲ ದನಿಗಳೂ ಅಡಗಿ
ಈಗ ಗಾಢ ನಿಗೂಢ ಮೌನ!

ಎಲ್ಲ ನಮೂನೆಯ ಜೀವಿಗಳು
ಇಲ್ಲಿ ಮಲಗಿ ಕೊಳೆತು
ಕೀಟಗಳ ಆಹಾರವಾಗಿ
ಜಗದಗಲ ಮೌನ ಮಸಣದಲಿ
ಮರೆಯಾಗಿ ನೆನಪಿನಲು ನಶಿಸಿ
ಈಗ ಭೂಮಿಯೊಳಗಣ ಮಿಶ್ರಣ
ಬರಿದೆ ಮಣ್ಣು…!


Leave a Reply

Back To Top