ಪ್ರಸ್ತುತ ಸಂಗಾತಿ
ಮಾಧುರಿ ದೇಶಪಾಂಡೆ
‘ಸಮಾಜದಲ್ಲಿ
ದೌರ್ಜನ್ಯದ ರೂಪಗಳು’
ಸಾಮಾನ್ಯವಾಗಿ ಕೌಂಟುಬಿಕ ದೌರ್ಜನ್ಯ ಹೊಡೆಯುವುದು ಬಡಿಯುವುದು ಮಾತ್ರ ದೌರ್ಜನ್ಯ ಎಂದು ವ್ಯಾಪಕವಾಗಿ ಗುರುತಿಸಲಾಗುತ್ತದೆ. ಆದರೆ ಮಾನಸಿಕವಾಗಿ ಜನರು ಕೊಡುವ ಹಿಂಸೆ ಹಾಗೂ ದೌರ್ಜನ್ಯಗಳನ್ನು ನಿರ್ಲಕ್ಷ್ಯ ಮಾಡಿ ಬಿಡುತ್ತೇವೆ. ಮನೆಯಲ್ಲಿ ಸಂಬಂಧಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕು. ನೆರೆ ಹೊರೆಯವರು, ಪರಿಚಿತರು ಸ್ನೇಹಿತರು ಎಂದು ಹೀಗೆ ಅನೇಕ ಬಾರಿ ನಮಗೆ ಹಿಡಿಸದ ಮಾತು, ನಡವಳಿಕೆ, ಸ್ಪರ್ಶ ಮತ್ತು ನೋಟದ ಜನರನ್ನು ಸಹಿಸುವುದು ಅನಿವಾರ್ಯವಾಗಿ ಬಿಡುತ್ತದೆ. ಕೆಲವೊಮ್ಮೆ ಅವರ ನಡವಳಿಕೆಗಿಂತ ನಮ್ಮ ಮಾರ್ಯಾದೆ ಗೌರವ ಕೆಟ್ಟೀತು ಎಂಬ ಭಯದಲ್ಲಿಯೇ ಒದ್ದಾಡುವ ಪ್ರಸಂಗವೂ ಇದೆ. ಇಲ್ಲಿ ಹೆಣ್ಣಮಕ್ಕಳು 70% ಸಮಸ್ಯೆ ಅನುಭವಿಸಿದರೆ ಗಂಡು ಮಕ್ಕಳನ್ನು ಕಾಡುವ ಹೆಣ್ಣು ಮಕ್ಕಳು ಯಾವ ರೀತಿಯಿಂದಲೂ ಕಡಿಮೆ ಇಲ್ಲ. ಒಟ್ಟಿನಲ್ಲಿ ಬಲಶಾಲಿಗಳು ದಾಷ್ಟಿಕತೆ ಇರುವ ಜನರು ಸೌಮ್ಯ ಹಾಗೂ ಸಭ್ಯ ಜನರ ಗುಣವನ್ನು ದುರುಪಯೋಗ ಮಾಡಿ ಕೊಳ್ಳುತ್ತಾರೆ.
ಹೊರಗಿನ ಜನರು ಮನೆಯ ಜನರು ಎಲ್ಲರೂ ಕೂಡ ಒಂದು ಪಕ್ಷದಲ್ಲಿ ಕಡಿಮೆ ಇದ್ದಾರೆ ಎಂದಾಗ ಅವರ ಉಪಯೋಗವನ್ನು ತೆಗೆದುಕೊಳ್ಳಲು ನೋಡುತ್ತಾರೆ. ನಮಗೆ ಬೇಡದ ಕೆಲಸಗಳನ್ನು, ಸಂಭ್ರಮಗಳಲ್ಲಿ ಪಾಲ್ಗೊಂಡು, ಕೆಲವೊಮ್ಮೆ ಬೇಡದ ಮಾತುಗಳನ್ನು ಕೇಳುವ ಮುಲಾಜಿಗೆ ಬೀಳ ಬೇಕಾಗುತ್ತದೆ. ಇಂತಹ ಸಂದರ್ಭ ಕೆಲಸದ ಸ್ಥಳದಲ್ಲಿ, ನಮಗೆ ಹಣದಿಂದ ಸಹಾಯ ಮಾಡಿದವರಿಗೆ ಮತ್ತು ಹೊರಗಿನ ಸಮಾಜದಲ್ಲಿ ಬೆಂಬಲ ಕೊಡುವವರ ದೌರ್ಜನ್ಯಗಳನ್ನು ಅನುಭವಿಸುವುದು ಅನಿವಾರ್ಯವಾಗಿ ಬಿಡುತ್ತದೆ.
ಹೆಣ್ನು ಮಕ್ಕಳಿಗೆ ವಿಶೇಷವಾಗಿ ಅದು ಅಸಹಜವಾದ ಅಥವಾ ಅಶ್ಲೀಲ ಸ್ಪರ್ಶ ಮತ್ತು ಮಾತು ಅಥವಾ ಮಾನಸಿಕವಾಗಿ ಹಿಂಸೆ ಮಾಡುವ ವಿಕೃತಿ ಇಂದಿನ ಆಧುನಿಕ ಹಾಗೂ ಜಾಗೃತ ಸಮಾಜದಲ್ಲಿಯೂ ನಡೆಯುತ್ತಿರುವುದು ವಿಷಾದನೀಯ. ಆರ‍್ತಿಕವಾಗಿ ಅನುಕೂಲತೆ ಇಲ್ಲದಿರುವವರಿಗೆ, ಬರವಣಿಗೆ, ಆಟದ ಸ್ಪರ್ಧೆಗಳು , ನೃತ್ಯ ಹಾಡುಗಾರಿಕೆ ಮೊದಲಾದ ಕ್ಷೇತ್ರಗಳನ್ನು ಅವಕಾಶಗಳನ್ನು ಬೆಂಬಲವನ್ನು ಕೊಡಲು ಹೆಣ್ಣು/ಗಂಡು ತಮ್ಮ ಶಿಫಾರಸ್ಸು ಅಥವಾ ಬೆಂಬಲಕ್ಕೆ ಪ್ರತಿಯಾಗಿ ಹಣವನ್ನು ಬೇರೆ ಯಾವದೇ ರೀತಿಯ ಪ್ರತ್ಯುಪಕಾರವನ್ನು ಕೇಳಿ ಮಾಡಿಸಿಕೊಳ್ಳುತ್ತಾರೆ. ಹೊರಗೆ ಪ್ರಪಂಚದಲ್ಲಿ ಸಭ್ಯ ಉತ್ತಮ ವ್ಯಕ್ತಿ ಎನಿಸಿಕೊಂಡು ಉಪಯೋಗ ಪಡೆದು ಕೊಳ್ಳುವ ಗೋಮುಖ ವ್ಯಾಘ್ರ ಇರುವ ಜನರನ್ನು ನಂಬುವ ಸಮಾಜ ಅಸಹಾಯಕ ಜನರಿಗೆ ಸ್ಪಂದಿಸುವಾಗ ಹಿಂದೆ ಮುಂದೆ ನೋಡುತ್ತದೆ.
ಇಬ್ಬರ ನಡುವಿನ ಮಾತುಕತೆ ಅಥವಾ ವ್ಯವಹಾರ ಮೂರನೆಯವರಿಗೆ ಗೊತ್ತಿರುವುದಿಲ್ಲ. ಜನರ ಮುಖಗಳನ್ನು ಕೇವಲ ಮಾತಿನಿಂದ ಮಾತ್ರ ಗುರುತಿಸಲು ಆಗುವುದಿಲ್ಲ. ಸ್ನೇಹ ಎಂದೋ ಉಪಕಾರ ಎಂದೋ ಆರಂಭವಾದ ಸಂಬಂಧಗಳಲ್ಲಿ ಅದರಲ್ಲಿಯೂ ಆರ್ಥಿಕವಾಗಿ ಅನುಕೂಲತೆಯಿಲ್ಲದ ಹಾಗೂ ಸ್ವಂತದವರಿಂದ ದೂರ ತಳ್ಳಲ್ಪಟ್ಟವರನ್ನು ಸಮಾಜದಲ್ಲಿ ಹೀನವಾಗಿ ನೋಡುವುದು ಹಾಗೂ ನಡೆಸಿಕೊಳ್ಳುವುದು ಸರ್ವೇ ಸಾಮಾನ್ಯವಾಗಿದೆ. ಇಂತಹ ದೌರ್ಜನ್ಯಗಳನ್ನು ಸಹಿಸಿಕೊಳ್ಳಬಾರದು. ನಮಗೆ ಸಹಾಯ ಮಾಡುವ ಹೆಸರಿನಲ್ಲಿ ನಮ್ಮ ಹೆಸರನ್ನು ಬಳಸಿ ಲಾಭ ಮಾಡಿಕೊಳ್ಳುವ ಸಮಯ ಸಾಧಕರಿಂದ ದೂರ ಇರುವುದು ಉತ್ತಮ.
ಕೆಲವರಲ್ಲಿ ಧೈರ್ಯ ಇರುವುದಿಲ್ಲ ದೌರ್ಜನ್ಯವನ್ನು ಸಹಿಸಿಕೊಂಡು ಹೋಗುವುದನ್ನು ಅಭ್ಯಾಸ ಮಾಡಿಕೊಂಡಿರುತ್ತಾರೆ. ನಮ್ಮ ಜೊತೆಗೆ ಯಾವುದೇ ರೀತಿಯ ದೌರ್ಜನ್ಯ ಅಥವಾ ಅನ್ಯಾಯವಾದಾಗ ಅದಕ್ಕೆ ಬೇರೆಯವರ ಬೆಂಬಲ ಬೇಡದೇ ನಮ್ಮನ್ನು ನಾವು ಸಮರ್ಥರನ್ನಾಗಿ ಮಾಡಿಕೊಳ್ಳಬೇಕು. ಆರ್ಥಿಕ ಸಹಾಯ ಮಾಡಿದ್ದಾರೆ ಅಂದರೆ ಅವರು ನಮ್ಮನ್ನು ಕೊಂಡುಕೊಂಡಿರುವುದಿಲ್ಲ, ಮಾನಸಿಕವಾಗಿ ಅಥವಾ ಶಿಫಾರಸ್ಸಿನ ಬೆಂಬಲ ನೀಡಿದ್ದರೆ ಅದಕ್ಕೆ ಪ್ರತಿಯಾಗಿ ನಾವು ಕೂಡ ಯಾವುದೇ ರೀತಿಯ ಸಹಾಯ ಮಾಡಿಯೇ ಇರುತ್ತೇವೆ. ಪ್ರತ್ಯುಪಕಾರದ ಭಾವನೆ ಇರಲಿ ಹಿಂಸೆಯಾಗುವ ಆತ್ಮ ಸಾಕ್ಷಿ ಒಪ್ಪದ ಯಾವುದೇ ಕಾರ್ಯಕ್ಕೆ ಮುಂದಾಗಬಾರದು. ಮೊದಲಿಗೆ ನಮ್ಮಲ್ಲಿ ನಾವು ಅಸಹಾಯಕರು ಅಥವಾ ಬೇರೆಯವರಿಂದ ಉಪಕೃತರು ಹೀಗಾಗಿ ಅವರು ಏನೇ ಮಾಡಿದರೂ ಸಹಿಸಬೇಕು ಎಂಬ ಹೀನತೆಯ ಭಾವನೆಯಿಂದ ಹೊರಬರಬೇಕು. ನ್ಯಾಯಕ್ಕಾಗಿ ಹಾಗೂ ಆತ್ಮ ಸಮ್ಮಾನಕ್ಕಾಗಿ ಎದ್ದು ನಿಲ್ಲುವ ಆತ್ಮಸ್ಥೈರ್ಯವನ್ನು ಬೆಳೆಸಿಕೊಳ್ಳಬೇಕು.
ಯಾವುದೇ ಆಮಿಷ ಹಾಗೂ ಆಸೆಗೆ ನಮ್ಮ ಮಾನಸಿಕ ನೆಮ್ಮದಿ ಅಥವಾ ನಮ್ಮ ಆತ್ಮ ಗೌರವವನ್ನು ಬಲಿಕೊಡುವ ಅಗತ್ಯ ಇಲ್ಲ. ಪ್ರಸಿದ್ಧಿಗಾಗಿ , ಕೆಲಸಕ್ಕಾಗಿ ಅಥವಾ ಹಣಕ್ಕಾಗಿ ನಾವು ಮತ್ತೊಬ್ಬ ಹೀನ ಸ್ವಭಾವದ ಜನರಿಂದ ಬಳಸಲ್ಪಟ್ಟರೆ ಅದರಲ್ಲಿ ನಮ್ಮ ತಪ್ಪೂ ಇದೆ ಎಂದು ಮರೆಯಬಾರದು.
ಆಕಾಶಕ್ಕೆ ಏಣಿಯನ್ನು ಹಚ್ಚಿದರೂ ಯಾವುದೇ ಪ್ರಯತ್ನ ಮಾಡಿದರೂ, ಯಾವುದೇ ದೊಡ್ಡ ಸಾಹಸಕ್ಕೆ ಕೈ ಹಾಕಿದರೂ ಮತ್ತೊಬ್ಬರ ಮುಲಾಜಿನ ಭಿಕ್ಷೆ ಎಂಬ ಹೀನತಾ ಭಾವನೆಯನ್ನು ಬೆಳೆಸಿಕೊಳ್ಳದೇ ನಮ್ಮ ಪ್ರತಿಭೆಗೆ ಸಿಕ್ಕ ಅವಕಾಶವನ್ನು ಬೆಳೆಸಿಕೊಳ್ಳಬೇಕು. ನಮ್ಮ ಒಳ್ಳೆಯತನವನ್ನು ಬಳಸಿಕೊಂಡು ಅದರ ಲಭವನ್ನು ಪಡೆಯುವವರು ನಮ್ಮ ಮನೆಯವರೇಆಗಿರಲಿ, ಆತ್ಮೀಯರೇ ಆಗಿರಲಿ ಅವರನ್ನು ಎದುರಿಸಿ ನಿಲ್ಲುವ ಸಾಮರ್ಥ್ಯ ಬೆಳೇಸಿಕೊಳ್ಳಬೇಕು. ಯಾವುದೇ ತರಹದ ಮುಲಾಜಿಗೆ ಸಿಲುಕಿ ಅನಗತ್ಯ ಮತ್ತು ಅಸಹ್ಯವಾದ ಕೆಲಸ ಮಾಡಲು ಮಾತು ಕೇಳಲು ಒಪ್ಪಲೇ ಬಾರದು. ನಾವುಗಳು ಸಮಯ ಸಾಧಕತೆ ಮಾಡದೇ ಇದ್ದರೆ ಸಾಲದು ಸಮಯ ಸಾಧಕ ತನದಿಂದ ನಮ್ಮನ್ನು ಬಳಸಿಕೊಳ್ಳಲು ಬರುವವರಿಗೆ ಉತ್ತರ ನೀಡಿ ಅಂತಹ ಜನರ ಮುಂದೆಯೇ ತಲೆ ಎತ್ತಿ ನಿಲ್ಲುವ ಸಾಮರ್ಥ್ಯ ಬೆಳೇಸಿಕೊಳ್ಳಬೇಕು. ಭಾವನಾತ್ಮಕವಾಗಿ ಬ್ಲಾಕ್ ಮೇಲ್ ತಂತ್ರ ಆಧಾರಿಸಿ ಕೆಲಸ ಮಾಡಿಸಿಕೊಳ್ಳುವ, ಉಪಕಾರ ಮಾಡಿದ್ದೇವೆ ಎಂದು ಪೋಸ್ ಕೊಡುವವರ ನಾಟಕಕ್ಕೆ ಬಲಿಯಾಗೀ ನಮ್ಮ ನೆಮ್ಮದಿ ಕಳೆದು ಕೊಳ್ಳಬಾರದು.
ಇಂತಹ ಘಟನೆಗಳು ಒತ್ತಡಗಳಿಂದ ನಮ್ಮ ದೈನಂದಿನ ಕೆಲಸ ಕಾರ್ಯ ಹಿಡಿತ ತಪ್ಪುತ್ತದೆ. ಮಾನಸಿಕ ಹಿಂಸೆಯಿಂದ ನೆಮ್ಮದಿ ಹಾಳಾಗುತ್ತದೆ. ನಮ್ಮ ಮಾನಸಿಕ ನೆಮ್ಮದಿಯನ್ನು ಕಸಿದು ಕೊಳ್ಳುವ ಹಕ್ಕು ಯಾರಿಗೂ ಇಲ್ಲ ಅದರಂತೆ ನಮ್ಮ ಜೀವನದ ಆಗು ಹೋಗುಗಳ ನಿರ್ಧಾರ ನಮ್ಮನ್ನು ಹಿಡಿತದಲ್ಲಿ ಇಟ್ಟು ಕೊಳ್ಳ ಬಯಸುವ ಯಾವುದೇ ವ್ಯಕ್ತಿಗೆ ಕೊಡದೇ ಸ್ವತಂತ್ರವಾಗಿ ಬದುಕುವುದು ನಮ್ಮ ಹಕ್ಕಾಗಿದೆ.
ಮಾಧುರಿ ದೇಶಪಾಂಡೆ,
Nice