ಗೀತಾ ಅಂಚಿ ಅವರ ಕವಿತೆ ಬೇಲಿ

ತಂದೆ ಹಾಕಿದ ಬೇಲಿ
ಅಮ್ಮನಿಗದು ಕರೀಜಾಲಿ.
ನೋಟಕ್ಕೆ ಇರಿಸು,ಮುರಿಸು,
ಆಟಕ್ಕೆ ನೀನು ಧಿಕ್ಕರಿಸು,
ಅಪ್ಪನ ಆಜ್ಞೆಗಳನ್ನೇಲ್ಲಾ
ಸ್ವೀಕರಿಸು.


ನಯವಾಗಿ ನಡೆಯುತ್ತಾ,
ಒಮ್ಮೊಮ್ಮೆ ಎಡವುತ್ತಾ,
ಆಟವಾಡುವ ತಂಗಿಯ ತಡವುತ್ತಾ.
ಉಲ್ಲಾಸದ ಉಸಿರು,
ಮುಗ್ಗುರಿಸಿ ನಿಟ್ಟುಸಿರು,
ತಂದೆಗೆ ತಲುಪಿತೇ ನೆರೆಮನೆ
ಸಿಟ್ಟಿನ ದೂರು.


ಬೇಲಿಗೆ ಅಂಟಿದ ದಂಟಿನ
ಹುಳುವ,
ಸುತ್ತಲೂ ಹಬ್ಬುವ ಸಸಿಗಳು
ಬೆಳೆವ,
ಕಿಟಕೀಲಿ ಕುಳಿತು ದಿನವೂ
ನೋಡುವ
ಹಕ್ಕಿಪಿಕ್ಕಿಗಳು ಬೇಲಿ ಕಂಡು
ಹಾರುತ ತಂದಿವೆ ಮರಿಗಳ
ಹಿಂಡು,
ಮರಿ ನೋಡಿ ಕುಣಿಯುವ
ಮಕ್ಕಳ ದಂಡು.
ಅಮ್ಮನದು ಒಂದೇ ಉಸಿರು,
ಹಾಕಿದ ಬೇಲಿಯ ಸರಿಸು,
ಮಕ್ಕಳ ಆಟಕ್ಕೆ ಚಂದದ
ಆಟಿಕೆ ತರಿಸು,
ಬಾಂಧವ್ಯದ ಬೇಲಿ,
ಕಾಳಜಿಯ ಕಣ್ಗಾವಲಿ,
ಬೆಸುಗೆಯ ಸಂಸಾರದಲಿ.
ಬೇಲಿ ತೆಗೆದರೆ ಅಯ್ಯೋಪಾಪ,
ಗೂಡ ಗಿಳಿಮರಿಗಳಿಗೆ
ಎಂತಹ ಶಾಪ,
ಎಸೆದು ಬಾರದಿರಲಿ ನಮ್ಮಯ ಅಪ್ಪ,
ಇದಕ್ಕೆಂದು ಹಚ್ಚುವೇವು
ದೇವನಿಗೆ ತುಪ್ಪದ ದೀಪ…

Leave a Reply

Back To Top