ಕಾವ್ಯ ಸಂಗಾತಿ
ಹನಮಂತ ಸೋಮನಕಟ್ಟಿ
ನಿನ್ನಂತೆ ನನಗೂ
ನಿನಗೆ ನೋಡುವ ಆಸೆ ಆದಾಗಲೆಲ್ಲ
ಊರ ಮುಂದಿನ ಬಾವಿಯ ದಡಕ್ಕೆ ಬಂದು ಬಿಡು ಸಾಕು
ನಾನು ನಿನ್ನನ್ನು
ನೀನು ನನ್ನನ್ನು ನೋಡಿದಂತಾಗುತ್ತದೆ
ನೀನು ನನ್ನೊಡನೆ ಮಾತನಾಡಲು
ಆಸೆ ಪಟ್ಟಾಗಲೆಲ್ಲ
ದೂರದ ಗೋಳಗುಮ್ಮಟ ಹತ್ತಿಬಿಡು
ನಾನು ನಿನ್ನೊಡನೆ
ನೀನು ನನ್ನೊಡನೆ ಮಾತನಾಡುವ ಆಸೆ ತೀರಿಬಿಡುತ್ತದೆ
ನೀನು ನನ್ನ ಮೈತಡವುವ ಇಚ್ಛೆಯಾದರೆ
ಆಳೆತ್ತರದ ಅಲೆ ಎದ್ದು ಬರುವ
ದೂರದ ಸಾಗರದ ದಂಡೆಗೆ ಬಂದು ಕುಳಿತುಬಿಡು
ಬರುವಾಗ ಹೋಗುವಾಗ
ನಾನು ನಿನ್ನನ್ನು
ನೀನು ನನ್ನನ್ನು ಮರಳಿನ ಮೇಲಿಂದ ಮುಟ್ಟಿ
ಖುಷಿಯಿಂದ ಇದ್ದು ಬಿಡಬಹುದು
ನೀನು ನನ್ನ ಹಿಂಬಾಲಿಸುವ ಆಸೆ ಆದರೆ
ಇರುಳ ಚಂದಿರ ತುಂಬಿದ ಬಾನಲ್ಲಿ ತೇಲಿ ಬರುವಾಗ
ನಮ್ಮೂರ ದಾರಿಯಲಿ ನಡೆದು ಬಂದು ಬಿಡು
ನಾನು ನಿನ್ನನ್ನು
ನೀನು ನನ್ನನ್ನು ಹಿಂಬಾಲಿಸಿ ಹಿಂಬಾಲಿಸುತ್ತಾ
ಕತ್ತಲೆಯಲ್ಲಿ ಮರೆಯಾಗಿ ಬಿಡಬಹುದು
ಹನಮಂತ ಸೋಮನಕಟ್ಟಿ