ಕಾವ್ಯಸಂಗಾತಿ
ಅನಸೂಯ ಜಹಗೀರದಾರ
ಗಜಲ್
ನಿನ್ನ ಸಂಪೂರ್ಣ ಪ್ರೀತಿ ನನಗೆ ಸೇರಿದ್ದರೆ ಎಷ್ಟೊಂದು ಚೆಂದಾಗಿರುತ್ತಿತ್ತು
ಅರಳಿದ ಹೂಗಳೆಲ್ಲ ದೈವ ಶಿರವ ಏರಿದ್ದರೆ ಎಷ್ಟೊಂದು ಚೆಂದಾಗಿರುತ್ತಿತ್ತು
ಕಲ್ಲು ತುಣುಕಾಗಿ ಚದುರಿವೆ ಗಾಳಿ ಮಳೆಗೆ ಪುಡಿ ಪುಡಿಯಾಗಿ ಮಣ್ಣಾಗಿವೆ
ಕಲೆಯ ಶಿಲೆಯಾಗಿ ರೂಪಾಂತರ ಆಗಿದ್ದರೆ ಎಷ್ಟೊಂದು ಚೆಂದಾಗಿರುತ್ತಿತ್ತು
ಈ ಬಿರುಮಳೆ ಭಾರೀ ನೆರೆ ಆರ್ಭಟಿಸಿದ ಹರಿವು ಏನೆಲ್ಲ ಹರಣವಾಯಿತು
ಮಳೆಯ ತುಷಾರವಿದ್ದು ತಂಪು ಬೀರಿದ್ದರೆ ಎಷ್ಟೊಂದು ಚೆಂದಾಗಿರುತ್ತಿತ್ತು
ಹೂ ಬಿಡದ ಗಿಡಗಳು ಮುಳ್ಳಿನ ಪೊದೆಗಳು ಅರಳದ ಮೊಗ್ಗುಗಳಿವೆ ಇಲ್ಲಿ
ಅವನು ಅವಳು ಅದು ಸಮ ಅಂದಿದ್ದರೆ ಎಷ್ಟೊಂದು ಚೆಂದಾಗಿರುತ್ತಿತ್ತು
ಬಾಯಿ ಬೀಳುವ ತನಕ ಹಾಡುತ್ತಿದ್ದೆ ನಿನಗಾಗಿಯೇ ಹಲ ರಾಗಗಳಲಿ ಅನು
ಕೇಳುತ್ತ ನಿನ್ನೆದೆಗೆ ಇಳಿಸಿ ಗುಣುಗುಣಿಸಿದ್ದರೆ ಎಷ್ಟೊಂದು ಚೆಂದಾಗಿರುತ್ತಿತ್ತು
ಅನಸೂಯ ಜಹಗೀರದಾರ