ವಿಶೇಷ ಲೇಖನ
ಮೇಘ ರಾಮದಾಸ್ ಜಿ-
ಯಾರಿಗೆ ಬಂತು?
ಎಲ್ಲಿಗೆ ಬಂತು?
ಸ್ವಾತಂತ್ರ್ಯ!
ಸ್ವಾತಂತ್ರ್ಯ ಪದ ಕೇಳಲು ಎಷ್ಟು ಸರಳವೋ ರೂಡಿಯಲ್ಲಿ ಅಷ್ಟೇ ಜಟಿಲವಾಗಿದೆ. ಮೇಲ್ನೋಟಕ್ಕೆ ಎಲ್ಲರಿಗೂ ಎಲ್ಲದರಲ್ಲಿಯೂ ಸ್ವಾತಂತ್ರ್ಯ ಇದೆ ಅನ್ನಿಸಿದರು, ಒಳಾರ್ಥದಲ್ಲಿ ಎಲ್ಲರಿಗೂ ಒಂದಲ್ಲ ಒಂದು ರೀತಿಯಲ್ಲಿ ಈ ಸ್ವಾತಂತ್ರ್ಯ ಸಂಪೂರ್ಣವಾಗಿ ಸಿಗದಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಇಂದು ದೇಶದಲ್ಲಿ ಸ್ವಾತಂತ್ರ್ಯ ಎನ್ನುವುದು ಉಳ್ಳವರ, ಧನವಂತರ ಮತ್ತೊಂದು ಆಸ್ತಿಯಾಗಿ ಮಾರ್ಪಟ್ಟಿದೆ. ಸ್ವಾತಂತ್ರ್ಯದ ಎಲ್ಲಾ ಪ್ರಕಾರಗಳು ಕೇವಲ ಧನಿಕರಿಗಾಗಿಯೇ ಇರುವಂತಿದೆ.
ದೇಶದ ಮಾರ್ಗದರ್ಶಿಯಾದ ಸಂವಿಧಾನವು ಎಲ್ಲಾ ಜನತೆಗೂ ಸಮಾನವಾದ ಸ್ವಾತಂತ್ರ್ಯ ನೀಡಿದೆ. ಆದರೆ ಇಂದು ನಮಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಇದ್ದರೂ ಸಹ ಅನ್ಯಾಯದ ವಿರುದ್ಧ ಮಾತನಾಡುವುದನ್ನೇ ನಿಲ್ಲಿಸಿದ್ದೇವೆ, ಅಥವಾ ದನಿ ಏರಿಸಿದರೆ ಆ ದನಿಯನ್ನೇ ಅಡಗಿಸುವ ವ್ಯವಸ್ಥೆ ಇದೆ. ಇನ್ನು ಎಲ್ಲೆಡೆ ಸಂಚರಿಸುವ ಸ್ವಾತಂತ್ರ್ಯ ಇದ್ದರೂ, ಇಂದಿಗೂ ಹಲವಾರು ದೇವಸ್ಥಾನಗಳಿಗೆ ದಲಿತರ ಪ್ರವೇಶ ನಿಷೇಧಿಸಲಾಗಿದೆ. ಸಂಘ-ಸಂಸ್ಥೆಗಳನ್ನು ಕಟ್ಟುವ ಸ್ವಾತಂತ್ರ್ಯ ಇದ್ದರೂ, ಆಡಳಿತದಲ್ಲಿನ ಸರ್ಕಾರಗಳ ತತ್ವಗಳಂತೆ ಕೆಲಸ ಮಾಡುವ ಅನಿವಾರ್ಯತೆ ಇದೆ.
ಸಭೆ, ಸಮಾರಂಭ, ಚಳುವಳಿ, ಹೋರಾಟಗಳ ಸ್ವಾತಂತ್ರ್ಯ ಇದ್ದರೂ ಅಧಿಕಾರದಲ್ಲಿನ ಸರ್ಕಾರಗಳ ವಿರುದ್ಧ ಪ್ರಶ್ನೆಸಿದರೆ ದೇಶದ್ರೋಹಿ ಎಂಬ ಹಣೆಪಟ್ಟಿ ಕಟ್ಟಲಾಗುತ್ತದೆ. ಹೆಣ್ಣು ಸ್ವಾತಂತ್ರಳು ಗಂಡಿನಷ್ಟೇ ಸಮಾನಳು ಎಂದೆಲ್ಲಾ ಹೇಳಲಾಗುತ್ತಿರುವ ಈ ಪ್ರಗತಿಪರ ರಾಷ್ಟ್ರದಲ್ಲಿ ತಾಯಿಯ ಗರ್ಭದಲ್ಲಿನ ಶಿಶುವಿನಿಂದ ಹಿಡಿದು ವಯಸ್ಸಾದ ವಯೋವೃದ್ಧ ಮಹಿಳೆಯವರೆಗೂ ದೌರ್ಜನ್ಯ, ದಬ್ಬಾಳಿಕೆ, ಅತ್ಯಾಚಾರಗಳು ನಡೆಯುತ್ತಲೇ ಇವೆ. ಹಾಗಿದ್ದಲ್ಲಿ ನಿಜವಾದ ಸ್ವಾತಂತ್ರ್ಯ ಎಲ್ಲಿದೆ? ಕೆಲವರಿಗೆ ಸ್ವಾತಂತ್ರ್ಯ ಸುಲಭಕ್ಕೆ ಸಿಗದ ಅಂಶವಾದರೆ, ಮತ್ತೂ ಕೆಲವರಿಗೆ ಅದು ಸ್ವೆಚ್ಛಾಚಾರವಾಗಿದೆ.
ಹೀಗಿರುವ ಸಂದರ್ಭದಲ್ಲಿ ನಾವು ನಮ್ಮ ಸಮಸ್ಯೆಗಳನ್ನೇ ಹೊತ್ತು ತಿರುಗಬೇಕೇ? ಅಥವಾ ಅವುಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳುವ ಹಾದಿಯಲ್ಲಿ ನಡೆಯಬೇಕೇ? ಆಯ್ಕೆ ನಮ್ಮದೇ ಆಗಿದೆ. ನಮ್ಮ ಮುಂದಿನ ಪೀಳಿಗೆ ನಿಜವಾದ ಸ್ವಾತಂತ್ರ್ಯ ಅನುಭವಿಸಬೇಕಾದರೆ ಇಂದು ಯುವಜನತೆಯಾದ ನಾವು ಈ ಕಾಯಕಕ್ಕೆ ಭದ್ರ ಬುನಾದಿ ಹಾಕಬೇಕಿದೆ.
ನಾವು ನಮ್ಮ ಮುಂದಿನ ಜನಾಂಗಕ್ಕೆ ಸಂವಿಧಾನದ ಆಶಯ, ಮೌಲ್ಯ, ಹಕ್ಕು, ಕರ್ತವ್ಯ, ಕಾನೂನು, ಅವಕಾಶಗಳಂತಹ ಮಹತ್ತರ ವಿಷಯಗಳನ್ನು ತಿಳಿಸುವ ಅನಿವಾರ್ಯತೆ ಇದೆ. ಪ್ರಶ್ನಿಸುವ ಹವ್ಯಾಸವನ್ನು ಚಿಕ್ಕಂದಿನಿಂದಲೆ ಅಭ್ಯಾಸವಾಗಿಸಬೇಕಿದೆ. ಎಲ್ಲರೂ ಸಮಾನರು ಎನ್ನುವ ಮಂತ್ರವನ್ನು ಹೇಳಿಕೊಡಬೇಕಿದೆ. ಅಹಿಂಸೆ ನಮ್ಮ ಧ್ಯೇಯವಾಗಿಸಬೇಕಿದೆ. ಪ್ರಕೃತಿಯ ಜೊತೆ ಜೊತೆಗೆ ಸಾಗುವುದನ್ನು ಕಲಿಸಬೇಕಿದೆ. ನ್ಯಾಯದ ಮಾರ್ಗವಾಗಿ ಸಂಚರಿಸಲು ದಾರಿ ತೋರಿಸಬೇಕಿದೆ.
ಇಷ್ಟೇ ಅಲ್ಲದೆ ಧರ್ಮನಿರಪೇಕ್ಷ ಹಾಗೂ ಜಾತ್ಯತೀತ ತತ್ವದ ಅನುಸಾರ ವಿಶ್ವಮಾನವರಾಗುವ ದಿಕ್ಕಲ್ಲಿ ಸಾಗುವ ಮಾರ್ಗದರ್ಶನ ನೀಡಬೇಕಿದೆ. ವೈಜ್ಞಾನಿಕವಾಗಿ ಯೋಚಿಸುವುದ ಕಲಿತು ಮೌಡ್ಯತೆಯನ್ನು ಅಳಿಸಲು ಇಂದೇ ಪಣ ತೊಡುವಂತೆ ಗಟ್ಟಿಗೊಳಿಸಬೇಕಿದೆ. ಮುಂದಿನ ಪೀಳಿಗೆ ಪ್ರಜಾತಂತ್ರದ ಭಾಗವಾಗಿ ತಮ್ಮ ಮತ ಚಲಾಯಿಸುವ ಸಂದರ್ಭದಲ್ಲಿ ಯಾವುದೇ ಆಮಿಷ, ಅಂದಭಕ್ತಿ, ಆಸೆಗಳಿಗೆ ಒಳಗಾಗದೆ ಸ್ವಂತ ಬುದ್ಧಿಯಿಂದ ಉತ್ತಮರನ್ನು ಆಯ್ಕೆ ಮಾಡುವ ತಿಳುವಳಿಕೆ ಕೊಡಬೇಕಿದೆ.
ಈ ಎಲ್ಲಾ ಸಕಾರಾತ್ಮಕ ವಿಚಾರಗಳನ್ನು ರೂಡಿಸಿಕೊಂಡು ನಮ್ಮ ಮುಂದಿನ ಪೀಳಿಗೆ ಅಂದರೆ ಇಂದಿನ ಮಕ್ಕಳು ಬೆಳೆದರೆ ಬಹುಷಃ ಸಂವಿಧಾನದ ಆಶಯದ ನಿಜ ಸ್ವಾತಂತ್ರ್ಯವನ್ನು ದೇಶದಲ್ಲಿ ಕಾಣಲು ಸಾಧ್ಯವಾಗಬಹುದಾಗಿದೆ.
——————————
ಮೇಘ ರಾಮದಾಸ್ ಜಿ
ಯುವಜನ ಕಾರ್ಯಕರ್ತರು
ಹೊಂಬಾಳೆ ಟ್ರಸ್ಟ್ ಗುಳಿಗೇನಹಳ್ಳಿ