ರಾಜ್ ಬೆಳಗೆರೆ ಅವರ ಹೊಸ ಕವಿತೆ-ನನ್ನೆದೆಯ ಗುಲ್‍ಮೊಹರ್

ನೀನೊಂದು ಮರೀಚಿಕೆ
ಆದರೂ ನಿನ್ನದೇ ಕನವರಿಕೆ
ನಿಲ್ಲದ ಮನದ ಚಡಪಡಿಕೆ

ಬುದ್ಧವಿಹಾರದ ದಿವ್ಯಮೌನದಲ್ಲಿ
ಜೊತೆಜೊತೆಗೆ ನಡೆದ ಆ ಹೆಜ್ಜೆ
ಗುರುತುಗಳನ್ನು ಹುಡುಕುತ್ತಿರುವೆ
ಯಾಕೋ ಸಿಗುತ್ತಿಲ್ಲ ಗೆಳತಿ

ಗುಡಿ ಗಂಟೆಯ ನೀನಾದದ
ಜೊತೆಯಲ್ಲಿ ನೀನಾಡಿದ ಸವಿಮಾತುಗಳಿನ್ನೂ
ಗಾಳಿಯಲ್ಲಿ ಲೀನವಾಗಿಲ್ಲ
ಅವುಗಳನ್ನು ಮತ್ತೊಮ್ಮೆ ಕೇಳಬೇಕೆನಿಸಿದೆ

ಅರ್ಥವಾಗದ ವ್ಯಾಕರಣವಾಗಿರುವ
ನಿನ್ನ ಮನಸ್ಸನ್ನು ಅರ್ಥಮಾಡಿಕೊಳ್ಳುವಲ್ಲಿ
ಪದೇ ಪದೇ ಸೋಲುವ ವೈಯಾಕರಣಿ ನಾನು

ಮಾತುಗಳು ಮುನಿಸಿಕೊಂಡು
ಮೌನವೇ ಮಾತಾದಾಗ
ನೊಂದ ಮನಸು ಕಂಡ ಕನಸು
ಎಲ್ಲವೂ ನಿನ್ನ ಚೂಡಿಯ ಅಂಚಿನ
ಚುಂಗಿನಲ್ಲಿ ಅನಾಥವಾಗಿ ಜೋತಾಡುತ್ತಿವೆ

ಏಳುಮಲ್ಲಿಗೆ ತೂಕದ ರಾಜಕುಮಾರಿ
ಏಳೇಳು ಜನ್ಮಕ್ಕೂ ಮುಗಿಯಲಾರದಷ್ಟು ಕೋಪವೇಕೆ?
ನಿನ್ನ ಕೋಪಕ್ಕೆ ಗುರಿಯಾಗಿ ನಿನ್ನ
ಪ್ರೇಮ ಸಾಮ್ರಾಜ್ಯದಿಂದ ಗಡೀಪಾರು
ಮಾಡಲ್ಪಟ್ಟ ಬರಿಗಾಲ ಫಕೀರ ನಾನು

ನಿನ್ನ ಕೋಪದ ತಾಪವೂ ಸೇರಿ
ನಿಮ್ಮೂರ ಬಿಸಿಲಿನ ಝಳ
ಕೂಡಾ ದಿನೇ ದಿನೇ ಏರುತ್ತಿದೆ
ಮುನಿಸು ಮುನಿಸುಗಳ ನಡುವೆ
ಕನಸುಗಳ ಭ್ರೂಣವನ್ನು ಕೊಲ್ಲದಿರು

ನಿನ್ನ ಕೋಪಕ್ಕೆ ಸಿಲುಕಿ ನಿನ್ನೆದೆ ಗೂಡಿನಿಂದ
ಹೊರಬಿದ್ದ ಒಬ್ಬಂಟಿ ನಿರಾಶ್ರಿತ ನಾನು
ನಿನ್ನ ಪ್ರೀತಿಯೆಂಬ ಗಂಜಿಕೇಂದ್ರದಲ್ಲಿ
ಅಸಹಾಯಕನಾಗಿ ಒಂಟಿಕಾಲಲ್ಲಿ
ಕೈವೊಡ್ಡಿ ನಿಂತಿರುವೆ
ನೀಡಲಾರೆಯಾ ಒಂದು ಬೊಗಸೆ ಪ್ರೀತಿಯನು?

ನಿನ್ನ ಪ್ರೇಮದಲ್ಲಿ ಸೆರೆಸಿಕ್ಕ
ಅಪರಾಧಿ ನಾನೀಗ
ಜಾಮೀನು ಸಿಗದೇ ನಿನ್ನ ಹೃದಯದಲ್ಲಿ
ಬಂಧಿಯಾಗಿ ಜೀವಿತಾವಧಿ ಶಿಕ್ಷೆಗೆ
ಗುರಿಯಾಗಬೇಕಾಗಿದೆ
ದಯವಿಟ್ಟು ಖುಲಾಸೆಗೊಳಿಸದಿರು ಗೆಳತಿ

ಏರು ಮೆಟ್ಟಿಲು ಹಾದಿಯಲ್ಲಿ ಆಯತಪ್ಪಿದ
ನಿನ್ನ ಮೃದು ಬೆರಳುಗಳನ್ನು ಹಿಡಿದ
ನೆನಪಿನ್ನು ಹಸಿಹಸಿರಾಗಿದೆ
ಇಳಿಸಂಜೆಯಲಿ ಇಬ್ಬರೇ ತುಂತುರು
ಮಳೆಹನಿಯಲಿ ನೆನೆದ ನೆನಪುಗಳು
ಮತ್ತೆ ಮತ್ತೆ ಮುದ ನೀಡುತ್ತಿವೆ

ಪಾದರಕ್ಷೆ ತೊಡಿಸಿದ ನಿನ್ನ ಹೂ ಪಾದದ
ಗುರುತು ನನ್ನೆದೆಯಲಿ ಮೂಡಿದೆ
ದೇವರ ಸನ್ನಿಧಿಯಲಿ ನೀ ನನ್ನ ಹಣೆಗಿಟ್ಟ ಕುಂಕುಮದ
ಆ ಸ್ಪರ್ಷ ಇಂದಿಗೂ ತಣ್ಣಗೆ ಕೊರೆಯುತ್ತಿದೆ
ಬಿಟ್ಟು ಹೋದಾಗ ಬಿಕ್ಕಳಿದ್ದು
ಸಿಕ್ಕಾಗ ಸಂಭ್ರಮಿಸಿದ್ದು
ಎಲ್ಲ ನೆನಪುಗಳೊಂದಿಗೆ ಈಗ
ನನ್ನ ಶವವನ್ನು ನಾನೇ ಹೊರಬೇಕಾಗಿದೆ

ನಮ್ಮೂರು ನಿಮ್ಮೂರ ರಹದಾರಿ ತುಂಬೆಲ್ಲಾ
ಬರೀ ವಿರಹದ ಗುರುತುಗಳು
ಅಳಿಸಿಬಿಡಲು ಯಾಕೋ
ಮನಸು ಒಪ್ಪುತ್ತಿಲ್ಲ

ಮುಂದೊಂದು ದಿನ ನನ್ನ ಪ್ರೀತಿ
ನಿನಗೆ ಅರ್ಥವಾದರೆ
ಗೋರಿಯಾಳದಲ್ಲಿ ಮಣ್ಣುಹೊದ್ದು
ಮಲಗಿರುವ ನನ್ನ ಶವ
ಎದ್ದು ಕುಳಿತುಕೊಳ್ಳುತ್ತದೆ

ಗೆಳತಿ, ಇನ್ನು ಹೆಚ್ಚು ದಿನ
ಕಾಯಿಸಬೇಡ ನೋಯಿಸಬೇಡ
ಆಗೊಮ್ಮೆ ಈಗೊಮ್ಮೆ ಸುಡು
ಬಿಸಿಲಿನ ನಡುವೆ ಸುರಿವ
ತುಂತುರು ಮಳೆಯಂತೆ
ನಕ್ಕು ಬಿಡು ಒಮ್ಮೆ
ಅರಳಿದ ಗುಲ್‍ಮೊಹರ್ ನಂತೆ….



2 thoughts on “ರಾಜ್ ಬೆಳಗೆರೆ ಅವರ ಹೊಸ ಕವಿತೆ-ನನ್ನೆದೆಯ ಗುಲ್‍ಮೊಹರ್

Leave a Reply

Back To Top