‘ತುಸು ವಿಶ್ರಾಂತಿ ಬೇಕು…. ದೇಹಕ್ಕೆ’ಲೇಖನ-ವೀಣಾ ಹೇಮಂತ್ ಗೌಡ ಪಾಟೀಲ್ 

ಆಕೆ ತುಂಬಾ ಕೆಲಸ ಮಾಡ್ತಾಳೆ ಅದಕ್ಕೆ ಯಶಸ್ಸು ಕಾಣ್ತಾಳೆ, ನನ್ನ ಸತತ ಪರಿಶ್ರಮವೇ ನನ್ನ ಯಶಸ್ವಿಗೆ ಕಾರಣ ಎಂಬಂತಹ ಸಾಂಪ್ರದಾಯಿಕ ನಂಬಿಕೆಗಳಿಗೆ ಹೊರತಾಗಿ ವಿಶ್ರಾಂತಿ ಮತ್ತು ಚಟುವಟಿಕೆಗಳ ನಡುವಿನ ಸಮತೋಲನದ ಬದುಕಿನಲ್ಲಿ ಹೆಚ್ಚು ಉತ್ಪಾದಕತೆಯನ್ನು ಕಾಣಬಹುದು ಎಂಬ ಮಾತನ್ನು ಅಲೆಕ್ಸ್ ಎಂಬ ವ್ಯಕ್ತಿಯ ‘ರೆಸ್ಟ್ ‘ ಎಂಬ ಪುಸ್ತಕದಲ್ಲಿ ನಾವು ಕೇಳಬಹುದು…ಹೌದು ಈ ಪುಸ್ತಕದ ಆಡಿಯೋ ಕೂಡ ಲಭ್ಯವಿದೆ. ಇಲ್ಲಿ ಕರ್ತೃ ಅಲೆಕ್ಸ ವಿಶ್ರಾಂತಿಯ ಮಹತ್ವ ಮತ್ತು ಅದರ ಪರಿಣಾಮಗಳ ಕುರಿತು ಹೇಳಿದ್ದಾನೆ. ಆ ಕೃತಿಯ ಒಂದು ಪಕ್ಷಿ ನೋಟ ಇಲ್ಲಿದೆ.

ಜಾಗತಿಕ ಆರ್ಥಿಕತೆಯ 24*7 ರ ಪರಿಣಾಮವಾಗಿ ವಿಶ್ರಾಂತಿ ಎಂಬುದು ಅತ್ಯುನ್ನತ ಹಂತದಲ್ಲಿ ಒಂದು ದುಬಾರಿ ವೈಭವವಾಗಿದ್ದು, ಅತ್ಯಂತ ಕೆಳ ಹಂತದಲ್ಲಿ ಬಲಹೀನತೆ ಎಂಬಂತೆ ತೋರುತ್ತದೆ.

ನಮ್ಮ ನಿರಂತರ ಉಸಿರಾಟದಷ್ಟೇ ಸಹಜವಾಗಿರುವ ವಿಶ್ರಾಂತಿಯನ್ನು ನಾವು ತಪ್ಪಾಗಿ ಅರ್ಥೈಸಿಕೊಂಡಿದ್ದೇವೆ. ವಿಕಾಸವಾದದ ಡಾರ್ವಿನ್ ನಿಂದ ಹಿಡಿದು ಸ್ಟೀಫನ್ ಹಾಕಿಂಗ್ ವರೆಗಿನ ಹಲವಾರು ವಿಜ್ಞಾನಿಗಳ, ಸಾಹಿತಿಗಳ ವರ್ಣ ಚಿತ್ರಕಾರರ ಸಮಾಲೋಚನಾ ತಜ್ಞರ ಕುರಿತು ವಿಸ್ತೃತ ವೈಜ್ಞಾನಿಕ ಅಧ್ಯಯನಗೈದಿರುವ ಸಿಲಿಕಾನ್ ವ್ಯಾಲಿಯ ಭವಿಷ್ಯವನ್ನು ಅರಿತಿರುವ ಆರ್ಥಿಕ ವ್ಯವಹಾರಗಳ ಸಲಹೆಗಾರನಾಗಿರುವ ಅಲೆಕ್ಸ ಕೂಜುಂಗ್ ಕಿನ್ ಪಾಂಗ್ ವಿಶ್ರಾಂತಿಯು ಹೆಚ್ಚು ಕ್ರಿಯಾತ್ಮಕತೆಯ, ಉತ್ಪಾದಕತೆಯ ಮತ್ತು ಚೈತನ್ಯವನ್ನು ತುಂಬುವ ದಿಕ್ಸೂಚಿಯಾಗಿದೆ ಎಂದು ತಮ್ಮ ಕೃತಿಯಲ್ಲಿ ಹೇಳಿದ್ದಾರೆ.

ದೇಹಕ್ಕೆ ಅವಶ್ಯಕವಾದ ವಿಶ್ರಾಂತಿ ದೊರೆತಾಗ ಹೆಚ್ಚಿನ ಲಾಭವಿದೆ ಎಂದು ಅಲೆಕ್ಸ್ ಸೂಜುಂಗ್-ಕಿಮ್ ಪಾಂಗ್ ತಮ್ಮ ಕೃತಿ ‘ರೆಸ್ಟ್ ‘ ಪುಸ್ತಕದ ಮುಖಪುಟದ ಮೇಲ್ಭಾಗದಲ್ಲಿ ವಿಶ್ರಾಂತಿ ಪಡೆದು ಕೃತಿಯನ್ನು ಓದುವ ಸಲಹೆ ನೀಡಿದ್ದಾರೆ.ಉತ್ತಮ ನಿರ್ಣಯಗಳನ್ನು ಕೈಗೊಳ್ಳಲು, ಹೆಚ್ಚು ಉತ್ಪಾದಕತೆಯನ್ನು ಹೊಂದಲು ಮತ್ತು ಚಟುವಟಿಕೆಯಿಂದಿರಲು ವಿಶ್ರಾಂತಿ ಬಹಳ ಅವಶ್ಯಕ ಎಂದು ಸಾರಿ ಹೇಳಿದ್ದಾರೆ. ಅವರ ಪ್ರಕಾರ ವಿಶ್ರಾಂತಿ ನಮ್ಮ ಜೀವನದಲ್ಲಿ ಅತಿ ಪ್ರಮುಖ ಪಾತ್ರವನ್ನು ವಹಿಸಿದ್ದು, ದಣಿದ ದೇಹಕ್ಕೆ ಅಮೃತ ಸಿಂಚನದಂತೆ ಭಾಸವಾಗುತ್ತದೆ. ವಿಶ್ರಾಂತಿ ತೆಗೆದುಕೊಳ್ಳುವ ಮೂಲಕ ನಾವು ನಮ್ಮ ಜೀವನದಲ್ಲಿ ಹೆಚ್ಚಿನ ಉತ್ಪಾದಕತೆ, ಕ್ರಿಯಾಶೀಲತೆ ಮತ್ತು ಸರ್ವಾಂಗೀಣ ಅಭಿವೃದ್ಧಿಯನ್ನು ಹೊಂದುತ್ತೇವೆ ಎಂದು ಬಲವಾಗಿ ಪ್ರತಿಪಾದಿಸಿದ್ದಾರೆ.
ಜಗತ್ಪ್ರಸಿದ್ಧ ನಾಯಕರು,ಸಂಗೀತಗಾರರು, ಮಹಾನ್ ನಟರು, ಅಂತರಾಷ್ಟ್ರೀಯ ಆಟಗಾರರು ಕೆಲಸ ಮತ್ತು ವಿಶ್ರಾಂತಿಯ ನಡುವಣ ವ್ಯತ್ಯಾಸವನ್ನು ಅರಿತು ಅದನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಯಶಸ್ಸನ್ನು ಸಾಧಿಸಿದ್ದಾರೆ.
ಅವರು ತಮ್ಮ ಕೃತಿಯಲ್ಲಿ ಕೆಳಗಿನ 10 ವಿಷಯಗಳನ್ನು ಪ್ರಸ್ತುತಪಡಿಸಿದ್ದಾರೆ.

  1. ವಿಶ್ರಾಂತಿ ಎಂಬುದು ಕೆಲಸಕ್ಕೆ ವಿರುದ್ಧವಾದ ಪದವಲ್ಲ,ಬದಲಾಗಿ ನಮ್ಮ ಕಾರ್ಯನಿರ್ವಹಣೆಗೆ ನಾವು ನಮಗೆ ಕೊಟ್ಟುಕೊಳ್ಳುವ ಅಭಿನಂದನೆ. ವಿಶ್ರಾಂತಿಯು ನಮ್ಮ ಜೀವಕೋಶಗಳನ್ನು ಪುನರುಜ್ಜೀವನಗೊಳಿಸಿ ನಮ್ಮ ಕ್ರಿಯಾಶೀಲತೆಯನ್ನು ಹೆಚ್ಚಿಸುತ್ತದೆ ಮತ್ತು ಕೌಶಲ್ಯ ನಿರ್ವಹಣೆಗೆ ನೆರವಾಗುತ್ತದೆ.
  2. ಅತಿ ಹೆಚ್ಚಿನ ಗಂಟೆಗಳ ಕಾಲ ಕೆಲಸ ಮಾಡುವುದರಿಂದ ಉತ್ತಮ ಫಲಿತಾಂಶವನ್ನು ಕಾಣುತ್ತೇವೆ ಎಂಬುದು ಖಂಡಿತ ನಿಜವಲ್ಲ!ಸಾಕಷ್ಟು ವಿಶ್ರಾಂತಿಯ ನಂತರ ಗಮನವಿಟ್ಟು ಮಾಡಿದ ಕ್ಷಮತೆಯುಳ್ಳ ಕಾರ್ಯವೈಖರಿ ಉನ್ನತ ಮಟ್ಟದ ಫಲಿತಾಂಶವನ್ನು ನೀಡುತ್ತದೆ. 3.ನಿದ್ರೆಯ ಮಹತ್ವ.. ಸಾಕಷ್ಟು ಪ್ರಮಾಣದ ನಿದ್ರೆ ಮನುಷ್ಯನ ಅರಿವಿನ ಗ್ರಹಿಕೆಯನ್ನು, ನೆನಪಿನ ಶಕ್ತಿಯನ್ನು ಮತ್ತು ಭಾವನೆಗಳ ವೈಪರೀತ್ಯಗಳ ಮೇಲೆ ನಿಯಂತ್ರಣವನ್ನು ಹೊಂದಲು ಸಹಾಯಕ. ನಿದ್ರಿಸುವ ಮನುಷ್ಯನ ಆರೋಗ್ಯ ಚೆನ್ನಾಗಿರುತ್ತದೆ.

4 ಒಳ್ಳೆಯ ವಿಶ್ರಾಂತಿ… ಉತ್ತಮ ಕಾರ್ಯ ಚಟುವಟಿಕೆಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವುದು ಹೆಚ್ಚು ಸಂತಸವನ್ನು ತರುವುದಲ್ಲದೆ ದಣಿವನ್ನು ನಿವಾರಿಸುತ್ತದೆ. ಚೇಂಜ್ ಆಫ್ ವರ್ಕ್ ಈಸ್ ರೆಸ್ಟ್ ಎಂದು ಹೇಳುತ್ತಾರಲ್ಲವೇ ಕೆಲಸಗಳಲ್ಲಿನ ಬದಲಾವಣೆ ಕೂಡ ವಿಶ್ರಾಂತಿಯ ಒಂದು ಕ್ರಮ. ಅಂತೆಯೇ ಒಳ್ಳೆಯ ಹವ್ಯಾಸಗಳು, ವ್ಯಾಯಾಮ ಮತ್ತು ಕ್ರಿಯಾಶೀಲ ಚಟುವಟಿಕೆಗಳು ಮನುಷ್ಯನ ಮನೋದೈಹಿಕ ಪುನರುತ್ಥಾನಕ್ಕೆ ಕಾರಣವಾಗುತ್ತದೆ. ಕುಳಿತಲ್ಲೇ ಕುಳಿತು ಟಿವಿ ನೋಡುವುದು, ಮೊಬೈಲ್ ಸ್ಕ್ರೀನ್ ತೀಡುವುದಕ್ಕಿಂತ ಚಟುವಟಿಕೆಗಳನ್ನು ಮಾಡುವ ಮೂಲಕ ಕ್ರಿಯಾಶೀಲರಾಗಿರುವುದು ಹೆಚ್ಚು ಲಾಭದಾಯಕ.

5.ಕೆಲಸದ ಮಧ್ಯದಲ್ಲಿ ಒಂದೆರಡು ನಿಮಿಷಗಳ ವಿರಾಮವನ್ನು ಯೋಜಿಸುವ ಮೂಲಕ ಆಗಾಗ ಲಘು ವಿಶ್ರಾಂತಿಯನ್ನು ತೆಗೆದುಕೊಂಡರೆ ದಣಿವಾಗುವುದು ತಪ್ಪುತ್ತದೆ. ಕಡಿಮೆ ಅವಧಿಯ ಪುಟ್ಟ ವಿರಾಮ ಸಮಯವು ದೀರ್ಘಾವಧಿಯ ವಿರಾಮಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿರುತ್ತವೆ.

6.ಧ್ಯಾನ ಮತ್ತು ವಿಶ್ರಾಂತಿ… ಧ್ಯಾನ ಮತ್ತು ದೀರ್ಘ ಉಸಿರಾಟದ ಕ್ರಮಗಳು ನಮ್ಮ ದಣಿವನ್ನು ನಿವಾರಿಸಿ ಕೇಂದ್ರೀಕೃತ ಲಕ್ಷವನ್ನು ಪ್ರೋತ್ಸಾಹಿಸುತ್ತವೆ. ನಮ್ಮ ದೈನಂದಿನ ಜೀವನದಲ್ಲಿ ಧ್ಯಾನ ಮತ್ತು ದೀರ್ಘ ಉಸಿರಾಟದ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ಗಮನಾರ್ಹ ಬದಲಾವಣೆ ಮತ್ತು ಶಾಂತ ಮನಸ್ಥಿತಿಯನ್ನು ಹೊಂದಬಹುದು.

  1. ಪ್ರಕೃತಿಯ ಒಡನಾಟ ಮತ್ತು ದೈಹಿಕ ಚಟುವಟಿಕೆಗಳು.. ಪ್ರಕೃತಿಯೊಂದಿಗಿನ ಒಡನಾಟ ಮತ್ತು ಕ್ರಿಯಾತ್ಮಕ ದೈಹಿಕ ಚಟುವಟಿಕೆಗಳ ಮೂಲಕ ಉತ್ತಮ ದೈಹಿಕ ಶಕ್ತಿ ಮತ್ತು ಧನಾತ್ಮಕ ಮಾನಸಿಕ ಶಕ್ತಿಯನ್ನು ಕಾಯ್ದಿಟ್ಟುಕೊಳ್ಳಬಹುದು. ನಿರಂತರ ಪ್ರಕೃತಿಯ ಒಡನಾಟ ನಮ್ಮ ದಣಿವನ್ನು ಕಡಿಮೆ ಮಾಡಿ ಹೆಚ್ಚು ಕ್ರಿಯಾತ್ಮಕವಾಗಿ ಇರಿಸುತ್ತದೆ.

8.ಕೆಲಸ ಮತ್ತು ವಿಶ್ರಾಂತಿಯ ನಡುವೆ ನಿರ್ದಿಷ್ಟ ಅಂತರ… ಕೆಲಸ ಮತ್ತು ವಿಶ್ರಾಂತಿಗಳ ನಡುವೆ ಅಗಾಧವಾದ ವ್ಯತ್ಯಾಸದ ಅಂತರವಿರುವುದರಿಂದ ಇವೆರಡರ ನಡುವೆ ಸಮತೋಲನವನ್ನು ಕಾಯ್ದುಕೊಳ್ಳಲೇಬೇಕು. ಈ ರೀತಿಯ ಅಂತರವು ವಿಶ್ರಾಂತಿ ಸಮಯದಲ್ಲಿ ಕೆಲಸಕ್ಕೆ ಸಂಬಂಧಿಸಿದ ಸವಾಲುಗಳು ಬಾಧಿಸದಂತೆ ಎಚ್ಚರವಾಗಿರಲು ಸಹಾಯಕ.

  1. ವಿರಾಮದ ಪಾತ್ರ.. ಪುಸ್ತಕ ಓದುವುದು, ಆಟವಾಡುವುದು, ಕುಟುಂಬದವರೊಂದಿಗೆ ಮತ್ತು ಸ್ನೇಹಿತರ ವಲಯದಲ್ಲಿ ಸಮಯ ಕಳೆಯುವುದರ ಮೂಲಕ ಮಾನಸಿಕ ಚೈತನ್ಯವನ್ನು ಪಡೆಯುವುದು. ಇಂತಹ ಚಟುವಟಿಕೆಗಳು ನಮ್ಮ ಸಂತೋಷ ಮತ್ತು ಯೋಗಕ್ಷೇಮಕ್ಕೆ ಅನುಕೂಲಕರವಾಗಿರುತ್ತದೆ. 10.ಅಲಭ್ಯ ಸಂತೋಷವನ್ನು ಆಲಂಗಿಸಿ… ವಿರಾಮದ ವಿವಿಧ ಚಟುವಟಿಕೆಗಳಿಂದ ದೊರೆಯುವ ಅಲಭ್ಯವಾದ ಸಂತೋಷವನ್ನು ಆನಂದಿಸಿ. ಇದು ಕೆಲಸ ಮತ್ತು ವಿರಾಮದ ಚಕ್ರದ ಚಟುವಟಿಕೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುತ್ತದೆ. ಅಲೆಕ್ಸ್ ಅವರ ‘ವಿಶ್ರಾಂತಿ’ ಎಂಬ ಕೃತಿಯು ನಿರಂತರ ಪರಿಶ್ರಮ ಯಶಸ್ಸಿಗೆ ರಹದಾರಿ ಎಂಬ ಸಾಂಪ್ರದಾಯಿಕ ಪರಿಕಲ್ಪನೆಯನ್ನು ಬದಿಗಿಟ್ಟು ಕೆಲಸ ಮತ್ತು ವಿಶ್ರಾಂತಿಗಳ ನಡುವಣ ಸಮತೋಲನವನ್ನು
    ಅರಿತು, ಬಾಳಿನಲ್ಲಿ ಅವುಗಳನ್ನು ಅಳವಡಿಸಿಕೊಳ್ಳುವ ಮೂಲಕವೂ ಯಶಸ್ಸನ್ನು ಗಳಿಸಬಹುದು ಎಂದು ಸ್ಪಷ್ಟವಾಗಿ ಪ್ರಚುರಪಡಿಸುತ್ತದೆ.

ನಾವು ಕೆಲಸ ಮಾಡದೇ ಇದ್ದರೆ ನಡೆಯುವುದೇ ಇಲ್ಲ ಎಂದು ಅತಿಯಾದ ಕೆಲಸವನ್ನು ಮೈ ಮೇಲೆ ಹಾಕಿಕೊಂಡು, ಅದಕ್ಕೆ ಪೂರಕವಾಗಿ ಸತ್ತ ಮೇಲೆ ಆರಡಿ ಮೂರಡಿ ಕೆಳಗೆ ವಿಶ್ರಾಂತಿ ತೆಗೆದುಕೊಳ್ಳುವುದು ಇದ್ದೇ ಇದೆಯಲ್ಲ ಎಂದು ಉಡಾಫೆ ಮಾಡುವುದರ ಬದಲಾಗಿ ವಿಶ್ರಾಂತಿ ಮನುಷ್ಯನ ಬದುಕಿನಲ್ಲಿ ಉಸಿರಿನಷ್ಟೇ ಅವಶ್ಯಕವಾದುದು ಎಂಬುದನ್ನು ಅರಿಯೋಣ. ಕೆಲಸದ ನಡುವೆ ಆಗಾಗ ವಿಶ್ರಾಂತಿ ಪಡೆಯುತ್ತಾ ನಮ್ಮ ಚೈತನ್ಯವನ್ನು ಹೆಚ್ಚಿಸಿಕೊಳ್ಳೋಣ. ಆರೋಗ್ಯವಂತ ಸಮಾಜದ ನಿರ್ಮಾತೃಗಳಾಗೋಣ ಎಂಬ ಆಶಯದೊಂದಿಗೆ.


Leave a Reply

Back To Top