‘ಊರ್ಮಿಳೆಯ ಭಾವಾಂತರಂಗ’ ಒಂದು ಚಿಂತನೆ-ಡಾ.ಯಲ್ಲಮ್ಮ.ಕೆ ಅವರಿಂದ

ತ್ರೇತಾಯುಗದಿ ಮಹರ್ಷಿ ವಾಲ್ಮೀಕಿಯವರಿಂದ ರಚಿತವಾದ ರಾಮಾಯಣ ಮಹಾಕಾವ್ಯದಿ ಊರ್ಮಿಳೆಯ ಪ್ರಸ್ತಾಪವು ಸಾಂಧರ್ಭಿಕವಾಗಿ ಮೂಡಿಬಂದಿದ್ದು ಆಕೆ ಗೌಣವಾಗಿಯೇ ಉಳಿದು ಬಿಡುತ್ತಾಳೆ ಮುಂದೆ ಆಕೆಗೆ ಒಂದು ಅಸ್ತಿತ್ವ ಒದಗಿಬಂದದ್ದು ರಾಷ್ಟಕವಿ ಕುವೆಂಪುರವರ ಶ್ರೀರಾಮಾಯಣದರ್ಶನಂ (1949) ಮಹಾಕಾವ್ಯದಲ್ಲಿ ಚರ್ಚಿತಗೊಂಡು ತದನಂತರದಿ ಸಾಹಿತಿಗಳು ಊರ್ಮಿಳೆಯ ವ್ಯಕ್ತಿತ್ವದ ಕುರಿತಾಗಿ ಬಗೆಬಗೆಯಾಗಿ ಚಿತ್ರಿಸಿದ್ದಾರೆ.
ಕವಿಯಾದವನಿಗೆ ತನ್ನ ಸುತ್ತಮುತ್ತಣ ಪರಿಸರದ ಪ್ರಭಾವ ಮತ್ತು ಪ್ರೇರಣೆಗೆ ಒಳಗಾಗದೆ ಇರಲು ಸಾಧ್ಯವಾಗದಿರದು ಅಂತೆಯೇ ಊರ್ಮಿಳೆಯ ಪಾತ್ರ ಸೃಷ್ಟಿಯಲ್ಲಿ ಕುವೆಂಪುರವರು ವಿಭಿನ್ನ ದೃಷ್ಟಿಧೋರಣೆಗೆ ಪಡೆದಿರಬಹುದಾದ ಪ್ರೇರಣೆ ಎಲ್ಲಿಹದು..? ಹೊಸಹೊಸ ಹೊಳವುಗಳು ನೆಲೆ ಯಾವುದೆಂದು ಬೆಂಬತ್ತಿ ಸಾಗಿದಾಗ ಗೋಚರಿಸಿದ್ದಿಷ್ಟು : ರಂಗಭೂಮಿಯಲ್ಲಿ ಸರಳ ರಗಳೆಯ ಭಾಷೆಯನ್ನು ಜೀವಂತಗೊಳಿಸಿದ ಕಂದಗಲ್ಲ ರಾಯರ ಸಾಹಸ ಶ್ಲಾಘನೀಯ (ಕಂದಗಲ್ಲರ ನಾಟಕಗಳ ಸಮೀಕ್ಷೆ ; ಡಾ.ಎಸ್.ಬಿ.ಅಗಳಿ ; 1994 ; ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು) ಎಂದು ಕುವೆಂಪುರವರು ಉದ್ಗಾರ ತೆಗೆದದ್ದು ಗಮನಿಸುವಂತದ್ದು.


1895-1996 ರ ಅವಧಿಯಲ್ಲಿ ಕನ್ನಡ ನಾಡು-ನುಡಿಗೆ ಅಮೋಘ ಸೇವೆಯನ್ನು ಸಲ್ಲಿಸಿ ಕರ್ನಾಟಕದ ಷೇಕ್ಸ್ ಪಿಯರ್ ಎಂದೇ ಖ್ಯಾತನಾಮರಾಗಿ ಮಿಂಚಿಮರೆಯಾದ ಹನುಮಂತರಾವ ಭೀಮರಾವ ಕಂದಗಲ್ಲರವರ ಚಿತ್ರಾಂಗದೆ ಎಂಬ ಪೌರಾಣಿಕ ನಾಟಕದಲ್ಲಿ ಒಂದು ಪ್ರಸಂಗ : ಅರ್ಜುನನು ತೀರ್ಥಯಾತ್ರೆಯ ಸಂದರ್ಭದಿ ಮಣಿಪುರದ ರಾಣಿಯಾದ ಚಿತ್ರಾಂಗದೆಯನ್ನು ಮೊದಲ ನೋಟದಲ್ಲಿ ಮನಮನ ಬೆರೆತು ಮೋಹಪರವಶರಾಗಿ ಗಾಂಧರ್ವ ವಿಧಿಯಿಂದ ವರಿಸಿ ಬಬ್ರುವಾಹನ ಶಿಬಿರದಲ್ಲಿ ಸವರಾತ್ರಿಯ ಸಮಯ ವೃಷುಕೇತು (ಕರ್ಣನ ಮಗ) ಮತ್ತು ಚಿಕ್ಕಪ್ಪನಾದ ಅರ್ಜುನನೊಡನೆ ನಡೆದ ಸಂಭಾಷಣೆಯಲ್ಲಿ ರಾಮಾಯಣದ ಚರ್ಚಿತ ವಿಷಯ:


ಅರ್ಜುನ: ಪ್ರಭು ರಾಮಚಂದ್ರನು ತನ್ನ ಸತಿಯಾದ ಸೀತೆಯನ್ನು ತನ್ನೊಡನೆ ಕರೆದುಕೊಂಡು ವನವಾಸಕ್ಕೆ ಹೋಗಿದ್ದನಲ್ಲವೇ..?
ವೃಷುಕೇತು: ರಾಮಾಯಣದಲ್ಲಿ ಇದು ರೇಖಿಸಲ್ಪಟ್ಟಿದೆ.
ಅರ್ಜುನ: ಆದರೆ.., ಲಕ್ಷ್ಮಣ ದೇವನು ತನ್ನ ಪತ್ನಿಯಾದ ಊರ್ಮಿಳೆಯನ್ನು ಏಕೆ ಕರೆದುಕೊಂಡು ಹೋಗಿದ್ದಿಲ್ಲ..? ಘೋರವಾದ ವಿರಹ ವೇದನೆವನ್ನು ಊರ್ಮಿಳೆಯು ಹೇಗೆ ಸಹಿಸಿದಳು..?
ವೃಷಕೇತು: ಊರ್ಮಿಳೆಯ ವಿಷಯವಾಗಿ ರಾಮಾಯಣದ ಕವಿಯು ಏನೊಂದನ್ನು ಹೇಳಲಿಲ್ಲ..,
ಅರ್ಜುನ: ಯಾವ ಕವಿಯ ಹೃದಯವು ಕ್ರೌಂಚಪಕ್ಷಿಗಳಿಗಾಗಿ ಕಣ್ಣೀರನ್ನು ಹರಿಸಿತು, ಆ ಆದ್ಯ ಕವಿಯು ವಿರಹಿಣಿಯಾದ ಊರ್ಮಿಳೆಗೋಸ್ಕರ ನಾಲ್ಕಾರು ಶಬ್ದಗಳನ್ನಾದರೂ ಸಹ ಹೇಳದಷ್ಟು ಕಲ್ಲೆದೆಯವನಾದನೇ..?
ವೃಷಕೇತು: ಅದನ್ನು ನಾನೇನು ಬಲ್ಲೆ..! ಅದೇನೋ ಕವಿಹೃದಯ..,
ಅರ್ಜುನ: ಪತಿಯ ಜೊತೆಯಲ್ಲಿ ಹೋದ ಸೀತೆಗಿಂತಲೂ, ವಿರಹದಲ್ಲಿ ಕಾಲಕಳೆದ ಶಾಂತ ಚಿತ್ತವೃತ್ತಿಯ ಊರ್ಮಿಳೆಯು ಹೆಚ್ಚಿನ ಯೋಗ್ಯತೆಯವಳೆಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ.
ವೃಷಕೇತು: ಇದು ನನ್ನ ಬಾಲಬುದ್ಧಿಗೆ.., ಧರ್ಮ ಭೂಪಾಲನಂತೆ, ಅಶ್ವಮೇಧಯಾಗವನ್ನು ಮಾಡಿದ್ದನಂತೆ..,
ಅರ್ಜುನ: ನಿಜ, ಹಾಗೇ ಉತ್ತರ ರಾಮಾಯಣದಲ್ಲಿ ಕಥಿತವಾಗಿದೆ.


ಹೀಗೆ ಮುಂದುವರೆದು ಲವ-ಕುಶ, ರಾಮನ ನಡುವಿನ ಯುದ್ಧ, ರಾಮ ಮಡಿದದ್ದು, ಪುನಃ ಬದುಕಿದ ಪವಾಡ ಸದೃಶ್ಯ ದೃಶ್ಯದೊಂದಿಗೆ ಸಂಭಾಷಣೆ ಕೊನೆಗೊಳ್ಳುತ್ತದೆ. ಇಲ್ಲಿ ಕಂದಗಲ್ಲರು ಊರ್ಮಿಳೆಯ ವಿಷಯವಾಗಿ ಅರ್ಜುನನ ಮುಖಾಂತರ ಎತ್ತಿದ ಪ್ರಶ್ನೆ ಮುಖ್ಯ ಅಂಶ ಗಳಲ್ಲೊಂದು, ಮುಂದುವರೆದು ತಮ್ಮ ಮಾಯಾಮೃಗ ನಾಟಕದಲ್ಲಿ ವನವಾಸಕ್ಕೆ ತೆರಳುವ ಸಂದರ್ಭ ರಾಮ ತನ್ನ ತಮ್ಮನಾದ ಲಕ್ಷ್ಮಣನಿಗೆ ವನವಾಸಕ್ಕೆ ತೆರಳುವ ವಿಷಯವಾಗಿ ನಿನ್ನ ಹೆಂಡತಿಗೆ ಹೇಳಿ ಬಾ ಎಂದು ಕಳಿಸುತ್ತಾನೆ. ಚಿತ್ರಾಂಗದಾ ನಾಟಕದಲ್ಲಿ ತಾವೇ ಎತ್ತಿದ ಪ್ರಶ್ನೆಗೆ ಉತ್ತರಿಸದೆ (ಲಕ್ಷö್ಮಣನ ಮುಖಾಂತರ ಒಂದು ಮಾತನ್ನು ಹೇಳಿಸುವುದಿಲ್ಲ) ದಿವ್ಯಮೌನವನ್ನು ವಹಿಸುವುದು ಅಚ್ಚರಿಯ ಸಂಗತಿ.
ಈ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಕುವೆಂಪುರವರು ತಮ್ಮ ರಾಮಾಯಣ ದರ್ಶನಂ ಕಾವ್ಯದಲ್ಲಿ ಊರ್ಮಿಳೆಯನ್ನು ಚಿತ್ರಿಸಿದ್ದಾರೆ ಎಂದು ಹೇಳಬಹುದು. ಕಂದಗಲ್ಲರು ನಾಟಕಕಾರರಾಗಿ ಅಷ್ಟೇ ಅಲ್ಲದೇ ಕವಿಯಾಗಿ, ಕಲಾವಿದನಾಗಿ, ಅವರೊಳಗೊಬ್ಬ ಸಹೃದಯಿ ವಿಮರ್ಶಕ ಕೂಡ ಇರುವುದನ್ನು ಕಾಣಬಹುದು. ಹೊಸಗನ್ನಡ ಸಾಹಿತ್ಯದ ರೂಪುಗಳಾದ ನವ್ಯ, ನವೋದಯ, ಪ್ರಗತಿಶೀಲ, ದಲಿತ ಮತ್ತು ಬಂಡಾಯ, ಸ್ತ್ರೀ ವಾದದ ನೆಲೆಗಳುಳ್ಳ ಜೀವಪರ ಚಿಂತನೆಗಳಿಗೆ ಭದ್ರಬುನಾದಿ ಹಾಕಿರುವುದನ್ನು ಅವರ ಎಲ್ಲ ನಾಟಕಗಳಲ್ಲಿಯೂ ಕಾಣಬಹುದು. ಇಂತಹ ವಿದ್ವತ್ವಪೂರ್ಣ ಮಹಾನ್ ಚೇತನನ್ನು ಕಡೆಗಣಿಸಿರುವುದು ವಿಷಾದನೀಯ ಸಂಗತಿ. 


4 thoughts on “‘ಊರ್ಮಿಳೆಯ ಭಾವಾಂತರಂಗ’ ಒಂದು ಚಿಂತನೆ-ಡಾ.ಯಲ್ಲಮ್ಮ.ಕೆ ಅವರಿಂದ

Leave a Reply

Back To Top