ಬೆಟ್ಟಹತ್ಕೊಂಡು ಹೋಗೋರ್ಗೆ ಹಟ್ಟೀ ಹಂಬಲವ್ಯಾಕ..?ವಿಶ್ಲೇಣಾತ್ಮಕ ಲೇಖನ : ಡಾ.ಯಲ್ಲಮ್ಮ ಕೆ.

ಬೆಟ್ಟಹತ್ಕೊಂಡು ಹೋಗೋರ್ಗೆ ಹಟ್ಟೀ ಹಂಬಲವ್ಯಾಕ..?

ನಿರಕ್ಷರ ಸಂಸ್ಕೃತಿಯ ಪ್ರತೀಕವಾಗಿ ಗುರುತಿಸಲ್ಪಡುವ ನಮ್ಮ ಜನಪದರ ಜ್ಞಾನ ಭಂಡಾರಕ್ಕೆ ಎಣೆಯಿಲ್ಲ. ಅವರಲ್ಲಿನ ಪದ ಸಂಪತ್ತಿನಿಂದಾಗಿ ತಮ್ಮ ನಿತ್ಯಜೀವನದ ಕಾರ್ಯ ಚಟುವಟಿಕೆಗಳಲ್ಲಿನ ಜೀವನಾನು ಭವಗಳನ್ನು, ತಮ್ಮಪಾಡನ್ನುಹಾಡನ್ನಾಗಿಸಿ ಅಲ್ಲಲ್ಲಿಯೇ ಪದ ಕಟ್ಟಿ ಹಾಡುವ ಜಾಣ್ಮೆ ಬೆರಗನ್ನು ಹುಟ್ಟಿಸುವಂತದ್ದು. ಜನಪದರ ಹಾಡುಗಳಲ್ಲಿ ಭಕ್ತಿ ಮತ್ತು ಭಾವವು ಮೈ ದಾಳಿ ನಿಂತಿದೆ. ಶ್ಲೀಲ-ಅಶ್ಲೀಲಗಳ ಪರಿಧಿಯಿಂದಾಚೆಗೆ ಅನಂತ ಬಟ್ಟ ಬಯಲಿಗೆ ಬೀಳುವುದಾಗಿದೆ, ಅದನ್ನೇ ಮುಕ್ತಿಯೆಡೆಗೆ ಸಾಗುವ ಪಥವನ್ನಾಗಿಸಿಕೊಂಡರು.

ಅಕ್ಷರ ಜ್ಞಾನವಿಲ್ಲದ ಜನಪದರ ಹಾಡುಗಳು ಬಾಯಿಂದ ಬಾಯಿಗೆ ಕಂಠಸ್ತ ಸಾಹಿತ್ಯ ರೂಪವಾಗಿ ಹರಿದು ಬಂದು ಇಂದಿಗೂ ಜನಮಾನಸದಲ್ಲಿ ನೆಲೆಸಿದ್ದು ಜನಪದ ಸಾಹಿತ್ಯದ ಪ್ರಸ್ತುತತೆಯನ್ನು ಸಾರು ವಂತದ್ದು. ಜನಪದ ಸಾಹಿತ್ಯದೊಡಲಿನಿಂದ ಒಂದು ಸ್ವಾತಿಮುತ್ತನ್ನು ಎತ್ತಿಕೊಂಡು ವಿಶ್ಲೇಷಣೆ ಗೊಳಪಡಿಸುವುದು ನನ್ನಯ ಆಶಯ.

ಹಳೇ ಮೈಸೂರು ಭಾಗ, ಈಗಿನ ಚಾಮರಾಜನಗರ ಜಿಲ್ಲಾ, ಕೊಳ್ಳೆಗಾಲ ತಾಲ್ಲೂಕಿನ ಕೌದಹಳ್ಳಿಯ ಸುತ್ತಣ ಗ್ರಾಮೀಣ ಪ್ರದೇಶದ ಮಹಿಳೆಯೊಬ್ಬಳು ಆರಾಧ್ಯ ದೈವವಾದ ಏಳು ಮಲೆಯ ಮಾದಪ್ಪನ ಕುರಿತಾಗಿ  ತನ್ನ ದೃಢಭಕ್ತಿ-ಭಾವದಿ ತನ್ಮಯಳಾಗಿ ಪದಕಟ್ಟಿ, ರಾಗ-ತಾಳಗಳಗೊಡವೆ ನನಗೇತಕೆಂದು..?  ತನಗೊಪ್ಪುವ ದಾಟಿಯಲ್ಲಿ ಹಾಡಿರುವುದೇ ಒಂದು ಸೋಜುಗದ ಸಂಗತಿ..!  

ಮಾದೇವ ಮಾದೇವ ಮಾದೇವಾ ಮಾದೇವ ಮಾದೇವ ಮಾದೇವ..
ಸೋಜುಗದ ಸೂಜು ಮಲ್ಲಿಗೆ, ಮಾದೇವ ನಿಮ್ಮ ಮಂಡೆಮ್ಯಾಲೆ ದುಂಡು ಮಲ್ಲಿಗೆ ||ಪ||

ಅಂದಾವರೆ, ಮುಂದಾವರೆ, ಮತ್ತೆ ತಾವರೆ ಪುಷ್ಪ, ಚಂದಕ್ಕಿ ಮಾಲೆ ಬಿಲ್ಪತ್ರೆ.., ಮಾದೇವ ನಿಮ್ಗೆ ಚೆಂದಕ್ಕಿ ಮಾಲೆ ಬಿಲ್ಪತ್ರೆ ತುಳಸಿ ದಳವ ಮಾದಪ್ಪನ ಪೂಜೆಗೆ ಬಂದು ಮಾದೇವ ನಿಮ್ಮ,

ತಪ್ಪಾಲೆ ಬೆಳಗಿವ್ನಿ ತುಪ್ಪಾವ ಕಾಯ್ಸಿವ್ನಿ
ಕಿತ್ತಾಳೆ ಹಣ್ಣು ತಂದೀವ್ನಿ ಮಾದೇವ ನಿಮ್ಗೆ
ಕಿತ್ತಾಳೆ ಹಣ್ಣ ತಂದೀವ್ನಿ ಮಾದಪ್ಪ
ಕಿತ್ತಾಡಿ ಬರುವ ಪರಸೆಗೆ ಮಾದೇವ ನಿಮ್ಗೆ

ಬೆಟ್ಟ ಹತ್ಕೊಂಡು ಹೋಗೋರ್ಗೆ ಹಟ್ಟೀ ಹಂಬಲವ್ಯಾಕ..?
ಬೆಟ್ಟದ ಮಾದೇವ ಗತಿ ಎಂದು ಮಾದೇವ ನೀವೇ, ಮಾದೇವ ನೀವೇ ಮಾದೇವ ನೀವೇ ಮಾದೇವ ನೀವೇ
ಬೆಟ್ಟ ಹತ್ಕೊಂಡು ಹೋಗೋರ್ಗೆ ಹಟ್ಟೀ ಹಂಬಲವ್ಯಾಕ..? ಬೆಟ್ಟದ ಮಾದೇವ ಗತಿ ಎಂದು ಅವರಿನ್ನು ಹಟ್ಟಿ ಹಂಬಲವ ಮರೆತಾರೋ ಮಾದೇವ ನಿಮ್ಮ

ಉಚ್ಚೆಳ್ಳು ಹೂವಿನ್ ಹಾಂಗೆ ಹೆಚ್ಚೆವೋ ನಿನ್ನ ಪರುಸೆ, ಹೆಚ್ಚಳಗಾರ ಮಾದಯ್ಯ, ಮಾದಯ್ಯ ನೀನೇ ಹೆಚ್ಚಳಗಾರ ಮಾದಯ್ಯ ಏಳುಮಲೆಯಾ
ಹೆಚ್ಚೆವು ಕೌದಹಳ್ಳಿ ಕಣಿವೆಯಲಿ ಮಾದೇವ ನಿಮ್ಮ.

ಮಾದೇವ ಮಾದೇವ ಮಾದೇವಾ ಮಾದೇವ ಮಾದೇವ ಮಾದೇವನೆಂದು ಭಾವಪರವಶಳಾಗಿ ಮೈಮರೆತು ಹಾಡುತ್ತಾ ಪೂಜೆಗೈಯುತ್ತಾಳೆ. ಇವಳದ್ದು ಆಡಂಬರದ ಆಚರಣೆಯ ಪೂಜೆಯಲ್ಲ, ತೋರಿಕೆಯ ಭಕ್ತಿಯಲ್ಲ, ಅವಳು ತನ್ನ ಹಾಡಿನಲ್ಲಿ ನಿತ್ಯಜೀವನದಲ್ಲಿನ ವಸ್ತು-ವಿಷಯಗಳನ್ನೇ ರೂಪಕಗಳನ್ನಾಗಿಸಿ, ತನ್ನ ಭಾವ ಪೂಜೆಗೆ ಸುತ್ತಮುತ್ತಣದ ಕಾಡು-ಮೇಡುಗಳಲ್ಲಿ, ಗುಡ್ಡ-ಗವ್ಹರಗಳಲ್ಲಿ, ಮನೆಯ ಹಿತ್ತಲದಿ ಬೆಳೆಯುವ ತನ್ನ ಸೃಷ್ಟಿಸಹಜ ಸೌಂದರ್ಯದಿಂದ ಪರಿಮಳವ ಸೂಸುವ ಸೋಜುಗದ ಸೂಜು ಮಲ್ಲಿಗೆ, ಅಂದಾವರೆ, ಮುಂದಾವರೆ,  ತಾವರೆ ಪುಷ್ಪ, ಚೆಂದಕ್ಕಿ ಮಾಲೆ, ಬಿಲ್ಪತ್ರೆ, ತುಳಸಿ ದಳವೆಂದು ಬಗೆ ಬಗೆಯಾದ ಹೂಗಳನ್ನು ತಂದು ಮಾದಪ್ಪನ ಮುಡಿಗೆ ಮತ್ತು ಪಾದಕ್ಕೆ ಅರ್ಪಿಸುತ್ತಾ,  ತಪ್ಪಾಲೆಯನ್ನು ಒಪ್ಪವಾಗಿ ಬೆಳಗಿ, ತಿಳಿ ತುಪ್ಪವನ್ನು ಕಾಯಿಸಿ, ಜೊತೆಗೆ ಒಂದಿಷ್ಟು ಕಿತ್ತಾಳೆ ಹಣ್ಣುಗಳ ನ್ನು ತೆಗೆದುಕೊಂಡು ಮನೆ ಮಂದಿ ಜೋಡಿ ನಾ ಮುಂದು ತಾ ಮುಂದೆಂದು ಕಿತ್ತಾಡಿ ಪರಸೆಗೆ ‘ಜಾತ್ರೆಗೆ’ ಬಂದಿರುವುದಾಗಿಯೂ, ತನ್ನ ಮನದಳಲ ನ್ನು ತೋಡಿಕೊಳ್ಳುತ್ತ ಅಂತೆಯೇ ಸಂಸಾರದ ಜಂಜಾಟವ ತೊರೆದು ಬಂದಿರುವ ತನಗೆ ‘ಬೆಟ್ಟ ಹತ್ಕೊಂಡು ಹೋಗೋರ್ಗೆ ಹಟ್ಟೀಯ ಹಂಬಲವ್ಯಾಕ..? ಎಂದು ತನ್ನನ್ನು ತಾನೇ ಪ್ರಶ್ನಿಸಿಕೊಂಡು ಮಂದುವರೆದು ಬೆಟ್ಟದ ಮಾದೇವ ಮಾದೇವ ನೀವೇ ಮಾದೇವ ನೀವೇ ಗತಿ ಎಂದು ಅವರಿನ್ನು ಹಟ್ಟಿ ಹಂಬಲವ ಮರೆತಿರುವ ಅಧ್ಯಾತ್ಮದ ಸಮಾಧಿಸ್ಥಿತಿಗೆ ತಲುಪುತ್ತಾಳೆ. ನಿನ್ನ ಲೀಲೆಗಳನ್ನು ತಿಳಿದು ಎಲ್ಲೆಲ್ಲೂ ಉಚ್ಚೆಳ್ಳು ಹೂವಿನಂಗೆ ಕೌದಹಳ್ಳಿ ಕಣಿವೆಗಳಲ್ಲಿ ಹೆಚ್ಚಾಳಗಾರ ಏಳು ಮಲೆಯ ಮಾದಯ್ಯನ ಪರಸೆಗಳು ಸಾಗಿವೆ ಎಂದು  ಮಾದಪ್ಪನನ್ನು ಕೊಂಡಾಡುತ್ತಾಳೆ.

ಇಷ್ಟೇ ವಿವರಣೆ ಇರುವುದಾದರೆ ಈ ಹಾಡು ಜಗತ್ಪ್ರಸಿದ‍್ಧವೆನಿಸುತ್ತಿತ್ತೇ..? ಅಂತದ್ದು ಮತ್ತೇನಿದೆ ಇದರೊಳಗೆ..? ಬೇರೆ ಬೇರೆ ಆಯಾಮಗಳಲ್ಲಿ ಇದನ್ನು ನೋಡ ಬಹುದಾಗಿದೆ. ಸನಾತನ ಹಿಂದು ಧರ್ಮದಲ್ಲಿ ಪ್ರಕೃತಿಯಲ್ಲಿನ ಗಿಡ-ಮರಗಳನ್ನು, ಮೃಗ-ಖಗಗಳನ್ನು ಪೂಜಿಸುತ್ತಾ ಬಂದಿರುವುದನ್ನು ನೋಡುತ್ತೇವೆ, ಮುಂದುವರೆದು ವೇದೋ ಪನಿಷತ್ತುಗಳ ಕಾಲಾವಧಿಯಲ್ಲಿ ಪುರೋಹಿತ ಶಾಹಿಗಳು ಧಾರ್ಮಿಕ ವಿಧಿ-ವಿಧಾನಗಳನ್ನು, ಯಜ್ಞ- ಯಾಗಾದಿ, ಪೂಜೆ-ಪುನಸ್ಕಾರಗಳ ಬಗೆಗೆ ವಿವಿಧ ರೂಪುಗಳನ್ನು ತಿಳಿಸುತ್ತ, ಅದನ್ನೇ ಕುಲಕಸುಬನ್ನಾಗಿಸಿಕೊಂಡು ಮೂಢ ಜನರಿಂದ ಸುಲಿಗೆ ಮಾಡುವುದನ್ನು ರೂಢಿಸಿಕೊಂಡರು. ಪಂಚ ಸೂತಕಗಳಾದ ಜಾತಿಸೂತಕ, ಜನನಸೂತಕ, ಪ್ರೇತಸೂತಕ, ರಜಸ್ಸೂತಕ, ಎಂಜಲಸೂತಕ. ನಿವಾರಣೆಯ ನೆಪದಲ್ಲಿ, ಉಪನಯನಾದಿಯಾಗಿ – ಶವ ಸಂಸ್ಕಾರದವರಗೆ ಷೋಡಶ ಸಂಸ್ಕಾರಗಳ ನ್ನು ಆಚರಿಸುವ ನೆಪದಲ್ಲಿ ಜನರ ಸುಲಿಗೆಗೆ ಇಳಿದದ್ದು, ಇದನ್ನು ಹನ್ನೆರಡನೆಯ ಶತಮಾನದಲ್ಲಿ ಶರಣರು ಸಾಮಾಜಿಕ ಅಸಮಾನತೆಯ ಬಗ್ಗೆ, ಮೂಢ ಕಂದಾ ಚಾರಗಳ ಬಗ್ಗೆ ದನಿ ಎತ್ತುವ ಮೂಲಕ ಬಹುದೊಡ್ಡ ಕಲ್ಯಾಣದಲ್ಲಿ ಬಹುದೊಡ್ಡ ಕ್ರಾಂತಿಯನ್ನೇ ಹುಟ್ಟುಹಾಕಿದರು. ಬಸವಣ್ಣ ನವರು ತಮ್ಮ ವಚನವೊಂದರಲ್ಲಿ ಉಳ್ಳವರ ಶಿವಾಲಯ ಬೇಕಿಲ್ಲ ನಮಗೆಂದು ತನ್ನ ಕಾಯವನ್ನೇ ಶಿವನ ಆಲಯವನ್ನಾಗಿಸಿ ಕೊಂಡು ಭಕ್ತಿಯನ್ನು ಮೆರೆದದ್ದನ್ನು ನೋಡಬಹುದಾಗಿದೆ.

ದೇವರ ಒಲುಮೆಗಾಗಿ ಪರದಾಡ ಬೇಕಿಲ್ಲ, ನಿರ್ಮಲವಾದ ಭಕ್ತಿಯೊಂದೇ ಸಾಕೆಂಬುದನ್ನು ಹರಿಹರನು ತನ್ನ ರಗಳೆ ಯಲ್ಲಿ ಇಂತಹ ಅರವತ್ತ್ಮೂರು ಪುರಾತನರ ಭಕ್ತಿಯ ಪರಾಕಾಷ್ಟೆಯನ್ನು ‘ಬಸವರಾಜ ದೇವರ ರಗಳೆ’, ‘ತಿರುನೀಲಕಂಠ ದೇವರ ರಗಳೆ’, ‘ನಂಬಿಯಣ್ಣನ ರಗಳೆ’, ‘ಮಹಾದೇವಿ ಯಕ್ಕನ ರಗಳೆ’, ‘ಪ್ರಭುದೇವರ ರಗಳೆ’, ‘ಕುಂಬಾರ ಗುಂಡಯ್ಯನ ರಗಳೆ’, ‘ಮಾದಾರ ಚೆನ್ನಯ್ಯ’ನ ರಗಳೆ ‘ಇಳೆಯಾಂಡ  ಗುಡಿಮಾರ’ ನ ರಗಳೆ ಮತ್ತು ‘ರೇವಣ ಸಿದ್ಧೇಶ್ವರ ರಗಳೆ’ಗಳ ಮೂಲಕ ಮನಸಾ ಕೊಂಡಾಡಿ ಭಕ್ತಕವಿ ಎನಿಸಿದ್ದಾನೆ.  ಈ ರಗಳೆಗಳಲ್ಲಿ ಭಾವಪೂಜೆ ಮತ್ತು ಗುಪ್ತಪೂಜೆ ಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದೆ. ಚೋಳರಾಜನ ಅರಮನೆಯ ರಾಜಾನ್ನ ಗಳಿಗಿಂತ ಮಾದಾರ ಚೆನ್ನಯ್ಯನ ಗುಡಿಸಲಿನ  ಅಂಬಲಿಯು ಶಿವನಿಗೆ ಒಪ್ಪಿತವಾಯ್ತು ಎನ್ನುವ ಮೂಲಕ ಜಾತಿಗೋಡೆಯನ್ನು ಒಡೆದು ಹಾಕುತ್ತಾನೆ.
ಶಿವನೊಲುಮೆಗೆ ಪ್ರೀತಿ, ವಿಶ್ವಾಸ, ನಂಬುಗೆ, ಅನಪೇಕ್ಷಿತ, ಸರಳ ಪ್ರಾರ್ಥನೆಯೇ ಮಾರ್ಗ. ಅಂತೆಯೇ ಎಚ್.ಎಸ್,ವಿಯವರು ತಮ್ಮ ಭಾವಗೀತೆಯೊಂದರಲ್ಲಿ ‘ಲೋಕದ ಕಣ್ಣಿಗೆ ರಾಧೆಯು ಕೂಡ ಎಲ್ಲರಂತೆ ಒಂದು ಹೆಣ್ಣು, ನನಗೂ ಆಕೆ ಕೃಷ್ಣನ ತೋರುವ ಪ್ರೀತಿಯು ನೀಡಿದ ಕಣ್ಣು’ ಎಂದಿದ್ದಾರೆ. ನಿರ್ಮಲವಾದ ಪ್ರೀತಿಯ ಮೂಲಕ ಭಗವಂತನ ಸಾಕ್ಷಾತ್ಕಾರ ಮಾಡಿಕೊಳ್ಳು ವುದನ್ನು ಗ್ರಾಮೀಣ ಮಹಿಳೆ ‘ಸೋಜುಗದ ಸೂಜು ಮಲ್ಲಿಗೆ’ ಜನಪದ ಹಾಡಿನಲ್ಲಿ ತನ್ನ ಮನದ ನಿವೇದನೆಯನ್ನು ಮಾದೇವನ ಮುಂದಿಡುತ್ತಾಳೆ, ಅದು ಸಹಜವಾಗಿಯೇ ಶಿವನಿಗರ್ಪಿತವಾಗುತ್ತದೆ. ಬೆಟ್ಟ ಹತ್ಕೊಂಡು ಹೋಗೋರ್ಗೆ ಹಟ್ಟೀ ಹಂಬಲ ವ್ಯಾಕ..? ಬೆಟ್ಟದ ಮಾದೇವ ಗತಿ ಎಂದು ಅವರಿನ್ನು ಹಟ್ಟಿ ಹಂಬಲವ ಮರೆತಿದ್ದರೂ ಕೂಡ ಕೌದಹಳ್ಳಿ ಕಣಿವೆಗಳು ಎಂಬಲ್ಲಿ ಗ್ರಾಮದ ಉಲ್ಲೇಖಿಸುತ್ತ ತನ್ನ ಪ್ರಾದೇಶಿಕ ಪ್ರೇಮವನ್ನೂ ಮೆರೆಯುವುದಿರುವ ಜಾಣ್ಮೆ ಮೆಚ್ಚುವಂತದ


One thought on “ಬೆಟ್ಟಹತ್ಕೊಂಡು ಹೋಗೋರ್ಗೆ ಹಟ್ಟೀ ಹಂಬಲವ್ಯಾಕ..?ವಿಶ್ಲೇಣಾತ್ಮಕ ಲೇಖನ : ಡಾ.ಯಲ್ಲಮ್ಮ ಕೆ.

Leave a Reply

Back To Top