ಕಾವ್ಯ ಸಂಗಾತಿ
ಕುಸುಮಾ. ಜಿ. ಭಟ್ ಅವರಹೊಸ
ಗಜಲ್
ಕಾಡಿ ಬೇಡಿ ಕರೆತಂದ ಪದಗಳಿಗೆ ಭಾವವೇ ಒದಗದೆ ಬರೆಯಲಿ ಹೇಗೆ
ತಿದ್ದಿ ತೀಡಿ ಜೋಡಿಸಿದ ವಾಕ್ಯಗಳಿಗೆ ನಂಟು ಬೆಸೆಯದೆ ಬರೆಯಲಿ ಹೇಗೆ
ಒಡನಾಡಿದ ಅಕ್ಷರಗಳೇ ಮಾತನು ಕೇಳದೆ ಮೊಂಡು ಹಠವ ಹೂಡಿವೆ
ಮೂಡುವ ಶಾಯರಿಗೆ ಲೆಕ್ಕಣಿಕೆಯ ಶಾಯಿ ಸ್ಪಂದಿಸದೆ ಬರೆಯಲಿ ಹೇಗೆ
ಕರಡುಗಳೇ ಕಥೆ ಹೇಳುತಿವೆ ಸರತಿ ಸಾಲಿನಲಿ ಗರಡಿ ಮನೆಯ ತುಂಬಾ
ಕಡಲಾಳದ ಮೌನಧ್ಯಾನ ಮುರಿದು ಲಹರಿ ಹರಿಯದೆ ಬರೆಯಲಿ ಹೇಗೆ
ಛೇಡಿಸುತಲಿವೆ ಮೋಡಿ ಮಾಡುತಾ ಸಹವರ್ತಿಗಳ ಬರವಣಿಗೆ ಡೋಲಿ
ಮಬ್ಬು ಮುಸುಕಿದ ಆಂತರ್ಯವು ಸ್ಫೂರ್ತಿ ಸ್ಫುರಿಸದೆ ಬರೆಯಲಿ ಹೇಗೆ
ಕೊರಡು ಕೊನರಿ ವಿಕಸಿಸಬಹುದೇ ಕಾಲಾಂತರದಿ ಕಾವ್ಯಕುಸುಮ ದಳ
ಹೃದಯದಲಿ ಅಡಗಿದ ಸ್ವರಗಳು ಮಿಡಿದು ತುಡಿಯದೆ ಬರೆಯಲಿ ಹೇಗೆ
ಕುಸುಮಾ. ಜಿ. ಭಟ್
Sundaravada Ghazal
ಮನಸೂರೆಮಾಡುವ ಗಜಲ್ , ಪ್ರಶಂಸನೀಯ ಪದಸಂಯೋಜನೆ .ಅಭಿನಂದನೀಯ ಹಂಚಿಕೆ.
ಸುಂದರ ಗಝಲ್. ಸೊಗಸಾಗಿದೆ ರಚನೆ ಕುಸುಮಾಭಟ್ ರವರೆ.