ವ್ಯಾಸ ಜೋಶಿ ಅವರ ತನಗಗಳು

ಮದುವಣಗಿತ್ತಿಯ
ಮೊದಲ ಶ್ರಾವಣವು,
ಕೈ ಮಾಡಿ ಕರೆಯೋದು
ತವರೂರ ಸೀರೆಯು.

ತವರಿನ ಸೀರೆಯು
ನೆಪ ಮಾತ್ರಕೆ ಬೇಕು,
ಅವ್ವನ ಮಡಿಲಲ್ಲಿ
ಮಲಗಿದರೆ ಸಾಕು.

ತಂಬಿಟ್ಟು, ಶೇಂಗಾ- ಉಂಡೆ
ಅರಳು, ಎಳ್ಳು- ಅಚ್ಚು,
ಗಂಡನ ಮನೆಗಿಂತ
ತಾಯಿ ಕೈ ರುಚಿ ಹೆಚ್ಚು.

ಪಂಚಮಿಯ ಹಬ್ಬಕೆ
ತವರೂರಿಗೆ ಓಟ,
ಅಲ್ಲಿ ಸೇರೋದು ಎಲ್ಲ
ಗೆಳತಿಯರ ಕೂಟ.

ಮಳೆ ಗಾಳಿ ಚಳಿಗೆ
ನಾಗ ಪಂಚಮಿ ನೆಪ
ಎಳ್ಚ್ಗಿಗಳಿ ತಂಬಿಟ್ಟು
ಕುಚ್ಚ್ಗಡಬು ಮೇಲ್ತುಪ್ಪ.

ಜೀಕುವುದು ನೋಡಮ್ಮ
ಮೇಲೊಮ್ಮೆ ಕೆಳಗೊಮ್ಮೆ,
ತಿಳಿ ಪಂಚಮಿಯಲಿ
ಜೀವನವೇ ಜೋಕಾಲಿ.

Leave a Reply

Back To Top