ಬರಸಿಡಿಲಿನಂತೆ ಎರಗಿದ ವೈದ್ಯರ ಮಾತುಗಳನ್ನು ಅರಗಿಸಿ ಕೊಳ್ಳುವ ಶಕ್ತಿ ಸುಮತಿಗೆ ಇಲ್ಲದಾಯಿತು. ವೇಲಾಯುಧನ್ ಒಂದು ಮಾತನ್ನೂ ಆಡದೇ ತಲೆಯಮೇಲೆ ಕೈ ಹೊತ್ತು ಕುಳಿತುಬಿಟ್ಟರು. ದಂಪತಿಗಳು ಭಾರವಾದ ಮನಸ್ಸಿನಿಂದಲೇ ಆಸ್ಪತ್ರೆಯ ವಾಹನದಲ್ಲಿ ಮಗನ ಪಾರ್ಥಿವ ಶರೀರವನ್ನು ಇರಿಸಿಕೊಂಡು ಮನೆಯ ಕಡೆಗೆ ಹೊರಟರು. ಅಲುಗಾಡದೇ ಮಲಗಿದ್ದ  ವಿಶ್ವನನ್ನು ಕಂಡು ತಂಗಿಯೂ ಅಳಲು ಪ್ರಾರಂಭಿಸಿದಳು. ವಿಶ್ವನ ಮರಣದ ವಾರ್ತೆಯನ್ನು ನೆರೆಹೊರೆಯ ಪರಿಚಯಸ್ಥರ ಮುಖೇನ ಕುಟುಂಬದ ಇತರ ಸದಸ್ಯರಿಗೂ ಮುಟ್ಟಿಸಿದರು. ಅಲ್ಲಿಯೇ ಹತ್ತಿರದಲ್ಲಿ ಇದ್ದ ಕುಟುಂಬದ ಸದಸ್ಯರೆಲ್ಲರೂ ಸುಮತಿಯ ಮನೆಗೆ ಬಂದು ಸೇರಿದರು. ನಡೆದ ಘಟನೆಯನ್ನು ಯಾರಲ್ಲೂ ಹೇಳಕೂಡದು ಎಂದು ಸುಮತಿಗೆ ಮೊದಲೇ ವೇಲಾಯುಧನ್ ತಾಕೀತು ಮಾಡಿದ್ದರಿಂದ ಯಾರಲ್ಲೂ  ತನ್ನ ಮನದ ದುಃಖವನ್ನು  ಹೇಳಿಕೊಳ್ಳುವಂತೆ ಇರಲಿಲ್ಲ ಅವಳು. ಅನಾರೋಗ್ಯದ ಕಾರಣ ಚಿಕಿತ್ಸೆ ಫಲಕಾರಿಯಾಗದೇ ಮಗ ತೀರಿಹೋದನು ಎಂದು ಎಲ್ಲರಲ್ಲೂ ಹೇಳಬೇಕಾಯಿತು. ಆದರೂ ಸುಮತಿಯ ತಮ್ಮಂದಿರಿಗೆ ಅಕ್ಕ ಹೇಳಿದ ಸಂಗತಿ ಸಮಾಧಾನ ತರಲಿಲ್ಲ. ಬಾವನ ಗುಣವನ್ನು ತಿಳಿದಿದ್ದ ಅವರಿಬ್ಬರಿಗೂ ಏಕೋ ಎಲ್ಲೋ ಏನೋ ಸಂಭವಿಸಿದೆ ಎನ್ನುವುದು ಮನದಟ್ಟಾಯಿತು. ಆದರೆ ಅಕ್ಕ ತನ್ನ ಮಗನನ್ನು ಕಳೆದುಕೊಂಡ ನೋವಿನಲ್ಲಿ ಇರುವಳು ಈಗ ತಮ್ಮ ಮನದಲ್ಲಿ ಉದ್ಭವಿಸಿದ ಸಂಶಯವನ್ನು ಹೇಗೆ ಕೇಳುವುದು ಎನ್ನುತ್ತಾ ಮೌನವಾದರು. ಶವ ಸಂಸ್ಕಾರದ ಕ್ರಿಯಾಕರ್ಮಗಳಲ್ಲಿ ಕುಟುಂಬದ ಸದಸ್ಯರು, ನೆರೆಹೊರೆಯವರು, ಪರಿಚಿತರು ಪಾಲ್ಗೊಂಡರು. ಕಲ್ಯಾಣಿಯವರ ದೇಹವನ್ನು ಸಂಸ್ಕಾರ ಮಾಡಿದ ಪಕ್ಕದಲ್ಲಿಯೇ ವಿಶ್ವನ ಅಂತಿಮ ಸಂಸ್ಕಾರದ ವಿದಿವಿಧಾನಗಳನ್ನು ಮಾಡಿ ಮುಗಿಸಿದರು. ಮಗನ ಅನಿರೀಕ್ಷಿತ ಮರಣವು ಸುಮತಿಯನ್ನು ಮೌನದ ಕೂಪಕ್ಕೆ ತಳ್ಳಿತು. ನಡೆದ ವಿಷಯವನ್ನು ಯಾರಲ್ಲೂ ಹೇಳಲಾರದೇ ಚಡಪಡಿಸಿದಳು.

ಮನದಲ್ಲಿ ಎಷ್ಟೇ ನೋವುಗಳಿದ್ದರೂ ಸುಮತಿ ದೈನಂದಿನ ಕೆಲಸಗಳನ್ನು ಚಾಚೂ ತಪ್ಪದೇ ಮಾಡುತ್ತಿದ್ದಳು. ಆದರೆ ನಿಂತಲ್ಲಿ ಕುಳಿತಲ್ಲಿ ಮನೆಯ ಹೊರಗೆ ಒಳಗೆ ಎಲ್ಲೆಡೆಯೂ ವಿಶ್ವನನ್ನು ಕಂಡಂತೆ ಸುಮತಿಗೆ ಭಾಸವಾಗುತ್ತಿತ್ತು. ವಿಶ್ವನಿಲ್ಲದ ಮನೆ ಬಿಕೋ ಎನ್ನುತ್ತಿತ್ತು. ಅವನ ತಂಗಿಯಂತೂ ಎಲ್ಲೆಡೆಯೂ ಅಣ್ಣನನ್ನು ಹುಡುಕಿ ಸಿಗದೇ ಅಮ್ಮನ ಬಳಿ ಬಂದು ಅಳುತ್ತಾ ಸೆರಗು ಹಿಡಿದು ನಿಲ್ಲುತ್ತಿದ್ದಳು. ಅಣ್ಣನನ್ನು ಅರಸುತ್ತಾ ಅಳುವ ಮಗಳನ್ನು ಕಂಡಾಗ ಸುಮತಿಗೆ ಕರುಳು ಚುರುಕ್ ಎನ್ನುತ್ತಿತ್ತು. ಸದ್ದಿಲ್ಲದೇ ಮೌನವಾಗಿ ಅಳುವುದೊಂದೇ ಅವಳ ಪಾಲಿಗೆ ಸಾಂತ್ವನವಾಗಿರುತ್ತಿತ್ತು. ತನ್ನ ಮನದ ನೋವನ್ನು ಪತಿಯಲ್ಲಿ ಹೇಳಿಕೊಂಡು ಅಳುವಂತೆಯೂ ಇರಲಿಲ್ಲ. ಎಂದಾದರೂ ಅಪ್ಪಿ ತಪ್ಪಿ ಸುಮತಿ ಮಗನ ಅಗಲಿಕೆಯ ನೋವಿನ ಬಗ್ಗೆ ಹೇಳಿದರೆ…”ಮಗನ ಅನಿರೀಕ್ಷಿತ ಮರಣ ನನಗೂ ನೋವು ಕೊಟ್ಟಿದೆ…ಹಾಗಂತ ಅಳುತ್ತಾ ಕುಳಿತರೆ ಮಗ ಹಿಂದಿರುಗಿ ಬರುವನೇ”…. ಎಂದು ಹೇಳಿ ಗದರಿ ಅವಳನ್ನು ಸುಮ್ಮನಿರಿಸುತ್ತಿದ್ದರು ವೇಲಾಯುಧನ್. ತನಗೆ ಆಧಾರವಾಗಿದ್ದ ಮಗ ಇನ್ನಿಲ್ಲ ಎನ್ನುವ ಸತ್ಯವನ್ನು ಸುಮತಿ ಜೀರ್ಣಿಸಿಕೊಳ್ಳದಾದಳು. ಮನೆಯ ಕೆಲಸವನ್ನಂತೂ ಯಾಂತ್ರಿಕವಾಗಿ ಮಾಡುತ್ತಿದ್ದಳು. ಆದರೆ ಊಟ ತಿಂಡಿ ಬೇಡವಾಯಿತು. ಅವಳಿಗೆ ಸದಾ ಮಗನದೇ ನೆನಪು. ಮಗನ ನೆನಪಿನಲ್ಲಿ ಮುಳುಗಿದ್ದರೂ ಮಗಳನ್ನು ಯಾವುದೇ ಕೊರತೆ ಇಲ್ಲದಂತೆ ಕಾಳಜಿ ವಹಿಸುತ್ತಾ ನೋಡಿಕೊಳ್ಳುವಳು. ಮಗಳ ಆಟ ಪಾಠಗಳನ್ನು ನೋಡುತ್ತಾ ತನ್ನ ನೋವನ್ನು ಅಲ್ಪ ಸ್ವಲ್ಪ ಮರೆಯುವ ಪ್ರಯತ್ನವನ್ನು ಮಾಡುತ್ತಿದ್ದಳು. ಮಗಳಿಗೆ ಮೂರು ವರ್ಷ ತುಂಬಿದಾಗ ಅಲ್ಲಿಯೇ ಸಮೀಪದ ಅಂಗನವಾಡಿಗೆ ಸೇರಿಸಿದಳು. ಆ ಮಗಳು ಕೂಡಾ ಬಲು ಚುರುಕಿನ ಹುಡುಗಿ. ಬಹು ಬೇಗ ಅಂಗನವಾಡಿಯ ವಾತಾವರಣಕ್ಕೆ ಹೊಂದಿಕೊಂಡಳು. ಅಲ್ಲಿನ ಶಿಕ್ಷಕಿ ಅವಳಿಗೆ ಕನ್ನಡ ಹೇಳಿಕೊಡುವುದಕ್ಕಾಗಿ ಹರ ಸಾಹಸ ಪಡಬೇಕಾಯಿತು.

ಮನೆಯಲ್ಲಿ ಮಲಯಾಳಂ ಮಾತನಾಡುತ್ತಿದ್ದ ಕಾರಣ ಕನ್ನಡ ವರ್ಣಮಾಲೆಯ ಪುಸ್ತಕದಲ್ಲಿ ಅಕ್ಷರಗಳ ಜೊತೆ ಸುಲಭ ಕಲಿಕೆಗಾಗಿ ಇದ್ದ ಚಿತ್ರಗಳನ್ನು ನೋಡಿ ಅವಳು ಗುರುತು ಹಿಡಿಯುತ್ತಿದ್ದ ಪ್ರತಿಯೊಂದು ಚಿತ್ರವನ್ನೂ ಮಲಯಾಳಂ ಭಾಷೆಯಲ್ಲಿಯೇ ಹೇಳುತ್ತಿದ್ದಳು. ಕನ್ನಡದಲ್ಲಿ ಎಷ್ಟೇ ಹೇಳಿಕೊಟ್ಟರು ಕೂಡಾ ಮತ್ತೂ ತನ್ನ ಮಾತೃಭಾಷೆಯಲ್ಲೇ ಅವುಗಳ ಹೆಸರುಗಳನ್ನು ಹೇಳುತ್ತಿದ್ದಳು.

ಉದಾ… ಒ ಅಕ್ಷರಕ್ಕೆ ಇದ್ದ ಒಲೆಯ ಚಿತ್ರಕ್ಕೆ ಒ – ಅಡುಪ್ಪು

ಎಂದು ಹೇಳಿ ಶಿಕ್ಷಕಿಯನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಳು ಆ ಪುಟ್ಟ ಪೋರಿ. ಇವಳು ಹೇಳುವ ಮಲಯಾಳಂ ಪದಗಳಿಂದ  ಶಿಕ್ಷಕಿ ಕೂಡಾ ಮಲಯಾಳಂ ಕಲಿತಂತೆ ಆಗುತ್ತಿತ್ತು. ಸುಮತಿ ಶಾಲೆಗೆ ಮಗಳನ್ನು ಕರೆದುಕೊಂಡು ಹೋಗಿ ಬಿಡಲು ಬಂದಾಗ ಶಿಕ್ಷಕಿಯು ಅವಳೊಂದಿಗೆ ಹೇಳಿಕೊಂಡು ಬಿದ್ದು ಬಿದ್ದು ನಗುತ್ತಿದ್ದರು. ಏನೇ ಆದರೂ ಸುಮತಿಯ ಆ ಮಗಳು ಕಲಿಕೆಯಲ್ಲಿ ವಿಶ್ವನ ಹಾಗೆಯೇ ಬಹಳ ಚುರುಕಾಗಿದ್ದಳು.

ಆಶ್ಚರ್ಯಕರ ಸಂಗತಿಯೆಂದರೆ ಅವಳು ವರ್ಣಮಾಲೆಯ ಅಕ್ಷರಗಳ ಜೊತೆ ಇರುತ್ತಿದ್ದ ಚಿತ್ರಗಳನ್ನು ಸ್ಲೇಟಿನಲ್ಲಿ ಬಿಡಿಸುತ್ತಿದ್ದಳು. ಚಿತ್ರ ಬಿಡಿಸುವುದನ್ನು ಅವಳಿಗೆ ಯಾರೂ ಕಲಿಸಿರಲಿಲ್ಲ. ಮನೆಯ ಗೋಡೆಯ ಮೇಲೆಲ್ಲಾ ಅವಳು ಬಿಡಿಸಿದ ಚಿತ್ರಗಳೇ ತುಂಬಿರುತ್ತಿದ್ದವು. ಸುಮತಿಯಲ್ಲಿ ಅಡಗಿದ್ದ ಈ ಕಲೆಯು ಮಗಳಿಗೆ ರಕ್ತಗತವಾಗಿ, ಬಳುವಳಿಯಾಗಿ ಬಂದಿತ್ತು. ಮಗಳು ಬಿಡಿಸುವ ಚಿತ್ರಗಳನ್ನು ನೋಡಿ ದಂಪತಿಗಳು ಹಿರಿಹಿರಿ ಹಿಗ್ಗುತ್ತಿದ್ದರು. ವೇಲಾಯುಧನ್ ಸಂಜೆಯ ವೇಳೆ ಕೆಲಸದಿಂದ ಬಂದ ನಂತರ ತನ್ನ ಮುದ್ದು ಮಗಳ ಜೊತೆ ಕುಳಿತು ಅವಳು ಬಿಡಿಸುವ ಚಿತ್ರಗಳನ್ನು ಕುತೂಹಲದಿಂದ ನೋಡುತ್ತಿದ್ದರು.

ಆದರೂ ಸುಮತಿ ಹೆಚ್ಚಾಗಿ ಅಪ್ಪನ ಜೊತೆಗಿರಲು ಮಗಳನ್ನು ಬಿಡುತ್ತಿರಲಿಲ್ಲ. ಕೋಪಿಷ್ಠನಾದ ಪತಿ ಯಾವ ಘಳಿಗೆಯಲ್ಲಾದರೂ ಕೋಪದಿಂದ ಮಗಳನ್ನೂ ಹೊಡೆದು ಬಿಟ್ಟರೆ ಎನ್ನುವ  ಭಯ ಅವಳನ್ನು ಕಾಡುತ್ತಲೇ ಇತ್ತು. 

ಪತಿಯು ಮಗನನ್ನು ಹೊಡೆದದ್ದು ಹಾಗೂ ಆ ಕೂಡಲೇ ಅವನು ಬವಳಿ ಬಿದ್ದ ದೃಶ್ಯವು ಅವಳ ಮಸ್ತಿಷ್ಕದಲ್ಲಿ ಉಳಿದು ಆಳವಾದ ಮಾಯದ ಗುರುತನ್ನು ಮಾಡಿತ್ತು. 

ಎಲ್ಲಿ ಮಗಳನ್ನು ಕೂಡಾ ಕಳೆದುಕೊಂಡು ಬಿಡುವೆನೋ ಎನ್ನುವ ಭಯ ಅವಳನ್ನು ಸದಾ ಕಾಡುತ್ತಿತ್ತು. ಮಕ್ಕಳ ಅಳು ವೇಲಾಯುಧನ್ ರವರಿಗೆ ಸಹ್ಯವಾಗುತ್ತಿರಲಿಲ್ಲ. ಹಾಗಾಗಿ ಪತಿಯು ಇರುವಾಗ ಯಾವುದೇ ಕಾರಣಕ್ಕೂ ಮಗಳು ಅಳದಂತೆ ಸುಮತಿಯು ಸದಾ ಎಚ್ಚರವಹಿಸುತ್ತಿದ್ದಳು. 

ಮಗನ ಅಗಲಿಕೆಯ ನೋವು ಅವಳನ್ನು ಹಗಲಿರುಳೂ ಕಾಡುತ್ತಿತ್ತು. ಹೀಗೆಯೇ ಮತ್ತೂ ಮೂರು ವರ್ಷಗಳು ಕಳೆಯಿತು.  ಮಗನ ಕೊರಗಿನಿಂದ ಊಟ ತಿಂಡಿ ಸರಿಯಾಗಿ ಸೇವಿಸದೇ ಸುಮತಿ ಕೃಶಳಾಗುತ್ತಿದ್ದಳು. ಅವಳ ಅಕ್ಕ ತಮ್ಮಂದಿರು ಅವಳನ್ನು ನೋಡಿ ಚಿಂತೆಗೊಳಗಾದರು. ಹೀಗಿರುವಾಗ ಸುಮತಿಗೆ ಎರಡು ತಿಂಗಳಾದರೂ ಋತುಚಕ್ರ ಕಾಣಿಸಿಕೊಳ್ಳಲಿಲ್ಲ. ಆಸ್ಪತ್ರೆಗೆ ಹೋಗಿ ವೈದ್ಯರನ್ನು ಭೇಟಿ ಮಾಡಿದಾಗ ಅವರು ಪರೀಕ್ಷಿಸಿ ಸುಮತಿಯು ಸರಿಯಾಗಿ ಆಹಾರ ಸೇವಿಸದೇ ತನ್ನ ಕಾಳಜಿ ಸಮಯಕ್ಕೆ ಸರಿಯಾಗಿ ಮಾಡಿಕೊಳ್ಳದೇ ಇರುವ ಕಾರಣ ಅವಳ ದೇಹದಲ್ಲಿ ರಕ್ತದ ಅಂಶ ಕಡಿಮೆಯಾಗಿ ತಿಂಗಳಿಗೆ ಮುಟ್ಟಾಗುತ್ತಿಲ್ಲ ಎಂದರು ವೈದ್ಯರು. ಕಬ್ಬಿಣದ ಅಂಶವಿರುವ ಹಾಗೂ ಇನ್ನೂ ಕೆಲವು ವಿಟಮಿನ್ ಗುಳಿಗೆಗಳನ್ನು ಕೊಟ್ಟು ಸಮಯಕ್ಕೆ ಸರಿಯಾಗಿ ಊಟ ತಿಂಡಿ ಸೇವಿಸಲು ಹೇಳಿದರು. ಇನ್ನೆರಡು ತಿಂಗಳು ಕಳೆಯಿತು. ತನ್ನ ಉದರವು ದಿನ ಕಳೆದಂತೆ ದೊಡ್ಡದಾಗುತ್ತಿರುವುದು ಹಾಗೂ ಭಾರವೆನಿಸುತ್ತಿರುವುದು ಸುಮತಿಯ ಅರಿವಿಗೆ ಬಂತು. ಉದರದಲ್ಲಿ ತಿಳಿದೂ ತಿಳಿಯದಂತೆ ಏನೋ ಆಗೀಗ ಸಣ್ಣದಾಗಿ ಮಿಸುಕಾಡುತ್ತಿರುವ ಅನುಭವವೂ ಆಗುತ್ತಿತ್ತು. ಮತ್ತೊಮ್ಮೆ ವೈದ್ಯರನ್ನು ಭೇಟಿ ಮಾಡಿದಳು. ವೈದ್ಯರು  ಪರೀಕ್ಷಿಸಿ ಹೊಟ್ಟೆಯಲ್ಲಿ ಗೆಡ್ಡೆ ಬೆಳೆದಿದೆ ಆದಷ್ಟೂ ಬೇಗ ಶಸ್ತ್ರಚಿಕಿತ್ಸೆ ಮಾಡಬೇಕು ಎಂದು ಹೇಳಿದರು.


One thought on “

Leave a Reply

Back To Top