ಹೇಮಚಂದ್ರ ದಾಳಗೌಡನಹಳ್ಳಿ ಅವರ ಕವಿತೆ-ಅಪ್ಪನ ಆಸ್ತಿ

ಹೊಲದ ಬದಿಯ ನೆರಳಿನ ಮೂಲವಾಗಿದ್ದ
ಮರವೀಗ ನೆನಪಲ್ಲಿ ಅಮರ..
ನೆನಪಿಗೆ ನೆರಳಾಗುತಿಲ್ಲ!
ಆ ಮರ ಬೆಳೆಸಿದ್ದ ಅಪ್ಪನೂ ಬೇಯುತ್ತಿದ್ದಾನೆ; ನೆರಳಿಲ್ಲದ ನೆನಹಿನಮರ ಮರದಡಿ ನಲುಗಿ
ಬೆಂದ ಅಪ್ಪನ ಬೆಂಕಿಯ ಕಾವು
ದಹಿಸಹತ್ತಿದೆ ನನ್ನನು..
ಸಹಿಸಲಾರದೆ ಎಚ್ಚೆತ್ತ ನಾನು
ಮರವ ಬೆಳೆಸಲು ಮನಸ್ಸು ಮಾಡಿ
ನೆಲದ ಬದಿಯ ಹುಡುಕುತ್ತೇನೆ ಮರೆತು,
ನೊಂದು ಮರಳುತ್ತೇನೆ ನೆನಹ ಬೆಂಕಿಗೆ.
ಕಾಣದೆ, ಮಾರಿದ ನೆಲದ ಅವಶೇಷದ ಗುರುತು.
ನೆನಹ ತಾಪದಿ ಬೆಂದ ಮನದಿಂದ
ಅರಿವುಬೆವರು ಹನಿಯುತ್ತಿದೆ.
ಮಾರಿದ ನೆಲ, ಮುರಿದ ಮರ, ಮುಚ್ಚಿದ ಕೆರೆ
ಅಪ್ಪನನ್ನು ನೆನೆ‌ಸಿ ಕರೆಕೊಡುತ್ತಿವೆ.
ಪಡೆದಿರುವ ಡಿಗ್ರಿಗಳು ಅಪ್ಪನ ಜೀವನ ಪ್ರೀತಿಗೆ ನಾಚಿ,
ವ್ಯರ್ಥಾಲಾಪದಲ್ಲಿ ಸಿಲುಕಿ ವ್ಯರ್ಥವೆನಿಸುತ್ತಿವೆ.
ಗಳಿಸಿದ ಜ್ಞಾನ,ಅಧಿಕಾರ ನನ್ನ ಒಂಟಿಯಾಗಿಸಿವೆ.
ಅಪ್ಪನ ಒಪ್ಪ ಮಾಡಿದ ಜಾಗವೀಗ
ನಂಬರ್ ಹಿಂದೆ ಯಾರದೋ ಆಸೆಯ
ಹಣವ ದುಪ್ಪಟ್ಟು ಮಾಡುತ್ತ ಮಲಗಿದೆ.
ಬಿಸಿಯ ಬಿಸಿಲ ಬೇಗೆಗೆ ಬಳಲಿದ ಜೀವ
ಮುರಿದ ಮರ, ಮುಚ್ಚಿದ ಕೆರೆಯ ನೆನೆದು
ಅಪ್ಪನ ನೆನಹ ತಾಪದಲ್ಲಿ ದಹಿಸುತ್ತಿದೆ.
ಗಣನೆಗೆ ಸಿಗದಂತೆ ಗಳಿಸಿದ ಸಂಪತ್ತು
ಮಗನಿಗೆ ನೆರಳಾಗದ್ದು ನೆನೆದ ಜೀವ
ಅಪ್ಪನ ನೆನೆಸಿ ತಪಿಸುತ್ತಿದೆ.
ಧನದಾಸೆಯ ಬಲೆ ಕಳಚಿ
ಅಪ್ಪನ ಆಸ್ತಿಗೆ ಮರುಜೀವ ಕೊಡಲೇಬೇಕೀಗ
ಮಗನಿಗೆ ನನ್ನ ನೆನಹು ನೆರಳಾಗ ಬೇಕಲ್ಲಾ!!?


13 thoughts on “ಹೇಮಚಂದ್ರ ದಾಳಗೌಡನಹಳ್ಳಿ ಅವರ ಕವಿತೆ-ಅಪ್ಪನ ಆಸ್ತಿ

  1. ಸಾಲುಗಳ ಅರ್ಥವೂ ಹೀಗೆ ಕೆಲವರಿಗೆ ಅರ್ಥವಾಗದೋ ಹಾಗೆ ಅವರ ಅಪ್ಪಂದಿರ ಕಷ್ಟವೂ ಅರ್ಥವಾಗದು

  2. ಅಪ್ಪ ಎಂಬ ಆಸ್ತಿ ಕರಗಿದಾಗ ಮನ ಬರಿದಾಗಿ ಎಲ್ಲವೂ ಶೂನ್ಯ ಎಂಬಂತೆ ಭಾಸವಾಗುತ್ತದೆ.

  3. ಒಬ್ಬ ಸಾಮಾನ್ಯ ವ್ಯಕ್ತಿಗೂ ಅರ್ಥವಾಗುವಂತೆ ಇದೆ

Leave a Reply

Back To Top