ಡಾ. ಸುಮಂಗಲಾ ಅತ್ತಿಗೇರಿ ಅವರ ಕವಿತೆ-ಮತ್ತೆ ಶೂನ್ಯದಿಂದ !

ಮತ್ತೆ ಶೂನ್ಯದಿಂದ !

ಬಿಕ್ಕುತ್ತಿರುವ ಮೋಡ
ಅಳುತ್ತಿರುವ ಆಗಸ
ಎಷ್ಟು ಸಂತೈಸಿದರೂ
ಅಳು ನಿಲ್ಲಿಸುತ್ತಿಲ್ಲ…
ಆಕಾಶದ ಕಣ್ಣೀರ ಧಾರೆಗೆ
ಧರೆಯ ಜನರ
ಬದುಕೆಲ್ಲ ತಲ್ಲಣಗೊಂಡಿದೆ!

ಬಯಸಿ ಬಯಸಿ
ಮಾಡಿದ ಹೊಲಮನೆಗಳು..
ಬೇಕು ಬೇಕೆಂದು
ಬಚ್ಚಿಟ್ಟ ಒಡವೆ ವಸ್ತ್ರಗಳು…
ನೆರೆಯ ಪಾಲಾಗಿ
ನರರ ಬದುಕೆಲ್ಲ
ನರಕವಾಗಿದೆ!

ಅದೆಷ್ಟೋ ತಲೆಮಾರಿನ
ಬೆವರಿನ ಪಾಲದು
ನಾಳೆ ನಾಡಿದ್ದಿಗೆಂದು
ಮಕ್ಕಳು ಮೊಮ್ಮಕ್ಕಳಿಗೆಂದು
ಹನಿಹನಿಗೂಡಿಸಿ
ಮಿಗಿಸಿದ್ದು, ಉಳಿಸಿದ್ದೆಲ್ಲ
ಹೊಳೆಯಾಗಿ ಹರಿದಿದೆ
ನೆರಳು ನೀಡಿದ
ಮುದಿ ಸೂರುಗಳೆಲ್ಲ
ಕುಸಿದು ಬಿದ್ದಿವೆ
ಅನಾಥವಾಗಿ!

ಎಲ್ಲ ಇದ್ದು
ಏನೂ ಇಲ್ಲದಂತೆ
ಇರುವುದೆಲ್ಲವ ಬಿಟ್ಟು
ಇರದುದೆಡೆಗೆ ಸಾಗಿ ನಿಂತಿದೆ ಪಯಣ
ಅಳಿದುಳಿದ ಅವಶೇಷಗಳೊಂದಿಗೆ
ಎಳೆಯರು ಇಳಿಯರು
ದನಕರು ಕುರಿಮರಿಗಳಾದಿಯಾಗಿ
ಗುಳೆ ಹೊರಟು ನಿಂತಿದ್ದಾರೆ
ಆಶ್ರಯ ಅರಿಸಿ
ರಕ್ಷಣೆ ಬಯಸಿ

ಸಧ್ಯಕ್ಕೆ ಗಂಜಿಕೇಂದ್ರಗಳೇ
ಕಲ್ಪವೃಕ್ಷ ಕಾಮಧೇನು
ಇವರ ಪಾಲಿಗೆ

ನೆರೆಗೆ ಕೊಚ್ಚಿದ
ಬಾಳ ಕನಸುಗಳೆಲ್ಲ
ನುಚ್ಚು ನೂರಾಗಿ
ಜಲ ಸಮಾಧಿಯಾಗಿವೆ!

ಚದುರಿದ ಬದುಕಿನ ಚಿತ್ತಾರವನ್ನು
ಮತ್ತೆ ಕಟ್ಟಬೇಕಿದೆ ಶ್ಯೂನ್ಯದಿಂದ!
ಮುಳುಗಡೆಯಾದವರು.


4 thoughts on “ಡಾ. ಸುಮಂಗಲಾ ಅತ್ತಿಗೇರಿ ಅವರ ಕವಿತೆ-ಮತ್ತೆ ಶೂನ್ಯದಿಂದ !

Leave a Reply

Back To Top