ಲಹರಿ ಸಂಗಾತಿ
ರಾಧಿಕಾ ಗಣೇಶ್
‘ಸಂಗಾತಿ ನೀನಿರದೆ’
ಎಂದಿನಂತೆ ಸಂಜೆಯ ವಾಕ್ ಮುಗಿಸಿ ಮನೆಯೊಳಗೆ ಬರುತ್ತಿರುವಂತೆ ಸೊಸೆ ಟಿವಿಯಲ್ಲಿ ಕನ್ನಡ ಹಾಡುಗಳ ರಿಯಾಲಿಟಿ ಶೋ ನೋಡ್ತಾ ಇದ್ಲು
ಭಾವಗೀತೆ ಥೀಮ್ ಇರ್ಬೇಕು
H.S ವೆಂಕಟೇಶ ಮೂರ್ತಿಯವರ
ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ
ಅರಿತೆವೇನು ನಾವು ನಮ್ಮ ಅಂತರಾಳವ ಹಾಡು ಕೇಳಿ ಬರ್ತಾ ಇದ್ದಂತೆ ಒಮ್ಮೆಲೇ ನನ್ನವಳ ನೆನಪಾಯ್ತು…
ಮೆಲ್ಲನೇ ಒಳಹೋಗಿ ಒಂದು ಗ್ಲಾಸ್ ನೀರು ಕುಡಿದು ಹಾಲ್ ಗೆ ಬರುತ್ತಿದ್ದಂತೆ ಮುಂದಿನ ಸ್ಪರ್ಧಿ
ಸುಬ್ರಾಯ ಚೊಕ್ಕಾಡಿಯವರ
ಮುನಿಸು ತರವೇ ಮುಗುದೇ…
ಹಿತವಾಗಿ ನಗಲೂ ಬಾರದೇ…. ಎಂದು ಹಾಡುತಿರಲು ಅಲ್ಲಿ ನಿಲ್ಲಲಾಗದೆ ತನ್ನ ಕೋಣೆಯೊಳಗೆ ಹೋಗಿ ಕೂತೆ
ನನ್ನವಳ ಮುಖ ಕಣ್ಣೆದುರು ಬಂತು ಒಂದು ದಿನವಾದರೂ ಮುನಿಸು ಮಾಡಿಕೊಂಡಿದ್ದು ನೆನಪಾಗಲೇ ಇಲ್ಲ
ಆದರೆ ನಾನು???? ಅವಳ ಅಂತರಾಳ ಅರಿಯಲು ಪ್ರಯತ್ನಿಸಲೇ ಇಲ್ಲ ಆದರೆ ಇಂದ್ಯಾಕೆ ಈ ಯೋಚನೆ ಅವಳು ಜೊತೆಗಿಲ್ಲ ಅಂತಾನಾ..
ಯೋಚನೆ ತಳ್ಳಿ ಹಾಕಿ ಫೋನ್ ಕೈಗೆತ್ತಿ ಕೊಂಡರೂ ಇಷ್ಟುಕಾಲ ಒಟ್ಟಿಗಿದ್ದು ಇಂದು ನನ್ನಿಂದ ದೂರವಾದ ಆಕೆ ಕಣ್ಣೆದುರು ನಿಂತಂತಾಯ್ತು
ಪದೇ ಪದೇ ಅವಳ ನೆನಪು ಕಾಡಲು ಬೇಡವೆಂದರೂ ಹಳೆಯ ದಿನಗಳು ರೀಲ್ ನಂತೆ ಕಣ್ಣೆದುರು ಬರತೊಡಗಿತು
ನಾನೊಬ್ಬ ಸರ್ಕಾರಿ ನೌಕರ ನನ್ನಲ್ಲಿ ಮೊದಲಿನಿಂದಲೂ ಒಂತರಾ ಸ್ವಪ್ರತಿಷ್ಠೆ… ಹೆಂಡತಿ ಬಳಿಯೂ ಅದಕ್ಕೆ ರಿಯಾಯತಿ ಇರಲಿಲ್ಲ
ಪತ್ನಿ ಎಂದರೆ ಕಾರ್ಯೇಷು ದಾಸಿ/ಶಯನೇಷು ರಂಭಾ ಇಷ್ಟಕ್ಕೆ ಸೀಮಿತ ಎಂದುಕೊಂಡವನು ನಾನು
ಕೇಳಿದ್ದನ್ನು ಕೂಡಲೇ ತಂದು ಕೊಟ್ಟದ್ದೇ ಇಲ್ಲ ಹಾಗಂತ ಅವಳು ತನಗೆ ಬೇಕು ಅಂತ ಕೇಳಿದ್ದೂ ಇಲ್ಲ ಅದು ಬೇರೆ ಮಾತು
ಅದೊಂದು ದಿನ ಅವಳ ತಾಳಿ ಯಾವುದಕ್ಕೂ ಸಿಕ್ಕಿ ತುಂಡಾದಾಗ ಸರಿ ಮಾಡಿಸಿ ತರುವಂತೆ ಹೇಳಿದ್ದಳು
ಕೂಡಲೇ ಮಾಡಿಸಿ ತಂದರೆ ಜೋಪಾನ ಮಾಡಲು ಮರೆಯುತ್ತಾರೆ ಅಂತ 2 ದಿನ ಬೇಕೆಂದೇ ಡ್ರಾವರ್ ನಲ್ಲಿಯೇ ಬಿಟ್ಟು ಹೋಗಿದ್ದೆ
ಅದೊಂದು ದಿನ ಪಕ್ಕದ ಮನೆಯ ಸಾತಜ್ಜಿ ಇನ್ನೂ ಸರಿ ಮಾಡಿ ತಂದಿಲ್ವ ಅಂತ ಅವಳ ಬಳಿ ಕೇಳುವುದಕ್ಕೂ ನಾನು ಮನೆಯ ಬಾಗಿಲ ಬಳಿ ನಿಲ್ಲುವುದಕ್ಕೂ ಸರಿಯಾಗಿತ್ತು
ಏನ್ ಹೇಳ್ತಾಳೆ ಕೇಳೋಣ ಅಂತ ಕಿವಿಯಾನಿಸಿ ಕೇಳಿದೆ
ಇಲ್ಲ ಸಾತಜ್ಜಿ ಮೊನ್ನೆನೇ ಕೊಟ್ಟಿದ್ದಾರೆ ಆದರೆ ಅವನಿಗೆ ಹುಷಾರಿಲ್ಲ ಅಂತ ಅಂಗಡಿ ಬಾಗಿಲು ತೆರೆದಿಲ್ಲ ಅಂದ್ರು ಪಾಪ ಏನಗಿದ್ಯೋ ಏನೋ ಬೇಗ ಹುಷಾರಾಗಿ ಬರಲಿ ಅಂತ ದಿನಾ ಬೇಡ್ತಾ ಇದ್ದೀನಿ ಅಜ್ಜಿ ಅಂದಾಗ ಕೊಂಚ ಮೆದುವಾಗಿದ್ದೆ ಮರುದಿನ ಬೆಳಿಗ್ಗೆ ಕೊಟ್ಟು ಸಂಜೆಯೇ ಸರಿ ಮಾಡಿಸಿ ತಂದಿದ್ದೆ
ಅದಾಗಿ ಒಂದು ವಾರದೊಳಗೆ ಮಗ ಏನೋ ಬೇಕು ಅಂತ ಕೇಳಿದಾಕ್ಷಣ ತಂದು ಕೊಟ್ಟಿದ್ದೆ ನನ್ನತನ ಮೆರೆಯಲು
ಆದರೆ ಅದನ್ನು ಅವನು ವಾರದೊಳಗೆ ಹಾಳುಮಾಡಿ ಹಾಕಿದ್ದ ಆಗ ಅವಳು ಅವನಿಗೆ ಬಯ್ಯುತ್ತಾ ವಸ್ತುವಿನ ಬೆಲೆ ಗೊತ್ತಾಗುವುದು ಅದು ನಮಗೆ ಸಿಗುವ ಮೊದಲು ಮತ್ತೊಮ್ಮೆ ಅದನ್ನು ಕಳೆದುಕೊಂಡಾಗ ಅಂದಿದ್ದು ಸತ್ಯ ಅಂತ ಇಂದು ನನಗೆ ಮನವರಿಕೆಯಾಗುತ್ತಿದೆ
ಅವಳು ನನ್ನ ಅಮ್ಮನ ಜೊತೆಗಿದ್ದು ಸ್ವಲ್ಪವೇ ಸಮಯ ಆದರೆ ಎಷ್ಟು ಚೆನ್ನಾಗಿ ಬೆರೆತು ಹೋಗಿದ್ದಳು ಆದರೆ ನಾನು???
ನನಗೆ ಊಟದಲ್ಲಿ ಎಷ್ಟೇ ತರಕಾರಿ ಪಲ್ಯ ಇದ್ರೂ ಸಂಡಿಗೆ ಬೇಕೇ ಬೇಕಿತ್ತು ಅದಕ್ಕಾಗಿ ಅಮ್ಮ ಬೇಸಿಗೆಯಲ್ಲಿ ಡಬ್ಬ ಗಟ್ಟಲೇ ಸಂಡಿಗೆ ಮಾಡಿ ಇಡ್ತಾ ಇದ್ಲು
ಅದೊಂದು ವರ್ಷ ಅಮ್ಮನಿಗೆ ಅನಾರೋಗ್ಯ ಕಾಡಿ ಸಂಡಿಗೆ ಮಾಡಲು ಅಸಾಧ್ಯವಾದಾಗ ನನ್ನವಳು ನನಗಾಗಿ ಅಮ್ಮನ ಬಳಿ ಕೇಳಿ ಕೇಳಿ ಕಲಿತು ಸಂಡಿಗೆ ಮಾಡಿದ್ದಳು ಆದರೆ ನಾನು ಮಾತ್ರ ಅಮ್ಮ ಮಾಡಿದ ಹಾಗೇ ಆಗಿಲ್ಲ ಅಂತ ಎಲ್ಲರ ಎದುರು ಮೂದಲಿಸಿದ್ದೆ ಆಗ ಒಂದೂ ಮಾತು ಆಡದೆ ಕೋಣೆಗೆ ಹೋಗಿ ಕಣ್ಣೀರು ಒರೆಸಿದ್ದು ನನಗೆ ಚೆನ್ನಾಗಿ ನೆನಪಿದೆ ಆದರೆ ನಾನು ಅವಳನ್ನು ರಮಿಸಲು ಹೋಗಿರಲಿಲ್ಲ ಅದೇ ಮುಂದೆ ಅಭ್ಯಾಸವಾದರೆ ಅಂತ…
ಆದರೆ ಮರುವರ್ಷದಿಂದ ಅಡುಗೆಯಲ್ಲಿ ಪಳಗಿದ ಕೈ ಎಂದೇ ಪ್ರಸಿದ್ಧಿಯಾದ ಸಾತಜ್ಜಿಯನ್ನು ಮನೆಗೆ ಕರೆದುಕೊಂಡು ಬಂದು ಅವಳಿಂದ ಉಪ್ಪು,ಖಾರದ ಹದ ತಿಳಿದು ಸಂಡಿಗೆ ಮಾಡಲು ಕಲಿತಿದ್ದಳು ಬರುಬರುತ್ತಾ ಥೇಟ್ ….ಅಮ್ಮನ ರುಚಿ….
ಆದರೆ….ನಾನು ಮಾತ್ರ ಹೇಳಲೇ ಇಲ್ಲ ಎಷ್ಟೆಂದರೂ ನಾನು ಗಂಡಸು ಅಲ್ವಾ…
ಆದ್ರೆ ಮೊನ್ನೆ ತಾನೇ ನನ್ನ ಸೊಸೆ YouTube ನೋಡಿ ಏನೋ ಹೊಸ ರುಚಿ ಮಾಡಿದ್ಲು ತುಂಬಾ ಚೆನ್ನಾಗಿತ್ತು
ನಾನು ಮತ್ತು ಮಗ ತಿಂತಾ ಇರ್ಬೇಕಾದ್ರೆ ಹೇಗಿದೆ ಅಂತ ಕೇಳಿದ್ಲು ನಾನು ಮಗ ಇಬ್ಬರೂ ಒಟ್ಟಿಗೆ ಚೆನ್ನಾಗಿದೆ ಅಂದೆವು
ಚೆನ್ನಾಗಿಲ್ಲದಿದ್ದರೆ ಚೆನ್ನಾಗಿಲ್ಲ ಅಂತ ಬಾಯ್ ಬಡ್ಕೊಳ್ಳೋಕೆ ಗೊತ್ತು ಚೆನ್ನಾಗಿದ್ದುದ್ದನ್ನು ಚೆನ್ನಾಗಿದೆ ಅಂತ ಹೇಳೋಕೆ ಬಾಯಿಗೇನು ಬೀಗ ಹಾಕಿದ ? ಅವಳು ಅಂದಿರೋದು ನನಗೆ ಅಂತ ತಿಳಿದಾಗ ನನ್ನವಳು ನೆನಪಿಗೆ ಬಂದಿದ್ದಳು
ನಾನು ತಿಂದ ಆಹಾರದ ಪ್ರಮಾಣದಲ್ಲಿಯೇ ಅಡುಗೆ ಹೇಗಾಗಿದೆ ಅಂತ ತಿಳಿವ ಚಾಣಾಕ್ಯೆ ಅವಳು ಒಮ್ಮೆಯೂ ಕೇಳಲಿಲ್ಲ ಆದರೂ ನನ್ನ ಬಾಯಿಂದ ಕೇಳಿ ತಿಳಿದುಕೊಳ್ಳುವ ಹಂಬಲ ಅವಳಿಗೂ ಇದ್ದಿರಬಹುದು ಅಲ್ವಾ ಪಾಪ….
ಅದೊಂದು ದಿನ ಅವಳಿಗೆ ಬೆಳಿಗ್ಗೆಯಿಂದಲೇ ಸುಸ್ತು ಮುಖದಲ್ಲೇ ಎದ್ದು ಕಾಣುತಿತ್ತು ಆದರೂ ನಾ ಕೇಳುವ ಗೋಜಿಗೆ ಹೋಗಿರಲಿಲ್ಲ
ಹೇಗೆ ಕೆಲಸ ಮಾಡಿದಳೋ ? ಮಧ್ಯಾಹ್ನ ಊಟ ಮಾಡಿದ್ದಾಳೋ ಇಲ್ವೋ…ರಾತ್ರಿಗೆ ಕೇವಲ ಬೇಳೇ ಸಾರು ಹಾಗೂ ಮಾಡಿಟ್ಟಿದ್ದ ಚಟ್ನಿ ಪುಡಿ ಹಾಕಿ ಕೊಟ್ಳು
ಯಾಕೋ ಬಾಯಿಗೆ ರುಚಿಸದೆ ಸಂಡಿಗೆ ಇಲ್ವಾ ಅಂದಾಗ ಕ್ಷಮಿಸಿ ತುಂಬಾ ಸುಸ್ತಾಗಿತ್ತು ಕಾಯಿಸಲು ಆಗಿಲ್ಲ ಅಂತ ಮುಖ ಚಿಕ್ಕದು ಮಾಡಿದಾಗ ನನಗೆ ಏನೋ ಅನ್ನಿಸಲೇ ಇಲ್ಲ
ಊಟ ಅಲ್ಲಿಗೆ ಬಿಟ್ಟು ಕೈ ತೊಳೆಯಲು ಎದ್ದಾಗ ಓಡಿ ಬಂದು ಕಾಲಿಗೆ ಬಿದ್ದು ದಯವಿಟ್ಟು ಊಟ ಬಿಟ್ಟು ಎದ್ದು ಹೋಗಬೇಡಿ ಅನ್ನಬ್ರಹ್ಮನ ಮೇಲೆ ಮುನಿಸು ತರವಲ್ಲ ಕುಳಿತುಕೊಳ್ಳಿ ಎರಡೇ ನಿಮಿಷದಲ್ಲಿ ಸಂಡಿಗೆ ಕರಿದು ಕೊಡುತ್ತೇನೆ ಎಂದವಳೇ ಒಲೆಗೆ ಬೆಂಕಿ ಹಚ್ಚಿ(ಆಗಿನ್ನೂ ಗ್ಯಾಸ್ ಬಂದಿರಲಿಲ್ಲ) ಎಣ್ಣೆ ಬಾಣಲೆ ಇಟ್ಟು ಸಂಡಿಗೆ ಕಾಯಿಸಿ ಕೊಡಲಿಲ್ಲವೇ…..
ಆದ್ರೆ ಮೊನ್ನೆ ಸೊಸೆಗೆ ಹೇಳಿದಾಗ ಕಾಯಿಸಿದ್ದು ಇಲ್ಲ ಇವತ್ತೊಂದು ದಿನ ಸಂಡಿಗೆ ಇಲ್ಲದೇ ಊಟ ಸೇರುತ್ತೋ ಇಲ್ವೋ ನೋಡಿಯೇ ಬಿಡೋಣ ಅಂತ ಮುಖಕ್ಕೆ ಹೊಡೆದ ಹಾಗೆ ಹೇಳಿಬಿಟ್ಟಳಲ್ಲ
ಹೌದು ಅವಳು ಅಂದು ಹೇಳಿದ ಮಾತು ವಸ್ತುವಿನ ಬೆಲೆ ತಿಳಿಯುವುದು ಅದನ್ನು ಕಳೆದುಕೊಂಡಾಗ ಅನ್ನೋದು ನೂರಕ್ಕೆ ನೂರು ಸತ್ಯ
ನನ್ನನ್ನು ಕ್ಷಮಿಸು ಅಂತ ಕೇಳಲೂ ನಾನು ಅರ್ಹನಲ್ಲ ಆದರೆ ನೀನು ಖಂಡಿತಾ ಕ್ಷಮಿಸುವೆ ಅಂತ ನಂಗೂ ಗೊತ್ತು
ಜೀವನದಲ್ಲಿ ಸಂಗಾತಿಯ ಮಹತ್ವ ಏನು ಎಂಬುದು ಇಂದು ಸಂಗಾತಿ ನೀನಿರದೆ ಅರಿವಾಗುತ್ತಿದೆ…ಈಗ ಪಶ್ಚಾತ್ತಾಪ ಪಡಲಷ್ಟೇ ನನ್ನಿಂದ ಸಾಧ್ಯ ಅಂದುಕೊಳ್ಳುತ್ತಿರುವಾಗಲೇ ಸೊಸೆ ಟಿವಿಯ ಧ್ವನಿ ಏರಿಸಿದ್ದು ಕೇಳಿಬಂತು ಹೂಂ ಅದೇ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾದ ಹಾಡು ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋಟಿ ರೂಪಾಯಿ
ಹಾಡು ಕೇಳುತ್ತಿದ್ದಂತೆ ನನಗರಿವಿಲ್ಲದೆ ಕಣ್ಣಲ್ಲಿ ನೀರು ಹರಿಯುತ್ತಿತ್ತು…
ಹೆಂಡತಿಯೊಲುಮೆಯ ಭಾಗ್ಯವನರಿಯದ ಗಂಡಿಗೆ ಜಯವಿಲ್ಲ….. ನನ್ನವಳು ಅಣಕಿಸಿದಂತಾಯ್ತು
—————————————-
ರಾಧಿಕಾ ಗಣೇಶ್