ಕಥಾಯಾನ

ಕಕ್ಷೆ

ಡಾ.ಅಜಿತ್ ಹರೀಶಿ

[11:59 am, 31/05/2020] AJITH HARISHI: ‘ಹಲೋ, ಡಾಕ್ಟ್ರೇ, ನಮ್ಮನೆ ಕೆಂಪಿಗೆ ಹೆರಿಗೆ ನೋವು ಬಂದದ್ರಾ, ಈಗ್ಲೆ ಬತ್ರ?’ ಫೋನ್ ಎತ್ತಿದೊಡನೆ ಹೇಳಿ, ನನ್ನುತ್ತರಕ್ಕೆ ಕಾಯ್ದಿತ್ತು ಆ ಸ್ವರ.

‘ನಾ ಹೆರಿಗೆ ಡಾಕ್ಟರ್ ಅಲ್ಲ, ಮಾರಾಯ್ರ,’ ಅಂದೆ.

‘ಹೋಯ್, ನೀವು ನಮ್ ದನೀನ ಡಾಕ್ಟರ ಅಲ್ದ? ನಾ ಅವ್ರಿಗೆ ಫೋನು ಮಾಡಿದ್ದಾಗಿತ್ತು’. ಫೋನ್ ಕಟ್ ಆಗಿತ್ತು.

**

ಆಗಷ್ಟೇ ಆಸ್ಪತ್ರೆ ಆರಂಭಿಸಿದ್ದ ದಿನಗಳು… ಹುಟ್ಟಿದೂರಿನಲ್ಲೇ ವೈದ್ಯವೃತ್ತಿ ಆರಂಭಿಸಿದ್ದರಿಂದ ಉಳಿದ ತೊಡಕುಗಳೇನೂ ಇರಲಿಲ್ಲ. ಹೊಸ ಉತ್ಸಾಹ, ಅಪರಿಮಿತ ಆತ್ಮವಿಶ್ವಾಸ ಎನ್ನಬಹುದಾಗಿದ್ದ ದಿನಗಳು. ಮನೆ ಬಾಗಿಲಿಗೇ ಸೇವೆ ಕೊಡುವ ಹುಮ್ಮಸ್ಸು ಬೇರೇ..! ಎಲ್ಲಾ ನನ್ನ ಸುತ್ತಲೇ ಸುತ್ತುತ್ತಿದೆ, ಅನಿಸುವಂತೆ ನಡೆಯುತ್ತಿತ್ತು. ಅಂತಹದ್ದೊಂದು ದಿನ… ಬಂತಲ್ಲ ಇನ್ನೊಂದು ಫೋನ್ ಕಾಲ್…

“ಹಲೋ..”

“ಹಲೋ..ನಾನು ವಾಸುದೇವ ರಾವ್, ಪಂಚಾಯತ್ ಮೆಂಬರ್ರು”

“ಗೊತ್ತಾಯ್ತು ಹೇಳಿ ಸರ್”

“ಗುಡ್, ಗುಡ್. ಹೊಸದಾಗಿ ಬಂದ್ರೂ ಆಗ್ಲೆ ನನ್ನ ಬಗ್ಗೆನೂ ತಿಳ್ಕೊಂಡು ಬಿಟ್ರಾ..”

“ನಿಮಗೆ ನನ್ನ ಬಗ್ಗೆ ಗೊತ್ತಿಲ್ಲದಿರಬಹುದು.. ನಿಮ್ ಬಗ್ಗೆ ನಂಗೊತ್ತು “

ನಾನು ಸಣ್ಣವನಿದ್ದಾಗ ಅವರನ್ನು ನೋಡಿದ್ದೆ. ಅವರೂ ನನ್ನನ್ನು ನೋಡಿದ್ದರು. ಆದರೆ ನಮ್ಮ ಒಡನಾಟ ಕಡಿಮೆ ಇತ್ತು.

“ಡಾಕ್ಟರೇ.. ಅರ್ಜೆಂಟ್ ನಿಮ್ಮ ಕಿಟ್ ತಗೊಂಡು ಬನ್ನಿ ಸೀರಿಯಸ್..” ಹಳ್ಳಿಗಳ ಸ್ಥಿರ ದೂರವಾಣಿ ಕರೆ ಕಟ್ಟಾಗೋದು ಹೊಸ ವಿಷಯವೇನಲ್ಲ.

ಹಿರಿಯ ವೈದ್ಯರೊಬ್ಬರು ಹಿಡಿಕೆಯಿರುವ, ಆಯತಾಕಾರದ ತಮ್ಮ ಕಿಟ್ ಒಂದನ್ನು ನೀಡಿ ಪ್ರೀತಿಯಿಂದ ಶುಭ ಹಾರೈಸಿದ್ದರು. ಹಾಗಾಗಿ ಹೊಸಕಾಲದ ಬ್ಯಾಗ್ ಖರೀದಿಸದೇ ಅದರಲ್ಲೇ ಔಷಧ

ಒಯ್ಯುತ್ತಿದ್ದೆ. ಅದಂತೂ ತಾನು ರೆಡಿ ಅಂತ ತೊಡೆ ಏರಿತ್ತು. ಅವಶ್ಯವಾಗಿ ಇರಬಹುದಾದ ತುರ್ತು ಔಷಧಗಳೆಲ್ಲ ಇದೆಯಾ ಅಂತ ಮತ್ತೊಮ್ಮೆ ಪರೀಕ್ಷಿಸಿ, ನನ್ನ ಮೆಚ್ಚಿನ ಕೆಂಪು ಬಣ್ಣದ ಕ್ಯಾಲಿಬರ್ ಬೈಕ್ ಏರಿದೆ. ಜೊತೆಗೆ ಪೆಟ್ರೋಲ್ ಟ್ಯಾಂಕ್ ನ ಮೇಲೆ, ಆಚೀಚೆ ಅಲ್ಲಾಡುವ ಹಿರಿಯರು ನೀಡಿದ ಔಷಧಗಳ ಪೆಟಾರಿ..!

*   *

“ಓಹ್ ..! ಬಂದ್ರಾ ಬನ್ನಿ..ಬನ್ನಿ.. ಆಸರಿಗೆ ಸದ್ಯ? , ಕಮಲೀ ನೀರು ಕಾಸೆ..” ಮಹಾಬಲರಂತೂ ಅರಾಮಿದ್ದಾರೆ ಅಂತ ಲೆಕ್ಕ ತೆಗೆದೆ. ಕಮಲ ಬಹುಷಃ ಹೆಂಡತಿಯಿರಬೇಕು ಅಂತ ಯೋಚನೆ ಸಾಗುತ್ತಿತ್ತು.

ತಂದೆ ಅಥವಾ ತಾಯಿಗೆ ಆರಾಮಿಲ್ಲವೇನೋ.. ಇಲ್ಲಾ, ಅರ್ಜೆಂಟ್ ಅಂದರು ಎಂದರೆ ಮಗಳಿಗೆ..ಛೇ.!

ಓ ಮನಸೇ ವಸಿ ನಿಲ್ಲಪ್ಪ ಅಂದೆ.

ಹೆಬ್ಬಾಗಿಲಿಗೆ ಅಖಂಡವಾಗಿ ನಿಂತ ರಾಯರನ್ನು ದಾಟುವ ದಾರಿಯ ಸಾಧ್ಯತೆಯ ಬಗ್ಗೆಯೂ ಮನಸ್ಸು ಹುಡುಕುತ್ತಿತ್ತು.

ಹತ್ತಿರವಾಗುತ್ತಿದ್ದಂತೆ ಸ್ವಲ್ಪ ಮನೆಯ ಪಕ್ಕಕ್ಕೆ ಜರುಗಿದರು. ಅವರು ಹಿಂಬಾಲಿಸಿ ಎನ್ನುವ ನೋಟದೊಂದಿಗೆ ಹೆಜ್ಜೆ ಹಾಕಿದರು.

 “ನಮ್ಮ ಕಮಲಿಗೂ ಸರಿ ಅರಾಮಿಲ್ಲ .. ಆದರೂ ಮಾಡ್ತಾಳೆ ಪಾಪ. ಹಳ್ಳಿಯಲ್ಲಿ ಎಲ್ಲಾ ಹೀಗೆನೇ.

ಸದ್ಯ ನಾವಿಬ್ಬರೇ, ಮಕ್ಕಳು ಪ್ಯಾಟೇಲಿ ಒದ್ತಾ ಇವೆ..!”

ಅಲ್ಲಿಗೆ ಕೋಟ್ಯಾಧಿಪತಿ ಕ್ವಿಜ಼್ ನಿಂದ ಹೊರಬೀಳುವ ಸನಿಹಕ್ಕೆ ನಾನು ಬಂದಿದ್ದೆ. ಒಂದೇ ಲೈಫ್ ಲೈನ್ ಉಳಿದದ್ದು.

ಆಡಿಯನ್ಸ್ ಪೋಲ್..!

ಪಕ್ಕದ ಓರಿಯಲ್ಲಿರುವ ಮನೆಯ ಕೆಲಸದ ಆಳಿಗೆ ಅರಾಮಿಲ್ಲವೇನೋ ಅಂದುಕೊಂಡೆ.

ನಿಜಕ್ಕೂ ಜನಸೇವಕ, ಅದಕ್ಕೇ ಇರಬೇಕು ಪದೇ ಪದೇ ಪಂಚಾಯತ್ ಚುನಾವಣೆಯಲ್ಲಿ ಆರಿಸಿ ಬರ್ತಾರೆ.

“ಇನ್ನು ನನಗೂ ವಯಸ್ಸಾಯ್ತು, ಈ ಕೂಲಿಯವರ ನಂಬಿ ಏನೂ ಮಾಡ್ವಾಂಗಿಲ್ಲ. ಎರಡು ದಿನ ಕೆಲಸಕ್ಕೆ ಬಂದ್ರೆ ನಾಕು ದಿನ ರಜೆ ಮಾಡ್ತಾರೆ. ಇವತ್ತೂ ನಾನೇ ಒದ್ದಾಡುದೇಯಾ. ಪಂಚಾಯತ್ ಮೆಂಬರ್  ಮೀಟಿಂಗ್ ಬೇರೆ. ಮೊದ್ಲೆಲ್ಲಾ ಈ ಕೆಲಸದವ್ರು ಹತ್ತು ತಾಸು ಕೆಲಸ ಮಾಡ್ತಿದ್ರು. ಈಗ ಎಂಟು ತಾಸು ಅಷ್ಟೇಯಾ. ಮುಂದೆಲ್ಲಾ ಆರೇ ತಾಸೆನಾ?”

‘ಅಪರೂಪಕ್ಕೆ ಆಡಿಯನ್ಸ್ ಕೂಡ ತಪ್ಪಾಗುವುದುಂಟು ಮಾರ್ರೆ’ ಅಂತ ಗೋಳಿಬಜೆಯನ್ನು ಸಕತ್ತಾಗಿ ಮಾಡುವ ಬೈಂದೂರು ಮೂಲದ ಗೋಪಾಲ ಹೇಳಿದ ಮಾತು ನೆನಪಾಯ್ತು. ತರ್ಕವೆಂಬ ತಾಟಗಿತ್ತಿಯ ಹೆಡೆಮುರಿ ಕಟ್ಟಿ ಹಿಡಿದು ಕುಳ್ಳಿರಿಸಿದೆ. ಮನಸ್ಸು ಮುಗ್ಗರಿಸಿದ್ದು ಅವರಿಗೇನು ಗೊತ್ತಾಗಲಿಲ್ವಲ್ಲ ಸದ್ಯ..

* *

“ಇಲ್ಲಿ ಬನ್ನಿ … ಕಮಲೀ ಬಿಸಿ ನೀರು, ಸಾಬೂನು ತಂದಿಡೇ..”

ಕೊಟ್ಟಿಗೆಯಂತಹ ಮನೆ, ಅಲ್ಲಲ್ಲ ಕೊಟ್ಟಿಗೆಯೇ. ಕಿರಿಕಿರಿ ಕೊಡುವ ರೋಗಿಗೆ ಮಂಪರು ಹತ್ತುವ ಇಂಜೆಕ್ಷನ್ ನೀಡಲು ಹೋಗಿ, ತಾನೇ ಅಕಸ್ಮಾತ್  ಆಗಿ ಚುಚ್ಚಿಕೊಂಡ ವೈದ್ಯನಂತಾಗಿತ್ತು ನನ್ನ ಪರಿಸ್ಥಿತಿ.

ಬವಳಿಕೆ ಬಂದಂತಾದರೂ ಸ್ವಲ್ಪ ಸುಧಾರಿಸಿಕೊಂಡೆ.

“ನಾನು ದನದ ಡಾಕ್ಟ್ರಲ್ಲ ..!”

“ನೀವು  …!”

“ನಾನು ಅದೇ ಅಂದ್ಕಂಡೆ, ನಿಮ್ಮ ಮುಖಲಕ್ಷಣ ನೊಡಿಯೇ ಡೌಟ್ ಬಂತು”.

ಮುಖದ ಗೆರೆಗಳ ಮೇಲೆ ಅಂದಾಜಿಸಿದ್ದ ರಾಯರು ಬಹು ದೊಡ್ಡ ಮುಜುಗರದಿಂದ ನನ್ನನ್ನು ಪಾರು ಮಾಡಿದ್ದರು.

ಬರೀ ಮೆಂಬರ್ ಅಲ್ಲಾ ಇನ್ನೂ ಮೇಲಿನ ಹುದ್ದೆಗೆ ಹೋಗುವ ಪ್ರತಿಭೆ ಇದೆ ಅನ್ನಿಸಿತು.

“ಬನ್ನಿ ಒಳಗೆ, ಒಳ್ಳೆದಾಯ್ತು ನೀವು ಬಂದದ್ದು. ದೇವರು ಕರಿಸಿದಾಂಗೆ ಬಂದ್ರಿ. ನಮ್ಮ ಕಮಲೀ ಅದೃಷ್ಟ , ಪ್ಯಾಟೆಗೆ ಹೊಂಟವಳು ಮಜ್ಜಾನ ಮೇಲೆ. ಚೊಲೋ ಆಯ್ತು. ಕೇಳ್ತ್ಯನೇ ಕಮಲೀ, ನಮ್ಮೂರಿಗೆ ಬಂದ ಹೊಸ ಡಾಕ್ಟ್ರು ನಿನ್ನ ನೋಡುಲೆ ಬಂಜ್ರು”.

ಒಳಗಿನಿಂದ ಧ್ವನಿ…”ಯನಗೆಂತ ಸುಟ್ಟ ಅರ್ಜೆಂಟ್ ಇತ್ತಿಲ್ಲೆ…ಕಲಗಚ್ಚು ಕುಡಿಯ ಬದಲಿಗೆ ಅಡಿಕೆ ತೊಗರು ಕುಡದ ಎಮ್ಮೆಕರ ಬದಕ್ತ ಇಲ್ಯಾ ಹೇಳದೇ ಚಿಂತೆ. ಸುಮ್ಮನೆ ವಯಸ್ಸಾಗಿದ್ದೆಯಾ, ಯಾವುದು ಮೊದ್ಲು , ಯಾವುದು ಕಡಿಗೆ ಹೇಳ ಬುದ್ಧಿ ಇಲ್ಲೆ “…. ಒಗಟೊಗಟಾದ ವಿಷಯ ಒಡಚಿತಲ್ಲಾ ಅಂತ… ಸದ್ಯ ಕೊಟ್ಟಿಗೆಯಿಂದ ನನ್ನ ಹೊರಗೆ ಬಿಟ್ಟರಲ್ಲ ಅಂತ ನಿಟ್ಟುಸಿರು ಬಿಟ್ಟೆ..

ಕಮಲಮ್ಮನವರಿಗೆ ಕಾಲುನೋವಿಗೆ ಔಷಧೋಪಚಾರ ಹೇಳಿ, ಹೊರಬಂದೆ. ಬಂದ ದಾರಿಗೆ ಒಂದಿಷ್ಟು ಸುಂಕ ಸಿಕ್ಕಿತ್ತಾದರೂ, ಒಂದು ರೀತಿಯ ಅವಮಾನ, ನಾನು ಬೇರೆಯ ಆಡಳಿತ ಪ್ರದೇಶದ ಗೆರೆಯೊಳಗೆ ಬಂದೆನೆಂಬ ಸಂಕೋಚ! ಅವರಿಗೆ ಬೇಕಾದ್ದು ಎಮ್ಮೆಗೆ ಉಪಚಾರ, ಕರೆದದ್ದು ನನ್ನನ್ನು! ನಾನು ಮನುಷ್ಯರ ಡಾಕ್ಟರು, ನನ್ನ ವ್ಯಾಪ್ತಿಯೇನು? ಅಂತೆಲ್ಲಾ… ಲೆಕ್ಕ.

* *

ಆಮೇಲೊಂದು ದಿನ ನನ್ನ ಅದೇ ಲ್ಯಾಂಡು ಲೈನಿಗೆ ಫೋನು ಬಂತು.

“ಹಲೋ..ಡಾಕ್ಟರ್ರಾ..?”

ನನ್ನ ಹೆಂಡತಿಯ ಅಣ್ಣನ ಧ್ವನಿ ಅಂತ ಗೊತ್ತಾಗಿ ಹೋಯ್ತು. ಅವನೇ ಬೇಕಂತ ತಮಾಷೆ ಮಾಡ್ತಿದಾನಂತ ನನ್ನ ಊಹೆ. ‘ಹೌದು ಹೇಳಿ’,  ಅಂದೆ.

“ನಮ್ಮ ಆಕಳು ಹೀಟಿಗೆ ಬಂದಿದೆ, ದಯವಿಟ್ಟು ಬೇಗ ಬಂದರೆ ಅನುಕೂಲ ಆಗ್ತಿತ್ತು. ಇನ್ಸಮೈನೇಷನ್ ಇವತ್ತಾದ್ರೆ..” ಅಂದ. ಒಂದಿಷ್ಟು ಆಕಳನ್ನು ಕಟ್ಟಿಕೊಂಡು ಡೈರಿಗೆ ಹಾಲು ಕೊಡ್ತಾನೆ.

“ಹೀಟಿಗೆ ಬಂದವರನ್ನೆಲ್ಲಾ ಸಂಭಾಳಿಸ ಹೋದರೆ ನಿಮ್ಮ ತಂಗಿ ಬಡಿಗೆ ತಗಳ್ತಾಳೆ” ಅಂದೆ.

“ಅಯ್ಯೋ ಬಾವನನಾ..? ಒಂದು ತಾಸು ಹಿಂದೆ ವೆಟರ್ನರಿ ಡಾಕ್ಟರಿಗೆ ಫೋನ್ ಮಾಡಿದ್ದೆ. ಹಾಗಾಗಿ ಮತ್ಯಾರು ಫೋನ್ ಮಾಡಿಲ್ಲ ಅಂತ ಅಂದ್ಕೊಂಡು ರೀಡಯಲ್ ಬಟನ್ ಒತ್ತಿದೆ” ಅಂದ. ಅತ್ತೆಯ ಫೋನು ಬಂದಿತ್ತು.  ಮಗಳೊಂದಿಗೆ ಮಾತಾಡಿ ರಿಸೀವರ್ ಕೆಳಗಿಟ್ಟ ಸ್ವಲ್ಪ ಹೊತ್ತಿನಲ್ಲೇ ಮತ್ತೆ ಇವನ ಕರೆ ಬಂದಿತ್ತು, ಹೆಂಡತಿಯ ತೌರುಮನೆಯಿಂದ.

ಮನಸ್ಸಿಗೆ ಮತ್ತೆ ಮೊರೆತ. ದನದ ಡಾಕ್ಟರೆಲ್ಲಿ, ನಾನೆಲ್ಲಿ?!

*

ಈ ಹೊಸದಾಗಿ ಬಂದ ಪಶು ವೈದ್ಯರು ಮತ್ತು ನನ್ನ ನಡುವೆ ನಡೆಯುವ ಸಂದರ್ಭಗಳು ಸರ್ವೇಸಾಮಾನ್ಯವಾಯ್ತು. ದನಕ್ಕೆ, ಎಮ್ಮೆಗೆ, ಕರುಗಳಿಗೆ, ಅವುಗಳ ಹೆರಿಗೆಗೆಲ್ಲಾ ಕರೆಗಳು. ಇತ್ತೀಚೆಗೆ ಮೊದಲೇ ಕೇಳಿ ಬಿಡ್ತೀನಿ, “ಯಾರಿಗೆ?” ಅಂತ.

ಈ ವ್ಯವಸ್ಥೆಗೆ, ನಾನು ಒಗ್ಗಿಹೋಗಿರುವಾಗಲೇ ಒಂದು ದಿನ ನಾನು ಪೇಷಂಟ್ ನೋಡುತ್ತಿರುವಾಗ ಬಂತು ಸ್ಥಿರ ದೂರವಾಣಿ ಕರೆ. ಪೇಷಂಟ್ ನೋಡುತ್ತಾ ಇದ್ದುದರಿಂದ ಕರೆ ಹಾಗೇ ಬಡಿದುಕೊಳ್ಳುತ್ತಿತ್ತು. ಸ್ವಲ್ಪ ಉದ್ದದ ಕರೆಯಾದ ಮೇಲೆ ಫೋನ್ ಎತ್ತಿ ನನ್ನ ಹಲೋ ಮುಗಿಯುವುದರೊಳಗೆ, ಒಬ್ಬಾಕೆ ಧ್ವನಿ.. ‘ರೀ, ಬಸ್ಟಾಂಡಿನಲ್ಲಿ ಕಾಯ್ತಾ ಇದ್ದಿ, ಕರಕೊಂಡು ಹೋಗಲೆ ಬನ್ನಿ’ ಫೋನ್ ಕಟ್..

ನನಗೆ ವಿಷಯ ಏನೆಂದು ಅರ್ಥವಾಗುವುದರೊಳಗೆ ಉತ್ತರಕ್ಕೂ ಕಾಯದೆ ಫೋನ್ ಕುಕ್ಕಿದ ಆ ಹೆಣ್ಣಿನ ಧ್ವನಿ ಹೊಸದು. ನಾನು ರಿಸೀವ್ ಮಾಡಿದಾಗಲೇ ನನ್ನ ಹೆಂಡತಿಯೂ ಮನೆಯಲ್ಲೇ ರಿಸೀವ್ ಮಾಡಿದ್ದಾಳೆ. ಮನೆಯೊಳಗೆ ಒಂದು, ಕ್ಲಿನಿಕ್ ನಲ್ಲೊಂದು ರಿಸೀವರ್ ಇಟ್ಟುಕೊಂಡಿದ್ದರಿಂದ ಇದು ಹೊಸತೇನಲ್ಲ. ಯಾವ ಸಮಯಕ್ಕಾದರೂ ಕರೆ ಬರುವ ಸಂಭವನೀಯತೆಗಳು.

ಅಚಾನಕ್ ಆ ದೂರವಾಣಿ ಕರೆಯ ಧ್ವನಿ, ವಿವರಗಳನ್ನು ಮನಸ್ಸಿನಲ್ಲಿ ತಾಳೆ ಹಾಕುತ್ತಾ ಪೇಷಂಟ್ ನೋಡಿ ಮುಗಿಯುವುದರೊಳಗೆ ಮತ್ತೊಂದು ಕರೆ ಬಂತು, ಹತ್ತಿರದಲ್ಲೇ ಇದ್ದ ಒಬ್ಬ ರೋಗಿಯ ವಿಸಿಟ್ ಗೆ.  ಕ್ಲಿನಿಕ್ ನ ಪೇಷಂಟ್ ಸರತಿಯೂ  ಮುಗಿದಿದ್ದರಿಂದ ನನ್ನ ರಥವನ್ನೇರಿ ಹೊರಟು ಹೋಗಿದ್ದೆ. ಹತ್ತಿರದ ಕೆಲವು ಪೇಷಂಟ್ ಗಳನ್ನು ಅವರ ಮನೆಗೆ ಹೋಗಿ ವಿಸಿಟ್ ಮಾಡುವ ರೂಢಿಯಿತ್ತು. ಆದ್ದರಿಂದ ಮನೆಯಲ್ಲಿ ಹೇಳುವ ಅಗತ್ಯವೂ ಇರದ ಕಾರಣ, ನಾನು ಸಹಜದಂತೆ ವಿಸಿಟ್  ಮುಗಿಸಿ ಬಂದೆ.

ಕ್ಲಿನಿಕ್ ನ ಸಮಯವೂ ಮುಗಿದಿತ್ತು, ಊಟದ ಸಮಯವಾದ್ದರಿಂದ ಮನೆಯೊಳಗೆ ಅಡಿಯಿಡುತ್ತಿದ್ದಂತೆ ಬಾವ ಜಗುಲಿಯಲ್ಲಿ ಸ್ಥಿರಮುದ್ರೆಯಲ್ಲಿ ಕುಳಿತಿದ್ದ. ಅವನ ಆಗಮನ ಅನಿರೀಕ್ಷಿತ. ‘ಹೋ, ಬಾವ ಅರಾಮ… ಯಾವಾಗ ಬಂದೆ?’ ಅಂದವನಿಗೆ ಹೆಂಡತಿ ಪ್ರಧಾನಬಾಗಿಲಿಗೆ ಆತು ಗುಮ್ಮಳಂತೆ ನಿಂತಿದ್ದು ಕಂಡಿತು. ಕೆಂಪುಕಣ್ಣು, ಉರಿಮೂಗು ನೋಡಿದಾಗಲೇ ಗೊತ್ತಾಗಿದ್ದು, ಓಹ್ ಇಂದು ಗಂಗೆ ಧರೆಗಿಳಿದಿದ್ದಾಳೆಂದು. ಅದು ಯಾವ ಕಾರಣಕ್ಕೆಂದು ಮನಸ್ಸಿನ ಮೂಲೆಗಳಲ್ಲೆಲ್ಲಾ ಸರ್ರೆಂದು ಜಾಲಾಡಿದರೂ ಬಗೆಹರಿಯದ ಕಾರಣ ಅವರಿಬ್ಬರ ಮುಖ ನೋಡುವಂತಾಯಿತು.

ನನ್ನ ಚಹರೆಯ ಪ್ರಶ್ನೆಯನ್ನು ಓದಿದವನಂತೆ,  ಬಾವ ‘ಸವಾರಿ ಎಲ್ಲಿಂದ ಬಂದಿದ್ದು?’ ಕೋರ್ಟ್‌ ನ ಕಟಕಟೆಯಲ್ಲಿ ನಿಂತ ಅಪರಾಧಿಯ ಸ್ಥಾನ ನನಗಿತ್ತು.

‘ಇಲ್ಲೆಯಾ, ವಿಸಿಟ್ ಗೆ ಹೋಗಿದ್ದೆ,’ ನನ್ನ ಸಹಜ ಉತ್ತರಕ್ಕೆ ಸಮಾಧಾನ‌ವಾಗದ ಮಡದಿಗೆ ದುಃಖ ಉಮ್ಮಳಿಸಿ ಬಂದಿತ್ತು.

ವೃತ್ತಿಯಂತೇ ಮದುವೆಯೂ ಹೊಸತು. ದಾಂಪತ್ಯಕ್ಕಿನ್ನೂ ದಮ್ ಇಲ್ಲದ ಎಳಸಿನ ಕಾಲ. ಹಿರಿಯರು ನಿಶ್ಚಯಿಸಿದ ಮದುವೆಯಾದ್ದರಿಂದ ಒಬ್ಬರನ್ನೊಬ್ಬರು ಇನ್ನೂ ಪರಿಚಿತರಾಗುತ್ತಿರುವಾಗಲೇ ನಡೆದಿತ್ತು ಈ ಅಪಸ್ವರದ ಘಟನೆ. ಅವಳಿಗೇನಾಯ್ತು, ಅರ್ಥವಾಗದ ನನಗೆ, ಬಾವನ ಪ್ರಶ್ನೆ. ‘ಬಸ್ಟಾಂಡಿನಲ್ಲಿ ಯಾರು ಕಾಯುತ್ತಿದ್ದರು? ಎಲ್ಲಿಗೆ ಬಿಟ್ಟು ಬಂದದ್ದು? ಯಾರ ಫೋನಾಗಿತ್ತು? ಅದು’ ….

ಓಹ್, ಈಗ ಸರಿಯಾಯ್ತು ಲೆಕ್ಕ… ಆ ಅಪರಿಚಿತ ಕರೆ… ಆ ಕರೆಯ ಬಗ್ಗೆ ಹೆಂಡತಿಯ ಮೂಲಕ ಅವನಿಗೆ ತಲುಪಿದ ವಿಷಯ.

ಈ ತರಹದ ಗೊಂದಲಗಳಿಗೆ ಕಾರಣವಾದ ಆ ದೂರವಾಣಿಕರೆ! ಮೂಲ ಹೇಗೆ ಹುಡುಕುವುದು? ನನ್ನನ್ನು ಸಮರ್ಥನೆ ಮಾಡಿಕೊಳ್ಳಲು ಏನು ಮಾಡಲಿ?ಮತ್ತೆ ಮನಸ್ಸಿನ ಕಕ್ಷೆಯೊಳಗೆ ಸುತ್ತುತ್ತಿರುವ ಪ್ರಶ್ನೆ, ನಾನ್ಯಾಕೆ ಪದೇ ಪದೇ ಈ ದೂರವಾಣಿ ಕರೆಯೊಳಗೆ ಸಿಕ್ಕಿ ಬೀಳುವುದು? ಅನ್ನುವಾಗಲೇ ಥಟ್ಟನೆ ಒಂದು ವಿಚಾರ ಹೊಳೆದಿತ್ತು.

‘ಬಾವ, ನಂಗೂ ಆ ಫೋನ್ ವಿಷಯ ಬೇಕಿತ್ತು. ಯಾರದ್ದು ಎಂದು… ಒಮ್ಮೆ ಪ್ರಯತ್ನ ಪಡೋಣ… ಅನ್ನುತ್ತಾ ನಮ್ಮ ಗ್ರಾಮದ ಸ್ಥಿರದೂರವಾಣಿ ಕರೆಗಳ ಸಂಖ್ಯೆ ನಮೂದಿಸಿದ ಕೈಪಿಡಿ ಹೊರತೆಗೆದೆ. ನಮ್ಮೂರಿನ ಪಶುವೈದ್ಯರ ಕರೆಗಳು ನನಗೆ ಬರುತ್ತಿದ್ದವಲ್ಲ, ಎಮ್ಮೆ, ಹಸು, ಕರುಗಳ ಚಿಕಿತ್ಸೆಗೆಂದು. ಅವರನ್ನೇ ವಿಚಾರಿಸಲು ಅವರಿಗೇ ಫೋನು ಮಾಡಲು ಅವರ ಸಂಖ್ಯೆ ಹುಡುಕಿದೆ. ಹೆಸರಿನ ಪಟ್ಟಿಯಲ್ಲಿ ಪಶುವೈದ್ಯರ ಹೆಸರು. ಅರೆ! ಸ್ಥಿರ ದೂರವಾಣಿ ಸಂಖ್ಯೆ ನಂದು! ಆಹ್, ನನ್ನ ಹೆಸರು ತೆಗೆದೆ…., ಆ ಸಂಖ್ಯೆ ನನ್ನ ಮನೆಯ ಸ್ಥಿರ ದೂರವಾಣಿ ಸಂಖ್ಯೆಯ ಮೊದಲಿನ ಅಂಕೆಗಳೆ…. ಆದರೆ ಕೊನೆಯ ಅಂಕೆ ಅಲ್ಲ! ಅಂದರೆ ಬೇರೆಯವರ ದೂರವಾಣಿ ಸಂಖ್ಯೆ… ಓಹ್! ಇದೊಂದು ಹೊಸ ಅನ್ವೇಷಣೆಯಾಗಿ, ನನಗೆ ಪತ್ತೆದಾರಿ ಮಾಡುವ ಮನಸ್ಸು ಚುರುಕಾಯಿತು.

‘ನೀವಿಬ್ಬರೂ ಇಲ್ಲೆ ಈ ರಿಸೀವರ್ ಇಂದ ಕೇಳಿ. ನಾನು ವಿಚಾರಿಸುತ್ತೇನೆ.’ ಅನ್ನುತ್ತಾ, ನನ್ನ ಹೆಸರಿನ ಮುಂದೆ ನಮೂದಿಸಿದ್ದ ಸಂಖ್ಯೆಗೆ ಕರೆಯಿತ್ತೆ.

ಫೋನ್ ರಿಂಗ್ ಆಗಿ, ‘ಹಲೋ,’ ಅಂದದ್ದು ಪಶುವೈದ್ಯರು. ಹೌದು, ಅವರದ್ದೇ ಧ್ವನಿ! ಅಂದರೆ ಆ ನಮ್ಮ ಗ್ರಾಮದ ಸ್ಥಿರ ದೂರವಾಣಿ ಸಂಖ್ಯೆಗಳ ಕೈಪಿಡಿಯಲ್ಲಿ ನನ್ನ ಹೆಸರಿನ ಮುಂದೆ ಪಶುವೈದ್ಯರ ಸಂಖ್ಯೆ ಮತ್ತು ಅವರ ಹೆಸರಿನ ಮುಂದೆ ನನ್ನ ದೂರವಾಣಿ ಸಂಖ್ಯೆ ನಮೂದಿಸಿತ್ತು. ಈ ವಿಷಯ ಖಾತ್ರಿಯಾಯ್ತು. ಮುಂದೆ, ಇನ್ನೂ ಸಂಶಯಗಳು ಇದ್ದವಲ್ಲ ನಿವಾರಣೆಗೆ ! ಆರಂಭದ ಮಾತುಗಳ ಮುಗಿಸಿದ ನಂತರ ಕೇಳಿದೆ. ಇವತ್ತು ನಿಮ್ಮ ಮನೆಗೆ ಯಾರಾದರು ಬರುವವರಿದ್ದರ? ಎಂದು… ಅವರ ಹೆಂಡತಿ ತೌರುಮನೆಯಿಂದ ವಾಪಸ್ಸು ಬಂದು ಬಸ್ಟಾಂಡಿನಿಂದ ಮನೆಗೆ ಕರೆದುಕೊಂಡು ಹೋಗಲು ಅವರಿಗೆ ಕರೆ ಮಾಡಿದ್ದಳು. ಸಂಖ್ಯೆ ಐದು ಒತ್ತುವ ಬದಲು, ಎಂಟು ಒತ್ತಿ ನನ್ನ ಮನೆಯ ಸ್ಥಿರ ದೂರವಾಣಿಗೆ ಸಂದೇಶವಿತ್ತಿದ್ದಳು. ಅವಳು ಕರೆ ಮಾಡಿದ್ದೇನೆ ಅಂದು ಕಾಯುತ್ತಿದ್ದಳು. ಇಲ್ಲಿ ಕರೆ ಬಾರದ ಕಾರಣ ತಾನೇ ಹೋದ ಪಶುವೈದ್ಯರು ಕಾಯುತ್ತಿರವ ಹೆಂಡತಿಯ ಜೊತೆಗೆ ಮನೆಗೆ ಬರುವಾಗ ಇಬ್ಬರಿಗೂ ವಿಚಾರ ಚರ್ಚೆಗೆ ಬಂದು ಗೊತ್ತಾಗಿತ್ತು, ಕರೆ ಬೇರೆಡೆಗೆ ಹೋಗಿತ್ತೆಂದು.ಇಷ್ಟೆಲ್ಲಾ ವಿವರಣೆ ಸಿಕ್ಕಿತು ಪಶುವೈದ್ಯರಿಂದ.

ಕರೆ ನನಗೇ ಬಂದು, ನನ್ನ ಹೆಂಡತಿಯೂ ಕೇಳಿ…. ಛೇ ಛೇ… ಇದೆಲ್ಲಾ ತಿಳಿದ ನಂತರ, ಮನಸ್ಸು ಹಗುರವಾಗುವ ಹಾಗೆ ನಮ್ಮ ಮನೆ ಮಂದಿ, ಪಶುವೈದ್ಯರ ಕುಟುಂಬವೂ‌ ಸೇರಿ ನಗೆ ಹಬ್ಬ ಮಾಡುವಂತಾಯಿತು. ನಕ್ಕು ಹಗುರಾದರು ಬೇರೆಯವರು…

ಆದರೆ, ನನ್ನ ಅಭಿಮಾನಕ್ಕೆ ಭಂಗವಾಗಿದ್ದು ಸ್ವಲ್ಪ ಹೊತ್ತಿನ ಮಟ್ಟಿಗಾದರೂ ಮರೆಯದೆ ಇರಲಾಗಲಿಲ್ಲ.

ಮುಂದೆ ಸ್ಥಿರದೂರವಾಣಿಯ ಚಾಲ್ತಿ‌ ಕಡಿಮೆಯಾಗಿ, ಮೊಬೈಲ್ ಕಾಲ ಬಂದಾಗ ನಾನು ಆ ಪಶುವೈದ್ಯರ ಚರವಾಣಿಸಂಖ್ಯೆಯಿಂದ ಬೇರೆಯದೇ ಆದ ಸಂಖ್ಯೆಯನ್ನು ಅಳವಡಿಸಿಕೊಳ್ಳಲು ಮರೆಯಲಿಲ್ಲ. ನನ್ನ ಕಕ್ಷೆಯೊಳಗೆ ಅವರ ಪ್ರವೇಶ ಆಗದಿರಲು…

**

ಹೀಗೇ ಒಂದು ದಿನ ಸ್ಥಿರ ದೂರವಾಣಿಯ ಕರೆಗಂಟೆ. ಫೋನ್ ಎತ್ತಿ, ‘ಹಲೋ,’ ಎಂದೆ. ಆಕಡೆಯಿಂದ ಒಂದು ಧ್ವನಿ, ಮೆಲುಧ್ವನಿ, ಆದರೆ ಪರಿಚಿತ ಧ್ವನಿ, ಹೌದು ಅವಳೇ… ‘ಡಾಕ್ಟ್ರೆ, ಬರೀ ಕೊಟ್ಟಿಗೆಗೆ ಮಾತ್ರ ವಿಸಿಟ್ ಕೊಡ್ತ್ರ… ಮನೆಗೆ ಬನ್ನಿ, ಯಾರೂ ಇಲ್ಲೆ… ಇವತ್ತು ರಾತ್ರಿಯಿಡೀ ನಾ ಒಬ್ಬಳೆಯ…..’

ಈ ಬಾರಿ ನನಗರಿವಿಲ್ಲದಂತೆ, ನನ್ನ ಕೈ ಫೋನ್ ಕಟ್ ಮಾಡಿತು.

****

2 thoughts on “ಕಥಾಯಾನ

  1. ಕತೆ ಸಲೀಸಾಗಿ ಓದಿಸಿಕೊಂಡು , ಮಧ್ಯೆ ಮಧ್ಯೆ ನಗಿಸಿಕೊಂಡು …
    ಚೆನ್ನಾಗಿದೆ ಡಾಕ್ಟರ್, ನಿಮ್ಮದೇ ಸ್ವಂತ ಅನುಭವ ಅಂತ ತಿಳಿಯಿತು.

Leave a Reply

Back To Top