ಕಾವ್ಯ ಸಂಗಾತಿ
ಭಾರತಿ ಅಶೋಕ್
ಸಂದೇಶಗಳು
ಅವನಿಂದ ಬರುವ ಮೆಸೆಜುಗಳಲ್ಲಿ
ಇವತ್ತೇನು ಕೆಲಸ ಎನ್ನುವುದು ಒಂದು
ಸರಿ- ಉತ್ತರ ಏನು ಹೇಳಲಿ
ನಿನಗೆ ಮೆಸೆಜಿಸಿ ಪ್ರತಿಕ್ರಿಯೆಗಾಗಿ ಕಾಯುವುದು,
ಕಾಯುವ ಕಾತರ ನೀಗಿ ಸಹವಾಸ ಸಾಕಿನ್ನು ಎಂದು ಮಾಗುತ್ತಲೇ ಮತ್ತೊಂದು ಮೆಸೆಜ್ “ಉಂಡ್ಯಾ” ಎಂದು
ಒಹ್!
ಇವನಿಗೆ ಅದೆಷ್ಟು ಕಾಳಜಿ ಎಂದು ಮಾಗಿದ್ದು ಮರೆತು ಬೀಗುತ್ತಲೆ ಮತ್ತೆ
ಹ್ಞೂಂ…
ನೀನುಂಡ್ಯಾ ಎನ್ನುತ್ತಾ ಉಂಡನೋ … ಎಂದು ತಿಳಿಯಲು ಮತ್ತೊಂದು ಗಂಟೆ ಕಾಯುವುದು
ಈಗವನ ಪ್ರಶ್ನೆಗೆ ಉತ್ತರಿಸಲು
ತೊಡಗಿದ್ದೇನೆ
ಲೇಯ್ ಕೇಳಿಲ್ಲಿ
ನನ್ನ ಕೆಲಸ ಕಾಯುವುದು
ನಿನ್ನ ಒಂದೊಂದು ಸಂದೇಶಕ್ಕಾಗಿ
ಕರೆ ಮಾಡಿ ಸಂಪರ್ಕ ಕಡಿದಾಗ ನಿರುತ್ಸಾಹಳಾಗಿ ಸಂದೇಶದ ಟುಂಯ್ಗುಡುವ ಮೊಬೈಲಿನ ಸದ್ದಿಗಾಗಿ
ನೋಡೋ..
ನನಗೆ ಕಾಯುವ ತಾಳ್ಮೆ ಇಲ್ಲ
ಸಾಧ್ಯವಾದರೆ ಕರೆ ಮಾಡು ಎಂದುದ ನೆನೆದು ಈಗ ಕರೆದಾನೆಂದು
ಮತ್ತೆ ರಿಂಗಣಕೆ ಕಿವಿಯಾಗವುದು ಎಂದು
ಇದು ಮುಂಜಾನೆಯಿಂದ ಸಂಜೆವರೆಗು ಸಂಚರಿಸುವ
ಸಂದೇಶಗಳ ಬಾಬತ್ತು
ಏನಾಗಿದೆ ನನಗೆ
ನಾನು ಉಂಡೆನೋ ಎಂದು ಕೇಳುವ ಒಂದು ದನಿಗಾಗಿ
ಕಾಯುವ ತವಕ ಯಾಕೆ
ಅದರ ಹೊರತಾದ ಮಾತು ಇಲ್ಲ, ಕಥೆಯೂ..
ಅದರೂ ಎಲ್ಲ ಮರೆತು ಕಾಯುವುದೇಕೆ!
ಭಾರತಿ ಅಶೋಕ್
ಕಟು ವಾಸ್ತವ