ಅಶ್ಫಾಕ್ ಪೀರಜಾದೆ ಅವರ ಗಜಲ್

ನನ್ನ ಪಾಲಿಗೆ ಮೊದಲ ಗುರುವಾದೆ ಬರೆಯಿಸಿ ಮೂಲಾಕ್ಷರ
ನನ್ನ ಪಾಲಿನ ಮೊದಲ ವರವಾದೆ ಬರೆಯಿಸಿ ಮಂತ್ರಾಕ್ಷರ

ಕಡು ಬಿಸಿಲು ಕರಗಿ ಈಗ ಸಂಧ್ಯಾಕಾಲ ಕೈಬೀಸಿ ಕರೆಯುತಿದೆ
ಚೆಂದದ ಬದುಕಿಗೆ ಮುನ್ನುಡಿಯಾದೆ ಬರೆಯಿಸಿ ಒಲವಿನಾಕ್ಷರ

ನಿಸರ್ಗವ್ವನ ಮಡಿಲಲಿ ಚಿಲಿಪಿಲಿ ಸುಮಧುರ ಸಂಗೀತಗಾನ
ಕೇಳುತ ಕೇಳುತ ನಾ ಕವಿಯಾದೆ ಬರೆಯಿಸಿ ಕಾವ್ಯಾಕ್ಷರ

ಮನಸು ಬಲು ನಿರಾಳ ಮನ್ತುಂಬಿ ಕಿಲಕಿಲ ನಗುವಾಗ ನೀನು
ಜೀವನ ಸಾಗರಕೆ ಸರಿಗಮ ಲಯವಾದೆ ಬರೆಯಿಸಿ ಸತ್ಯಾಕ್ಷರ

ನಿನ್ನ ಸುಂದರ ವದನದ ಮೇಲೆ ಸಾವಿರ ಹೂವಿನಾ ಅಂದ
ಹೃದಯ ಸಾಮ್ರಾಜ್ಯಕ್ಕೆ ನೀ ರಾಣಿಯಾದೆ ಬರೆಯಿಸಿ ಶಾಸನಾಕ್ಷರ

ಮನಸು ಮನಸು ಕೂಡಿದ ಮೇಲೆ ಯಾರ ಅಂಜಿಕೆ ಹೇಳು ಅಪೀ
ಹೊಸದೊಂದು ಕಾವ್ಯಪ್ರಯೋಗಕ್ಕೆ ನಾಂದಿಯಾದೆ ಬರೆಯಿಸಿ ಹಸ್ತಾಕ್ಷರ


Leave a Reply

Back To Top