ಅಶ್ಪಾಕ್ ಪೀರಜಾದೆ ಅವರ ಗಜಲ್

ಈಗೀಗ ಈ ಆಲಯಗಿಂತ ನಿನ್ನ ಅನುಭಾವದ ಬಯಲು ಚೆಂದಗಾಣುತಿದೆ
ಒಳಗಣ ಕಲಹಕಿಂತ ನಿನ್ನ ಧ್ಯಾನದ ಮುಗಿಲು ಚೆಂದಗಾಣುತಿದೆ

ಅಮೃತಶೀಲೆಗಳಿಂದ ಶೃಂಗರಿಸಿದ ಮಹಲು ಶಾಶ್ವತವಲ್ಲ ಜೀವನ
ಗೋರಿ ಮೇಲೆ ಬರೆದ ನಿನ್ನ ಸುಣ್ಣದ ಸಾಲು ಚೆಂದಗಾಣುತಿದೆ

ಕೊನೆಯುಸಿರು ಇರುವವರೆಗೆ ಹೋರಾಟ ತಪ್ಪಿದಲ್ಲ ಜಗದಲಿ
ಬಣ್ಣಬಣ್ಣದ ಹೂವುಗಳಿಗಿಂತ ಮುಳ್ಳಿನ ಮಡಿಲು ಚೆಂದಗಾಣತಿದೆ

ಜೀವನದ ಮೂರು ದಿನದ ಜಾತ್ರೆಗೆ ನೂರಾರು ದಿನಗಳ ತಯಾರಿ
ಝಗಮಗಿಸುವ ಬೆಳಕಿಗಿಂತ ಕತ್ತಲೆಯ ಕಡಲು ಚೆಂದಗಾಣುತಿದೆ

ಕಾಲ ಇದು ಯಾರನ್ನೂ ಸುಮ್ನೆ ಬಿಡದು ಪಾಠ ಕಲಿಸಿಯೇ ಕಲಿಸುತ್ತದೆ
ಜಗದ ಮಾಯೆ ಮುಂದೆ ನಿನ್ನ ಅದೃಶ್ಯ ಪ್ರೇಮದ ಹೊನಲು ಚೆಂದಗಾಣುತಿದೆ.


Leave a Reply

Back To Top